ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳು ಖುಲಾಸೆ: ಪೊಲೀಸರಿಗೆ ಚಾಟಿ

ಸದ್ಯದ ತನಿಖಾ ಕ್ರಮದಿಂದ ಆರೋಪಿಗಳಿಗೆ ಅನುಕೂಲ * ಭ್ರಷ್ಟಾಚಾರ ಕಾಯ್ದೆ ಅಡಿ ಪ್ರಕರಣ ದಾಖಲಿಸಲು ಸಲಹೆ
Last Updated 31 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅಧಿಕಾರ ದುರುಪಯೋಗ, ಹಣ ಹಾಗೂ ಸ್ವತ್ತಿನ ದುರ್ಬಳಕೆ ಸಂಬಂಧ ಸರ್ಕಾರಿ ಅಧಿಕಾರಿಗಳ ವಿರುದ್ಧ ದಾಖಲಾಗುತ್ತಿರುವ ಬಹುಪಾಲು ಪ್ರಕರಣಗಳು ನ್ಯಾಯಾಲಯದಲ್ಲಿ ಖುಲಾಸೆಯಾಗುತ್ತಿದ್ದು, ಇದಕ್ಕೆ ಪೊಲೀಸರ ತನಿಖಾ ಕ್ರಮವೇ ಕಾರಣವೆಂದು ಅಭಿಯೋಗ ಹಾಗೂ ಸರ್ಕಾರಿ ವ್ಯಾಜ್ಯಗಳ ಇಲಾಖೆ ಅಸಮಾಧಾನ ವ್ಯಕ್ತಪಡಿಸಿದೆ.

‘ಇದುವರೆಗೂ ರಾಜ್ಯದಾದ್ಯಂತ ದಾಖಲಾಗಿರುವ ಪ್ರಕರಣಗಳಿಗೆ ಗಂಭೀರತೆಯೇ ಇಲ್ಲದಂತಾಗಿದೆ. ಇದರಿಂದಾಗಿ ನ್ಯಾಯಾಲಯದಲ್ಲಿ ನಮಗೆ ಸೋಲು ಆಗುತ್ತಿದೆ. ಹಲವು ಪ್ರಕರಣಗಳಲ್ಲಿ ಪುರಾವೆಗಳಿದ್ದರೂ ಆರೋಪಿಗಳು ಬಿಡುಗಡೆ ಆಗುತ್ತಿದ್ದಾರೆ. ಪೊಲೀಸರು ತಮ್ಮ ತನಿಖಾ ಕ್ರಮ ಬದಲಾಯಿಸಿಕೊಳ್ಳಬೇಕು’ ಎಂದು ಇಲಾಖೆ ಚಾಟಿ ಬೀಸಿದೆ.

ಈ ಸಂಬಂಧ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಅವರಿಗೆ ಅಭಿಯೋಗ ಇಲಾಖೆ ಪರವಾಗಿ ಪತ್ರ ಬರೆದಿರುವ ಗದಗ ಜಿಲ್ಲಾ ಕಾನೂನು ಅಧಿಕಾರಿ (ಕಿರಿಯ) ಮಹೇಶ ವೈದ್ಯ, ತನಿಖೆಯಲ್ಲಿ ಅಳವಡಿಸಿಕೊಳ್ಳಬೇಕಾದ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ. ಈ ಪತ್ರ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

‘ಸರ್ಕಾರಿ ನೌಕರರು ತಮ್ಮ ಅಧಿಕಾರ ದುರುಪಯೋಗ, ಹಣ ಹಾಗೂ ಸ್ವತ್ತಿನ ದುರ್ಬಳಕೆ ಮಾಡಿಕೊಂಡ ವೇಳೆಯಲ್ಲಿ, ಅವರ ವಿರುದ್ಧ ‘ಐಪಿಸಿ 409’ ಮಾತ್ರ  ದಾಖಲಿಸಿಕೊಳ್ಳಲಾಗುತ್ತಿದೆ. ಅದರ ಜತೆಗೆ, ಭ್ರಷ್ಟಾಚಾರ ತಡೆ ಕಾಯ್ದೆ 1988ರ ಕಲಂ 13(1)(ಸಿ) ದಾಖಲಿಸಿಕೊಂಡು ತನಿಖೆ ನಡೆಸುವುದು ಸೂಕ್ತ. ಕೇವಲ ಲಂಚ ಪಡೆಯುವ ಹಾಗೂ ನೀಡುವ ಅಪರಾಧಗಳಿಗೆ ಮಾತ್ರ ಕಾಯ್ದೆ ಸೀಮಿತವಾಗಿಲ್ಲ. ಬದಲಿಗೆ, ಅಧಿಕಾರ ದುರುಪಯೋಗವು ಕಾಯ್ದೆ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ, ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳುವಂತೆ ಪೊಲೀಸರಿಗೆ ಸೂಚಿಸಿ, ಸುತ್ತೋಲೆ ಹೊರಡಿಸುವ ಅಗತ್ಯವಿದೆ’ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಕೆಳಹಂತದ ನ್ಯಾಯಾಲಯದಲ್ಲೇ ವಿಚಾರಣೆ: ‘ಐಪಿಸಿ 409ರಡಿ ದಾಖಲಿಸಿಕೊಂಡ ಪ್ರಕರಣಗಳ ವಿಚಾರಣೆಯು ಕೆಳಹಂತದ ನ್ಯಾಯಾಲಯದಲ್ಲಿ ನಡೆಯುತ್ತದೆ. ಅದರಿಂದ ಪ್ರಕರಣಕ್ಕೆ ಗಂಭೀರತೆ ಇರುವುದಿಲ್ಲ. ಅದೇ ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡರೆ, ವಿಶೇಷ ನ್ಯಾಯಾಲಯದಲ್ಲಿ ಮಾತ್ರ ವಿಚಾರಣೆ ನಡೆಯಲಿದೆ’ ಎಂದು ಪತ್ರದಲ್ಲಿ ಹೇಳಲಾಗಿದೆ.

‘ಅಧಿಕಾರಿಗಳಿಗೆ ಎಚ್ಚರಿಕೆ ನೀಡುವ ಉದ್ದೇಶದಿಂದ ಭ್ರಷ್ಟಾಚಾರ ತಡೆ ಕಾಯ್ದೆ ಜಾರಿಗೆ ತರಲಾಗಿದೆ. ಯಾವ್ಯಾವ ಅಪರಾಧಗಳಿಗೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಬೇಕು ಎಂಬುದು ಇಂದಿನ ಬಹುಪಾಲು ಪೊಲೀಸರಿಗೆ ಗೊತ್ತಿಲ್ಲ. ಆ ಬಗ್ಗೆ ಅವರೆಲ್ಲರಿಗೂ ತಿಳಿಸಬೇಕಿದೆ. ಕೇವಲ ಐಪಿಸಿ 409ರಡಿ ತನಿಖೆ ನಡೆಸಿ ಪೊಲೀಸರು, ದೋಷಾರೋಪ ಪಟ್ಟಿ ಸಲ್ಲಿಸುತ್ತಿರುವುದು ಸರಿಯಾದ ಕ್ರಮವಲ್ಲ’ ಎಂದು ಹೇಳಿದ್ದಾರೆ.

ಜಾಮೀನು ಸುಲಭ: ’ಐಪಿಸಿ 409ರಡಿ ದಾಖಲಿಸಿಕೊಂಡ ಪ್ರಕರಣಗಳ ತನಿಖೆಯನ್ನು ಆಯಾ ಠಾಣೆ ಅಧಿಕಾರಿಗಳೇ ನಡೆಸುತ್ತಿದ್ದಾರೆ. ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡರೆ, ಡಿವೈಎಸ್ಪಿ ಹಾಗೂ ಅದಕ್ಕಿಂತ ಹಿರಿಯ ಅಧಿಕಾರಿಗಳು ಮಾತ್ರ ತನಿಖೆ ನಡೆಸುವ ಅಧಿಕಾರ ಹೊಂದಿರುತ್ತಾರೆ’

‘ಸದ್ಯದ ಬಹುಪಾಲು ಪ್ರಕರಣಗಳಲ್ಲಿ ಆರೋಪಿಗಳಿಗೆ ಸುಲಭವಾಗಿ ಜಾಮೀನು ಸಿಗುತ್ತಿದೆ. ಅದರಡಿ ಹೊರಬರುವ ಅಧಿಕಾರಿಗಳು, ಪುರಾವೆಗಳನ್ನು ನಾಶಪಡಿಸುವ ಕೆಲಸಗಳನ್ನೂ ಮಾಡುತ್ತಿದ್ದಾರೆ. ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ದಾಖಲಾದ ಪ್ರಕರಣಗಳ ವಿಚಾರಣೆ ವಿಶೇಷ ನ್ಯಾಯಾಲಯದಲ್ಲಿ ನಡೆಯುವುದರಿಂದ, ಜಾಮೀನು ಸಿಗುವ ಸಾಧ್ಯತೆ ತೀರಾ ಕಡಿಮೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

‘ವಿಶೇಷ ನ್ಯಾಯಾಲಯಗಳಲ್ಲಿ ಪ್ರಕರಣಗಳು ತ್ವರಿತವಾಗಿ ಇತ್ಯರ್ಥವಾಗಲಿವೆ. ಆರೋಪಿಗಳಿಗೆ ಶಿಕ್ಷೆಯಾಗುವ ಪ್ರಮಾಣವೂ ಹೆಚ್ಚಾಗಲಿದೆ. ಅದರಿಂದ ಅಧಿಕಾರಿಗಳಿಗೆ ಎಚ್ಚರಿಕೆ ರವಾನೆಯಾಗಲಿದೆ’ ಎಂದು ಹೇಳಿದ್ದಾರೆ.

ಪೊಲೀಸ್ ಇಲಾಖೆ ಹಿರಿಯ ಅಧಿಕಾರಿ, ‘ಪತ್ರವನ್ನು ನೋಡಿದ್ದೇವೆ. ಅಭಿಯೋಜನೆ ಇಲಾಖೆ ಅಧಿಕಾರಿಗಳಿಂದ ಮತ್ತಷ್ಟು ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT