ಸಾಲ ಮನ್ನಾ: ಕುಮಾರಸ್ವಾಮಿ ‘ಹುಲಿ ಸವಾರಿ’

7

ಸಾಲ ಮನ್ನಾ: ಕುಮಾರಸ್ವಾಮಿ ‘ಹುಲಿ ಸವಾರಿ’

Published:
Updated:
ಸಾಲ ಮನ್ನಾ: ಕುಮಾರಸ್ವಾಮಿ ‘ಹುಲಿ ಸವಾರಿ’

ಬೆಂಗಳೂರು: ರೈತರು ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್‌ಗಳಲ್ಲಿ ಮಾಡಿರುವ ಎಲ್ಲ ಕೃಷಿ ಸಾಲವನ್ನು ಮನ್ನಾ ಮಾಡುವುದಾಗಿ ಪ್ರಣಾಳಿಕೆಯಲ್ಲಿ ‘ಭರವಸೆ’ ನೀಡಿದ್ದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಈಗ ಅದನ್ನು ಈಡೇರಿಸುವ ‘ಹುಲಿ ಸವಾರಿ’ಗೆ ಮುಂದಾಗಿದ್ದಾರೆ.

ವಾಗ್ದಾನ ಮಾಡಿದಂತೆ ಮುಖ್ಯಮಂತ್ರಿಯಾಗಿ 24 ಗಂಟೆಯೊಳಗೆ ಸಾಲ ಮನ್ನಾ ಮಾಡಲು ಅವರಿಗೆ ಸಾಧ್ಯವಾಗದೇ ಇರಬಹುದು. ಹುಲಿಯನ್ನಂತೂ ಅವರು ಏರಿದ್ದಾಗಿದೆ. ಈಗ ಅದರಿಂದ ಹಿಂದೆ ಸರಿದರೆ ಕಾಯ್ದುಕೊಂಡು ಕುಳಿತಿರುವ ಬಿಜೆಪಿ ನಾಯಕ ಬಿ.ಎಸ್‌. ಯಡಿಯೂರಪ್ಪ, ಕತ್ತಿ ಗುರಾಣಿ ಹಿಡಿದುಕೊಂದು ಬೀದಿ ಕಾಳಗಕ್ಕೆ ಇಳಿಯಲಿದ್ದಾರೆ. ಹುಲಿಯನ್ನು ಪಳಗಿಸಿ, ತನ್ನ ನಡೆಗೆ ಪೂರಕವಾಗಿ ಸವಾರಿ ಮಾಡೋಣವೆಂದರೆ ಹುಲಿಯ ಕಿವಿಗಳು ಮೈತ್ರಿ ಸರ್ಕಾರದ ಸಮನ್ವಯ ಸಮಿತಿಯ ಅಧ್ಯಕ್ಷರಾಗಿರುವ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕೈಯಲ್ಲಿದೆ. ಹೀಗಾಗಿ, ಕುಮಾರ ಸವಾರಿ ಪ‍್ರಪಾತಕ್ಕೆ ಬಿದ್ದು ಬಿಜೆಪಿಗೆ ಕೈಗೆ ಸಿಕ್ಕದ ಜಾಣ ನಡಿಗೆಯ ಜತೆಗೆ, ಕಾಂಗ್ರೆಸ್‌ ಸಹಭಾಗಿಗಳ ಜತೆಗೆ ಏಗಿ ದಿಣ್ಣೆಯನ್ನು ಏರಬೇಕಾದ ಇಕ್ಕಟ್ಟಿನ ಹಾದಿಯೇ ಆಗಿದೆ.

‘ಸಾಲವನು ಕೊಂಬಾಗ ಹಾಲೋಗರುಂಡಂತೆ ಸಾಲಿಗರು ಕೊಂಡು ಎಳೆವಾಗಕಿಬ್ಬದಿಯ ಕೀಲು ಮುರಿದಂತೆ ಸರ್ವಜ್ಞ . . . ’ಎಂಬ ವಚನವೊಂದಿದೆ. ಇದನ್ನು ವಿಸ್ತರಿಸುವುದಾದರೆ ಸಾಲ ಮನ್ನಾ ಮಾಡುವುದಾಗಿ ಹೇಳಿ ರೈತರ ‘ಋಣ’ಕ್ಕೆ ಈಗ ಕುಮಾರ ಜವಾಬ್ದಾರಿಯಾಗಿದ್ದಾರೆ. ಆದರೆ, ಆ ಋಣ ತೀರಿಸಲು ಕಾಂಗ್ರೆಸ್‌ನ ಜತೆಗಾರರು ಅಪೇಕ್ಷಿತ ಮಟ್ಟದಲ್ಲಿ ಹೆಗಲು ಕೊಡಲಾರರು. ತೀರಿಸದಿದ್ದರೆ ಬಿಜೆಪಿಯವರು ಬಿಡಲಾರರು. ಇಂತಹ ಹೊತ್ತಿನಲ್ಲಿ ಮುಖ್ಯಮಂತ್ರಿಯ ಸ್ಥಿತಿ ‘ತೇಲಲೀಯದು ಗುಂಡು, ಮುಳುಗಲೀಯದು ಬೆಂಡು’ ಎಂಬ ವಚನಕ್ಕೆ ಅನ್ವರ್ಥವಾಗುತ್ತದೆ.

ಕಾಂಗ್ರೆಸ್ ಸುಡು ಮೌನ: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮಾತನಾಡಿದ ಕುಮಾರಸ್ವಾಮಿ, ‘ಸಾಲ ಮನ್ನಾ ಮಾಡಲು ಸಿದ್ಧ. ನಾನು ಪಲಾಯನವಾದಿಯಲ್ಲ’ ಎಂದು ಹೇಳಿದ್ದರು. ಆದರೆ, ‘ಸಮ್ಮಿಶ್ರ ಸರ್ಕಾರ ಆಗಿರುವುದರಿಂದಾಗಿ ಏಕಾಂಗಿಯಾಗಿ ತೀರ್ಮಾನ ತೆಗೆದುಕೊಳ್ಳಲಾಗುವುದಿಲ್ಲ. ಮಿತ್ರ ಪಕ್ಷದ ನಾಯಕರ ಜತೆ ಚರ್ಚಿಸಿಯೇ ಘೋಷಣೆ ಮಾಡಬೇಕು. ಅದಕ್ಕೆಸ್ವಲ್ಪ ಸಮಯಕೊಡಿ’ ಎಂದೂ ಕೇಳಿದ್ದರು.

ಆದರೆ, ಕಾಂಗ್ರೆಸ್‌ಗೆ ಸಾಲ ಮನ್ನಾದ ಹಂಗು ಇರಲಿಲ್ಲ; ಈಗಲೂ ಇಲ್ಲ. ‘ಮಿತ್ರ’ ರ ನಿಗೂಢ ನಡೆ ತಂದೊಡ್ಡಬಹುದಾದ ‘ಅಪಾಯ’ ಅರಿತ ಕುಮಾರಸ್ವಾಮಿ, ರೈತ ಪ್ರತಿನಿಧಿಗಳ ಜತೆ ಬಹಿರಂಗ ಚರ್ಚೆಯ ಮೊರೆ ಹೋಗಿದ್ದು ಆಕಸ್ಮಿಕವಲ್ಲ; ಉದ್ದಿಶ್ಯಪೂರ್ವಕ ತೀರ್ಮಾನ. ನಿರ್ಧಾರ ತೆಗೆದುಕೊಳ್ಳುವ ಮುನ್ನ ಪಕ್ಷದಲ್ಲೇ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಪರಮೇಶ್ವರ ಅವರನ್ನು ಕೂರಿಸಿಕೊಳ್ಳುವುದು. ಸಾರ್ವಜನಿಕವಾಗಿ, ಇಂತಹ ನಿರ್ಣಾಯಕ ವಿಷಯವೊಂದನ್ನು ಚರ್ಚೆಗೆ ಬಿಡುವ ಮುನ್ನ ತನ್ನ ಪಾಲುದಾರ ಪಕ್ಷವನ್ನು ನಿರ್ಣಯಗಳಲ್ಲಿ ಭಾಗಿದಾರರನ್ನಾಗಿ ಮಾಡುವುದು ಇದರ ಹಿಂದಿನ ತರ್ಕವಾಗಿತ್ತು ಎಂಬುದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಅದೇ ಕಾರಣಕ್ಕಾಗಿ, ರೈತರ ಸಮಾಲೋಚನೆ ಸಭೆಗೆ ಮಾಧ್ಯಮದವರಿಗೆ ಮುಕ್ತ ಅವಕಾಶ ನೀಡಲಾಯಿತು(ಇತ್ತೀಚಿನ ವರ್ಷಗಳಲ್ಲಿ ಹೀಗೆ ಮುಕ್ತ ಚರ್ಚೆ ನಡೆದಿದ್ದು ಅಪರೂಪ). ಇದರ ಹಿಂದೆ ಕಾಂಗ್ರೆಸ್‌ನವರನ್ನು ‘ಜವಾಬ್ದಾರಿ’ಗೆ ಒಳಗು ಮಾಡುವ ಚಿಂತನೆ ಇದ್ದಿದ್ದು ನಿಜ.

ಇದೇ ಸಭೆಯಲ್ಲಿ, ‘ಸರ್ವ ಸಮ್ಮತಿ’ಯ ಮೇರೆಗೆ ಷರತ್ತುಗಳನ್ನು ಮುಂದಿಟ್ಟ ಕುಮಾರಸ್ವಾಮಿ ‘ಜಾಣ ನಡೆಯನ್ನೂ ಪ್ರದರ್ಶಿಸಿದರು. ಹೀಗಾಗಿಯೇ, ಅಂದಿನ ಸಭೆಯಲ್ಲಿ ಮಾತನಾಡಿದ ಜಿ. ಪರಮೇಶ್ವರ, ‘ಸಾಲಮನ್ನಾ ಮಾಡಲು ಕಾಂಗ್ರೆಸ್‌ ವಿರೋಧ ಇಲ್ಲ. ಆದರೆ, ಆರ್ಥಿಕ ತಜ್ಞರ ಸಮಿತಿ ರಚಿಸಿ ಸಲಹೆ ಪಡೆಯಬೇಕು’ ಎಂದು ಹೇಳುವ ಮುಖೇನ, ತಮ್ಮದು ಪೂರ್ಣ ಸಮ್ಮತಿಯಿಲ್ಲ ಎಂಬ ಸುಳಿವು ಬಿಟ್ಟುಕೊಟ್ಟರು. ಸರ್ಕಾರ ಅಸ್ತಿತ್ವಕ್ಕೆ ಬಂದು 10 ದಿನ ಸಮೀಪಿಸುತ್ತಿದ್ದು, ಬಿಜೆಪಿಯವರು ಪೂರ್ಣ ಸಾಲ ಮನ್ನಾಕ್ಕೆ ಆಗ್ರಹಿಸುತ್ತಲೇ ಇದ್ದಾರೆ. ಆದರೆ, ಈವರೆಗೂ ಮಿತ್ರ ಪಕ್ಷದ ಯಾವ ನಾಯಕ–ಶಾಸಕರು ಸಾಲಮನ್ನಾ ಮಾಡುವ ‘ತಮ್ಮ’ ಮುಖ್ಯಮಂತ್ರಿಯ ನಿರ್ಣಯಕ್ಕೆ ಬಹಿರಂಗ ಬೆಂಬಲ ಸೂಚಿಸಿಲ್ಲ.

ಏಕೆಂದರೆ, ಸಾಲಮನ್ನಾ ಅಸ್ತ್ರವನ್ನು ಬಳಸಿರುವ ಕುಮಾರಸ್ವಾಮಿ, ಬಿಜೆಪಿ ವಿರುದ್ಧ ಹರಿಹಾಯಲು ಕಾಂಗ್ರೆಸ್‌ಗೆ ಇದ್ದ ಬ್ರಹ್ಮಾಸ್ತ್ರವನ್ನು ಕಿತ್ತುಕೊಂಡಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇದ್ದಾಗ, ‘ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತ ಸಾಲವನ್ನು ಮನ್ನಾ ಮಾಡಬೇಕು ಎಂಬ ಬೇಡಿಕೆಯನ್ನು ಈಡೇರಿಸಲು ಸಾಧ್ಯವಿಲ್ಲ. ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾ ಮೋದಿ ಮಾಡಲಿ, ರಾಜ್ಯ ಬಿಜೆಪಿ ನಾಯಕರು ಒತ್ತಡ ತರಲಿ’ ಎಂದು ಕಾಂಗ್ರೆಸ್ ನಾಯಕರು ಪ್ರತಿಪಾದಿಸುತ್ತಿದ್ದರು. ಮೈತ್ರಿ ಸರ್ಕಾರದಲ್ಲಿ ಎಲ್ಲ ಸಾಲಮನ್ನಾ ಮಾಡಿದರೆ, ಇದರ ಎಲ್ಲ ‘ಲಾಭ’ಗಳು ಕುಮಾರಸ್ವಾಮಿಗೆ ಸಿಗಲಿದೆ ಎಂಬುದು ಕಾಂಗ್ರೆಸ್‌ನ ಲೆಕ್ಕಾಚಾರ. ಹೀಗಾಗಿ, ತುಂಬು ಮನಸ್ಸಿನಿಂದ ಸಾಲಮನ್ನಾಕ್ಕೆ ಬೆಂಬಲಿಸುವ ‘ವಿಶ್ವಾಸ’ ಮುಖ್ಯಮಂತ್ರಿಗೆ ಇದ್ದಂತಿಲ್ಲ. ಅದಕ್ಕಾಗಿಯೇ, ಪಟ್ಟು ಹಿಡಿದು ಹಣಕಾಸು ಖಾತೆಯನ್ನು ಅವರು ಸೆಳೆದುಕೊಂಡಿದ್ದಾರೆ.

ಲಾಭ–ನಷ್ಟದ ಲೆಕ್ಕಾಚಾರ: ಕುಮಾರಸ್ವಾಮಿಯ ಈ ನಡೆ ಜೆಡಿಎಸ್‌ಗೆ ದೂರಗಾಮಿ ಅನುಕೂಲ ತಂದು ಕೊಡಬಹುದು. ಲೋಕಸಭೆ ಚುನಾವಣೆಯಲ್ಲಿ ಇದು ತೆನೆ ಹೊತ್ತ ಮಹಿಳೆಯ ಕೈ ಹಿಡಿಯಬಹುದು. ತಮ್ಮದು ರೈತರ ಪಕ್ಷ, ಮಣ್ಣಿನ ಮಕ್ಕಳ ಪಕ್ಷ ಎಂದು ಬಿಂಬಿಸಿಕೊಳ್ಳಲು ಇದು ನೆರವಾಗಬಹುದು.

ಒಂದು ವೇಳೆ ಮೈತ್ರಿ ಮುರಿದು ಬಿದ್ದು ಚುನಾವಣೆ ಎದುರಿಸಬೇಕಾದ ಸನ್ನಿವೇಶ ಸೃಷ್ಟಿಯಾದರೆ ಈಗಿನ ಪರಿಸ್ಥಿತಿಗಿಂತ ಹೆಚ್ಚಿನ ಸ್ಥಾನ ಗೆಲ್ಲಲು ತಲುಪಲು ಇದು ಸಹಾಯ ಮಾಡಬಹುದು ಎಂದು ಜೆಡಿಎಸ್‌ನ ಲೆಕ್ಕಾಚಾರ. ಲೋಕಸಭೆ ಚುನಾವಣೆಯಲ್ಲಿ, ಮೈತ್ರಿ ಮುಂದುವರಿಯುತ್ತದೆ ಎಂದು ಹೇಳಿರುವುದರಿಂದ ಸಾಲಮನ್ನಾ ಲಾಭದ ದೋಣಿಯಲ್ಲಿ ಕಾಂಗ್ರೆಸ್‌ ಪಯಣಿಗನಾಗಲು ಹವಣಿಸಬಹುದು. ಆದರೆ, ಕ್ಲೇಮು ಕುಮಾರಸ್ವಾಮಿ ಮಾಡುವುದರಿಂದ ಹೆಚ್ಚಿನ ಅನುಕೂಲ ಮಾಡಿಕೊಡಲಾರದು ಎಂಬ ತರ್ಕ ಕಾಂಗ್ರೆಸ್‌ನಲ್ಲಿದೆ.

ಬಿಜೆಪಿಗೆ ಇದು ಬೀದಿ ರಂಪಾಟದ ವಿಷಯ

24 ಗಂಟೆಯಲ್ಲಿ ಸಾಲಮನ್ನಾ ಮಾಡಲಿಲ್ಲ, ಎಲ್ಲ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದ ಕುಮಾರಸ್ವಾಮಿ ಈಗ ಷರತ್ತು ವಿಧಿಸುವ ಮುಖೇನ ಮಾತು ತಪ್ಪಿ ವಿಶ್ವಾಸದ್ರೋಹ, ವಚನ ಭ್ರಷ್ಟರಾಗಿದ್ದಾರೆ ಎಂದು ಬಿಜೆಪಿ ಈಗಾಗಲೇ ಟೀಕಿಸಿದೆ.

ಪೂರ್ಣ ಸಾಲ ಮನ್ನಾ ಮಾಡಿದರೆ ಬಿಜೆಪಿಗೆ ಹೋರಾಟದ ಅಸ್ತ್ರವೇ ಇಲ್ಲದಂತಾಗುತ್ತದೆ. ಆದರೆ, ಆರ್ಥಿಕ ಸ್ಥಿತಿ ಹಾಗೂ ಕುಮಾರಸ್ವಾಮಿಯವರ ಲೆಕ್ಕಾಚಾರ ನೋಡಿದರೆ ಎಲ್ಲ ವಿಧದ ಹಾಗೂ ಬಡವ–ಶ್ರೀಮಂತ ಭೇದವಿಲ್ಲದೇ ಎಲ್ಲರ ಸಾಲ ಮನ್ನಾ ಮಾಡುವ ಲಕ್ಷಣ ಕಾಣಿಸುತ್ತಿಲ್ಲ. ಹೀಗಾದಲ್ಲಿ, ಬಿಜೆಪಿಗೆ ಹೋರಾಟದ ವೇದಿಕೆಯನ್ನು ಮೈತ್ರಿ ಸರ್ಕಾರವೇ ಸೃಷ್ಟಿಕೊಟ್ಟಂತಾಗುತ್ತದೆ.

ಆದಾಯ ತೆರಿಗೆ ಪಾವತಿಸುವ, ಕೃಷಿಯ ಜತೆ ಉದ್ಯೋಗ, ಉದ್ಯಮ ಮಾಡುವ ರೈತರ ಸಾಲ ತೀರಿಸಬೇಕೇ ಎಂದು ಕುಮಾರಸ್ವಾಮಿ ಪ್ರಶ್ನೆ ಎತ್ತಿದ್ದಾರೆ. ಈ ಮಾದರಿಯ ರೈತರ ಪೈಕಿ ಹೆಚ್ಚಿನವರು ಬಿಜೆಪಿ ಜತೆ ಗುರುತಿಸಿಕೊಂಡಿದ್ದಾರೆ. ಸರ್ಕಾರದ ವಿರುದ್ಧ ರಣಕಹಳೆ ಮೊಳಗಿಸುವಾಗ ಇವರೆಲ್ಲ ಕಮಲ ಪಕ್ಷಕ್ಕೆ ಬೆಂಬಲವಾಗಿ ನಿಲ್ಲಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry