‘ಈ ವರ್ಷ 30 ಹೊಸ ಸಕ್ಕರೆ ಕಾರ್ಖಾನೆ ಆರಂಭ’

7
ರಾಜ್ಯ ಸರ್ಕಾರದ ಕಬ್ಬು ಮತ್ತು ಸಕ್ಕರೆ ಆಯುಕ್ತ ಡಾ.ಅಜಯ್‌ ನಾಗಭೂಷಣ ಹೇಳಿಕೆ

‘ಈ ವರ್ಷ 30 ಹೊಸ ಸಕ್ಕರೆ ಕಾರ್ಖಾನೆ ಆರಂಭ’

Published:
Updated:

ಮೈಸೂರು: ‘ರಾಜ್ಯದಲ್ಲಿ 60 ಸಹಕಾರ ಸಕ್ಕರೆ ಕಾರ್ಖಾನೆಗಳು ಇದ್ದು, ಈ ವರ್ಷ ಇನ್ನೂ 30 ಕಾರ್ಖಾನೆಗಳು ಆರಂಭಗೊಳ್ಳಲಿವೆ’ ಎಂದು ಕಬ್ಬು ಮತ್ತು ಸಕ್ಕರೆ ಆಯುಕ್ತ ಡಾ.ಅಜಯ್‌ ನಾಗಭೂಷಣ ಇಲ್ಲಿ ಶುಕ್ರವಾರ ಹೇಳಿದರು.

ಮಂಡ್ಯದ ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಕಬ್ಬುತಳಿ ಸಂಶೋಧನಾ ಸಂಸ್ಥೆ ಮತ್ತು ಕೊಪ್ಪದ ಎನ್ಎಸ್‌ಎಲ್ ಷುಗರ್ಸ್‌ ಸಹಯೋಗದಲ್ಲಿ ಏರ್ಪಡಿಸಿದ್ದ ದಕ್ಷಿಣ ಕರ್ನಾಟಕದ ಕಬ್ಬು ತಳಿ ಸಂಶೋಧನೆ ಮತ್ತು ಅಭಿವೃದ್ಧಿ ನಿರತರ 21ನೇ ಸಮ್ಮೇಳನದಲ್ಲಿ ಮಾತನಾಡಿದರು.

‘ಇಂದಿನ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಸಹಕಾರ ಸಕ್ಕರೆ ಕಾರ್ಖಾನೆಗಳು ಉಳಿಯುವಂತಾಗಲು ಮತ್ತು ಅವುಗಳ ರಕ್ಷಣೆ ಹಾಗೂ ಪ್ರಗತಿಗೆ ಕ್ರಮಕೈಗೊಳ್ಳಲಾಗುವುದು. ಖಾಸಗಿ ಕಾರ್ಖಾನೆಗಳೂ ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಸಲು ಮುಂದಾಗಬೇಕು. ಇದಕ್ಕೆ ಸರ್ಕಾರ ಸಹಕರಿಸಲಿದೆ’ ಎಂದು ಹೇಳಿದರು.

‘ಈ ವರ್ಷ ಎರಡು ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಹೊಸ ತಳಿಯ ಕಬ್ಬು ಬೆಳೆಯಲು ರೈತರಿಗೆ ಸಹಾಯ ಹಾಗೂ ಮಾಹಿತಿ ನೀಡಲಾಗುವುದು. ಇಳುವರಿ ಪ್ರಮಾಣ ಹೆಚ್ಚಿಸಲು ಮುಂದಿನ ವರ್ಷ 20 ಸಾವಿರ ಹೆಕ್ಟೇರ್‌, ನಂತರ 1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹೊಸ ತಳಿಯ ಕಬ್ಬು ಬೆಳೆಯಲು ಪ್ರೋತ್ಸಾಹಿಸಲಾಗುವುದು. ಸಂಶೋಧಕರು ಗುರುತಿಸಿರುವ ಹೆಚ್ಚು ಇಳುವರಿ ನೀಡುವ ತಳಿಗಳನ್ನು ರೈತರಿಗೆ ಪರಿಚಯಿಸಲಾಗುವುದು’ ಎಂದು ವಿವರಿಸಿದರು.

‘ಕಡಿಮೆ ಅವಧಿಯಲ್ಲಿ ಹೆಚ್ಚು ಇಳುವರಿ ನೀಡುವ ಹಲವು ತಳಿಗಳನ್ನು ಸಂಶೋಧನೆ ಮಾಡಲಾಗಿದೆ. ಕಬ್ಬು ಬೆಳೆಗಾರರು ಹೊಸ ತಳಿಯನ್ನು ನಾಟಿ ಮಾಡಿ ಉತ್ಪಾದನೆ ಹೆಚ್ಚಿಸಿಕೊಳ್ಳಬಹುದು’ ಎಂದು ಕೊಯಮತ್ತೂರಿನ ಐಸಿಎಆರ್ ಕಬ್ಬು ತಳಿ ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಭಕ್ಷಿರಾಮ್‌ ಸಲಹೆ ನೀಡಿದರು.

‘ತಮಿಳುನಾಡಿನಲ್ಲಿ ಪ್ರತಿಹೆಕ್ಟೇರ್‌ಗೆ ಸರಾಸರಿ 36 ಟನ್ ಕಬ್ಬು ಬೆಳೆಯಲಾಗುತ್ತಿತ್ತು. ಆದರೆ, ಹೊಸ ತಳಿಯನ್ನು ಪ್ರಯೋಗಾರ್ಥವಾಗಿ ಬೆಳೆದಾಗ 77 ಟನ್‌ ಉತ್ಪಾದನೆಯಾಗಿದೆ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry