ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಯವಿಟ್ಟು ನಮ್ಮೂರಿಗೆ ಬರಬೇಡಿ ಅಂತಿದ್ದಾರೆ ಶಿಮ್ಲಾ ನಿವಾಸಿಗಳು

Last Updated 1 ಜೂನ್ 2018, 12:04 IST
ಅಕ್ಷರ ಗಾತ್ರ

ಶಿಮ್ಲಾ: ಹಿಮಾಚಲ ಪ್ರದೇಶದ ರಾಜಧಾನಿ, ಪ್ರಮುಖ ಪ್ರವಾಸಿ ತಾಣ ಶಿಮ್ಲಾದಲ್ಲಿ ಹದಿನೈದು ದಿನಗಳಿಂದ ನೀರಿನ ಸಮಸ್ಯೆ ಉಲ್ಬಣಿಸಿದೆ. ಹಾಗಾಗಿ ‘ಪ್ರವಾಸಿಗರೇ ಶಿಮ್ಲಾಕ್ಕೆ ಬರಬೇಡಿ’ ಎಂದು ಸ್ಥಳೀಯ ನಿವಾಸಿಗಳೇ ಕರೆ ನೀಡಿದ್ದಾರೆ.

ಶಿಮ್ಲಾದ ಬಹುತೇಕ ಪ್ರದೇಶಗಳಿಗೆ ವಾರದಲ್ಲಿ ಒಮ್ಮೆ ಮಾತ್ರ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಇದರಿಂದ ನಿವಾಸಿಗಳು ರೋಸಿ ಹೋಗಿದ್ದಾರೆ.

ನೀರಿನ ಕೊರತೆ ನಿವಾರಿಸುವಂತೆ ಸ್ಥಳೀಯರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದರೆ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಆಡಳಿತ ವರ್ಗ ಸರಣಿ ಸಭೆಗಳನ್ನು ನಡೆಸುತ್ತಿದೆ. ನೀರಿನ ಅಭಾವವನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್‌ ಸ್ವಯಂ ಪ್ರೇರಿತವಾಗಿ ವಿಚಾರಣೆ ಕೈಕೊಂಡು ಕೆಲವು ನಿರ್ದೇಶನಗಳನ್ನು ಪಾಲಿಸುವಂತೆ ಸ್ಥಳೀಯ ನಗರ ಪಾಲಿಕೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಆದೇಶದ ಮುಖ್ಯಾಂಶಗಳು:

* ಪಾಲಿಕೆಯ ವ್ಯಾಪ್ತಿಯಲ್ಲಿನ ಯಾವುದೇ ಪ್ರದೇಶಕ್ಕೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಬಾರದು. ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳ ಅಧಿಕೃತ ನಿವಾಸಗಳನ್ನು ಹೊರತುಪಡಿಸಿ, ಗಣ್ಯರು, ನ್ಯಾಯಾಧೀಶರು, ಸಚಿವರು, ಶಾಸಕರು, ಅಧಿಕಾರಿಗಳು ವಾಸಿಸುವ ಪ್ರದೇಶಗಳಿಗೆ ಮತ್ತು ಖಾಸಗಿ ಸಂಕೀರ್ಣಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಬಾರದು.

* ನಗರದಲ್ಲಿನ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ಒಂದು ವಾರದ ಮಟ್ಟಿಗೆ ನಿಲ್ಲಿಸಬೇಕು.

* ಪಾಲಿಕೆ ವ್ಯಾಪ್ತಿಯಲ್ಲಿ ಕಾರುಗಳನ್ನು ತೊಳೆಯಲು ನಿರ್ಬಂಧ ಹೇರಬೇಕು. ಅದರ ಮೇಲ್ವಿಚಾರಣೆ ಮಾಡಲು ಸಮಿತಿಯೊಂದನ್ನು ರಚಿಸಬೇಕು.

* ಜನರ ನೀರಿನ ಬವಣೆಗಳನ್ನು ಆಲಿಸಲು ನಿಯಂತ್ರಣ ಕೊಠಡಿಗಳನ್ನು ತೆರದು ಸ್ವಯಂ ಸೇವಕರನ್ನು ನಿಯೋಜನೆ ಮಾಡಬೇಕು.

* ನೀರಿನ ಮಿತ ಬಳಕೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ವಿಶೇಷ ಅಭಿಯಾನಗಳನ್ನು ಕೈಗೊಳ್ಳಬೇಕು.

ನಗರದಲ್ಲಿ ತಲೆದೋರಿರುವ ನೀರಿನ ಸಮಸ್ಯೆಯ ಸ್ವರೂಪವನ್ನು ಸ್ಥಳೀಯರು ಮತ್ತು ಪ್ರವಾಸಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ‘ಕೆಲವು ದಿನಗಳ ಮಟ್ಟಿಗೆ ಶಿಮ್ಲಾದಿಂದ ದೂರವಿರಿ’ ಎಂಬ ಸಂದೇಶವನ್ನು ಹರಡುತ್ತಿದ್ದಾರೆ.

ಹಿಮಾಲಯದ ತಪ್ಪಲಲ್ಲಿ ಇರುವ ಶಿಮ್ಲಾಕ್ಕೆ ಈ ಋತುವಿನಲ್ಲಿ ಪ್ರತಿದಿನ ಸುಮಾರು 20 ಸಾವಿರ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ನೀರಿನ ಸಮಸ್ಯೆಯಿಂದಾಗಿ ಶುಕ್ರವಾರದಿಂದ ಆರಂಭವಾಗಬೇಕಿದ್ದ ‘ಶಿಮ್ಲಾ ಸಮ್ಮರ್‌ ಫೆಸ್ಟಿವಲ್‌’ಅನ್ನು ಸಹ ರಾಜ್ಯ ಸರ್ಕಾರ ಮುಂದೂಡಿದೆ.

ಹಿಮಾಲಯದ ಸರಣಿಗಳಲ್ಲಿ ಹರಿಯುವ ನದಿಗಳಲ್ಲಿ ಕೈಗೆತ್ತಿಕೊಂಡಿರುವ ಬೃಹತ್‌ ಜಲವಿದ್ಯುತ್‌ ಯೋಜನೆಗಳೇ ಈ ನೀರಿನ ಅಭಾವಕ್ಕೆ ಕಾರಣ. ಮುಂಬರುವ ದಿನಗಳ ಈ ಸಮಸ್ಯೆ ಹಿಮಾಲಯದ ಇತರೇ ಪ್ರದೇಶಗಳಿಗೂ ಹರಡಲಿದೆ ಎಂದು ರಾಜ್ಯ ಸರ್ಕಾರದ ಸುಪರ್ದಿಯಲ್ಲಿರುವ ಪರಿಸರ ಸಂರಕ್ಷಣಾ ಸಂಸ್ಥೆ ಹಿಮಾಧಾರ ಎಚ್ಚರಿಸಿದೆ.

‘ನಗರೀಕರಣ, ಪ್ರವಾಸಿಗರ ಸಂಖ್ಯೆಯ ಹೆಚ್ಚಳ, ಕೈಗಾರಿಕೀಕರಣ, ಗಣಿಗಾರಿಕೆ ಮತ್ತು ಹವಾಮಾನ ಬದಲಾವಣೆಗಳು ಹಿಮಾಲಯದ ಸಟ್ಲೆಜ್‌, ರಾವಿ, ಬಿಯಾಸ್‌, ಚೀನಾಬ್‌ ಮತ್ತು ಯಮುನಾ ನದಿಗಳಲ್ಲಿನ ನೀರನ್ನು ಬತ್ತಿಸುತ್ತಿವೆ’ ಎಂದು ಪರಿಸರ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಶಿಮ್ಲಾದಲ್ಲಿ ಹೆಚ್ಚೆಂದರೆ 16 ಸಾವಿರ ಜನ ವಾಸಿಸಬಹುದು ಎಂದು ಬ್ರಿಟಿಷರು ಅಂದಾಜಿಸಿದ್ದರು. ಆದರೆ, ಈ ನಗರದ ಜನಸಂಖ್ಯೆ ಈಗ 2 ಲಕ್ಷ ಸಮೀಪಿಸಿದೆ. ಅವರಿಗೆ ಪ್ರತಿದಿನ ಸುಮಾರು 42 ಕೋಟಿ ಲೀ. ನೀರು ಅಗತ್ಯವಿದೆ. ಆದರೆ ಸದ್ಯ 18 ರಿಂದ 20 ಕೋಟಿ ಲೀ. ನೀರು ಮಾತ್ರ ಸರಬರಾಜು ಮಾಡಲಾಗುತ್ತಿದೆ. ಈ ಸಮಸ್ಯೆಗೆ ನೀರು ಸರಬರಾಜು ಜಾಲದಲ್ಲಿನ ಸೋರಿಕೆಯೇ ಕಾರಣವೆಂದು ಸ್ಥಳೀಯ ಆಡಳಿತ ವರ್ಗ ಹೇಳುತ್ತಿದೆ.

ನಗರ ಇಷ್ಟೆಲ್ಲಾ ನೀರಿನ ಕೊರತೆಯ ಜ್ವಲಂತ ಸಮಸ್ಯೆಯಲ್ಲಿ ಬೇಯುತ್ತಿರುವ ಈ ಸಂದರ್ಭದಲ್ಲಿ ಪಾಲಿಕೆಯ ಮೇಯರ್‌ ಕುಸುಮ್‌ ಸಂದ್ರತೆ ಅವರು ಪೂರ್ವ ನಿಗದಿತ ಕಾರ್ಯಕ್ರಮದಂತೆ ಚೀನಾ ಪ್ರವಾಸಕ್ಕೆ ತೆರಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT