ಹುಬ್ಬಳ್ಳಿ ಹುಡುಗನ ‘ರಾಮಧಾನ್ಯ’‌

7

ಹುಬ್ಬಳ್ಳಿ ಹುಡುಗನ ‘ರಾಮಧಾನ್ಯ’‌

Published:
Updated:
ಹುಬ್ಬಳ್ಳಿ ಹುಡುಗನ ‘ರಾಮಧಾನ್ಯ’‌

ಮೊನ್ನೆಯಷ್ಟೇ ತೆರೆಕಂಡು ಮುನ್ನುಗ್ಗುತ್ತಿರುವ ಕನ್ನಡದ ಚಿತ್ರ ’ರಾಮಧಾನ್ಯ’. ಸಂತ ಕನಕದಾಸರ ‘ರಾಮಧಾನ್ಯ ಚರಿತ್ರೆ’ಯನ್ನು ನವಯುಗಕ್ಕೆ ಒಗ್ಗಿಸಿ, ಹೆಣೆದಿರುವ ಈ ಸಿನಿಮಾದ ಮುಖ್ಯ ವಸ್ತು ಭತ್ತ ಮತ್ತು ರಾಗಿ ನಡುವಿನ ಪೈಪೋಟಿ. ಮನುಷ್ಯನ ಹಸಿವನ್ನು ಹಿಂಗಿಸುವ ಈ ಎರಡೂ ಆಹಾರ ಧಾನ್ಯಗಳನ್ನು ರೂಪಕವಾಗಿಟ್ಟುಕೊಂಡು, ನಾಗರಿಕ ಸಮಾಜದಲ್ಲಿ ಬೇರುಬಿಟ್ಟಿರುವ ಮೇಲು ಮತ್ತು ಕೀಳು ಎಂಬ ತಾರತಮ್ಯದ ಬಗ್ಗೆ ಕನಕದಾಸರು ಹೇಳುತ್ತಾರೆ.

ಅಂದಹಾಗೆ ಚಿತ್ರದಲ್ಲಿ ಭತ್ತ ಮತ್ತು ರಾಗಿ ಎಂಬ ಎರಡು ಜೀವಂತ ಪಾತ್ರಗಳು ಬರುತ್ತವೆ. ಈ ಪೈಕಿ ಭತ್ತ ಪಾತ್ರಕ್ಕೆ, ಜೀವ ತುಂಬಿರುವವರು ಹುಬ್ಬಳ್ಳಿಯ ನೀನಾಸಂ ಯಶ್ ನದಾಫ್‌. ತೆರೆ ಮೇಲೆ ಪಾತ್ರದ ಅವಧಿ ಕೆಲವೇ ನಿಮಿಷಗಳಾದರೂ, ಇಡೀ ಚಿತ್ರದ ಸೆಲೆ ಅಡಗಿರುವುದು ಈ ಪಾತ್ರಗಳಲ್ಲೇ. ಹಾಗಾಗಿ, ಸಿನಿಮಾ ಮುಗಿಸಿ ಥಿಯೇಟರ್‌ನಿಂದ ಹೊರಬಂದರೂ, ಭತ್ತದ ಪಾತ್ರ ಪ್ರೇಕ್ಷಕನ ಮನಸಲ್ಲಿ ಅಚ್ಚಳಿಯದೆ ಉಳಿಯುತ್ತದೆ.

ನೀನಾಸಂ ಪ್ರತಿಭೆ 

ಚಿಕ್ಕಂದಿನಿಂದಲೂ ಸಿನಿಮಾ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದ ಯಶ್‌, ಶಾಲಾ–ಕಾಲೇಜು ದಿನಗಳಿಂದಲೇ ನೃತ್ಯ ಮತ್ತು ನಟನೆಯತ್ತ ಒಲವು ಬೆಳೆಸಿಕೊಂಡವರು. ಕಾಲೇಜು ವಿದ್ಯಾಭ್ಯಾಸ ಮುಗಿದ ಬಳಿಕ, ಸ್ನೇಹಿತರು ಉದ್ಯೋಗ ಮತ್ತು ಉನ್ನತ ಶಿಕ್ಷಣದತ್ತ ದೃಷ್ಟಿ ನೆಟ್ಟರು. ಯಶ್ ಮನೆಯವರು ಸಹ ಮಗನಿಗೆ ಉನ್ನತ ಶಿಕ್ಷಣ ಕೊಡಿಸಲು ಅಣಿಯಾಗಿದ್ದರು. ಆದರೆ, ಯಶ್‌ ಮಾತ್ರ ನಟನೆಯ ಬೆನ್ನ ಹತ್ತಿದರು. ಮನೆಯವರ ವಿರೋಧದ ನಡುವೆಯೂ ನಟನಾ ತರಬೇತಿಗಾಗಿ, ಬೆಂಗಳೂರು ಬಸ್‌ ಹತ್ತಿದರು.

ಆದರ್ಶ ಫಿಲಂ ಇನ್‌ಸ್ಟಿಟ್ಯೂಟ್‌ನಲ್ಲಿ ಅಭಿನಯದ ಆರಂಭಿಕ ಪಟ್ಟುಗಳನ್ನು ಕಲಿತ ಅವರು, ಅಲ್ಲಿದ್ದ ಗುರುವೊಬ್ಬರ ಸಲಹೆ ಮೇರೆಗೆ ನೀನಾಸಂಗೆ ಬಂದರು. ಅವರಲ್ಲಿದ್ದ ನಟನಿಗೆ ನಿಜವಾದ ಸಾಣೆ ಸಿಕ್ಕಿದ್ದು ಇಲ್ಲೇ. ನೀನಾಸಂ ಕೇವಲ ನಟನೆಯಷ್ಟೇ ಅಲ್ಲದೆ, ಬದುಕನ್ನು ಸಹ ಅವರಿಗೆ ಕಲಿಸಿ ಕೊಟ್ಟಿತು.

‘ನಟನೆ’ ಎಂಬ ತಪಸ್ಸು 

‘ನಟನೆಯ ಗಂಭೀರತೆ, ಅದನ್ನು ಸಿದ್ಧಿಸಿಕೊಳ್ಳುವ ಪರಿ, ಶಿಬಿರಾರ್ಥಿಗೆ ಇರಬೇಕಾದ ಬದ್ಧತೆ ಇವೆಲ್ಲವೂ ನೀನಾಸಂಗೆ ಬಂದಾಗ ಅರಿವಾಯಿತು.  ಅಲ್ಲಿನ ವಾತಾವರಣ ನಟನೆಯನ್ನು ಒಂದು ತಪಸ್ಸಾಗಿ ಸ್ವೀಕರಿಸುವಂತೆ ಮಾಡಿತು’ ಎಂದು ಆರಂಭದ ದಿನಗಳನ್ನು ಯಶ್ ಮೆಲುಕು ಹಾಕುತ್ತಾರೆ.

‘ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ನೀನಾಸಂ ಸತೀಶ್ ಕೂಡ ನನ್ನ ಕ್ಲಾಸ್‌ಮೇಟ್. ನೀನಾಸಂ ತರಬೇತಿ ಬಳಿಕ ನಡೆದ ತಿರುಗಾಟದಲ್ಲಿ ತಂಡ ಕಟ್ಟಿಕೊಂಡು, ಊರೂರು ಸುತ್ತಿ ನೂರಾರು ನಾಟಕಗಳನ್ನು ಪ್ರದರ್ಶಿಸಿದ್ದೇವೆ. ನೀನಾಸಂ ಬಳಿಕ, ಅವಕಾಶಕ್ಕಾಗಿ ಬೆಂಗಳೂರಿಗೆ ಬಂದೆ. ಅಲ್ಲಿಯೂ ಸಮಾನ ಮನಸ್ಕರ ತಂಡ ಕಟ್ಟಿಕೊಂಡು ರಂಗಭೂಮಿಯಲ್ಲಿ ಸಕ್ರಿಯನಾದೆ. ಆಗ ಕಿರುತೆಯ ಸಂಪರ್ಕಕ್ಕೆ ಬಂದು, ಧಾರವಾಹಿಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು. ಆಗಾಗ, ಸಿನಿಮಾಗಳಲ್ಲಿಯೂ ಸಣ್ಣ ಪಾತ್ರಗಳಿಗೆ ಬಣ್ಣ ಹಚ್ಚಿದೆ’ ಎನ್ನುತ್ತಾರೆ ಯಶ್.

ಅಂದಹಾಗೆ, ಯಶ್‌ ಇದುವರೆಗೆ ಆರೇಳು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ಅವರೇ ಹೇಳುವಂತೆ, ‘ಪ್ರೇಕ್ಷಕರ ಮನಸ್ಸಿನಲ್ಲಿ ರಿಜಿಸ್ಟರ್ ಆಗುವಂತೆ ಮಾಡಿದ್ದು ‘ರಾಮಧಾನ್ಯ’ದ ಭತ್ತದ ಪಾತ್ರ’.

ಮೂರು ತಲೆಮಾರಿನ ಕಥನ 

‘ರಾಮಧಾನ್ಯ’ ಸಿನಿಮಾದಲ್ಲಿ ಮೂರು ತಲೆಮಾರಿನ ಕಥಾಹಂದರವಿದೆ. ನಿರ್ದೇಶಕ ಟಿ.ಎನ್‌. ನಾಗೇಶ್ ಅವರು, ಕಾಲಮಾನಕ್ಕೆ ಅನುಗುಣವಾಗಿ  ಕನಕದಾಸರ ಮೇರು ಕೃತಿಯ ಮುಖ್ಯ ಎಳೆಯನ್ನಿಟ್ಟುಕೊಂಡು ಪೌರಾಣಿಕ, ಐತಿಹಾಸಿಕ ಹಾಗೂ ಆಧುನಿಕ ಕಾಲಕ್ಕೆ ಕಥೆಯನ್ನು ಒಗ್ಗಿಸಿ ಹೆಣೆದಿದ್ದಾರೆ. ಹಾಗಾಗಿ, ಇದೊಂದು ಸಮಗ್ರ ಸಿನಿಮಾ ಎನ್ನಬಹುದು’ ಎಂದು ತಮ್ಮ ಚಿತ್ರದ ಬಗ್ಗೆ ಯಶ್ ಅಭಿಪ್ರಾಯಪಡುತ್ತಾರೆ.

‘ಸಮಾಜಮುಖಿ ಆಲೋಚನೆಯಿಂದ ಒಡಮೂಡಿದ ‘ರಾಮಧಾನ್ಯ ಚರಿತೆ’ಯು ನವಧಾನ್ಯಗಳಲ್ಲಿ ಪ್ರಧಾನವಾದ ರಾಗಿ ಮತ್ತು ಭತ್ತಗಳಲ್ಲಿ ಯಾವುದು ಶೇಷ್ಠ ಎಂಬುವುದರ ಬಗ್ಗೆ ಹೇಳುತ್ತದೆ. ಕೃತಿಯಲ್ಲಿ ರಾಗಿ ಶೋಷಿತ ಸಮಾಜದ ಪರವಾಗಿ ನಿಂತು ಭತ್ತವನ್ನು ಸೋಲಿಸುವ ಮೂಲಕ, ತನ್ನ ಶ್ರೇಷ್ಠತೆ ಮೆರೆಯುತ್ತದೆ. ಇಲ್ಲಿ ಯಾರೂ ಮೇಲು–ಕೀಳು ಅಲ್ಲ. ಎಲ್ಲರೂ ಸರಿಸಮಾನರು ಎಂದು ಕೃತಿ ಧ್ವನಿಸುತ್ತದೆ. ಚಿತ್ರದಲ್ಲೂ ಇದೇ ಸಂದೇಶವನ್ನು ನಿರ್ದೇಶಕರು ಅಡಕಗೊಳಿಸಿದ್ದಾರೆ’ ಎಂದು ಅವರು ವಿವರಿಸುತ್ತಾರೆ.

ಎಲ್ಲದಕ್ಕೂ ಸೈ 

‘ಕಲಾವಿದನಾದವನು ಯಾವುದೇ ಒಂದು ಪಾತ್ರಕ್ಕೆ ಸೀಮಿತವಾಗಬಾರದು. ಜತೆಗೆ, ಇಂತಹದ್ದೇ ಬೇಕು ಎಂದು ಬಯಸಲೂ ಬಾರದು’ ಎನ್ನುವ ಯಶ್, ಎಂತಹ ಪಾತ್ರಕ್ಕೂ ನಾನು ಸೈ ಎನ್ನುತ್ತಾರೆ. ‘ಪೋಷಕ ಪಾತ್ರ, ಹಾಸ್ಯ, ಖಳನಟ ಸೇರಿದಂತೆ ಯಾವುದೇ ರೀತಿಯ ಪಾತ್ರವಾದರೂ ಸರಿ. ಪಾತ್ರ ನಿರ್ವಹಿಸಿದ ತೃಪ್ತಿ ಮೊದಲು ಕಲಾವಿದನಿಗೆ ಸಿಗಬೇಕು. ಬಳಿಕ, ಪ್ರೇಕ್ಷಕರಿಂದ ಮೆಚ್ಚುಗೆಯ ಚಪ್ಪಾಳೆ ನಿಧಾನವಾಗಿ ಸಿಗುತ್ತಾ ಹೋಗುತ್ತದೆ’ ಎಂಬುದು ಅವರ ಅಭಿಮತ.

ಸದ್ಯ ಬಿ. ಸುರೇಶ ಅವರು ಉದಯ ಟಿ.ವಿ.ಯಲ್ಲಿ ಆ್ಯಕ್ಷನ್‌ ಕಟ್ ಹೇಳಿರುವ ‘ಜೀವ ನದಿ’ಯಲ್ಲಿ ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿರುವ ಯಶ್, ದರ್ಶನ್ ನಾಯಕ ನಟನಾಗಿರುವ ಚಿತ್ರದ ಪಾತ್ರವೊಂದಕ್ಕೆ ಆಯ್ಕೆಯಾಗಿದ್ದಾರೆ. ಸದ್ಯ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಬ್ಯುಸಿಯಾಗಿರುವ ಅವರು, ಉತ್ತಮ ಪಾತ್ರಗಳ ನಿರೀಕ್ಷೆಯಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry