ಬಾಲಭವನದ ಯೋಜನೆಗೆ ‘ಗ್ರಹಣ’

7
ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸಿಗದ ಬಾಲ ವೇದಿಕೆ, ಜಾಗ ಹುಡುಕಾಟದ ನೆಪದಲ್ಲಿಯೇ ಕಳೆಯಿತು ದಶಕ

ಬಾಲಭವನದ ಯೋಜನೆಗೆ ‘ಗ್ರಹಣ’

Published:
Updated:
ಬಾಲಭವನದ ಯೋಜನೆಗೆ ‘ಗ್ರಹಣ’

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯಾಗಿ ರೂಪು ತಳೆದು 10 ವರ್ಷಗಳೇ ಕಳೆದಿವೆ. ಈವರೆಗೆ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ಬಾಲ ಭವನ ಕನಸು ಸಾಕಾರಗೊಂಡಿಲ್ಲ. ಪರಿಣಾಮ, ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಬಾಲ ವೇದಿಕೆಯನ್ನು ಒದಗಿಸುವಂತಹ ಮಹತ್ವದ ಯೋಜನೆ ಯೊಂದು ನನಸಾಗದೆ ನನೆಗುದಿಗೆ ಬಿದ್ದಿದೆ.

ಅತ್ಯಂತ ಕಡಿಮೆ ಶುಲ್ಕದಲ್ಲಿ ಜನಸಾಮಾನ್ಯರ ಮಕ್ಕಳ ವ್ಯಕ್ತಿತ್ವ ವಿಕಸನ ವೃದ್ಧಿಗೆ ಅಗತ್ಯವಾದ ಕಲೆ, ಸಾಹಿತ್ಯ, ಸಂಸ್ಕೃತಿ, ಸಂಗೀತ, ಕ್ರೀಡೆಯಂತ ಪಠ್ಯೇತರ ಚಟುಟಿಕೆಗಳ ತರಬೇತಿಗಳನ್ನು ನೀಡುವ ಮೂಲಕ, ಮಕ್ಕಳು ವೈಯಕ್ತಿಕ ಮತ್ತು ಮಾನಸಿಕವಾಗಿ ವಿಕಾಸ ಹೊಂದುವಂತೆ ನೋಡಿಕೊಳ್ಳುವುದು ಬಾಲ ಭವನ ಯೋಜನೆಯ ಮುಖ್ಯ ಧ್ಯೇಯ.

ಆದರೆ ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಇಂತಹ ಮಹತ್ವದ ಯೋಜನೆಯೊಂದು ದಶಕ ವಾದರೂ ಅನುಷ್ಠಾನಕ್ಕೆ ಬಾರದಿರುವುದು ಶೋಚನೀಯ ಸಂಗತಿ ಎನ್ನುತ್ತಾರೆ ನಗರದ ಪ್ರಜ್ಞಾವಂತ ನಾಗರಿಕರು.

ನಗರದ ಹೊರವಲಯದ ಗೌರಿಬಿದ ನೂರು ರಸ್ತೆಯಲ್ಲಿರುವ ರಂಗನಾಥ ಸ್ವಾಮಿ ದೇವಸ್ಥಾನದ (ರಂಗಸ್ಥಳ) ಬಳಿಯ ಸರ್ವೆ ನಂ 96ರಲ್ಲಿ 7 ಎಕರೆ ಜಮೀನನ್ನು ಜಿಲ್ಲಾ ಬಾಲ ಭವನ ನಿರ್ಮಿಸಲು 2015ರ ಜುಲೈ 17ರಂದು ಜಿಲ್ಲಾಧಿಕಾರಿ ಮಂಜೂರು ಮಾಡಿದ್ದಾರೆ. ಭೂಮಿ ಮಂಜೂರಾಗಿ ಮೂರು ವರ್ಷಗಳು ಸಮೀಪಿಸಿದರೂ ಭವನ ತಲೆ ಎತ್ತಿಲ್ಲ.

2017ರಲ್ಲಿ ಈ ಜಾಗ ಸಮೀಕ್ಷೆ ನಡೆಸಿದ ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ) ಅಧಿಕಾರಿಗಳು ಇದರಲ್ಲಿ ಬಾಲ ಭವನದ ಕಾಂಪೌಂಡ್, ಪರಿಸರ ಸ್ನೇಹಿ ಕಟ್ಟಡ, ಮಕ್ಕಳ ಹುಟ್ಟುಹಬ್ಬದ ಹಾಲ್, ಶೌಚಾಲಯ, ಆಟೋಪಕರಣ, ಟೆಲಿಸ್ಕೋಪ್, ಅಕ್ವೇರಿಯಂ, ಆಟದ ಮೈದಾನ, ಬೋರ್‌ವೆಲ್‌, ನೀರಿನ ತೊಟ್ಟಿ ನಿರ್ಮಿಸಲು ಅಂದಾಜು ಪಟ್ಟಿ ಸಿದ್ಧಪಡಿಸಿ ಕೊಟ್ಟಿದ್ದರು. ಅದರಂತೆ ಜಿಲ್ಲಾಧಿಕಾರಿ ಜಿಲ್ಲಾ ಬಾಲ ಭವನ ಯೋಜನೆಯ ಪ್ರಸ್ತಾವವನ್ನು ರಾಜ್ಯ ಬಾಲ ಭವನ ಸೊಸೈಟಿ ಕಾರ್ಯದರ್ಶಿಗೆ ಕಳುಹಿಸಿದ್ದರು.

ಆ ಪ್ರಸ್ತಾವದ ಬೆನ್ನಲ್ಲೇ ಉದ್ದೇಶಿತ ಜಾಗಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಾಲ ಭವನ ಸೊಸೈಟಿ ಕಾರ್ಯದರ್ಶಿ, ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರೊಂದಿಗೆ ಸಭೆ ನಡೆಸಿದ್ದರು. ಪರಿಷ್ಕೃತ ಪ್ರಸ್ತಾವ ಸಲ್ಲಿಸುವಂತೆ ಉಪನಿರ್ದೇಶಕರಿಗೆ ಸೂಚನೆ ನೀಡಿದ್ದರು. ಆ ನಂತರ ಜಿಲ್ಲಾಡಳಿತ ಪರಿಷ್ಕೃತ ಅಂದಾಜುಪಟ್ಟಿಯೊಂದಿಗೆ ಎರಡನೇ ಬಾರಿ ಪ್ರಸ್ತಾವ ಕಳುಹಿಸಿಕೊಟ್ಟಿತ್ತು. ವರ್ಷ ಕಳೆದರೂ ಈವರೆಗೆ ಬಾಲಭವನದಿಂದ ಉತ್ತರವಿಲ್ಲ.

ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ಪದ್ಮರಾಜ ಅವರನ್ನು ಪ್ರಶ್ನಿಸಿದರೆ, ‘ರಂಗಸ್ಥಳದ ಬಳಿ ಮಂಜೂರಾದ ಜಾಗ ಸಮತಟ್ಟಾಗಿಲ್ಲ. ಸರಿಯಾದ ದಾರಿ ವ್ಯವಸ್ಥೆ ಇಲ್ಲ. ಅಲ್ಲಿ ಬಾಲ ಭವನ ನಿರ್ಮಿಸುವುದು ಸೂಕ್ತವಲ್ಲ ಎಂದು ಲಿಖಿತ ಹಿಂಬರಹ ನೀಡಿದ್ದಾರೆ. ಹೀಗಾಗಿ ಸೂಕ್ತ ಜಾಗ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿ ಅವರಿಗೆ ನಾಲ್ಕು ತಿಂಗಳ ಹಿಂದೆ ಪತ್ರ ಬರೆದಿದ್ದೇವೆ’ ಎಂದು ಅವರು ವಿವರಿಸಿದರು.

‘ಶಿಡ್ಲಘಟ್ಟ ರಸ್ತೆಯ ತೋಟಗಾರಿಕೆ ಇಲಾಖೆಯ ಜಾಗವೊಂದರಲ್ಲಿ ಬಾಲ ಭವನ ನಿರ್ಮಾಣಕ್ಕೆ ಜಾಗ ನೀಡಲು ಜಿಲ್ಲಾಡಳಿತ ಉದ್ದೇಶಿಸಿದೆ. ವಿಧಾನಸಭೆ ಚುನಾವಣೆ ಕಾರಣಕ್ಕೆ ಈವರೆಗೆ ಈ ವಿಚಾರದ ಬಗ್ಗೆ ಚರ್ಚೆ ನಡೆದಿರಲಿಲ್ಲ. ಶೀಘ್ರದಲ್ಲಿಯೇ ಈ ಬಗ್ಗೆ ಜಿಲ್ಲಾಧಿಕಾರಿ ಅವರೊಂದಿಗೆ ಮಾತನಾಡುವೆ’ ಎಂದು ಹೇಳಿದರು.

ಸಮಿತಿ ಕಾರ್ಯವೈಖರಿಗೆ ಅಸಮಾಧಾನ

ಜಿಲ್ಲಾ ಮಟ್ಟದಲ್ಲಿ ಬಾಲ ಭವನ ಸಮಿತಿ ಇರುತ್ತದೆ. ಇದಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಅವರು ಅಧ್ಯಕ್ಷರಾಗಿರುತ್ತಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತೋಟಗಾರಿಕೆ ಇಲಾಖೆ, ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಸದಸ್ಯರಾಗಿರುತ್ತಾರೆ. ಜತೆಗೆ ಸ್ವಯಂ ಸೇವಾ ಸಂಸ್ಥೆಗಳಿಗೆ ಸೇರಿದ ಇಬ್ಬರು ನಾರ್ಮನಿರ್ದೇಶಿತ ಸದಸ್ಯರಾಗಿರುತ್ತಾರೆ.

ನಿಯಮಾವಳಿಗಳ ಪ್ರಕಾರ ಈ ಸಮಿತಿಯು ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ಬಾಲ ಭವನದ ಚಟುವಟಿಕೆಗಳ ಬಗ್ಗೆ ಸಮಾಲೋಚನೆ ನಡೆಸಬೇಕು. ಸದ್ಯ ಜಿಲ್ಲಾ ಬಾಲ ಭವನ ಯೋಜನೆ ಅವಸ್ಥೆ ನೋಡಿದವರು ಈ ಸಮಿತಿಯ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಶೋಚನೀಯ ಸಂಗತಿ

ಮಕ್ಕಳ ಮನರಂಜನೆಯ ವಿಚಾರವನ್ನು ಇವತ್ತು ಯಾರು ಸಹ ಗಂಭೀರವಾಗಿ ಪರಿಗಣಿಸದಿರುವುದು ಶೋಚನೀಯ. ಈ ಹಿಂದೆ ಪೋಷಕರು ಮಕ್ಕಳ ಪಾಠದಷ್ಟೇ ಆಟಕ್ಕೂ ಪ್ರಾಧಾನ್ಯತೆ ನೀಡುತ್ತಿದ್ದರು. ದುರಂತವೆಂದರೆ ಈಗಿನ ಮಕ್ಕಳು ಯಾವಾಗಲೂ ಓದುವುದರಲ್ಲೇ ಕಳೆದು ಹೋಗುತ್ತಾರೆ. ಹೀಗಾಗಿ ಪೋಷಕರಿಗೆ ಬಾಲ ಭವನದ ವಿಚಾರ ಅಷ್ಟಾಗಿ ಮನ ತಟ್ಟುತ್ತಿಲ್ಲ

– ಪ್ರೇಮಲೀಲಾ ವೆಂಕಟೇಶ್, 15ನೇ ವಾರ್ಡ್ ನಿವಾಸಿ

ಭವನದ ಅವಶ್ಯಕತೆ ಇದೆ

ಜಿಲ್ಲೆಯಾಗಿ 10 ವರ್ಷಗಳು ಕಳೆದರೂ ಬಾಲ ಭವನ ನಿರ್ಮಾಣವಾಗದಿರುವುದು ನಮ್ಮ ಹೀನಾಯ ಪರಿಸ್ಥಿತಿ ತೋರಿಸುತ್ತದೆ. ಶ್ರೀಮಂತರು ರಜಾ ದಿನಗಳಲ್ಲಿ ಮಕ್ಕಳನ್ನು ಪರಸ್ಥಳಗಳಿಗೆ ಕರೆದುಕೊಂಡು ಹೋಗಿ ಮೋಜು ಮಾಡಿಕೊಂಡು ಬರುತ್ತಾರೆ. ಆದರೆ ಬಡವರ ಮಕ್ಕಳಿಗೆ ಎಲ್ಲಿದೆ ಮನರಂಜನೆ? ಮಕ್ಕಳ ವಿಚಾರದಲ್ಲಿ ಸೇವಾ ಮನೋಭಾವ ಇರುವವರು ಸಾಕಷ್ಟು ಜನರಿದ್ದಾರೆ. ಆದರೆ ಅನೇಕರಿಗೆ ಜಾಗದ ಕೊರತೆಯಿಂದ ಏನೂ ಮಾಡಲು ಸಾಧ್ಯವಾಗುತ್ತಿಲ್ಲ. ನಮಗೆ ಬಾಲ ಭವನದ ಅವಶ್ಯಕತೆ ತುಂಬಾ ಇದೆ

ಪ್ರಿಯಾಂಕಾ ಅನಿಲ್‌ ಕುಮಾರ್, ನಗರ್ತ ಪೇಟೆ ನಿವಾಸಿ

ಪಠ್ಯೇತರ ಚಟುವಟಿಕೆ ಬಹುಮುಖ್ಯ

ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳು ಸಹ ಪಾತ್ರ ವಹಿಸುತ್ತವೆ. ಆದರೆ ಇವತ್ತು ಜಿಲ್ಲೆಯಲ್ಲಿ ಮಕ್ಕಳ ಬೌದ್ಧಿಕ ವಿಕಾಸಕ್ಕೆ ಪೂರಕವಾದ ಚಟುವಟಿಕೆ ನಡೆಸುವ ಒಂದೇ ಒಂದು ಸ್ಥಳವಿಲ್ಲ. ಅನೇಕ ಪೋಷಕರಿಗೆ ಬಾಲ ಭವನದ ಪರಿಕಲ್ಪನೆಯೇ ಗೊತ್ತಿಲ್ಲ. ಇವತ್ತು ಮಕ್ಕಳು ಪುಸ್ತಕ, ಟಿ.ವಿ, ಮೊಬೈಲ್‌ಗಳ ನಡುವೆ ಕಳೆದು ಹೋಗಿ ಭಾವನಾ ಶೂನ್ಯರಾಗುತ್ತಿದ್ದಾರೆ

ಎಸ್‌.ಅರುಣ್ ಕುಮಾರ್, 2ನೇ ವಾರ್ಡ್ ನಿವಾಸಿ

ರಾಜಕಾರಣಿಗಳಿಗೆ ಏನು ಲಾಭ?

ಪ್ರತಿಯೊಂದರಲ್ಲೂ ತಮ್ಮ ಲಾಭ ನಿರೀಕ್ಷಿಸುವ ರಾಜಕಾರಣಿಗಳಿಗೆ, ಜನಪ್ರತಿನಿಧಿಗಳಿಗೆ ಬಾಲ ಭವನದಿಂದ ಏನು ಲಾಭವಿದೆ ಹೇಳಿ? ಹೀಗಾಗಿಯೇ ಅವರು ಅದರ ಗೊಡವೆಗೆ ಹೋಗುತ್ತಿಲ್ಲ. ಉಳ್ಳವರು ಬೇಸಿಗೆ ಶಿಬಿರಗಳನ್ನು ಹುಡುಕಿಕೊಂಡು ಹೋಗುತ್ತಾರೆ. ಬಡವರ ಮಕ್ಕಳಿಗೆ ಮನೆ ಅಂಗಳವೇ ಗತಿ. ಈ ಪರಿಸ್ಥಿತಿ ಯಾವಾಗ ಸುಧಾರಿಸುತ್ತದೋ ಗೊತ್ತಿಲ್ಲ. ಬೇಸರವಾಗುತ್ತದೆ

ವರುಣ್ ರಾಜ್, ಗರ್ಲ್ಸ್ ಸ್ಕೂಲ್ ರಸ್ತೆ ನಿವಾಸಿ

**

ಬಾಲ ಭವನ ನಿರ್ಮಾಣಕ್ಕೆ ₹ 60 ಲಕ್ಷ ಮಂಜೂರು ಆಗಿ ಒಂದು ವರ್ಷ ಕಳೆದಿದೆ. ಆದರೆ ಸೂಕ್ತ ಜಾಗದ ಹುಡುಕಾಟ ನಡೆಸಿರುವ ಕಾರಣ ಯೋಜನೆ ವಿಳಂಬಗೊಂಡಿದೆ

ಪದ್ಮರಾಜ, ಪ್ರಭಾರ ಸಹಾಯಕ ನಿರ್ದೇಶಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry