ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಕೆಂಡ್‌ ಹಾಫ್‌: ಪತ್ತೆಧಾರಿ ಪ್ರಿಯಾಂಕಾ

Last Updated 1 ಜೂನ್ 2018, 10:37 IST
ಅಕ್ಷರ ಗಾತ್ರ

ಚಿತ್ರ: ಸೆಕೆಂಡ್‌ ಹಾಫ್‌

ನಿರ್ಮಾಪಕ: ನಾಗೇಶ್‌

ನಿರ್ದೇಶನ: ಯೋಗಿ ದೇವಗಂಗೆ

ತಾರಾಗಣ: ಪ್ರಿಯಾಂಕಾ ಉಪೇಂದ್ರ, ನಿರಂಜನ್, ಸುರಭಿ, ಶರತ್‌ ಲೋಹಿತಾಶ್ವ, ಸತ್ಯಜಿತ್‌, ಶಾಲಿನಿ, ವೀಣಾ ಸುಂದರ್

**

ಅನುರಾಧಾ (ಪ್ರಿಯಾಂಕಾ ಉಪೇಂದ್ರ) ಪೊಲೀಸ್‌ ಕಾನ್‌ಸ್ಟೆಬಲ್. ಸಿ.ಸಿ ಕ್ಯಾಮೆರಾ ನಿಯಂತ್ರಣ ಕೊಠಡಿಯಲ್ಲಿ ಆಕೆಯ ಕೆಲಸ. ಪರದೆ ಮೇಲಿನ ಜನರ ದಯನೀಯ ಬದುಕು ಕಂಡಾಗ ಆಕೆಗೆ ಮರುಕ. ಇನ್ನೊಂದೆಡೆ ಶರಣ್ಯಳ(ಸುರಭಿ) ಜೀವಪರ ಕೆಲಸ ಕಂಡರೆ ಆಕೆಗೆ ಅಚ್ಚುಮೆಚ್ಚು. ಅವಳ ದಿನಚರಿ ನೋಡುವುದೇ ಆಕೆಯ ನಿತ್ಯದ ಕಾಯಕ. ಕಾಲೇಜು ಹುಡುಗಿಯರನ್ನು ಚುಡಾಯಿಸುವ ಪುಂಡರಿಗೂ ಅನುರಾಧಾ ಬುದ್ಧಿ ಕಲಿಸುತ್ತಾಳೆ. ‘ಸೆಕೆಂಡ್‌ ಹಾಫ್’ ಸಿನಿಮಾ ಆರಂಭವಾಗುವುದು ಹೀಗೆ.

ಒಮ್ಮೆ ಶರಣ್ಯ ತನ್ನ ಪ್ರಿಯಕರನ ಮೇಲೆ ಮುನಿಸಿಕೊಂಡು ವೃತ್ತವೊಂದಕ್ಕೆ ಬಂದಾಗ ಅಪಹರಣಕ್ಕೀಡಾಗುತ್ತಾಳೆ. ಆಗ ನಿಯಂತ್ರಣ ಕೊಠಡಿಯಲ್ಲಿದ್ದ ಟಿ.ವಿ ಪರದೆಯೂ ಸ್ತಬ್ಧವಾಗುತ್ತದೆ. ಅನುರಾಧಾಗೆ ದಿಗ್ಭ್ರಮೆಯಾಗುತ್ತದೆ. ಇಷ್ಟು ಕಥೆ ಮುಗಿಯುವುದರೊಳಗೆ ‘ಸೆಕೆಂಡ್‌ ಹಾಫ್‌’ ಚಿತ್ರದ ಮೊದಲಾರ್ಧವೂ ಮುಗಿದುಹೋಗಿರುತ್ತದೆ. ನೋಡುಗರ ತಲೆಯಲ್ಲಿ ಸಿ.ಸಿ. ಕ್ಯಾಮೆರಾಗಳಲ್ಲಿನ ದೃಶ್ಯಗಳೇ ಸುರುಳಿ ಸುತ್ತುತ್ತವೆ. ಸಂಭಾಷಣೆ, ಚಿತ್ರಕಥೆಯ ನಿರೂಪಣಾ ಶೈಲಿ ‘ಪತ್ತೆಧಾರಿ ಪ್ರತಿಭಾ’ ಧಾರಾವಾಹಿಯ ಜಾಡುಹಿಡಿದಾಗ ಪ್ರೇಕ್ಷಕರಿಗೂ ತಬ್ಬಿಬ್ಬು!

ಅಪಹರಣಗೊಂಡ ಶರಣ್ಯ ರಾಜಕಾರಣಿ ರಾಜಶೇಖರ್‌ನ(ಶರತ್‌ ಲೋಹಿತಾಶ್ವ) ಪುತ್ರಿ. ಆಕೆಗೆ ಸಮಾಜಕ್ಕೆ ತನ್ನಪ್ಪನ ಅಸ್ತಿತ್ವ ತೋರಿಸಬೇಕೆಂಬ ಛಲ. ಇದರಿಂದ ತನ್ನ ವಿವಾಹೇತರ ಸಂಬಂಧದ ಗುಟ್ಟು ರಟ್ಟಾಗುತ್ತದೆ ಎಂಬ ಹೆದರಿಕೆ ಅಪ್ಪನದು. ಪುತ್ರಿಯ ಅಪಹರಣಕ್ಕೆ ಅಪ್ಪನೇ ಸಂಚು ರೂಪಿಸುತ್ತಾನೆ. ಆದರೆ, ಅವನ ಹಿಂಬಾಲಕರು ಈ ಕೃತ್ಯದಲ್ಲಿ ವಿಫಲರಾಗುತ್ತಾರೆ. ಪುತ್ರಿಯನ್ನು ಅಪಹರಿಸಿದವರು ಯಾರೆಂಬ ಆತಂಕ ಅವನಿಗೆ ಕಾಡುತ್ತದೆ. ಶರಣ್ಯಳ ಅಪಹರಣದ ಸುದ್ದಿ ಪೊಲೀಸ್‌ ಠಾಣೆಯ ಮೆಟ್ಟಿಲೇರಿದಾಗ ಕಥೆ ಹೊಸಹಾದಿಗೆ ಹೊರಳುತ್ತದೆ. ‘ಸೆಕೆಂಡ್‌ ಹಾಫ್‌’ ಚಿತ್ರಕ್ಕೆ ಲಯ ಸಿಕ್ಕುವುದೇ ಅಲ್ಲಿ.

ಶರಣ್ಯ ಚಿತ್ರ ಕಲಾವಿದೆ. ಆದರೆ, ಅಪ್ಪ– ಅಮ್ಮನ ಪ್ರೀತಿಯಿಂದ ವಂಚಿತೆ. ಸಮಾಜದಲ್ಲಿ ಪ್ರತಿಷ್ಠೆಯ ಜಾಢ್ಯಕ್ಕೆ ಸಿಲುಕಿದ ಪೋಷಕರ ಮನಸ್ಥಿತಿಯು ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದನ್ನು ತೆರೆಯ ಮೇಲೆ ಮುಖಾಮುಖಿಯಾಗಿಸುತ್ತಾರೆ ನಿರ್ದೇಶಕ ಯೋಗಿ ದೇವಗಂಗೆ. ಪ್ರೀತಿ, ವಾತ್ಸಲ್ಯ ವಂಚಿತ ಮಕ್ಕಳ ತಾಕಲಾಟವನ್ನು ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ. ಸಂಬಂಧಗಳ ಸಂಘರ್ಷಕ್ಕೆ ‘ಸಸ್ಪೆನ್ಸ್‌’ ಸೂತ್ರವನ್ನು ಜೋಡಿಸಿದ್ದಾರೆ.

ದ್ವಿತೀಯಾರ್ಧ ಅಪಹರಣಕಾರನ ಹುಡುಕಾಟಕ್ಕೆ ಮೀಸಲು. ಕಾರ್ಯಾಚರಣೆಗೆ ಇಳಿಯುವ ಅನುರಾಧಾಳಿಗೆ ಹೆಜ್ಜೆ ಹೆಜ್ಜೆಗೂ ಅಡೆತಡೆ. ಕೊನೆಗೆ, ಅವಳ ಕಾರ್ಯಕ್ಕೆ ಶರಣ್ಯಳ ಪ್ರಿಯಕರ ನಿರಂಜನ್ ಕೂಡ ಜೋಡಿಸುತ್ತಾನೆ. ಶರಣ್ಯ ಅಪಹರಣಗೊಂಡಿದ್ದು ಏಕೆ ಎಂಬುದನ್ನು ಚಿತ್ರ ನೋಡಿಯೇ ತಿಳಿದುಕೊಳ್ಳಬೇಕು.

ಪೊಲೀಸ್‌ ಕಾನ್‌ಸ್ಟೇಬಲ್‌ ಪಾತ್ರಧಾರಿಯಾಗಿ ಪ್ರಿಯಾಂಕಾ ಉಪೇಂದ್ರ ಇಷ್ಟವಾಗುತ್ತಾರೆ. ಶರತ್‌ ಲೋಹಿತಾಶ್ವ ಅವರದು ಅಚ್ಚುಕಟ್ಟಾದ ನಟನೆ. ಸುರಭಿ ಮತ್ತು ನಿರಂಜನ್ ನಟನೆ ಇನ್ನೂ ಎಳಸು. ಚೇತನ್‌ ಸಂಗೀತ ಸಂಯೋಜಿಸಿರುವ ಒಂದು ಹಾಡು ಗುನುಗುವಂತಿದೆ. ಆರ್‌.ಕೆ. ಶಿವಕುಮಾರ್‌ ಅವರ ಕ್ಯಾಮೆರಾದಲ್ಲಿ ವಿಶೇಷ ಕೈಚಳಕವೇನೂ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT