‘ಕಾಂಗ್ರೆಸ್ ಸರ್ಕಾರದ ಎಲ್ಲ ಭಾಗ್ಯಗಳೂ ಚಿಂದಿ’

7
‘ಹೊಸ ಸರ್ಕಾರದ ಹೊಣೆ’ ಚಿಂತನಗೋಷ್ಠಿಯಲ್ಲಿ ರಾಜ್ಯಸಭಾ ಸದಸ್ಯ ಎಲ್‌.ಹನುಮಂತಯ್ಯ ಅಭಿಪ್ರಾಯ

‘ಕಾಂಗ್ರೆಸ್ ಸರ್ಕಾರದ ಎಲ್ಲ ಭಾಗ್ಯಗಳೂ ಚಿಂದಿ’

Published:
Updated:
‘ಕಾಂಗ್ರೆಸ್ ಸರ್ಕಾರದ ಎಲ್ಲ ಭಾಗ್ಯಗಳೂ ಚಿಂದಿ’

ಬೆಂಗಳೂರು: ‘ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಪರಸ್ಪರ ಚರ್ಚೆ ನಡೆಸಿ, ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತಂದಾಗ ಮಾತ್ರ ಸಮ್ಮಿಶ್ರ ಸರ್ಕಾರ ಅರ್ಥಪೂರ್ಣವಾಗುತ್ತದೆ’ ಎಂದು ರಾಜ್ಯಸಭಾ ಸದಸ್ಯ ಡಾ. ಎಲ್.ಹನುಮಂತಯ್ಯ ಅಭಿಪ್ರಾಯಪಟ್ಟರು.

ಕರ್ನಾಟಕ ಬಂಡಾಯ ಸಾಹಿತ್ಯ ಸಂಘಟನೆಯು ಕನ್ನಡ ಸಾಹಿತ್ಯ ಪರಿಷತ್‍ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಹೊಸ ಸರ್ಕಾರದ ಹೊಣೆ’ ಚಿಂತನಗೋಷ್ಠಿಯಲ್ಲಿ ಮಾತನಾಡಿದರು.

‘ಸಮ್ಮಿಶ್ರ ಸರ್ಕಾರವು ಸಂಪುಟ ರಚನೆ ವಿಚಾರದಲ್ಲಿ ಅವಸರದ ನಿರ್ಧಾರ ತೆಗೆದುಕೊಳ್ಳುವುದು ಬೇಡ. ಹಾಗೆ ಮಾಡಿದರೆ ಸರ್ಕಾರ ಅಲ್ಪಾಯುಷಿಯಾಗುತ್ತದೆ. ಖಾತೆ ಹಂಚಿಕೆ ಬಗ್ಗೆ ಯೋಚಿಸಿ ತೀರ್ಮಾನ ತೆಗೆದುಕೊಳ್ಳಬೇಕು. ಜನಪರ ಕಾರ್ಯಕ್ರಮಗಳನ್ನು ರೂಪಿಸಲು ಎರಡೂ ಪಕ್ಷಗಳ ಮುಖಂಡರನ್ನು ಒಳಗೊಂಡ ತಜ್ಞರ ಸಮಿತಿ ರಚಿಸಬೇಕು. ಕೆಲಸ ಸರಿ ಹೋಗದಿದ್ದಾಗ, ಕಿವಿ ಹಿಂಡಿ ಬುದ್ಧಿ ಹೇಳಲು ಸಮನ್ವಯ ಸಮಿತಿಯನ್ನೂ ರಚಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಜನ ಪಕ್ಷಗಳ ಪ್ರಣಾಳಿಕೆ ನೋಡಿ ಮತ ಹಾಕಿಲ್ಲ. ಜಾತಿ ರಾಜಕಾರಣಕ್ಕೆ ಹೆಚ್ಚು ಮತಗಳು ಬಿದ್ದಿವೆ. ಲಿಂಗಾಯತರು ಒಂದು ಪಕ್ಷವನ್ನು, ಒಕ್ಕಲಿಗರು ಮತ್ತೊಂದು ಪಕ್ಷವನ್ನು ಬೆಂಬಲಿಸಿದ್ದಾರೆ. ಅಹಿಂದ ಮತಗಳು ಛಿದ್ರಗೊಂಡಿದ್ದರಿಂದ ಅತಂತ್ರ ಫಲಿತಾಂಶ ಬಂದಿದೆ. ಕಾಂಗ್ರೆಸ್ ಸರ್ಕಾರದ ಎಲ್ಲ ಭಾಗ್ಯಗಳೂ ಚಿಂದಿಯಾಗಿವೆ. ಪ್ರಜಾತಂತ್ರ ವ್ಯವಸ್ಥೆ ಜಾತಿವಾದಿ ರಾಜಕಾರಣದತ್ತ ವಾಲಿದ್ದು, ಪ್ರಸಕ್ತ ಸಮ್ಮಿಶ್ರ ಸರ್ಕಾರವು ಜಾತ್ಯತೀತತೆ ಎತ್ತಿ ಹಿಡಿಯಬೇಕು’ ಎಂದು ಹೇಳಿದರು.

ಚಿಂತಕ ಡಾ. ಜಿ.ರಾಮಕೃಷ್ಣ, ‘ಚುನಾವಣೆ ವೇಳೆ ಪ್ರಧಾನಿ ರಾಜ್ಯದ ಮುಖ್ಯಮಂತ್ರಿಯ ನಿಯತ್ತನ್ನು ಮುಧೋಳ ನಾಯಿಗೆ ಹೋಲಿಸಿದರು. ಆ ಮೂಲಕ ಇಡೀ ರಾಜ್ಯಕ್ಕೇ ಅಪಮಾನ ಮಾಡಿದರು. ಆದರೂ, ಯಾರೂ ಅದನ್ನು ಪ್ರಶ್ನಿಸಲಿಲ್ಲ. ಇದು ರಾಜಕಾರಣಿಗಳ ಬೌದ್ಧಿಕ ಅಧೋಗತಿಯನ್ನು ಸೂಚಿಸುತ್ತದೆ’ ಎಂದರು.

‘ಮೊದಲು ರಾಜ್ಯಪಾಲರನ್ನು ರಾಜ್ಯದಿಂದ ಹೊರದಬ್ಬಬೇಕು. ‘ನೀಟ್’ ಮೂಲಕ ರಾಜ್ಯದ ಪಾಲಿನ ವೈದ್ಯಕೀಯ ಸೀಟುಗಳನ್ನು ಕಿತ್ತುಕೊಳ್ಳುವುದಕ್ಕೆ ಮತ್ತು ಹಿಂದಿ ಹೇರಿಕೆಗೆ ಕಡಿವಾಣ ಹಾಕಬೇಕು’ ಎಂದು ಆಗ್ರಹಿಸಿದರು.

ಸಾಹಿತಿ ಚಂದ್ರಶೇಖರ ಪಾಟೀಲ, ‘21 ರಾಜ್ಯಗಳಲ್ಲಿ ಓಡಾಡಿ ಈ ಬಾರಿ ದಕ್ಷಿಣ ಭಾರತದ ಹೆಬ್ಬಾಗಿಲಿಗೆ ಬಂದ ಬಿಜೆಪಿಯ ಅಶ್ವಮೇಧ ಕುದುರೆ, ಸಮೃದ್ಧ ನಾಡಿನ ಹಸಿರು ಹುಲ್ಲಿಗೆ ಬಾಯಿ ಹಾಕಿತು. ಈಗ ಹೊಟ್ಟೆ ಕೆಡಿಸಿಕೊಂಡು ವಾಪಸ್ ಹೋಗಿದೆ. ಒಂದು ವೇಳೆ ಹೆಬ್ಬಾಗಿಲು ಪ್ರವೇಶಿಸಲು ಬಿಟ್ಟರೆ, ಆ ಕುದುರೆ ಇಡೀ ರಾಜ್ಯವನ್ನು ಆಕ್ರಮಿಸಿಬಿಡುತ್ತದೆ’ ಎಂದು ಹೇಳಿದರು.

ಸಿಐಟಿಯು ಅಧ್ಯಕ್ಷೆ ವರಲಕ್ಷ್ಮಿ, ‘ಅಹಂ, ಮುಜುಗರ, ಪ್ರತಿಷ್ಠೆ ಎಲ್ಲರೂ ಬದಿಗಿಟ್ಟರೆ, ಸರ್ಕಾರ ಸುಭದ್ರವಾಗಿರುತ್ತದೆ’ ಎಂದರು.

*

ಬಿಜೆಪಿಯ ಅಶ್ವಮೇಧ ಕುದುರೆ ಹುಚ್ಚು ಕುದುರೆ. ದಂಡೆತ್ತಿ ಬಂದೇ ಬರುತ್ತದೆ. ಅದಕ್ಕೆ ಕಡಿವಾಣ ಹಾಕಲು ಈಗಿನಿಂದಲೇ ಯೋಜನೆ ಹಾಕಿಕೊಳ್ಳಬೇಕು.

-ಪ್ರೊ.ಚಂದ್ರಶೇಖರ ಪಾಟೀಲ, ಸಾಹಿತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry