ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಯಸದ ಪಾಲಿನಲ್ಲೂ ಶಾಸ್ತ್ರದ ಲೆಕ್ಕಾಚಾರ

Last Updated 31 ಜುಲೈ 2018, 12:33 IST
ಅಕ್ಷರ ಗಾತ್ರ

ದಿವ್ಯವಾದ ಪಾಯಸವನ್ನು ದಶರಥ ತನ್ನ ಪತ್ನಿಯರಿಗೆ ಹೇಗೆ ಹಂಚಿದ ಎನ್ನುವುದರ ಬಗ್ಗೆ ಸ್ವಲ್ಪ ಗೊಂದಲವಿದೆ. ಮೊದಲಿಗೆ ಅವನು ಪಾಯಸವನ್ನು ಹೇಗೆ ಹಂಚಿದ – ಎನ್ನುವುದನ್ನು ನೋಡೋಣ.

‘ಪಾಯಸದಲ್ಲಿ ಅರ್ಧಭಾಗವನ್ನು ಮೊದಲಿಗೆ ಕೌಸಲ್ಯೆಗೆ ಕೊಟ್ಟ. ಉಳಿದುದರಲ್ಲಿ ಅರ್ಧಭಾಗವನ್ನು ಸುಮಿತ್ರೆಗೆ ಕೊಟ್ಟ. ಹೀಗೆ ಕೊಟ್ಟು ಉಳಿದುದರಲ್ಲಿ ಅರ್ಧಭಾಗವನ್ನು ಕೈಕೇಯಿಗೆ ಕೊಟ್ಟ. ಬಳಿಕ ಉಳಿದುದನ್ನು ಸುಮಿತ್ರೆಗೆ ಮತ್ತೆ ಕೊಟ್ಟ. ಹೀಗೆ ದಶರಥನು ತಮ್ಮ ಸ್ಥಾನಮಾನಕ್ಕೆ ತಕ್ಕಂತೆ ಪಾಯಸವನ್ನು ವಿಭಾಗಿಸಿಕೊಟ್ಟನೆಂದು ಅವರೆಲ್ಲರೂ ಸಂತೋಷಪಟ್ಟರು.’

ಈ ಭಾಗದ ಮೂಲಶ್ಲೋಕಗಳು ಹೀಗಿವೆ:

ಪಾಯಸಂ ಪ್ರತಿಗೃಹ್ಣೀಷ್ವ ಪುತ್ರೀಯಮಿದಮಾತ್ಮನಃ |
ಕೌಸಲ್ಯಾಯೈ ನರಪತಿಃ ಪಾಯಸಾರ್ಧಂ ದದೌ ತದಾ ||
ಅರ್ಧಾದರ್ಧಂ ದದೌ ಚಾಪಿ ಸುಮಿತ್ರಾಯೈ ನರಾಧಿಪಃ |
ಕೈಕೇಯ್ಯೈ ಚಾವಶಿಷ್ಟಾರ್ಥಂ ದದೌ ಪುತ್ರಕಾರಣಾತ್‌ ||
ಪ್ರದದೌ ಚಾವಶಿಷ್ಟಾರ್ಧಂ ಪಾಯಸಸ್ಯಾಮೃತೋಪಮ್‌ |
ಅನುಚಿಂತ್ಯ ಸುಮಿತ್ರಾಯೈ ಪುನರೇವ ಮಹೀಪತಿಃ ||
ಏವಂ ತಾಸಾಂ ದದೌ ರಾಜಾ ಭಾರ್ಯಾಣಾಂ ಪಾಯಸಂ ಪೃಥಕ್‌ |
ತಾಸ್ತ್ವೇತತ್‌ ಪಾಯಸಂ ಪ್ರಾಪ್ಯ ನರೇಂದ್ರಸ್ಯೋತ್ತಮಾಃ ಸ್ತ್ರಿಯಃ|
ಸಂಮಾನಂ ಮೇನಿರೇ ಸರ್ವಾಃ ಪ್ರಹರ್ಷೋದಿತಚೇತಃ ||

ಈ ವಿಭಾಗದ ಬಗ್ಗೆ ವಿದ್ವಾಂಸರಲ್ಲಿ ಚರ್ಚೆ ನಡೆದಿದೆ. ಮೊದಲಿಗೆ ಎನ್‌. ರಂಗನಾಥಶರ್ಮಾ ಅವರ ವಿವರಣೆಯನ್ನು ಇಲ್ಲಿ ಸಂಗ್ರ‌ಹವಾಗಿ ಉಲ್ಲೇಖಿಸಬಹುದು:

‘ಈ ಕ್ರಮದಲ್ಲಿ ಪಾಯಸದ ವಿತರಣವನ್ನು ಒಪ್ಪಿದರೆ ಕೆಲವು ವಿರೋಧಗಳು ಉದ್ಭವಿಸುತ್ತವೆ. ಅಧ್ಯಾತ್ಮರಾಮಾಯಣ, ಕಾಳಿದಾಸನ ರಘುವಂಶ, ಭೋಜನ ಚಂಪೂರಾಮಾಯಣ, ಕ್ಷೇಮೇಂದ್ರನ ರಾಮಾಯಣಮಂಜರಿ ಮುಂತಾದ ಕೆಲವು ಗ್ರಂಥಗಳಲ್ಲಿ ಕೌಸಲ್ಯೆ ಮತ್ತು ಕೈಕೇಯಿ ಇವರಿಬ್ಬರಲ್ಲಿ ಪ್ರತಿಯೊಬ್ಬರಿಗೂ ನಾಲ್ಕಾಣೆ ಭಾಗದಷ್ಟು ಸಂದಿತೆಂದೂ ಸುಮಿತ್ರೆಗೆ ಎಂಟಾಣೆ ಭಾಗದಷ್ಟು ಸಂದಿತೆಂದೂ ವರ್ಣಿಸಿದೆ. ರಾಮ ಲಕ್ಷ್ಮಣ ಭರತ ಶತ್ರುಘ್ನ – ಈ ನಾಲ್ವರೂ ಪಾಯಸದ ಚತುರ್ಥಾಂಶಸಮನ್ವಿತರೆಂದು ಹೇಳಿದೆ. ಆದ್ದರಿಂದಲೇ ವಾಲ್ಮೀಕಿರಾಮಾಯಣದಲ್ಲಿ ಭರತನನ್ನು ‘ಸಾಕ್ಷಾದ್ ವಿಷ್ಣೋಶ್ವತುರ್ಭಾಗಃ ಸರ್ವೈಃ ಸಮುದಿತೋ ಗುಣೈಃ’ (ಬಾಲ ಸರ್ಗ 18. ಶ್ಲೋ. 13) ಎಂದು ಹೇಳಿದೆ.

ಲಕ್ಷ್ಮಣ ಶತ್ರುಘ್ನರನ್ನು ‘ವಿಷ್ಣೋರರ್ಧಸಮನ್ವಿತೌ’ (ಬಾಲ. 18.14) ಎಂದು ಹೇಳಿದೆ. ಆದಕಾರಣ ವಾಲ್ಮೀಕಿರಾಮಾಯಣದ ಪಾಯಸ ವಿಭಾಗದಲ್ಲಿರುವ ಶ್ಲೋಕಗಳಿಗೆ ಕೆಳಗೆ ಕಂಡಂತೆ ಅರ್ಥವನ್ನು ಹೇಳಬಹುದು –‘ದಶರಥನು ಕೌಸಲ್ಯೆಗೆ ಪಾಯಸದ ಅರ್ಧಭಾಗವನ್ನು ಕೊಟ್ಟನು. ಅನಂತರ ಅವಳಿಗೆ ಕೊಟ್ಟಿದ್ದ ಅರ್ಧಭಾಗದಲ್ಲಿ ಅರ್ಧವನ್ನು ಸುಮಿತ್ರೆಗೆ ಕೊಡಿಸಿದನು. ಇದರಿಂದ ಕೌಸಲ್ಯೆಗೆ ಎಂಟಾಣೆ ಭಾಗ ಉಳಿಯಿತು. ಸುಮಿತ್ರೆಗೆ ನಾಲ್ಕಾಣೆ ಭಾಗ ಸಂದಿತು. ಅನಂತರ ಕೈಕೇಯಿಗೆ ಎರಡಾಣೆಯ ಭಾಗ ಸಂದಿತು. ದಶರಥನಲ್ಲಿ ಪಾಯಸದ ಕಾಲು ಭಾಗ ಉಳಿಯಿತು. ಕೌಸಲ್ಯೆಗೆ ಕೊಟ್ಟು ಉಳಿದುದರ ಅರ್ಧಭಾಗವನ್ನು ದಶರಥನು ಸುಮಿತ್ರೆಗೆ ಕೊಟ್ಟನು.

‘ಪುನಃ ಸುಮಿತ್ರೆಗೆ ಎರಡಾಣೆ ಭಾಗ ಪಾಯಸವು ಸಂದಿತು. ಈ ವಿಭಾಗಕ್ರಮದಲ್ಲಿ ಇನ್ನೂ ಒಂದು ಔಚಿತ್ಯ ಉಂಟು. ಕೌಸಲ್ಯೆಗೆ ಕೊಟ್ಟ ಅರ್ಧದಲ್ಲಿ ಒಂದು ಭಾಗ ಸುಮಿತ್ರೆಗೆ ಸಂದು ಅದರಿಂದ ಲಕ್ಷ್ಮಣನು ಜನಿಸಿದನು. ಆದ್ದರಿಂದ ರಾಮಲಕ್ಷ್ಮಣರಿಗೆ ಸ್ನೇಹವು ವಿಶೇಷವಾಗಿ ಬೆಳೆಯಿತು. ಉಳಿದ ಅರ್ಧದಲ್ಲಿ ಒಂದು ಭಾಗದಿಂದ ಭರತನೂ ಇನ್ನೊಂದು ಭಾಗದಿಂದ ಶತ್ರುಘ್ನನೂ ಜನಿಸಿದರು. ಆದ್ದರಿಂದ ಅವರಿಬ್ಬರಲ್ಲಿ ಸ್ನೇಹವು ವಿಶೇಷವಾಗಿ ಬೆಳೆಯಿತು.‘

ಈ ಪಕ್ಷದಲ್ಲಿ ರಾಮನನ್ನು ‘ವಿಷ್ಣೋರ್ಧಂ ಮಹಾಭಾಗಂ’ (ಬಾಲ. 18.11) ಎಂದು ಹೇಳಿರುವುದು ವಿರುದ್ಧವಾಗುತ್ತದೆಯೆಂದು ಶಂಕೆ ಬರುತ್ತದೆ. ಅದಕ್ಕೆ ಸಮಾಧಾನವೆಂದರೆ, ವಿಷ್ಣುವಿನ ಅಂಶವುಳ್ಳವನೆಂದು ಅರ್ಥಮಾಡಬೇಕು. ಅರ್ಧವೆಂದರೆ ಸಮಭಾಗವೆಂದು ಅರ್ಥವಲ್ಲ. ಶಂಖಚಕ್ರಾದಿಗಳಿಲ್ಲದ್ದರಿಂದ ಸಾಕ್ಷಾತ್‌ ವಿಷ್ಣುವಿಗಿಂತ ಕೆಲವು ಅಂಶಗಳಲ್ಲಿ ನ್ಯೂನತೆ ಯುಳ್ಳವನೆಂದು ಅರ್ಥ.

‘ಸಾಂಪ್ರದಾಯಿಕವಾದ ಅರ್ಥದಲ್ಲಿ ಲಕ್ಷ್ಮಣಶತ್ರುಘ್ನರು ಪಾಯಸದ ಆರಾಣೆಯ ಅಂಶದಿಂದ ಜನಿಸಿದವರು. ಅವರನ್ನು ‘ವಿಷ್ಣೋರರ್ಧಸಮನ್ವಿತೌ’ ಎಂದು ಹೇಳಿದ್ದು ಹೇಗೆ? ಆಗಲೂ ಅರ್ಧವೆಂದರೆ ಒಂದು ಅಂಶವೆಂದೂ ಸಮಭಾಗವಲ್ಲವೆಂದೂ ಒಪ್ಪಬೇಕಾಗುತ್ತದೆ. ಭರತನು ಪಾಯಸದ ಅಷ್ಟಮಾಂಶದಿಂದ ಜನಿಸಿದವನು. ಅವನನ್ನು ‘ಸಾಕ್ಷಾದ್ವಿಷ್ಣೋಶ್ಚತುರ್ಭಾಗಂ’ ಎಂದು ಹೇಳುವುದು ಹೇಗೆ? ಆಗಲೂ ಭಾಗವೆಂದರೆ ಅಂಶವೆಂದು ಅರ್ಥಮಾಡಬೇಕು. ಅಥವಾ ಸಾಕ್ಷಾದ್ವಿಷ್ಣುವೆಂದರೆ ರಾಮ. ರಾಮನ ನಾಲ್ಕನೆಯ ಒಂದು ಭಾಗ ಎಂದರೆ ಪಾಯಸದ ಅಷ್ಟಮಾಂಶ ಎಂದು ಹೇಳಬೇಕಾಗುತ್ತದೆ. ಅಧ್ಯಾತ್ಮರಾಮಾಯಣ ಮುಂತಾದ ಗ್ರಂಥಗಳಲ್ಲಿರುವ ಪಾಯಸವಿಭಾಗವು ಕಲ್ಪಾಂತರವನ್ನು ಅನುಸರಿಸಿದೆ ಎಂದು ಸಮಾಧಾನಮಾಡಬೇಕಾಗುತ್ತದೆ.

‘ಭೋಜ, ಕ್ಷೇಮೇಂದ್ರ ಮುಂತಾದವರು ವಾಲ್ಮೀಕಿಮುನಿಗಳನ್ನು ಸ್ತುತಿಸಿದ್ದಾರೆ. ವಾಲ್ಮೀಕಿರಾಮಾಯಣಕ್ಕೆ ವಿರುದ್ಧವಾಗಿ ಅವರು ಪಾಯಸವಿಭಾಗವನ್ನು ಹೇಳಲು ವಿಶೇಷ ಕಾರಣವೇನೂ ಇಲ್ಲ. ಆದ್ದರಿಂದ ಅವರು ಹೇಳುವಂತೆ ಪಾಯಸವಿಭಾಗಕ್ಕೆ ಮೇಲ್ಕಂಡ ರೀತಿಯಲ್ಲಿ ಅರ್ಥವನ್ನು ಹೇಳುವ ಸಂಪ್ರದಾಯವಿತ್ತೆಂದೂ ಅದು ಅವರಿಗೆ ಸಮ್ಮತವೆಂದೂ ಹೇಳಬಹುದು.’

ಇಲ್ಲಿ ಇಷ್ಟು ದೀರ್ಘವಾಗಿ ಈ ಭಾಗವನ್ನು ಉಲ್ಲೇಖಿಸಿರುವುದಕ್ಕೆ ಕಾರಣಗಳು ಇಲ್ಲದಿಲ್ಲ. ರಾಮಾಯಣದುದ್ದಕ್ಕೂ ಹಲವು ಪ್ರಸಂಗಗಳು ಅರ್ಥಮಾಡಲು ತೊಡಕನ್ನು ಒಡ್ಡುತ್ತವೆ. ಅಂಥ ಸಂದರ್ಭಗಳಲ್ಲಿ ನಾವು ಯಾವ ದಾರಿಯನ್ನು ಹಿಡಿಯಬೇಕು ಎನ್ನುವುದನ್ನು ಈ ವಿವರಣೆ ಸೂಚಿಸುತ್ತದೆ. ಈ ಪಾಯಸವಿಭಾಗ ಪ್ರಸಂಗದ ವಿವರಣೆಯನ್ನು ಕೊನೆಮಾಡುತ್ತ ರಂಗನಾಥಶರ್ಮರು ಹೇಳಿರುವ ಮಾತುಗಳು ನಮಗೆ ಮಾರ್ಗದರ್ಶಕವಾಗುವಂತಿವೆ:

‘ಪ್ರಾಚೀನ ಗ್ರಂಥಗಳಲ್ಲಿ ಅಕ್ಷರ ಅಕ್ಷರವನ್ನೂ ಹಿಸುಕಿ ವಾಚ್ಯಾರ್ಥಕ್ಕೆ ಪ್ರಾಧಾನ್ಯವನ್ನು ಕೊಟ್ಟು ವಿವರಿಸಲು ಹೊರಟರೆ ಇಂಥ ವಿರೋಧಗಳು ಉದ್ಭವಿಸುತ್ತವೆ. ವಾಚ್ಯಾರ್ಥವನ್ನು ಗೌಣವಾಗಿಸಿ ಮಹಾತಾತ್ಪರ್ಯಕ್ಕೆ ಬೆಲೆಕೊಟ್ಟಾಗ ವಿರೋಧಗಳೆಲ್ಲವೂ ಮಾಯವಾಗುತ್ತವೆ.’

ಇಲ್ಲಿ ‘ಮಹಾತಾತ್ಪರ್ಯ’ ಎಂಬ ಮಾತು ಮನನೀಯ! ಈ ಪಾಯಸವಿಭಾಗ ಪ್ರಕರಣವನ್ನು ಕುರಿತಂತೆ ರಂಗಪ್ರಿಯಶ್ರೀಯವರು ಎರಡು ಲೇಖನಗಳನ್ನು ಬರೆದಿದ್ದಾರೆ; ಒಂದು: ‘ಪಾಯಸದ ಪ್ರಭಾವ’; ಮತ್ತೊಂದು: ‘ಪಾಯಸವಿಭಾಗ’.

ಪಾಯಸಕ್ಕೂ ಸಂತಾನಕ್ಕೂ ಇರುವ, ಇರಬಹುದಾದ ನಂಟನ್ನು ಕುರಿತು ‘ಪಾಯಸದ ಪ್ರಭಾವ’ದಲ್ಲಿ ಚರ್ಚಿಸಿದ್ದಾರೆ. ಈ ಚರ್ಚೆಯಲ್ಲಿ ನಂಬಿಕೆಯ ಅಂಶವೇ ಹೆಚ್ಚಾಗಿರುವುದು ಸ್ಪಷ್ಟ. ಪಾಯಸವು ದಶರಥನ ಪತ್ನಿಯರ ದೇಹವನ್ನು ಪ್ರವೇಶಿಸಿ, ಮಹೌಷಧಿಯಂತೆ ಕೆಲಸ ಮಾಡಿತು ಎಂದಿದ್ದಾರೆ. ಗರ್ಭಧಾರಣೆಗೆ ಇದ್ದ ತೊಂದರೆಗಳನ್ನು ಅದು ನಿವಾರಿಸಿತು ಎಂಬುದು ಅವರ ಮಾತಿನ ಇಂಗಿತ. ಗರ್ಭಶುದ್ಧಿಗಾಗಿಯೂ ದಿವ್ಶಶಕ್ತಿಸಂಪನ್ನತೆ

ಗಾಗಿಯೂ ಮಂತ್ರಪೂತವಾದ ಪಾಯಸವನ್ನು ಸ್ವೀಕರಿಸಬೇಕು ಎಂದು ವೈಖಾನಸಾದಿ ಆಗಮಶಾಸ್ತ್ರಗಳು ಹೇಳುತ್ತವೆ ಎಂದೂ ಹೇಳುತ್ತಾರೆ. ದಿವ್ಯವಾದ ಪಾಯಸವು ಸಂತಾನಕ್ಕಾಗಿ ಒದಗುವುದು ದೈವಿಕವಾದ ವಿವರವೇ ಹೌದು ಎಂಬ ಅಭಿಪ್ರಾಯಕ್ಕೂ ಅವರು ಬಂದಿದ್ದಾರೆ. ಈ ನಿಲುವಿಗೆ ಅವರು ವೇದಮಂತ್ರಗಳನ್ನೂ ಪುರಾಣ ವಾಕ್ಯಗಳನ್ನೂ ಆಧಾರವಾಗಿ ಬಳಸಿಕೊಂಡಿದ್ಧಾರೆ.

ಇಲ್ಲಿ ಕೆಲವು ಪ್ರಶ್ನೆಗಳು ಎದುರಾಗುತ್ತವೆ. ರಾಮಾಯಣ–ಮಹಾಭಾರತದಂಥ ವಾಙ್ಮಯದ ಪ್ರತಿ ವಾಕ್ಯವನ್ನೂ ಐತಿಹಾಸಿಕ ಸತ್ಯ ಎಂದು ಭಾವಿಸಿ, ಆ ಎಲ್ಲ ವಿವರಗಳಿಗೂ ‘ವೈಜ್ಞಾನಿಕ’ ಕಾರಣಗಳನ್ನು ನೀಡಲೇಬೇಕೆ? ಈ ಕಾವ್ಯಗಳನ್ನು ಕಾವ್ಯಸತ್ಯದ ಬೆಳಕಿನಲ್ಲಿಯೇ ನೋಡಲು ಸಾಧ್ಯವಿಲ್ಲವೆ? ಪ್ರಾಚೀನ ವಾಙ್ಮಯದ ರೂಪಕಸಾಮ್ರಾಜ್ಯದ ಧ್ವನಿಯನ್ನು ಹಿಡಿಯಲು ವಿಫಲರಾದರೆ ಆಗ ನಾವು ಕಾವ್ಯದ ರಸಯಾನದಿಂದ ವಂಚಿತರಾಗುತ್ತೇವೆಯಷ್ಟೆ! ರಂಗನಾಥಶರ್ಮಾ ಅವರ ಮೇಲಣ ಮಾತುಗಳನ್ನೇ ಇಲ್ಲಿ ಮತ್ತೊಮ್ಮೆ ಮೆಲುಕು ಹಾಕಬಹುದು.

ಪಾಯಸವಿಭಾಗವನ್ನು ಕುರಿತಂತೆ ರಂಗನಾಥಶರ್ಮಾ ಅವರ ಲೆಕ್ಕಾಚಾರವನ್ನೇ ಹೆಚ್ಚು ಕಡಿಮೆ ರಂಗಪ್ರಿಯರು ಕೂಡ ಅನುಸರಿಸಿದ್ದಾರೆ ಎನ್ನಬಹುದು. ಇನ್ನೂ ಕೆಲವೊಂದು ಆಯಾಮಗಳಿಂದಲೂ ಅವರು ಈ ಸಮಸ್ಯೆಯನ್ನು ಚರ್ಚಿಸಿದ್ದಾರೆ. ‘ದದೌ’ ಎಂಬ ಶಬ್ದವನ್ನು ವ್ಯಾಕರಣಶಾಸ್ತ್ರದ ನೆಲೆಯಿಂದ ಅರ್ಥಮಾಡಿದ್ದಾರೆ. ವಾಲ್ಮೀಕಿರಾಮಾಯಣದಲ್ಲಿಯ ತೊಡಕುಗಳಿಗೆ ಮೊದಲಿಗೆ ಆ ಗ್ರಂಥದಲ್ಲಿಯೇ ಪರಿಹಾರಗಳನ್ನು ಹುಡುಕಬೇಕು ಎನ್ನುವುದನ್ನು ಅವರು ಕೂಡ ಪ್ರತಿಪಾದಿಸಿದ್ದಾರೆ. (ಆಸಕ್ತರು ‘ವಿಚಾರಸುಮನೋಮಾಲಾ’ ಕೃತಿಯನ್ನು ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT