ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲು ಊಟಕ್ಕಾಗಿ ಸಾಲುಗಟ್ಟಿ ನಿಲ್ಲುವ ಜನ!

Last Updated 1 ಜೂನ್ 2018, 14:48 IST
ಅಕ್ಷರ ಗಾತ್ರ

ಚಂಡೀಗಡ: ಜೈಲು ಊಟ ಎಂದರೆ ಶಿಕ್ಷೆಗೆ ಸಮನಾದ ಆಹಾರ ಎಂದು ಭಾವಿಸಿರುವವರೇ ಹೆಚ್ಚು. ಕೈದಿಗಳ ಮಾತು ಹಾಗಿರಲಿ ಬದುಕಿನಲ್ಲಿ ಒಮ್ಮೆಯಾದರೂ ಜೈಲೂಟದ ರುಚಿ ನೋಡದವರು ಕೂಡ ಹೆಸರು ಕೇಳಿದಾಕ್ಷಣ ಮುಗು ಮುರಿಯುತ್ತಾರೆ. ತಿನ್ನಲು ಸಾಧ್ಯವಾಗದ ಶುಚಿ–ರುಚಿಯಾಗಿಲ್ಲದ ಊಟವನ್ನು ಜೈಲು ಊಟಕ್ಕೆ ಹೋಲಿಸಿ ಮಾತನಾಡುವುದನ್ನು ಸಾಧಾರಣವಾಗಿ ಕೇಳಿರುತ್ತಿವಿ. ಆದರೆ, ಜ್ಯೋತಿಷಿಗಳು ಜೈಲೂಟ ತಿನ್ನುವುದರಿಂದ ಪಾಪ ಪರಿಹಾರವಾಗುತ್ತದೆ ಎಂದ ಕಾರಣಕ್ಕೆ ಪಂಜಾಬ್‌ನಲ್ಲಿ ಜೈಲೂಟಕ್ಕೂ ಬೇಡಿಕೆ ಬಂದಿದೆ.

ತಮ್ಮ ಬಳಿಗೆ ಬರುವ ಭಕ್ತರಿಗೆ ಇಲ್ಲಿನ ಜ್ಯೋತಿಷಿಗಳು, ‘ಜೀವನದಲ್ಲಿ ಒಮ್ಮೆಯಾದರೂ ಜೈಲು ಊಟವನ್ನು ಸೇವಿಸಿ. ಇದರಿಂದ ನಿಮ್ಮ ದುರದೃಷ್ಟವನ್ನೆಲ್ಲ ಕಳೆದುಕೊಳ್ಳಬಹುದು’ ಎಂದು ಸಲಹೆ ನೀಡುತ್ತಿರುವುದು ಜೈಲು ಊಟಕ್ಕೆ ಬೇಡಿಕೆ ಬರಲು ಕಾರಣ.

ಮೌಢ್ಯದಿಂದ ಕೂಡಿರುವ ಈ ಸಲಹೆ ಕಾನೂನು ಅಥವಾ ಪೊಲೀಸ್‌ ಪ್ರಕರಣಗಳೊಡನೆ ಯಾವುದೇ ರೀತಿಯ ಸಂಬಂಧ ಹೊಂದಿರುವವರನ್ನು ಆಕರ್ಷಿಸಿದೆ. ಜೈಲಿನಲ್ಲಿ ತಯಾರಿಸುವ ಆಹಾರ ಸೇವಿಸುವುದರಿಂದ ಶಿಕ್ಷೆಯಿಂದ ಅಥವಾ ವಿವಾದಗಳಿಂದ ಪಾರಾಗಬಹುದು ಎಂದು ಭಾವಿಸಿರುವ ಜನ ಜೈಲು ಊಟದ ಮೊರೆ ಹೋಗುತ್ತಿದ್ದಾರೆ.

ಈ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿರುವವರು ಜೈಲು ಆಹಾರ ಸೇವಿಸುವುದನ್ನು ದೀರ್ಘಕಾಲದವರೆಗೆ ಅಭ್ಯಾಸ ಮಾಡಿಕೊಂಡಿದ್ದಾರೆ. ಜೈಲುಗಳಿಂದ ನೇರವಾಗಿ ಆಹಾರ ಪಡೆಯಲು ಸಾಧ್ಯವಿಲ್ಲ. ಹಾಗಾಗಿ ಜನರ ಅತಿಯಾದ ಕೋರಿಕೆಯ ಕಾರಣಕ್ಕೆ ಜೈಲಿನ ಕೆಲ ಸಿಬ್ಬಂದಿ ಮಾನವೀಯತೆ ಆಧಾರದಲ್ಲಿ ಆಹಾರವನ್ನು ನೀಡುತ್ತಿದ್ದಾರೆ.

ಸಾರ್ವಜನಿಕರ ಬೇಡಿಕೆಯನ್ನು ಮನಗಂಡ ಪಂಜಾಬ್‌ ಸರ್ಕಾರ ಜೈಲೂಟದ ಮಳಿಗೆಗಳನ್ನು ಆರಂಭಿಸಲು ಮುಂದಾಗಿದೆ.

ಸದ್ಯ ಭಾರತದಲ್ಲಿ ಕೈದಿಗಳ ಆಹಾರ ತಯಾರಿಸಲು ದಿನವೊಂದಕ್ಕೆ ಸರಾಸರಿ 52.32 ರೂಪಾಯಿಯನ್ನು ವ್ಯಯಿಸಲಾಗುತ್ತಿದೆ ಎಂದು ಸರ್ಕಾರದ ಅಂಕಿ–ಅಂಶಗಳಿಂದ ತಿಳಿದು ಬಂದಿದೆ. ನಾಗಾಲ್ಯಾಂಡ್‌ನಲ್ಲಿ ಕೈದಿಗಳ ಆಹಾರಕ್ಕಾಗಿ ಹೆಚ್ಚು ಹಣ ವ್ಯಯಿಸಲಾಗುತ್ತಿದ್ದು, ಪ್ರತಿ ಕೈದಿಯ ದಿನವೊಂದರ ಊಟಕ್ಕಾಗಿ ₹ 140 ಬಳಸಲಾಗುತ್ತಿದೆ.

ಕರ್ನಾಟಕದಲ್ಲಿ ₹ 76.75 ವ್ಯಯಿಸಲಾಗುತ್ತಿದೆ. ಮಹಾರಾಷ್ಟ್ರ ಮತ್ತು ಗೋವಾ ಸರ್ಕಾರಗಳು ಕೇವಲ ₹ 32 ಖರ್ಚು ಮಾಡುತ್ತಿವೆ.

ಸದ್ಯ ಜನರ ಬೇಡಿಕೆಯನ್ನು ಆಧರಿಸಿ ರಾಜ್ಯದ 5–6 ಜೈಲುಗಳಲ್ಲಿ ಮಳಿಗೆಗಳನ್ನು ತೆರೆಯಲು ಪಂಜಾಬ್‌ ಸರ್ಕಾರ ನಿರ್ಧರಿಸಿದ್ದು, ಜನರು ಜೈಲೂಟವನ್ನು ಸವಿಯಲು ₹ 100  ರಿಂದ  ₹ 200 ಪಾವತಿಸಬೇಕಾಗುತ್ತದೆ. ಮಳಿಗೆಗಳು ಪ್ರತಿದಿನ ನಿರ್ದಿಷ್ಟ ಅವಧಿಯಲ್ಲಷ್ಟೇ ಕಾರ್ಯನಿರ್ವಹಿಸಲಿದ್ದು, ಇದರಿಂದ ಬರುವ ಆದಾಯವನ್ನು ಕಾರಾಗೃಹಗಳ ಕಲ್ಯಾಣ ನಿಧಿಗೆ ಬಳಸಿಕೊಳ್ಳಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT