ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಶುದ್ಧೀಕರಣಕ್ಕೆ ಪುರಸಭೆ ಸೂಚನೆ

ತಾಳಿಕೋಟೆ: ನೀರು ಶುದ್ಧೀಕರಣ ಘಟಕಕ್ಕೆ ಭೇಟಿ
Last Updated 1 ಜೂನ್ 2018, 10:54 IST
ಅಕ್ಷರ ಗಾತ್ರ

ತಾಳಿಕೋಟೆ: ಪಟ್ಟಣದಲ್ಲಿ ಉಲ್ಬಣಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಪುರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಗುರುವಾರ ದೊಡ್ಡ ಚರ್ಚೆಗೆ ಕಾರಣವಾಯಿತು.

‘ಪ್ರಜಾವಾಣಿ’ಯಲ್ಲಿ ಮೇ 31ರಂದು ಪ್ರಕಟವಾದ ‘ಕುಡಿಯುವ ನೀರಿಗೆ ಹಾಹಾಕಾರ’ ಇದಕ್ಕೆ ಆಹಾರ ಒದಗಿಸಿತು. ಇದನ್ನು ಸಭೆಯಲ್ಲಿ ಪ್ರಸ್ತಾಪಿಸಿದ ಅಧ್ಯಕ್ಷೆ ಹಾಗೂ ಇತರ ಸದಸ್ಯರು ಅಜೆಂಡಾದಲ್ಲಿ ಇಲ್ಲದಿದ್ದರೂ ಅದನ್ನೇ ಪ್ರಮುಖ ವಿಷಯವಾಗಿಸಿದರು. ಈ ಬಗ್ಗೆ ಚರ್ಚಿಸಲು ವಿಜಯಪುರದಿಂದ ಒಳಚರಂಡಿ ಹಾಗೂ ನೀರು ಸರಬರಾಜು ಇಲಾಖೆಯ ಸಹಾಯಕ ಎಂಜಿನಿಯರ್‌ ರಾಮರಾವ್ ರಾಠೋಡ ಅವರನ್ನು ಕರೆಸಲಾಗಿತ್ತು.

ಸಭೆಯ ನಂತರ ಅವರೊಂದಿಗೆ ನೀರು ಶುದ್ಧೀಕರಣ ಘಟಕಕ್ಕೂ ಇಡೀ ಸದಸ್ಯರ ತಂಡ ಭೇಟಿ ನೀಡಿ ಪರಿಶೀಲನೆ ಚರ್ಚೆ ನಡೆಸಿದರು.

ಶುದ್ಧೀಕರಣ ಘಟಕದಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ನದಿಯಿಂದ ಪೂರೈಕೆಯಾದ ನೀರು ಮಣ್ಣು ಮಿಶ್ರಣವಾಗಿದೆ ಬಹುಶ: ಕೆರೆ ಹೂಳು ಎತ್ತಿರುವುದು ಕಾರಣವಾಗಿರಬಹುದು. ಶುದ್ಧೀಕರಣದ ಪೌಡರ್ ಹೆಚ್ಚು ಬಳಸುವಂತೆ ಎಂಜಿನಿಯರ್ ರಾಠೋಡ ಸಲಹೆ ನೀಡಿದರು.

ಇದರಿಂದ ವಾಸನೆ ಹೆಚ್ಚಿ ಜನತೆ ನೀರು ಕುಡಿಯುವುದನ್ನು ಬಿಡಬಹುದೆಂಬ ಸಂಶಯವನ್ನು ಸದಸ್ಯರು ವ್ಯಕ್ತಪಡಿಸಿದರು. ಇದಕ್ಕೆ ಬದಲಾಗಿ ಲಿಕ್ವಿಡ್‌ ಗ್ಯಾಸ್‌ ಬಳಸಿ, ಆದರೆ ಏನೇ ಮಾಡಿದರೂ ನೀರನ್ನು ಸದ್ಯ ತಿಳಿ ಮಾಡುವುದು ಅಸಾಧ್ಯ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಹಾಗೂ ಸದಸ್ಯರು ಹಣ ಎಷ್ಟೇ ಖರ್ಚಾಗಲಿ ಉತ್ತಮ ನೀರು ಕೊಡುವ ಪ್ರಯತ್ನವನ್ನು ಮಾತ್ರ ಕೈ ಬಿಡದಿರಲು ಸದಸ್ಯರು ಸಹಮತ ಸೂಚಿಸಿದರು.

ಇದೇ ವೇಳೆ ಪಟ್ಟಣದಲ್ಲಿ ನೈರ್ಮಲ್ಯ ಕೊರತೆ, ಚರಂಡಿಗಳು ನಿಯಮಿತವಾಗಿ ಸ್ವಚ್ಛಗೊಳ್ಳದಿರುವುದಕ್ಕೆ ಸದಸ್ಯರು ಆತಂಕ ವ್ಯಕ್ತಪಡಿಸಿದರು. ಇದಕ್ಕೆ ಸಿಬ್ಬಂದಿ ಕೊರತೆ ಕಾರಣ ಎಂದ ಮುಖ್ಯ ಅಧಿಕಾರಿಯವರಿಗೆ ಸ್ವಚ್ಛತಾ ಸಿಬ್ಬಂದಿ ಕೊರತೆ ನೀಗಿಸಲು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷರು ಸೂಚನೆ ನೀಡಿದರು.

ನಾಳೆಯಿಂದಲೇ ಆರು ಗಂಡಾಳು ನಾಲ್ಕು ಹೆಣ್ಣಾಳುಗಳ ಮೂರು ತಂಡ ರಚನೆ ಮಾಡುವುದು. ಅದಕ್ಕೆ ಇಬ್ಬರು ನೌಕರರು ಹಾಗೂ ಆಯಾ ವಾರ್ಡಿನ ಸದಸ್ಯರು ಉಸ್ತುವಾರಿ ಮಾಡಬೇಕು. ಒಂದು ವಾರ್ಡ ಸಂಪೂರ್ಣ ಸ್ವಚ್ಛವಾಗುವವರೆಗೆ ಮುಂದೆ ಹೋಗಕೂಡದು ಎಂದು ಸೂಚನೆ ನೀಡಿದರು.

ಇದಲ್ಲದೇ ದುರಸ್ತಿಗೆ ಬಂದಿರುವ ಬೋರವೆಲ್‌ಗಳನ್ನು ಒಂದು ವಾರದಲ್ಲಿ ದುರಸ್ತಿ ಮಾಡಿಸಬೇಕು. ಶುದ್ಧ ಕುಡಿಯುವ ನೀರು ಪೂರೈಸುವ ಆರ್‌ಒ ಪ್ಲಾಂಟ್‌ನ್ನು ಅಂಬಾಭವಾನಿ ಮಂದಿರದಲ್ಲಿ ಪ್ರಾರಂಭಿಸಬೇಕು ಎಂದು ತೀರ್ಮಾನಿಸಲಾಯಿತು.

ಇದಲ್ಲದೇ ಸಭೆಯಲ್ಲಿ ಹಿಂದಿನ ಸಭೆಯ ನಡವಳಿಕೆಗಳನ್ನು ಓದಿ ದೃಢೀಕರಿಸಲಾಯಿತು. ಫೆಬ್ರುವರಿಯಿಂದ ಏಪ್ರಿಲ್‌ವರೆಗೆ ಜಮಾಖರ್ಚಿನ ಮಂಜೂರಿ, 2018–19 ಸಾಲಿನ ಎಸ್‌ಎಫ್‌ಸಿ ಅನುದಾನ ₹128ಲಕ್ಷಕ್ಕೆ ಕ್ರಿಯಾಯೋಜನೆ ತಯಾರಿ, 2018–19ನೆ ಸಾಲಿನ 14ನೇ ಹಣಕಾಸು ಅನುದಾನ ₹141.52ಲಕ್ಷಕ್ಕೆ ಕ್ರಿಯಾಯೋಜನೆ ತಯಾರಿ ಇತ್ಯಾದಿ ವಿಷಯಗಳನ್ನು ಚರ್ಚಿಸಿ ಅನುಮೋದಿಸಲಾಯಿತು. ಸಭೆಯಲ್ಲಿ ಮುಖ್ಯಾಧಿಕಾರಿ ಎ.ಬಿ.ಕಲಾಲ ಹಾಗೂ ಸಿಬ್ಬಂದಿ ವರ್ಗದವರು, ಉಪಾಧ್ಯಕ್ಷೆ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT