ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ನೋಡಿ ಇದು ದೈತ್ಯ ಜಲ ತಿಗಣೆ!

Last Updated 1 ಜೂನ್ 2018, 19:30 IST
ಅಕ್ಷರ ಗಾತ್ರ

ಕೀಟಗಳ ಉಗಮ 400 ದಶಲಕ್ಷ ವರ್ಷಗಳ ಹಿಂದೆ ಡಿವೊನಿಯನ್ (Devonian Period) ಯುಗದಲ್ಲಿ ಕಂಡು ಬಂದಿರುವುದನ್ನು ಪಳೆಯುಳಿಕೆ ಶಾಸ್ತ್ರ ನಿರ್ಣಯಿಸುತ್ತದೆ.

ಪ್ರಾಯಶಃ ಗಾಳಿ ಎಲ್ಲೆಲ್ಲಿ ಚಲಿಸುತ್ತೋ ಅಲ್ಲೆಲ್ಲಾ ಕೀಟಗಳಿವೆ ಎನ್ನಬಹುದು. ಇಂದಿಗೂ ಕೀಟಗಳು ಸರ್ವಾಂತರ್ಯಾಮಿ. ಭುವಿಯ ಮೇಲೆ, ಮಣ್ಣಿನೊಳಗೆ, ಗಾಳಿಯಲ್ಲಿ, ನೀರಿನಲ್ಲಿ... ಪೆಟ್ರೋಲ್ ಬಾವಿಗಳಲ್ಲೂ ಕೆಲವೊಂದು ಕೀಟ ‘ಪೆಟ್ರೋಲ್ ನೊಣ’ (Petoleum fly(Helaeomyia petrolei) ಜೀವಿಸುವುದು ಕಂಡುಬಂದಿದೆ. ಅಂಟಾರ್ಟಿಕ ಖಂಡದಲ್ಲಿಯೂ ಸಾಕಷ್ಟು ಕೀಟಗಳ ಬದುಕನ್ನು ಉಲ್ಲೇಖಿಸಲಾಗಿದೆ.

ಹೀಗೆ ವಿಶ್ವದೆಲ್ಲೆಡೆಯೂ ಅಪರೂಪದ ಕೀಟಗಳು ನಮಗೆ ಸಿಗಬಲ್ಲವು. Giant Water Bug ಇದರ ಆಂಗ್ಲ ಹೆಸರೇ ಹೇಳುವಂತೆ 3 ಅಂಗುಲ ಉದ್ದದ ದೈತ್ಯ ಭಯಾನಕ ಕೀಟವಿದು, ‘ದೈತ್ಯ ಜಲ ತಿಗಣೆ’. ಇವು ಶುದ್ಧ ನೀರಿನಲ್ಲಿ ವಾಸಿಸುತ್ತವೆ. ತಮ್ಮ ಪೂರ್ಣ ದೇಹ ನೀರಿನೊಳಕ್ಕೆ ಇಳಿಬಿಟ್ಟು ದೇಹದ ತುದಿಯಲ್ಲಿರುವ ಎರಡು ಪುಟ್ಟ ಕೊಳವೆಗಳು ಮಾತ್ರ ನೀರಿನ ಹೊರಕ್ಕೆ ಇದ್ದು, ವಾತಾವರಣದಲ್ಲಿರುವ ಆಮ್ಲಜನಕವನ್ನು ಹೀರಿ ಉಸಿರಾಡುತ್ತವೆ. ಗಂಡು ಹೆಣ್ಣು ಕೀಟಗಳ ಸಮಾಗಮವೇ ಅಪರೂಪದ್ದು, ತುಸುಕಾಲ ಸಮಾಗಮದ ನಂತರ ಹೆಣ್ಣು ಕೀಟವು ಗಂಡಿನ ಬೆನ್ನೇರಿ ಅಲ್ಲಿ ಕೆಲವು ಮೊಟ್ಟೆಗಳನ್ನಿಡುತ್ತದೆ. ತದನಂತರ ಮತ್ತೆ ಕೆಳಕ್ಕಿಳಿದು ಸಮಾಗಮವಾಗುತ್ತದೆ. ಮತ್ತೆ ಅದೇ ರೀತಿ ಮೊಟ್ಟೆಗಳನ್ನಿಡುತ್ತದೆ. ಹೀಗೆ ಈ ರೀತಿಯ ಹಲವು ಸಮಾಗಮಗಳ ನಂತರ ಗಂಡು ಕೀಟದ ಬೆನ್ನತುಂಬ ಮೊಟ್ಟೆಗಳನ್ನಿಟ್ಟು ಇಟ್ಟು ಹೆಣ್ಣು ಕೀಟವು ಅಲ್ಲಿಂದ ಕಾಲ್ಕೀಳುತ್ತದೆ. ಮುಂದಿನ ಸಂತತಿಯ ಲಾಲನೆ, ಪಾಲನೆ ಪೋಷಣೆಯನ್ನು ತಂದೆಯೇ ನೋಡಿಕೊಳ್ಳಬೇಕಾಗುತ್ತದೆ.

ಯಾವ ಜೀವಿಯಲ್ಲೂ ಕಾಣದ ಒಂದು ಅಪರೂಪದ ಪ್ರಕ್ರಿಯೆ ಈ ಕೀಟದಲ್ಲಿ ಕಾಣುವುದುಂಟು. ಮುಂದಿನ ಸಂತತಿ, ಪೀಳಿಗೆಯ ಪಾಲನೆ ಪೋಷಣೆ ದೇಖರೇಖಿಯ ಕಾಳಜಿ. ಸಾಮಾನ್ಯವಾಗಿ ಎಲ್ಲಾ ಜೀವಿಗಳಲ್ಲಿ ಕಂಡು ಬರುವುದು ತಾಯಿಯ ಪೋಷಣೆ. ಆದರೆ ಇಲ್ಲಿ ಇದು ವ್ಯತಿರಿಕ್ತವಾಗಿರುವುದು ಆಶ್ಚರ್ಯಕರ ಸಂಗತಿ. ಮೊಟ್ಟೆಯೊಡೆದು ಮರಿಗಳು ಹೊರಬರುವವರೆಗೂ ತಂದೆ ಈ ಮೊಟ್ಟೆಗಳನ್ನು ಬಹಳ ಶ್ರದ್ಧೆ ಮತ್ತು ನಿಷ್ಠೆಯಿಂದ ನೋಡಿಕೊಳ್ಳುತ್ತದೆ. ತನ್ನ ಶತ್ರುಗಳಿಂದ ರಕ್ಷಿಸಿಕೊಳ್ಳತ್ತದೆ. ಮರಿಗಳು ಒಮ್ಮೆ ತಮ್ಮ ಆಹಾರ ಹುಡುಕಿ ತಿನ್ನಲಾರಂಭಿಸಿದಾಗ ಮಾತ್ರ ತಂದೆ ತನ್ನ ದಾರಿ ನೋಡಿಕೊಳ್ಳುತ್ತದೆ. ಈ ದೈತ್ಯ ಜಲ ತಿಗಣೆಗಳು ನೀರಿನಲ್ಲಿರುವ ಜಲಚರಗಳನ್ನು ತಿಂದು ಬದುಕುತ್ತವೆ. ಮೀನು, ಕೀಟಗಳ ಮರಿಗಳನ್ನು, ಕೆಲವು ಉಭಯಜೀವಿಗಳನ್ನು ತನ್ನ ಸೂಜಿಯಂತಹ ಬಾಯಿಯಿಂದ (Rostrum) ಚುಚ್ಚಿ ಜೀರ್ಣಿಸುವ ಲಾಲಾರಸವನ್ನು ಬಿಟ್ಟು ಅವುಗಳ ದೇಹದ್ರವ್ಯವನ್ನು ಹೀರುತ್ತವೆ.

ಆಹಾರದ ಕೊರತೆಯುಂಟಾದಾಗ ತನ್ನ ಮರಿಗಳನ್ನೇ ಕೆಲವೊಮ್ಮೆ ಭಕ್ಷಿಸುವುದೂ ಉಂಟು. ನಾವು ನೀರಿನ ತೀರದಲ್ಲಿ ನಡೆಯುವಾಗ ನಮ್ಮ ಕಾಲುಗಳಿಗೆ ಇವು ಚುಚ್ಚಿದಾಗ ವಿಪರೀತ ಉರಿಯುಂಟಾಗುತ್ತದೆ. ಇಷ್ಟಾದರೂ, ನಾನು ಥಾಯ್ಲೆಂಡ್‍ನಲ್ಲಿ ಕಂಡಹಾಗೆ ಮತ್ತು ಇತರ ಕೆಲವು ದೇಶಗಳಲ್ಲಿ ಈ ತಿಗಣೆಗಳನ್ನು ವಿಭಿನ್ನ ಖಾದ್ಯಗಳಿಗೆ ಬಳಸುತ್ತಾರೆ. ಮಾರುಕಟ್ಟೆಗಳಲ್ಲಿಯೂ ಮಾರಾಟವಾಗುತ್ತವೆ. ನಮ್ಮಲ್ಲಿ ಏಡಿ, ಸೀಗಡಿ ಮೀನುಗಳು ಹೇಗೆ ಮಾರಾಟವಾಗುತ್ತವೋ ಹಾಗೆ!

ಈ ತಿಗಣೆಗಳು ಬೆಲಸ್ಟೊಮಾಟಿಡೆ (Belastomatidae:Heteroptera) ಎಂಬ ಕುಟುಂಬಕ್ಕೆ ಸೇರಿದ್ದು ಕೆಲವು ಚಿಕ್ಕ ಗಾತ್ರದ ತಿಗಣೆಗಳೂ ಕಂಡುಬರುತ್ತವೆ. ಈ ಹಿಂದೆ ಮೊಟ್ಟೆಗಳನ್ನು ಹೊತ್ತ ಗಂಡು ತಿಗಣೆಯ ಚಿತ್ರ ನಮ್ಮ ವಾಟ್ಸ್ ಆ್ಯಪ್ ಗುಂಪುಗಳಲ್ಲಿ ಹರಿದಾಡುತ್ತಿತ್ತು, ಇದನ್ನು ಮುಟ್ಟಿದಾಗ ಕೈಗಳಿಗೆ ರಂಧ್ರಬಿದ್ದು ಬಿದ್ದು ಕರಗಿ ಹೋಗುತ್ತದೆಂಬ ಸುಳ್ಳು ಮಾಹಿತಿಯ ಕಂತೆಗಳೊಂದಿಗೆ!
– ನೂರ್ ಸಮದ ಅಬ್ಬಲಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT