ಗ್ಲಾಮರ್ ಬೆಡಗಿಯ ಕಡಕ್ ಮಾತು...

7

ಗ್ಲಾಮರ್ ಬೆಡಗಿಯ ಕಡಕ್ ಮಾತು...

Published:
Updated:
ಗ್ಲಾಮರ್ ಬೆಡಗಿಯ ಕಡಕ್ ಮಾತು...

ನೀನಾಸಂನಲ್ಲಿ ಅಭಿನಯ ಕಲಿತು ಚಂದನವನಕ್ಕೆ ಕಾಲಿಟ್ಟ ಕಡಕ್ ಮಾತಿನ ಬಿಂಬಶ್ರೀ ನೀನಾಸಂ ಅಂದಗಾತಿ. ರಂಗಭೂಮಿ, ಸಿನಿಮಾ ಬಹುವಾಗಿ ಪ್ರೀತಿಸುವ ಮಲೆನಾಡಿನ ಈ ಚೆಲುವೆ ಈಗಾಗಲೇ ‘ರಾಮಾ ರಾಮಾ ರೇ’ ಸಿನಿಮಾದ ನಾಯಕಿಯಾಗಿ ಬೆಳ್ಳಿತೆರೆ ಪ್ರವೇಶಿಸಿ ಯಶ ಕಂಡಿದ್ದಾರೆ. ಶೀಘ್ರದಲ್ಲೇ ತೆರೆಗೆ ಬರಲು ಸಿದ್ಧವಾಗಿರುವ ಅವರ ಅಭಿನಯದ ‘ಗೌಡ್ರು ಸೈಕಲ್’ ಅವರ ಬಹು ನಿರೀಕ್ಷಿತ ಸಿನಿಮಾ.

ಶಿವಮೊಗ್ಗ ಮೂಲದ ಬಿಂಬಶ್ರೀ ತಮ್ಮ ರಂಗಭೂಮಿ ಹಾಗೂ ಸಿನಿಮಾ ಪಯಣದ ಹಾದಿಯನ್ನು ಇಲ್ಲಿ ಹಂಚಿಕೊಂಡಿದ್ದಾರೆ.

‘ಸಾಮಾನ್ಯ ಕುಟುಂಬ ಹಿನ್ನೆಲೆಯ ನನಗೆ ಸಿನಿಮಾದಲ್ಲಿ ನೆಲೆ ಕಾಣುವ ಬಗ್ಗೆ ಯಾವುದೇ ಕನಸುಗಳು ಇರಲಿಲ್ಲ. ಎಸ್ಸೆಸ್ಸೆಲ್ಸಿ ಮುಗಿದ ಮೇಲೆ ನೀನಾಸಂ ಸೇರಿದೆ. ಚಿಕ್ಕಂದಿನಲ್ಲಿ ಕಲಿತ ಸಂಗೀತ ಹಾಗೂ ವೀಣೆ ನೀನಾಸಂ ಸೇರಲು ಸಹಾಯಕವಾಯಿತು. ಅಲ್ಲಿ ರಂಗಭೂಮಿ ಶಿಸ್ತು ಕಲಿಯುತ್ತಲೇ ಅಭಿನಯದ ಹಲವು ಪಟ್ಟುಗಳನ್ನು ಕಲಿಯಲು ಸಾಧ್ಯವಾಯಿತು. ನಿಜ ಅರ್ಥದ ಬದುಕು, ವೃತ್ತಿ ಪರವಾಗಿ ಆಲೋಚಿಸುವುದು ಕಲಿತೆ. ‘ಅಭಿಜ್ಞಾನ ಶಾಕುಂತಲೆ’, ‘ಮೂರು ಕಾಸಿನ ಸಂಗೀತ ನಾಟಕ’ ಹೀಗೆ; ಒಂದಷ್ಟು ನಾಟಕಗಳಲ್ಲಿ ಅಭಿನಯಿಸಿದೆ. ಮುಂದೆ; ಯಶವಂತ ಸರದೇಶಪಾಂಡೆ ಅವರ ನಾಟಕ ತಂಡ ಸೇರಿ ‘ಒಂದಾಟ ಭಟ್ಟರದ್ದು’, ‘ಸಹಿ ರೀ ಸಹಿ’ನಾಟಕಗಳಲ್ಲಿ ಅಭಿನಯಿಸಿದೆ.

ಇದರ ನಡುವೆ ‘ಜಯನಗರ 4 ಬ್ಲಾಕ್’ ಎನ್ನುವ ಕಿರುಚಿತ್ರದಲ್ಲೂ ಅಭಿಯಿಸಿದೆ. ಚಂದನವನ ಪ್ರವೇಶ ಮಾಡುವ ಉಮೇದಿನಲ್ಲಿದ್ದಾಗಲೇ ‘ರಾಮಾ ರಾಮಾ ರೇ’ ಚಿತ್ರದ ಆಫರ್ ಬಂದಿತು. ಈ ಸಿನಿಮಾ  ಹೆಸರು ತಂದು ಕೊಟ್ಟಿತು. ನಂತರ ‘ಗೌಡ್ರ ಸೈಕಲ್’ ಸಿನಿಮಾ ಒಪ್ಪಿಕೊಂಡೆ. ಒಂದಿಷ್ಟು ತಮಿಳು, ತೆಲುಗುನಿಂದಲೂ ಅವಕಾಶಗಳು ಬಂದವು. ಇಲ್ಲೇ ನೆಲೆ ಕಾಣುವ ಉದ್ದೇಶದಿಂದ ಕೈಬಿಟ್ಟೆ. ಹೀಗೆ; ಆರಂಭವಾದ ‌ಜರ್ನಿಯಲ್ಲಿ ಈಗ ಮತ್ತೊಂದು ಹೊಸ ಪ್ರಾಜೆಕ್ಟ್‌ ಕೈಸೇರುವ ನಿರೀಕ್ಷೆಯಲ್ಲಿ ಇದ್ದೇನೆ.

ಗಾಂಧಿನಗರದ ಮಂದಿಗೆ ಗ್ಲಾಮರ್‌ ಬಿಟ್ಟು ಬೇರೇನೂ ಕಾಣುತ್ತಿಲ್ಲ. ‘ಗ್ಲಾಮರ್‌ ಬೇಕು ಕಣ್ರೀ...ಗ್ಲಾಮರ್’ ಎನ್ನುವ ಮಂದಿ ಕಂಡರೆ ಪಿತ್ತ ನೆತ್ತಿಗೆ ಏರುತ್ತದೆ. ಇಲ್ಲಿ ಅಟಿಟ್ಯೂಡ್ ಇರುವ ಹುಡುಗಿಯರಿಗೆ ಬೆಲೆ. ಅಭಿನಯ ಹೇಗಿದ್ದರೂ ಪರವಾಗಿಲ್ಲ; ಆದರೆ, ಬ್ಯೂಟಿ ಮಾತ್ರ ಇರಬೇಕೆಂದು ಬಯಸುತ್ತಾರೆ. ರಂಗಭೂಮಿಯಿಂದ ಬಂದಿರುವ ನನಗೆ ಇದೆಲ್ಲಾ ನಿಭಾಯಿಸುವ ತಾಕತ್ತು ಇದೆ. ಸಿನಿಮಾದಲ್ಲಿ ಬೆಳೆಯಬೇಕೆಂಬ ಛಲಕ್ಕೆ ಕುಟುಂಬದ ಬೆಂಬಲ ಇದೆ. ಇದಕ್ಕಾಗಿಯೇ ಶಿವಮೊಗ್ಗದಿಂದ ಬೆಂಗಳೂರಿಗೆ ಶಿಫ್ಟ್‌ ಆಗಿದ್ದೇವೆ.ಬಿಂಬಶ್ರೀ

ಶಾಲೆಯಲ್ಲಿ ಸಾಮಾನ್ಯ ವಿದ್ಯಾರ್ಥಿಯಾಗಿದ್ದೆ. ಆಟೋಟದಲ್ಲಿ ಮುಂದೆ ಇದ್ದೆ. ಆದರೆ, ಓದಿನಲ್ಲಿ ಅಷ್ಟಕ್ಕೆ ಅಷ್ಟೇ. ಪಿಯು ಕರೆಸ್ಪಾಂಡೆನ್ಸ್‌ನಲ್ಲಿ ಮುಗಿಸುವ ‍ಪ್ರಯತ್ನ ಕೈಗೂಡಲಿಲ್ಲ. 8ನೇ ತರಗತಿ ಮೇಲೆ ಬಿಎ ಪರೀಕ್ಷೆ ತೆಗೆದುಕೊಂಡರೂ ಅಪೂರ್ಣ.

ಇನ್ನು  ರಿಲ್ಯಾಕ್ಸ್‌ ಆಗಲು ಆಗಾಗ ಸ್ನೇಹಿತರೊಂದಿಗೆ ಪಾರ್ಟಿ ಮಾಡಿ ಎಂಜಾಯ್ ಮಾಡುತ್ತೇನೆ. ಗೆಳೆಯರ ಗುಂಪಿನಲ್ಲಿದ್ದಾಗ ಬಿಂದಾಸ್ ಆಗಿರುತ್ತೇನೆ. ಮನೆಯಲ್ಲಿದ್ದಾಗ ಕೊಂಚ ಆವಾಜ್‌ ಹಾಕುತ್ತೇನೆ. ವೃತ್ತಿ ವಿಷಯದಲ್ಲಿ ನಯ, ವಿನಯದಿಂದ ವರ್ತಿಸುತ್ತೇನೆ.

ಬಿಡುವಾಗಿದ್ದಾಗ ಸಿನಿಮಾ ನೋಡೋದು, ರಂಗ ತಂಡಗಳಲ್ಲಿ ಅಭಿನಯಿಸುತ್ತೇನೆ. ಅವಕಾಶಗಳಿಗಾಗಿ ಕಾಯುವುದಿಲ್ಲ. ಇದ್ದ ಎಲ್ಲ ಅವಕಾಶಗಳನ್ನೂ ಬಾಚಿಕೊಳ್ಳುತ್ತಿದ್ದೇನೆ. ಮನೆಯಲ್ಲಿ ಗೃಹಿಣಿಯಾಗಿರುವ ಅಮ್ಮ, ವ್ಯಾಪಾರ ವೃತ್ತಿಯ ಅಪ್ಪ, ಇಬ್ಬರು ಅಕ್ಕಂದಿರ ಸುಖಿ ಕುಟುಂಬ ನಮ್ಮದು. ಮದುವೆ ಇತ್ಯಾದಿಗಳ ಬಗ್ಗೆ ಈಗಲೇ ಕನಸುಗಳು ಇಲ್ಲ; ವೃತ್ತಿಪರವಾಗಿ ಬೆಳೆಯಬೇಕೆಂಬ ಆದಮ್ಯ ಆಸೆಯೇ ಜೀವನದ ಗುರಿ’ 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry