ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊನ್ನಂಪೇಟೆಗೆ ತಾಲ್ಲೂಕು ಕೇಂದ್ರದ ನಿರೀಕ್ಷೆ

ವಿಧಾನಸಭೆ ಚುನಾವಣೆಗೂ ಮುನ್ನ ಕಾವು ಪಡೆದಿದ್ದ ಹೋರಾಟ
Last Updated 1 ಜೂನ್ 2018, 13:22 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ದಕ್ಷಿಣ ಕೊಡಗಿನ ಪ್ರಮುಖ ವಾಣಿಜ್ಯ ಕೇಂದ್ರ ಗೋಣಿಕೊಪ್ಪಲು. ಇಲ್ಲಿ ಪ್ರತಿ ಭಾನುವಾರ ಸಂತೆ ನಡೆಯುವುದೇ ಅಲ್ಲದೆ ಕಾಫಿ, ಮೆಣಸು, ಬಾಳೆ ಮೊದಲಾದವುಗಳ ಖರೀದಿ ಕೇಂದ್ರಗಳೂ ಇವೆ. ಆರ್‌ಎಂಸಿ ಮಾರುಕಟ್ಟೆಯೂ ಇದೆ. ಹೀಗಾಗಿ, ಇಲ್ಲಿನ ಪಟ್ಟಣ ನಿತ್ಯವೂ ವಾಹನಗಳ ಭರಾಟೆ, ಜನಜಂಗುಳಿಯಿಂದ ಕೂಡಿರುತ್ತದೆ.

ಇಂತಹ ವಾಣಿಜ್ಯ ಪಟ್ಟಣಕ್ಕೆ ಸೂಕ್ತವಾದುದೊಂದು ಬಸ್ ನಿಲ್ದಾಣವಿಲ್ಲ. ಪಟ್ಟಣಕ್ಕೆ ನಿತ್ಯವೂ ನೂರಾರು ಬಸ್‌ಗಳು ಬಂದು ಹೋಗುತ್ತವೆ. ಸಾವಿರಾರು ಪ್ರಯಾಣಿಕರು ಸಂಚರಿಸುತ್ತಾರೆ. ಅವರು ಕುಳಿತುಕೊಳ್ಳುವುದಕ್ಕೆ ಸ್ವಚ್ಛವಾದ ನಿಲ್ದಾಣವಿಲ್ಲ. ಕುಡಿಯುವುದಕ್ಕೆ ನೀರಿನ ಸೌಲಭ್ಯವಿಲ್ಲ.

ಹಿಂದಿದ್ದ ಬಸ್ ನಿಲ್ದಾಣದ ಕಟ್ಟಡ ಕುಸಿದು ಬಿದ್ದು 5 ವರ್ಷಗಳೇ ಕಳೆಯಿತು. ಕಳೆದ 10 ವರ್ಷಗಳಿಂದ ಒಬ್ಬರೇ ಶಾಸಕರಿದ್ದಾರೆ. ಆದರೆ, ಬಸ್‌ನಿಲ್ದಾಣ ವ್ಯವಸ್ಥೆಯ ಬಗ್ಗೆ ಕಿಂಚಿತ್ತೂ ಗಮನಹರಿಸುತ್ತಿಲ್ಲ ಎಂಬುದು ಸಾರ್ವಜನಿಕರ ಅಳಲು.

ಮತ್ತೊಂದು ಕಡೆ ಗೋಣಿಕೊಪ್ಪಲು ಸೇರಿದಂತೆ ಪೊನ್ನಂಪೇಟೆ, ಅರುವತ್ತೊಕ್ಕಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ತೀವ್ರಗೊಂಡಿದೆ. ಗೋಣಿಕೊಪ್ಪಲಿನಲ್ಲಿ ಪಟ್ಟಣದ ಹೃದಯ ಭಾಗವಾದ ಬಸ್ ನಿಲ್ದಾಣದ ಪಕ್ಕದಲ್ಲಿರುವ ಹಳೇ ಗ್ರಾಮ ಪಂಚಾಯಿತಿ ಸಭಾಂಗಣದ ಆವರಣದಲ್ಲೇ ತ್ಯಾಜ್ಯ ಸುರಿದು ಸುಡುತ್ತಿದ್ದಾರೆ. ಇಲ್ಲಿ ಸೊಗಸಾಗಿ ಬೆಳೆದ ತೆಂಗಿನ ಮರಗಳಿವೆ. ಅವುಗಳ ಬುಡಕ್ಕೆ ಟ್ರ್ಯಾಕ್ಟರ್‌ನಲ್ಲಿ ತಂದ ತ್ಯಾಜ್ಯವನ್ನು ಸುರಿದು ಬೆಂಕಿ ಕೊಡುತ್ತಿರುವುದರಿಂದ ತೆಂಗಿನ ಮರಗಳು ಸುಟ್ಟು ಹೋಗುತ್ತಿವೆ. ಇದನ್ನು ಸಾರ್ವಜನಿಕರು ನೋಡಿ ಮರುಕಪಡುತ್ತಾ ಗ್ರಾಮ ಪಂಚಾಯಿತಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಪೊನ್ನಂಪೇಟೆ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಅಲ್ಲಿ ಪಟ್ಟಣದ ಹೃದಯ ಭಾಗದಲ್ಲಿಯೇ ತ್ಯಾಜ್ಯ ರಾಶಿ ಬೆಟ್ಟದಂತೆ ಬಿದ್ದಿದೆ. ಕೊಳೆತು ನಾರುತ್ತಾ ಅಕ್ಕಪಕ್ಕದ ಜನರಿಗೆ ನರಕಯಾತನೆ ಮೂಡಿಸುತ್ತಿದೆ. ಜತೆಗೆ, ತಾಲ್ಲೂಕು ಕೇಂದ್ರ ನಿರೀಕ್ಷೆಯಲ್ಲೂ ಪೊನ್ನಂಪೇಟೆಯಿದೆ. ಈ ಬಾರಿಯ ಚುನಾವಣೆಯಲ್ಲಿ ಪೊನ್ನಂಪೇಟೆ ತಾಲ್ಲೂಕು ಕೇಂದ್ರ ಮಾಡುತ್ತೇವೆ ಎಂದು ಮತ ಕೇಳಿದವರೇ ಹೆಚ್ಚು. ಅದನ್ನು ಈಡೇರಿಸುತ್ತಾರೆಯೇ ಎಂಬ ನಿರೀಕ್ಷೆಯಲ್ಲಿ ಈ ಭಾಗದ ಜನರು ಇದ್ದಾರೆ.

ಅರುವತ್ತೊಕ್ಕಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಮೈಸೂರಮ್ಮ ನಗರದ ಹೆಬ್ಬಾಗಿಲಿನಲ್ಲಿಯೇ ಕಸದ ರಾಶಿ ಕೊಳೆಯುತ್ತಿದೆ. ಈ ಮೂರು ಪಂಚಾಯಿತಿಗೆ ಒಳಪಡುವ ನಗರಗಳ ತ್ಯಾಜ್ಯವನ್ನು ವಿಲೇವಾರಿ ಮಾಡಲು ಹಳ್ಳಿಗಟ್ಟು ಬಳಿಯ ಸೀತಾ ಕಾಲೊನಿಯಲ್ಲಿ 2 ಎಕರೆ ಜಾಗ ಗುರುತಿಸಿ ಅದರ ಸುತ್ತ ಕಾಂಪೌಂಡ್ ನಿರ್ಮಿಸಿ ತ್ಯಾಜ್ಯ ವಿಲೇವಾರಿ ಯಂತ್ರಗಳನ್ನು ಅಳವಡಿಸಲಾಗಿತ್ತು. ಇದನ್ನು ಕಳೆದ ವರ್ಷ ಶಾಸಕ ಬೋಪಯ್ಯ ಅವರೇ ಉದ್ಘಾಟಿಸಿ ಇನ್ನು ಮುಂದೆ ತ್ಯಾಜ್ಯ ವಿಲೇವಾರಿ ಸಮಸ್ಯೆ ನೀಗಲಿದೆ ಎಂದು ಹರ್ಷ ವ್ಯಕ್ತಪಡಿಸಿದ್ದರು. ಆದರೆ, ಇದು ಉದ್ಘಾಟನೆ ಆದದ್ದೇ ಆಯ್ತು. ಮತ್ತೆ ಕಸದ ವಾಹನ ಅತ್ತ ಸುಳಿಯಲಿಲ್ಲ. ಜನಪ್ರತಿನಿಧಿಗಳೂ ಅತ್ತ ಕಾಲಿಡಲಿಲ್ಲ. ತ್ಯಾಜ್ಯ ವಿಲೇವಾರಿ ಸಮಸ್ಯೆ ಯಥಾಸ್ಥಿತಿಯಲ್ಲಿ ಮುಂದುವರಿಯಿತು.

ಒತ್ತುವರಿಯಾದ ಕೀರೆ ಹೊಳೆ: ಗೋಣಿಕೊಪ್ಪಲು ಪಟ್ಟಣದಲ್ಲಿ ಮಳೆಗಾಲದಲ್ಲಿ ಜೀವಕಳೆ ಪಡೆಯುವ ಕೀರೆ ಹೊಳೆ ಸಂಪೂರ್ಣವಾಗಿ ಒತ್ತುವರಿಯಾಗಿದೆ. ಕೀರೆಹೊಳೆಯ ಇಕ್ಕೆಲಗಳಲ್ಲಿ 50 ಮೀಟರ್ ಬಿಡಬೇಕು. ಈ ಜಾಗವನ್ನು ಯಾವುದೇ ಕಾರಣಕ್ಕೂ ಒತ್ತುವರಿ ಮಾಡಬಾರದು ಎಂದು ಹಿಂದೆ ಉಪ ವಿಭಾಗಾಧಿಕಾರಿಯಾಗಿದ್ದ ಡಾ.ಎಂ.ಆರ್. ರವಿ ಖುದ್ದು ಪರಿಶೀಲಿಸಿ, ಒತ್ತುವರಿ ತೆರವುಗೊಳಿಸಬೇಕು ಎಂದು ಒತ್ತುವರಿದಾರರಿಗೆ ನೋಟಿಸ್ ನೀಡಿದ್ದರು. ಆದರೆ ಅವರು ವರ್ಗಾವಣೆಗೊಂಡ ಬಳಿಕ ಈ ಆದೇಶ ಕಸದ ಬುಟ್ಟಿ ಸೇರಿತು. ಈಗ ಕೀರೆಹೊಳೆ ಸಣ್ಣ ಕಾಲುವೆಯಂತಾಗಿದೆ. ಇಕ್ಕೆಲಗಳಲ್ಲಿ ಬೃಹತ್ ಕಟ್ಟಡಗಳು ತಲೆ ಎತ್ತಿವೆ.

ಮರಳು ದಂಧೆ: ಅಕ್ರಮ ಮರಳು ತೆಗೆಯುವ ದಂಧೆಯನ್ನು ನಿಷೇಧಿಸಿದ್ದರೂ ದಕ್ಷಿಣ ಕೊಡಗಿನ ಪ್ರಮುಖ ನದಿ ಲಕ್ಷ್ಮಣತೀರ್ಥದಲ್ಲಿ ಮರಳು ದಂಧೆ ವ್ಯಾಪಕವಾಗಿ ನಡೆಯುತ್ತಿದೆ ಎಂಬ ದೂರು ಕೇಳಿ ಬರುತ್ತಿವೆ. ರಾತ್ರಿ ವೇಳೆ ನದಿಯ ಒಡಲಿಗೆ ಕನ್ನ ಹಾಕುವ ದಂಧೆಕೋರರು ಎಗ್ಗಿಲ್ಲದೇ ಮರಳು ಸಾಗಿಸುತ್ತಿದ್ದಾರೆ. ಇವನ್ನೆಲ್ಲಾ ಕಣ್ಣಾರೆ ಕಂಡರೂ ಶಾಸಕರು ಮೌನವಾಗಿದ್ದಾರೆ ಎಂಬ ಮಾತುಗಳು ಜನ ವಲಯದಲ್ಲಿ ಕೇಳಿಬರುತ್ತಿದೆ.

ಮೂಲ ಸೌಕರ್ಯ ಕಾಣದ ಹಾಡಿಗಳು: ದಕ್ಷಿಣ ಕೊಡಗಿನಲ್ಲಿ ವ್ಯಾಪಕವಾಗಿರುವ ಹಾಡಿಗಳ ಸ್ಥಿತಿ ಈಗಲೂ ಶೋಚನೀಯವಾಗಿಯೇ ಇದೆ. ಇಲ್ಲಿ ರಸ್ತೆಗಳಿಲ್ಲ. ಕುಡಿಯುವ ನೀರಿನ ಸಮಸ್ಯೆ, ಶೌಚಾಲಯ, ಮುಖ್ಯವಾಗಿ ಮನೆಗಳ ನಿರ್ಮಾಣ ಎಲ್ಲವೂ ನನೆಗುದಿಗೆ ಬಿದ್ದಿವೆ. ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಬಂದಿಲ್ಲ. ಅರಣ್ಯದೊಳಗೆ ತಲೆತಲಾಂತರದಿಂದ ವಾಸಿಸುತ್ತಿರುವ ಆದಿವಾಸಿಗಳ ಬದುಕು ಸುಧಾರಣೆಯಾಗಿಲ್ಲ. ಅವರಿಗೆ ಕನಿಷ್ಠ ಮೂಲ ಸೌಕರ್ಯಗಳೂ ಲಭಿಸಿಲ್ಲ.

ಕುಡಿಯುವ ನೀರಿನ ಸಮಸ್ಯೆ: ಇನ್ನೂ ಬಾಳೆಲೆ, ನಲ್ಲೂರು, ತಿತಿಮತಿ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಕುಡಿಯುವ ನೀರಿನ ಸೌಲಭ್ಯ ಸಮರ್ಪಕವಾಗಿಲ್ಲ. ಬಾಳೆಲೆಯ ಪಕ್ಕದಲ್ಲಿಯೇ ಲಕ್ಷ್ಮಣ ತೀರ್ಥ ನದಿ ಹರಿಯುತ್ತಿದ್ದರೂ ಕುಡಿಯುವ ನೀರಿನ ಬರ ನೀಗಿಲ್ಲ. ನದಿ ನೀರನ್ನು ಉಪಯೋಗಿಸಿಕೊಳ್ಳುವ ಯಾವ ಯೋಜನೆಗಳೂ ರೂಪಿತವಾಗಿಲ್ಲ ಎಂದು ಸ್ಥಳೀಯರು ದೂರುತ್ತಾರೆ.

ಕಳೆದ ಎರಡು ವರ್ಷಗಳಿಂದ ಸಾಗುತ್ತಿರುವ ಬಾಳೆಲೆ, ನಿಟ್ಟೂರು ನಡುವಿನ ಲಕ್ಷ್ಮಣತೀರ್ಥ ನದಿ ಸೇತುವೆ ಕಾಮಗಾರಿ ಪೂರ್ಣಗೊಂಡಿಲ್ಲ. ಈ ಬಾರಿಯೂ ಈ ಭಾಗದ ರಸ್ತೆ ಮಳೆಗಾಲದಲ್ಲಿ ಮುಳುಗಿ ಈ ಭಾಗದ ಜನರ ಸಂಚಾರಕ್ಕೆ ಸಂಕಷ್ಟ ಮೂಡಲಿದೆ.

ದಕ್ಷಿಣ ಕೊಡಗಿನ ಪ್ರಮುಖ ಪ್ರವಾಸಿ ತಾಣ ಇರ್ಪು ಜಲಪಾತ. ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ, ಅವರು ಉಳಿಯುವುದಕ್ಕೆ ಸುಸಜ್ಜಿತವಾದ ವಸತಿ ಗೃಹದ ಕೊರತೆ ಇದೆ. ಸಾವಿರಾರು ರೂಪಾಯಿ ಸುರಿದು ಪ್ರವಾಸಿಗರು ಹೋಂಸ್ಟೇಗಳಲ್ಲಿ ಉಳಿಯಬೇಕಾದ ಸ್ಥಿತಿ ಇದೆ. ಪ್ರವಾಸಿ ಸ್ಥಳಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಇರ್ಪು ರಾಮೇಶ್ವರ ದೇವಸ್ಥಾನದ ಬಳಿ ಪ್ರವಾಸಿ ವಸತಿ ಗೃಹ ನಿರ್ಮಾಣದ ಅಗತ್ಯವಿದೆ.

10 ವರ್ಷಗಳ ಕಾಲ ಶಾಸಕರಾಗಿದ್ದ ಕೆ.ಜಿ. ಬೋಪಯ್ಯ ಇದೀಗ ಮತ್ತೆ ಮೂರನೇ ಬಾರಿಗೆ ಮರು ಆಯ್ಕೆಯಾಗಿದ್ದಾರೆ. ಈ ಎಲ್ಲ ಬೇಡಿಕೆಗಳನ್ನು ಅವರು ಈ ಬಾರಿಯಾದರೂ ಈಡೇರಿಸಬೇಕು ಎಂಬುದು ಗೋಣಿಕೊಪ್ಪಲು ಭಾಗದ ಜನರ ಪ್ರಮುಖ ಬೇಡಿಕೆ.

ಕ್ಷೇತ್ರದ ಜನರು ಏನಂತಾರೆ?

ಪ್ರಯಾಣಿಕರಿಗೆ ತಪ್ಪದ ಸಂಕಷ್ಟ

ಬಸ್ ನಿಲ್ದಾಣ ಕುಸಿದು ಬಿದ್ದು ಹಲವು ವರ್ಷಗಳೇ ಕಳೆದವು. ಪ್ರಯಾಣಿಕರು ಬಿಸಿಲು ಮಳೆಗೆ ಅಂಗಡಿ ಮುಂಗಟ್ಟುಗಳನ್ನು ಆಶ್ರಯಿಸಬೇಕಾದ ಸ್ಥಿತಿಯಿದೆ. ಮುಂದೆಯಾದರೂ ಅದಕ್ಕೆ ಪರಿಹಾರ ಸಿಗುವುದೇ ಎಂಬುದು ನಮ್ಮ ನಿರೀಕ್ಷೆ 
– ಎಂ.ಎನ್. ಚೇತನ್,  ಗೋಣಿಕೊಪ್ಪಲು

ಗಿರಿಜನರ ಬಗ್ಗೆ ಕಾಳಜಿ ಇಲ್ಲ
ವಿರಾಜಪೇಟೆ ತಾಲ್ಲೂಕಿನಲ್ಲಿ 25 ವರ್ಷದಿಂದ ಬಿಜೆಪಿ ಶಾಸಕರಿದ್ದಾರೆ. ಇವರ್‍ಯಾರೂ ಹಾಡಿ ಕಡೆಗೆ ತಿರುಗಿ ನೋಡಿಲ್ಲ. ಕೆ.ಜಿ. ಬೋಪಯ್ಯ ಅವರು ಕಳೆದ 10 ವರ್ಷಗಳಿಂದ ಶಾಸಕರಿದ್ದಾರೆ. ಗಿರಿಜನ ಹಾಡಿ ಗಳಿಗೆ ಕನಿಷ್ಠ ಮಟ್ಟದ ಮೂಲ ಸೌಕರ್ಯ ಒದಗಿಸಿಲ್ಲ. ಗಿರಿಜನರು ಶತಮಾನಗಳಷ್ಟು ಹಿಂದಿನ ಬದುಕಿನಲ್ಲಿಯೇ ಜೀವನ ಸಾಗಿಸ ಬೇಕಾದ ಸ್ಥಿತಿ ಈಗಲೂ ಇದೆ.
– ಪಿ.ಬಿ. ಸುಬ್ರು, ಗಿರಿಜನ  ಮುಖಂಡ, ತಿತಿಮತಿ

ಕಸ ವಿಲೇವಾರಿ ಸಮಸ್ಯೆ
ಪೊನ್ನಂಪೇಟೆಯ ಸ್ವಚ್ಛ ಪಟ್ಟಣ ಎಂಬ ಖ್ಯಾತಿಗೆ ಕುತ್ತು ಬಂದಿದೆ. ಶಾಸಕರು ಮನಸ್ಸು ಮಾಡಿದ್ದರೆ ಇದನ್ನು ಸುಲಭವಾಗಿ ಪರಿಹರಿಸಬಹುದಿತ್ತು. ಆದರೆ, ಅವರು ಕೇವಲ ರಸ್ತೆ ಉದ್ಘಾಟನೆ ಕಡೆಗೆ ಕಳೆದ 10 ವರ್ಷಗಳಲ್ಲಿ ಗಮನ ಹರಿಸಿದರೆ ಹೊರತು ಸುಡು ಸಮಸ್ಯೆಗಳ ಪರಿಹಾರಕ್ಕೆ ಗಮನಹರಿಸಲಿಲ್ಲ.
– ಪಿ.ಡಿ. ಅಪ್ಪಯ್ಯ, ಪೊನ್ನಂಪೇಟೆ

ನೀರಿನ ಸಮಸ್ಯೆ ನೀಗಿಸಲಿ
ಲಕ್ಷ್ಮಣತೀರ್ಥ ನದಿ ಪಕ್ಕದಲ್ಲಿಯೇ ಹರಿಯುತ್ತಿದ್ದರೂ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಶಾಸಕರು ದೂರದೃಷ್ಟಿಯಿಂದ ಕೆಲಸ ಮಾಡಿದ್ದರೆ ಸಮಸ್ಯೆ ಪರಿಹರಿಸಬಹುದಿತ್ತು. ಮುಂದೆ ಶಾಶ್ವತ ನೀರಿನ ಯೋಜನೆ ರೂಪಿಸುತ್ತಾರೆಯೇ ನೋಡಬೇಕಾಗಿದೆ.
– ಶಶಿಕುಮಾರ್, ಬಾಳೆಲೆ

ಜೆ. ಸೋಮಣ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT