ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಡ ಸೇರುತ್ತಿರುವ ಮೀನುಗಾರಿಕೆ ಬೋಟ್‌

ಕರಾವಳಿಯಲ್ಲಿ ಇಂದಿನಿಂದ ಆಳ ಸಮುದ್ರ ಮೀನುಗಾರಿಕೆ ನಿಷೇಧ
Last Updated 1 ಜೂನ್ 2018, 10:17 IST
ಅಕ್ಷರ ಗಾತ್ರ

ಮಂಗಳೂರು: ಪಶ್ಚಿಮ ಕರಾವಳಿಯಲ್ಲಿ ಶುಕ್ರವಾರದಿಂದ 60 ದಿನಗಳ ಮೀನುಗಾರಿಕೆ ನಿಷೇಧ ಆರಂಭವಾಗಲಿದೆ. ಮತ್ಸ್ಯ ಸಂಪತ್ತಿನ ರಕ್ಷಣೆಗಾಗಿ ಸರ್ಕಾರ ಈ ನಿಯಮ ರೂಪಿಸಿದ್ದು, 61 ದಿನ ಬೋಟ್‌ಗಳು ಮೀನುಗಾರಿಕೆ ನಡೆಸುವಂತಿಲ್ಲ.

ಜೂನ್ 1 ರಿಂದ ಜುಲೈ 31 ರವರೆಗೆ ಮೀನುಗಾರಿಕೆಗೆ ಕಡ್ಡಾಯ ನಿಷೇಧ ಹೇರಲಾಗಿದೆ. ಕರ್ನಾಟಕ ಕರಾವಳಿ ಮೀನುಗಾರಿಕೆ (ನಿಯಂತ್ರಣ) ಕಾಯ್ದೆ 1986 ಅನ್ವಯ ರಾಜ್ಯ ಸರ್ಕಾರದ ಅಧಿಸೂಚನೆಯನ್ವಯ ದಕ್ಷಿಣ ಕನ್ನಡ ಜಿಲ್ಲೆಯ ಕರ್ನಾಟಕದ ಕರಾವಳಿಯಲ್ಲಿ ಯಾವುದೇ ಬಲೆಗಳನ್ನು / ಸಾಧನಗಳನ್ನು ಉಪಯೋಗಿಸಿ ಎಲ್ಲ ಯಾಂತ್ರೀಕೃತ ದೋಣಿಗಳ ಮೂಲಕ ಹಾಗೂ 10 ಅಶ್ವಶಕ್ತಿ ಸಾಮರ್ಥ್ಯಕ್ಕಿಂತ ಮೇಲಿನ ಇನ್‌ಬೋರ್ಡ್ ಅಥವಾ ಔಟ್‌ಬೋರ್ಡ್ ಯಂತ್ರಗಳನ್ನು ಅಳವಡಿ ಸಿರುವ ಸಾಂಪ್ರದಾಯಿಕ ದೋಣಿಗಳ ಮೂಲಕ ಕೈಗೊಳ್ಳುವ ಮೀನುಗಾರಿಕೆ ಚಟುವಟಿಕೆ ಮಾಡುವಂತಿಲ್ಲ.

ದೋಣಿಯನ್ನು ಸಾಗಿಸುವ ಉದ್ದೇಶಕ್ಕಾಗಿಯೇ 10 ಅಶ್ವಶಕ್ತಿಯವರೆಗಿನ ಸಾಮರ್ಥ್ಯದ ಮೋಟರೀಕೃತ ದೋಣಿ ಹಾಗೂ ಸಾಂಪ್ರದಾಯಿಕ/ ನಾಡದೋಣಿಗಳು ಕರಾವಳಿ ಮೀನುಗಾರಿಕೆಯನ್ನು ಕೈಗೊಳ್ಳಲು ಅನುಮತಿಸಿದೆ. ಮೀನುಗಾರಿಕೆ ನಿಷೇಧಿಸಿದ ಸರ್ಕಾರದ ಆದೇಶವನ್ನು ಉಲ್ಲಂಘಿಸುವ ಮೀನುಗಾರಿಕಾ ದೋಣಿಗಳು ಮತ್ತು ಮೀನುಗಾರರು ದಂಡನೆಗಳಿಗೆ ಹೊಣೆಯಾಗುವುದಲ್ಲದೇ ಒಂದು ವರ್ಷದ ಅವಧಿಗೆ ಡೀಸೆಲ್ ಮೇಲಿನ ಸಹಾಯಧನ ಪಡೆಯಲು ಅನರ್ಹರಾಗುತ್ತಾರೆ. ಕರಾವಳಿ ಪ್ರದೇಶದ ಎಲ್ಲ ಮೀನುಗಾರರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಹೊರಡಿಸಿ ರುವುದರಿಂದ ಮೀನು ಗಾರರು ಈ ಆದೇಶವನ್ನು ಪಾಲಿಸಬೇಕು ಎಂದು ಮೀನುಗಾರಿಕೆ ಇಲಾಖೆ ಮನವಿ ಮಾಡಿದೆ.

ಮೀನುಗಳ ಸಂತಾನೋತ್ಪತ್ತಿ: ಪ್ರತಿ ಬಾರಿ ಈ ಅವಧಿಯಲ್ಲಿ ಮೀನುಗಾರಿಕೆಗೆ ನಿಷೇಧವನ್ನು ಹೇರಲು ಮುಖ್ಯ ಕಾರಣ ಈ ಅವಧಿಯಲ್ಲಿ ಮೀನುಗಳ ಸಂತಾನೋತ್ಪತ್ತಿ.

ಜೂನ್‌ ತಿಂಗಳು ಮಳೆ ಆರಂಭವಾದೊಡನೆ ಸಮುದ್ರದಲ್ಲಿ ಮೀನುಗಳು ಸಂತಾನೋತ್ಪತ್ತಿಯಲ್ಲಿ ತೊಡಗುತ್ತವೆ. ಮೀನುಗಳು ಮೊಟ್ಟೆ ಇಡುವ ಸಂದರ್ಭ ಇದಾಗಿದ್ದರಿಂದ ಮೀನುಗಳ ಬೇಟೆಯಾಡುವುದರಿಂದ ಅವುಗಳ ಸಂತತಿ ನಶಿಸಲು ಕಾರಣವಾಗುತ್ತದೆ.

ಸಮುದ್ರದ ರೌದ್ರಾವತಾರ: ಜೂನ್‌ ತಿಂಗಳಲ್ಲಿ ಮಳೆ ಆರಂಭವಾದೊಡನೆ ಸಮುದ್ರ ಸಹ ರೌದ್ರಾವತಾರ ತಾಳುತ್ತದೆ. ಸಮುದ್ರದಲ್ಲಿ ಅಲೆಗಳ ಆರ್ಭಟವು ಹೆಚ್ಚಾಗಿರುತ್ತದೆ. ಈ ವೇಳೆ ಸಮುದ್ರದಲ್ಲಿ ಬಿರುಗಾಳಿಯೂ ಹೆಚ್ಚು.

ಈ ಸಂದರ್ಭದಲ್ಲಿ ಮೀನುಗಾರಿಕೆಗೆ ತೆರಳಿದರೆ ಅಪಾಯವು ಕಟ್ಟಿಟ್ಟ ಬುತ್ತಿ. ಸಮುದ್ರದ ಅಬ್ಬರಕ್ಕೆ ಮೀನುಗಾರಿಕೆಗೆ ತೆರಳುವ ಬೋಟ್‌ಗಳು ಅಪಾಯಕ್ಕೆ ಸಿಲುಕಿಕೊಂಡು ಪ್ರಾಣಾಪಾಯವಾಗುವ ಸಾಧ್ಯತೆಯೂ ಹೆಚ್ಚು. ಈ ಅವಧಿಯಲ್ಲಿ ಆಳ ಸಮುದ್ರ ಮೀನುಗಾರಿಕೆ ನಿಷೇಧಿಸಲು ಇದೂ ಒಂದು ಪ್ರಮುಖ ಕಾರಣವಾಗಿದೆ.

**
ಜೂನ್‌ 1 ರಿಂದ ಜುಲೈ 31 ರವರೆಗೆ ಪಶ್ಚಿಮ ಕರಾವಳಿಯಲ್ಲಿ ಮೀನುಗಾರಿಕೆ ನಿಷೇಧಿಸಲಾಗಿದ್ದು, ಮೀನುಗಾರರಿಗೆ ಸೂಚನೆ ನೀಡಲಾಗಿದೆ
– ಮಹೇಶ್‌ಕುಮಾರ್‌ ಯು‌, ಮೀನುಗಾರಿಕೆ ಇಲಾಖೆ ಉಪನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT