ಪ್ಯಾಡ್‌ ಬಳಕೆ: ಹಾನಿಯೋ? ಹಿತಕರವೋ?

7

ಪ್ಯಾಡ್‌ ಬಳಕೆ: ಹಾನಿಯೋ? ಹಿತಕರವೋ?

Published:
Updated:
ಪ್ಯಾಡ್‌ ಬಳಕೆ: ಹಾನಿಯೋ? ಹಿತಕರವೋ?

ಋತುಸಾವ್ರ ಎನ್ನುವುದು ಹೆಣ್ಣಿನ ‍ಪಾಲಿನ ಮೂರು ದಿನದ ನರಕ ಎಂಬ ಮಾತಿದೆ. ಹಳ್ಳಿಗಳಲ್ಲಿ ಋತುಸಾವ್ರ ಅನಿಷ್ಠದ ಸಂಕೇತ ಎನ್ನುವ ನಂಬಿಕೆ ಇಂದಿಗೂ ಜೀವಂತವಾಗಿದೆ. ಹೆಣ್ಣಿನ ಋತುಸ್ರಾವಕ್ಕೂ ಪರಿಸರದಲ್ಲಿನ ಯಾವುದೋ ಸಮಸ್ಯೆಗೂ ಸಂಬಂಧವಿದೆಯೇ? ಮೇಲ್ನೋಟಕ್ಕೆ ಇದೊಂದು ಅಸಂಬದ್ಧ ಪ್ರಶ್ನೆ ಎನ್ನಿಸಬಹುದು.

ಆದರೆ ಈ ಬಗ್ಗೆ ಅನೇಕರು ತಮ್ಮ ತಮ್ಮ ಅಭಿಪ್ರಾಯಗಳ‌ನ್ನು ವ್ಯಕ್ತಪಡಿಸುತ್ತಾರೆ. ಋತುಸ್ರಾವ ಎಂದಾಕ್ಷಣ ನೆನಪಿಗೆ ಬರುವುದು ‘ಸ್ಯಾನಿಟರಿ ಪ್ಯಾಡ್‌’. ಸ್ಯಾನಿಟರಿ ಪ್ಯಾಡ್ ಬಳಸಿದವರು ಅದನ್ನು ಸಿಕ್ಕ ಸಿಕ್ಕಲ್ಲಿ ಎಸೆಯುವ ಮೂಲಕ ಪರಿಸರ ಹಾನಿ ಮಾಡುತ್ತಿದ್ದಾರೆ ಎಂಬುದು ಅನೇಕರ ಅಂಬೋಣ. ಅದಕ್ಕಾಗಿ ಸ್ಯಾನಿಟರಿ ಪ್ಯಾಡ್ ಬದಲು ಬಟ್ಟೆಯನ್ನು  ಬಳಸುವುದೇ ಸರಿಯಾದ ಮಾರ್ಗ, ಆದರಿಂದ ಪರಿಸರದ ಹಾನಿಯನ್ನು ತಪ್ಪಿಸಬಹುದು ಎನ್ನುವ ತಂಡವೊಂದಿದೆ.

‘ಹೌದು, ಬಟ್ಟೆಯ ಬಳಕೆಯೇ ಸರಿಯಾದ ಉಪಾಯ’ ಎನ್ನುವ ಮಾತು ಈಗ ಎಲ್ಲೆಡೆ ಕೇಳಿಬರುತ್ತಿದೆ. ಅದಕ್ಕಾಗಿ ಅಭಿಯಾನಗಳು ನಡೆಯುತ್ತಿವೆ. ಬೆಂಗಳೂರಿಗೇ ಮಾತ್ರ ಸೀಮಿತವಾಗಿದ್ದ ‘ಪ್ಯಾಡ್ ಬಿಟ್ಟು, ಮತ್ತೆ ಬಟ್ಟೆಗೆ ಮರಳಿ’ ಅಭಿಯಾನ ಇಂದು ಸದ್ದಿಲ್ಲದೇ ಧಾರವಾಡದಲ್ಲೂ ಸುದ್ದಿ ಮಾಡುತ್ತಿದ್ದೆ. ಋತುಸ್ರಾವದ ಸಂದರ್ಭದಲ್ಲಿ ವೈಯಕ್ತಿಕ ಆರೋಗ್ಯದ ಜತೆಗೆ, ಪರಿಸರ ಕಾಳಜಿಯೂ ಮುಖ್ಯ ಎಂಬ ಅಂಶವನ್ನು ಇರಿಸಿಕೊಂಡು ನಡೆಯುತ್ತಿರುವ ಈ ಅಭಿಯಾನಕ್ಕೆ ಸ್ವಯಂ ಸೇವಾ ಸಂಸ್ಥೆಯ ಒಂದಷ್ಟು ಜನರು ಕೈಜೋಡಿಸಿದ್ದಾರೆ. ಧಾರವಾಡದ ಜಿಲ್ಲಾ ಪಂಚಾಯ್ತಿ ಸಿಇಒ ಸ್ನೇಹಲ್ ರಾಯಮಾನೆ ಕೈಜೋಡಿಸಿರುವುದು ಅಭಿಯಾನದ ವೇಗ ಇನ್ನಷ್ಟು ಹೆಚ್ಚುವಂತೆ ಮಾಡಿದೆ. ‘ಸ್ಯಾನಿಟರಿ ಪ್ಯಾಡ್ ಬದಲು ಶುದ್ಧ ಹತ್ತಿ ಬಟ್ಟೆಯನ್ನು ಬಳಸಿ’ ಎಂಬುದು ಅಭಿಯಾನದ ಧ್ಯೇಯವಾಕ್ಯ.

ಋತುಸ್ರಾವದ ಸಂದರ್ಭದಲ್ಲಿ ಅನಾದಿ ಕಾಲದಿಂದಲೂ ಹತ್ತಿಯ ಸೀರೆಯ ತುಂಡನ್ನು ಮಹಿಳೆಯರು ಬಳಸುತ್ತಿದ್ದಾರೆ. ಆಧುನಿಕತೆಗೆ ಹೊರಳುತ್ತಿದ್ದಂತೆ ಬಟ್ಟೆ ತೊಳೆದು ಒಣಗಿಸಲು ಸಮಯದ ಅಭಾವ, ಜಂಜಾಟವಿಲ್ಲದ ಬದುಕಿನ ಬಯಕೆ, ಬಳಸಿ ಬಿಸಾಡುವ ಸಂಸ್ಕೃತಿ – ಹೀಗೆ ಇವೆಲ್ಲದಕ್ಕೂ ಉತ್ತರವೆಂಬಂತೆ ಸಿಕ್ಕಿದ್ದು ಸ್ಯಾನಿಟರಿ ಪ್ಯಾಡ್‌. ಕೆಲವು ದಶಕಗಳ ಹಿಂದಷ್ಟೇ ರೂಪುಗೊಂಡ ಈ ವಸ್ತು ಇಂದು ಇಡೀ ವಿಶ್ವವನ್ನೇ ವ್ಯಾಪಿಸಿದೆ. ಪ್ಯಾಡ್‌ಗಳಲ್ಲೂ ನೂತನ ಆವಿಷ್ಕಾರಗಳಾದ ಟೆಂಪೊನ್‌ಗಳು ಮಾರುಕಟ್ಟೆ ಪ್ರವೇಶಿಸಿವೆ. ಆದರೆ ಅಗ್ಗದ ಬೆಲೆಯ ಸ್ಯಾನಿಟರಿ ಪ್ಯಾಡ್‌ಗಳಲ್ಲಿ ಶೇ 80ರಷ್ಟು ಹಾನಿಕಾರಕ ರಾಸಾಯನಿಕ ಇದೆ ಎಂಬುದು ಪರಿಸರವಾದಿಗಳ ಕೂಗು.

ಈ ಬಗ್ಗೆ ಅಭಿಪ್ರಾಯ ವ್ಯಕ್ತ ಪಡಿಸುವ ಧಾರವಾಡದ ವೈದ್ಯ ಸಂಜೀವ ಕುಲಕರ್ಣಿ ‘ಸರ್ಕಾರ ಮಹಿಳಾಪರ ಕಾಳಜಿ ಹೊಂದಿದೆ ಎನ್ನುವುದು ಎಷ್ಟು ಸತ್ಯವೋ, ಅಗ್ಗದ ಬೆಲೆಗೆ ಪ್ಯಾಡ್ ನೀಡುವ ಮೂಲಕ ಅದು ಇಡುತ್ತಿರುವ ಹೆಜ್ಜೆ ತಪ್ಪೆನ್ನುವುದು ಅಷ್ಟೇ ಸತ್ಯ. ಬೆಂಗಳೂರಿನಂಥ ಮಹಾನಗರದಲ್ಲಿ ಸಾವಿರ ಕಿಲೋ ಸ್ಯಾನಿಟರಿ ತ್ಯಾಜ್ಯ ಸೃಷ್ಟಿಯಾಗುತ್ತಿದೆ. ಹಾಗಿದ್ದರೆ ಕಸ ವಿಲೇವಾರಿಯೇ ಗೊತ್ತಿಲ್ಲದ ಗ್ರಾಮೀಣ ಭಾಗದಲ್ಲಿ ರಕ್ತ ತುಂಬಿದ ಪ್ಯಾಡ್‌ಗಳು ಕೆರೆ, ಹೊಲ ಅಥವಾ ಇನ್ಯಾವುದೋ ಮೂಲಗಳಿಂದ ಪ್ರಕೃತಿ ಸೇರುತ್ತಿವೆ. ಈ ಬಿಸಾಡಿದ ಸ್ಯಾನಿಟರಿ ಪ್ಯಾಡ್‌ಗಳ ದುಷ್ಪರಿಣಾಮದ ಹೊಣೆ ಹೊರುವವರು ಯಾರು. ಮಹಿಳೆಯರ ವೈಯಕ್ತಿಕ ಆರೋಗ್ಯ ಕಾಳಜಿ ಆಕೆಯೊಬ್ಬಳದ್ದೇ ಅಲ್ಲ, ಆಕೆಯೊಂದಿಗೆ ಜೀವನ ನಡೆಸುವ ಪುರುಷನದ್ದೂ ಹೌದು. ಹಾಗೆಯೇ ಇದು ಆಕೆಯೊಬ್ಬಳ ಅನುಕೂಲದ ಪ್ರಶ್ನೆಯಲ್ಲ, ನಮ್ಮನ್ನು ಸಲಹುತ್ತಿರುವ ಪ್ರಕೃತಿಯ ಉಳಿವಿನ ಪ್ರಶ್ನೆಯೂ ಹೌದು. ‘ಬಳಸು–ಬಿಸಾಡು’ ಎಂಬ ಕಾಲಘಟ್ಟದಲ್ಲಿರುವ ನಾವು ಶೇ 80ರಷ್ಟು ಪ್ಲಾಸ್ಟಿಕ್‌ ಅಂಶ ಇರುವ ಸ್ಯಾನಿಟರಿ ಪ್ಯಾಡ್‌ ಕುರಿತು ಚಿಂತಿಸುತ್ತಿಲ್ಲ’ ಎನ್ನುತ್ತಾರೆ.

‘ಹೊಲಗಳಲ್ಲಿ ಬೆಳೆಯುವ ಹತ್ತಿಯನ್ನು ಶುದ್ಧ ಬಿಳಿಯ ಬಣ್ಣಕ್ಕೆ ತರಲು ಬ್ಲೀಚ್ ಮಾಡುವುದು ಅನಿವಾರ್ಯ. ಈ ಪ್ಯಾಡ್‌ಗಳಲ್ಲಿರುವ ಪಾಲಿ–ಆಕ್ರಿಲಿಕ್ ಕ್ರಿಸ್ಟಲ್‌ ಜೆಲ್‌ ಒಂದು ಬಾರಿ ದ್ರವವನ್ನು ಹೀರಿದ ನಂತರವೂ, ಮತ್ತಷ್ಟನ್ನು ಹೀರುವ ಸಾಮರ್ಥ್ಯ ಇರುತ್ತದೆ. ಇದು ಒಳಚರಂಡಿ ವ್ಯವಸ್ಥೆಗೆ ತೊಂದರೆಯೊಡ್ಡಬಲ್ಲ ವಸ್ತುವಾಗುವ ಸಾಧ್ಯತೆಯೂ ಇದೆ. ಪ್ಯಾಡ್‌ಗಳು ಮಣ್ಣಿನಲ್ಲಿ ಮಣ್ಣಾಗಲು ನೂರಾರು ವರ್ಷಗಳೇ ಬೇಕು’. ಬಳಸಿದ ಪ್ಯಾಡ್‌ಗಳನ್ನು ಹೊರಗೆಸೆದರೂ ಅಥವಾ ಸುಟ್ಟರೂ ನಿಸರ್ಗಕ್ಕೆ ಹಾನಿ ತಪ್ಪಿದ್ದಲ್ಲ. ಈ ಕುರಿತು ಜನಜಾಗೃತಿ ಮೂಡಿಸಲು ಈಗ ಹಲವು ಸಂಸ್ಥೆಗಳು ಜೊತೆಗೂಡಿವೆ. ‘ಹ್ಯಾಪಿ ಟು ಬ್ಲೀಡ್‌’, ‘ಗ್ರೀನ್‌ ದಿ ರೆಡ್‌’, ‘ಬ್ಲೀಡ್ ಗ್ರೀನ್‌’ ಎಂಬಿತ್ಯಾದಿ ಹೆಸರಿನಲ್ಲಿ ಅಭಿಯಾನಗಳು ದೇಶದಾದ್ಯಂತ ಆರಂಭಗೊಂಡಿವೆ’ ಎನ್ನುವುದು ಡಾ. ಗಿರಿಜಾ ಪಾಟೀಲ ಅವರ ಅನಿಸಿಕೆ.

‘ಈ ಅಭಿಯಾನದ ಮೂಲಕ ‘ರ‍್ಯಾಶ್ ಫ್ರೀ’ (ತುರಿಕೆಯಂಥ ಸಮಸ್ಯೆಯಿಂದ ಮುಕ್ತಿ), ‘ತ್ರಾಶ್‌ ಫ್ರೀ’ (ಪರಿಸರಕ್ಕೆ ತ್ಯಾಜ್ಯದಿಂದ ಮುಕ್ತಿ) ಹಾಗೂ ’ಕ್ಯಾಶ್‌ ಫ್ರೀ’ (ಖರ್ಚು ಕಡಿಮೆ) ಮೂಲಕ ಮರು ಬಳಕೆಯ, ಶುದ್ಧ ಹತ್ತಿಯಿಂದ ತಯಾರಿಸಿದ ಬಟ್ಟೆ ನ್ಯಾಪ್‌ಕಿನ್ ಮತ್ತು ಋತುಸ್ರಾವ ಕಪ್‌ಗಳನ್ನು ಬಳಸಿ ಎಂದು ಮಹಿಳೆಯರಿಗೆ ಹೇಳಲಾಗುತ್ತಿದೆ. ಪ್ಯಾಡ್‌ ಬಳಕೆಯಿಂದ ಚರ್ಮದ ತುರಿಕೆ ಇತ್ಯಾದಿ ಸಮಸ್ಯೆಗಳನ್ನು ಬಹಳಷ್ಟು ಮಹಿಳೆಯರು ವೈದ್ಯರ ಬಳಿ ಇರಲಿ, ತಮ್ಮವರೊಂದಿಗೂ ಹೇಳಿಕೊಳ್ಳುವುದಿಲ್ಲ. ಹೀಗಾಗಿ ಪ್ಯಾಡ್‌ನ ಹಾನಿಯನ್ನು ಅಂದಾಜು ಅಂದಾಜು ಮಾಡುವುದೂ ಕಷ್ಟ’ ಎನ್ನುವುದು ಗಿರಿಜಾ ಅವರ ಆತಂಕ.

‘ಮರಳಿ ಬಟ್ಟೆಗೆ’ ಅಭಿಯಾನದ ನಡುವೆಯೂ ಸ್ಯಾನಿಟರಿ ಪ್ಯಾಡ್‌ ಬೇಕೆ ಬೇಡವೇ ಎನ್ನುವ ಪ್ರಶ್ನೆಗೆ ಉತ್ತರಿಸುವುದು ಸುಲಭವಲ್ಲ. ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯಬೇಕಿವೆ ಹಾಗೂ ಆ ಚರ್ಚೆ ಈಗಷ್ಟೇ ಆರಂಭವಾಗಿದೆ.

**

ಉಳಿಕೆಯ ಲೆಕ್ಕಾಚಾರ

ಸ್ಯಾನಿಟರಿ ಪ್ಯಾಡ್ ಬೇಕು–ಬೇಡ ಎಂಬ ವಾದಗಳ ನಡುವೆ, ಅದಕ್ಕಾಗಿ ನಾವು ವಿನಿಯೋಗಿಸುತ್ತಿರುವ ಹಣದ ಲೆಕ್ಕಾಚಾರವನ್ನೂ ತಜ್ಞರು ನೀಡುತ್ತಾರೆ. ಧಾರವಾಡದ ರ‍್ಯಾಪಿಡ್ ಸಂಸ್ಥೆಯಲ್ಲಿ ಜಿಲ್ಲಾ ಪಂಚಾಯ್ತಿ ಆಯೋಜಿಸಿದ್ದ ಬಟ್ಟೆಯ ಪ್ಯಾಡ್‌ಗಳ ತಯಾರಿಕೆ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಸಂಪನ್ಮೂಲ ವ್ಯಕ್ತಿ ಮುಂಬೈನ ರಾಜಸಿ ಕುಲಕರ್ಣಿ ಹೇಳುವಂತೆ, ‘ಋತುಮತಿಯಾದ ದಿನದಿಂದ ಋತುಬಂಧದವರೆಗೂ ಮಹಿಳೆ ಪ್ರತಿ ತಿಂಗಳು 10 ರಿಂದ 80 ಮಿ.ಲೀ. ರಕ್ತವನ್ನು ಕಳೆದುಕೊಳ್ಳುತ್ತಾಳೆ. ಇದಕ್ಕಾಗಿ ಸ್ಯಾನಿಟರಿ ಪ್ಯಾಡ್‌ಗೆ ₹ 90ರಿಂದ 100ರಷ್ಟು ಪ್ರತಿ ತಿಂಗಳು ಖರ್ಚಾಗಲಿದೆ.

ಹತ್ತಿ ಬಟ್ಟೆಯ ಸ್ಯಾನಿಟರಿ ಪ್ಯಾಡ್‌ಗಳು ಮಾರುಕಟ್ಟೆಯಲ್ಲಿ 4ರಿಂದ 6 ಪ್ಯಾಡ್‌ಗಳಿಗೆ ಸುಮಾರು ₹ 400 ಖರ್ಚಾಗಬಹುದು. ಹೊಲಿಗೆ ಗೊತ್ತಿರುವವರು ಇದನ್ನು ಮನೆಯಲ್ಲೂ ತಯಾರಿಸಿಕೊಳ್ಳಬಹುದು, ಇಲ್ಲವೇ ಟೈಲರ್ ಬಳಿಯೂ ಮಾಡಿಸಿಕೊಳ್ಳಬಹುದು. ಇವನ್ನು ಕನಿಷ್ಠ 2 ವರ್ಷಗಳ ಕಾಲ ಬಳಸಬಹುದು. ಹಾಗೆಯೇ ‘ಮೆನ್‌ಸ್ಟ್ರಯಲ್‌ ಕಪ್ಸ್‌’ ಎಂಬ ಮತ್ತೊಂದು ಸಾಧನ ₹ 800ರಿಂದ ₹ 1500ರವರೆಗೂ ಲಭ್ಯ. ಇದು ವಿವಾಹಿತೆಯರಿಗೆ ಮಾತ್ರ. ಒಂದು ಕಪ್‌ ಅನ್ನು ಕನಿಷ್ಠ 8ರಿಂದ 10ವರ್ಷಗಳ ಕಾಲ ಬಳಸಬಹುದು. ಜೀವಿತಾವಧಿಯಲ್ಲಿ ಸ್ಯಾನಿಟರಿ ಪ್ಯಾಡ್‌ ಬಳಸಿದರೆ ₹ 50 ಸಾವಿರ ಖರ್ಚು, ಹತ್ತಿ ಬಟ್ಟೆ ಪ್ಯಾಡ್‌ಗಳಿಂದ ₹ 14ಸಾವಿರ ಹಾಗೂ ‘ಮೆನ್‌ಸ್ಟ್ರಯಲ್‌ ಕಪ್ಸ್‌ ಬಳಕೆಯಿಂದ ₹ 4ರಿಂದ 5 ಸಾವಿರ ಖರ್ಚಾಗಲಿದೆ ಎನ್ನುವುದು ಅವರ ಲೆಕ್ಕಾಚಾರ.

**

ಪುರುಷರೂ ಅರ್ಥ ಮಾಡಿಕೊಳ್ಳಬೇಕು

ಮುಟ್ಟು ಎನ್ನುವುದು ಹೆಣ್ತನದ ಹೆಮ್ಮೆ. ಅದು ಅಪವಿತ್ರ ಅಲ್ಲ ಎನ್ನುವುದನ್ನು ಪ್ರತಿಯೊಬ್ಬರೂ ಮನಗಾಣಬೇಕಿದೆ. ಋತುಸ್ರಾವದ ತೊಂದರೆಯನ್ನು ಮಹಿಳೆ ತೆಗೆದುಕೊಳ್ಳುತ್ತಾಳೆ; ಆದರೆ ಅದನ್ನು ಅರ್ಥ ಮಾಡಿಕೊಳ್ಳುವ ಗುಣವನ್ನು ಪುರುಷರು ಬೆಳೆಸಿಕೊಳ್ಳಬೇಕಿದೆ. ಸುಸ್ಥಿರ ಮುಟ್ಟು ಕುರಿತು ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇಲ್ಲಿ ಯಾವುದೋ ಒಂದು ಉದ್ದಿಮೆಯನ್ನು ಪ್ರಾಯೋಜಿಸುವುದು ನಮ್ಮ ಉದ್ದೇಶವಲ್ಲ. ಮಹಿಳೆಯರೇ ತಮಗೆ ಬೇಕಾದ ಇಂಥ ಹತ್ತಿ ಬಟ್ಟೆಯ ಸ್ಯಾನಿಟರಿ ಪ್ಯಾಡ್‌ಗಳನ್ನು ಸಿದ್ಧಪಡಿಸಿಕೊಳ್ಳಲಿ ಎಂದು ತರಬೇತಿ ಕೊಡಿಸಲಾಗುತ್ತಿದೆ.

– ಸ್ನೇಹಲ್ ರಾಯಮಾನೆ, ಸಿಇಒ, ಜಿಲ್ಲಾ ಪಂಚಾಯ್ತಿ, ಧಾರವಾಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry