ಶನಿವಾರ, ಮಾರ್ಚ್ 6, 2021
29 °C
ಪತಿಯ ಸ್ವಭಾವ ವಿವರಿಸಿರುವ ನವೀನ್‌ ಪತ್ನಿ

ಆರೋಪಿಯ ಅಲ್ಲೇಶ್ವರ, ಏಸೇಶ್ವರ ಜಪ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆರೋಪಿಯ ಅಲ್ಲೇಶ್ವರ, ಏಸೇಶ್ವರ ಜಪ!

ಬೆಂಗಳೂರು: ಪಿಸ್ತೂಲ್ ಹಾಗೂ ಮದ್ದುಗುಂಡುಗಳನ್ನು ಮನೆಗೆ ತಂದಿಟ್ಟಿದ್ದನ್ನು ಪ್ರಶ್ನಿಸಿದ್ದ ಪತ್ನಿಗೆ ಕೆ.ಟಿ.ನವೀನ್‌ಕುಮಾರ್, ‘ಇದು ಆಟಿಕೆಯ ಪಿಸ್ತೂಲ್. ತೋಟದಲ್ಲಿ ಮಂಗಣ್ಣನನ್ನು ಓಡಿಸಲು ಅಂಗಡಿಯಿಂದ ತಂದಿದ್ದೇನೆ. ಇವುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು, ಕಾನೂನಿನ ಪ್ರಕಾರ ತಪ್ಪಲ್ಲ’ ಎಂದು ಹೇಳಿದ್ದ...

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿರುವ 651 ಪುಟಗಳ ಆರೋಪಪಟ್ಟಿಯಲ್ಲಿ ಈ ಅಂಶವಿದೆ. ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದ್ದು, ನವೀನ್‌ನ ಸ್ವಭಾವ ಹಾಗೂ ಹಿಂದುತ್ವಪರ ಕಾಳಜಿ ಬಗ್ಗೆ ಆತನ ಪತ್ನಿ ರೂಪಾ ಎಳೆ ಎಳೆಯಾಗಿ ವಿವರಿಸಿದ್ದಾರೆ.

‘ಮಂಡ್ಯ ಜಿಲ್ಲೆ  ಕದಲೂರು ಗ್ರಾಮದ ನವೀನ್‌ನನ್ನು ಐದು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾದೆ. ಅವರು ಜೆಡಿಎಸ್‌ನ ಬೆಂಬಲಿಗರಾಗಿದ್ದು, ಇನ್ನಾವುದೇ ರಾಜಕೀಯ ಪಕ್ಷಗಳನ್ನೂ ಬೆಂಬಲಿಸುತ್ತಿರಲಿಲ್ಲ. ಹಿಂದುತ್ವದ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಶಿವನ ಆರಾಧಕರಾಗಿದ್ದ ಅವರು, ಅಲ್ಲೇಶ್ವರ (ಅಲ್ಲ+ಈಶ್ವರ) ಹಾಗೂ ಏಸೇಶ್ವರ (ಏಸು+ಈಶ್ವರ) ಎಂದು ಬೇರೆ ಧರ್ಮದ ದೇವರುಗಳಿಗೆ ಶಿವನ ಹೆಸರನ್ನು ಸೇರಿಸಿ ಜಪ ಮಾಡುತ್ತಿದ್ದರು. ಯಾವ ಧರ್ಮವನ್ನೂ ದ್ವೇಷಿಸುತ್ತಿರಲಿಲ್ಲ.’

‘ಕೆಲವು ವರ್ಷಗಳ ಹಿಂದೆ ಬೈಕ್‌ನಿಂದ ಬಿದ್ದು ತಲೆಗೆ ಪೆಟ್ಟಾಗಿತ್ತು. ಆ ನಂತರ ಸಣ್ಣ ಸಣ್ಣ ವಿಚಾರಗಳಿಗೂ ಅವರು ಕೋಪ ಮಾಡಿಕೊಳ್ಳುತ್ತಿದ್ದರು. 2017ರಲ್ಲಿ ನನ್ನನ್ನು ಶಿವಮೊಗ್ಗದ ಕಾರ್ಯಕ್ರಮವೊಂದಕ್ಕೆ ಕರೆದುಕೊಂಡು ಹೋಗಿದ್ದ ಪತಿ, ಮೊದಲ ಬಾರಿಗೆ ಸನಾತನ ಸಂಸ್ಥೆಯವರನ್ನು ಪರಿಚಯ ಮಾಡಿಕೊಟ್ಟರು. ಹಿಂದೂ ಯುವಸೇನೆಯ ಸಂಚಾಲಕರಾದ ಪತಿ, ‍ಮದ್ದೂರಿನಲ್ಲಿ ಪ್ರತಿ ಶನಿವಾರ ಸಂಜೆ ಸನಾತನ ಸಂಸ್ಥೆಗಳ ಬಗ್ಗೆ ಆಸಕ್ತರಿಗೆ ಧರ್ಮಶಿಕ್ಷಣ ನೀಡುತ್ತಿದ್ದರು.’

‘ದಸರಾ ಹಬ್ಬದ ಮಾರನೇ ದಿನ, ಸನಾತನ ಸಂಸ್ಥೆಯ ವ್ಯಕ್ತಿಯೊಬ್ಬರು ನಮ್ಮ ಮನೆಗೆ ಬಂದಿದ್ದರು. ಪತಿಯ ಬಳಿ ಅವರ ಹೆಸರು ಕೇಳಿದ್ದಕ್ಕೆ, ‘ಅಣ್ಣ ಎನ್ನು ಸಾಕು. ಹೆಸರು ಬೇಡ’ ಎಂದಿದ್ದರು. ಅವರು ಕನ್ನಡದಲ್ಲೇ ಮಾತನಾಡುತ್ತಿದ್ದರು. ಜೂನ್‌ ತಿಂಗಳಲ್ಲಿ ಗೋವಾದಲ್ಲಿ ನಡೆದ ‘ಧರ್ಮ ಶಿಕ್ಷಣ ಸಮ್ಮೇಳನ’ದಲ್ಲಿ ಪತಿಯೂ ಪಾಲ್ಗೊಂಡಿದ್ದರು.’

‘ಅದಾದ 2–3 ತಿಂಗಳ ಬಳಿಕ, ಮತ್ತೊಂದು ಧರ್ಮ ಶಿಕ್ಷಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹುಬ್ಬಳ್ಳಿಗೆ ಹೋಗುತ್ತಿರುವುದಾಗಿ ಮನೆಯಿಂದ ಹೊರಟರು. ಮರುದಿನವೇ ವಾಪಸಾದ ಅವರು, ಬಟ್ಟೆಯ ಬ್ಯಾಗ್ ಬಿಟ್ಟು ಬಂದಿದ್ದರು. ಆ ಬಗ್ಗೆ ಕೇಳಿದ್ದಕ್ಕೆ, ‘ಬ್ಯಾಗ್ ಟ್ರೈನ್‌ನಲ್ಲಿ ಮಿಸ್ ಆಯ್ತು’ ಎಂದಿದ್ದರು. ಅದೇ ದಿನ ಪತಿ, ‘ಯಾಕೋ ಮನಸ್ಸು ಸರಿ ಇಲ್ಲ. ಮಂಗಳೂರಿಗೆ ಹೋಗೋಣ’ ಎಂದು ನನ್ನನ್ನು ಕರೆದುಕೊಂಡು ಹೋದರು.’

‘ರಾತ್ರಿ 9.45ಕ್ಕೆ ಮಂಗಳೂರು ತಲುಪುತ್ತಿದ್ದಂತೆಯೇ ಬಸ್ ನಿಲ್ದಾಣಕ್ಕೆ ಒಂದು ಕಾರು ಬಂತು. ಅದರಲ್ಲಿ ನಾವು ಸನಾತನ ಆಶ್ರಮಕ್ಕೆ ತೆರಳಿದೆವು. ಮರುದಿನ ಬೆಳಿಗ್ಗೆ ಅಲ್ಲಿ ಟಿ.ವಿ ನೋಡಿದಾಗ, ಗೌರಿ ಲಂಕೇಶ್ ಹತ್ಯೆಯಾಗಿರುವ ಸುದ್ದಿ ಬರುತ್ತಿತ್ತು. ಪತಿಗೆ ವಿಷಯ ತಿಳಿಸಿದಾಗ, ‘ಹೌದಾ..’ ಎಂದರು ಅಷ್ಟೇ. ಬೇರೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ’ ಎಂದು ರೂಪಾ ನೀಡಿರುವ ಹೇಳಿಕೆ ಆರೋಪಪಟ್ಟಿಯಲ್ಲಿದೆ.

ಪಾರ್ಕ್‌ನಲ್ಲೂ ಸಂಚು!: ‘ಗೌರಿ ಲಂಕೇಶ್ ಹಿಂದೂ ದೇವತೆಗಳ ವಿರುದ್ಧವಾಗಿ ಮಾತನಾಡುತ್ತಿದ್ದರು ಎಂಬ ಕಾರಣಕ್ಕೆ ಕುಪಿತಗೊಂಡಿದ್ದ  ಕೆ.ಟಿ. ನವೀನ್‌ಕುಮಾರ್  ಹಾಗೂ ಪ್ರವೀಣ್, ಅವರನ್ನು ಕೊಲ್ಲಲು ವಿಜಯನಗರದ 1ನೇ ಬಿ ಮುಖ್ಯರಸ್ತೆಯ ಬಿಬಿಎಂಪಿ ಪಾರ್ಕ್‌ನಲ್ಲೂ ಕುಳಿತು ಸಂಚು ರೂಪಿಸಿದ್ದರು’ ಎಂದು ಎಸ್‌ಐಟಿ ಅಧಿಕಾರಿಗಳು ಹೇಳಿದ್ದಾರೆ.

ಪಿಸ್ತೂಲ್‌ಗೆ ರಕ್ತಾರ್ಪಣೆ ಮಾಡಿದ್ದ!

‘ದಸರಾ ಹಬ್ಬಕ್ಕೆ ಮೊದಲು 2–3 ತಿಂಗಳ ಹಿಂದೆ ಪತಿ ಪಿಸ್ತೂಲನ್ನು ಮನೆಗೆ ತಂದಿದ್ದರು. ಅದನ್ನು ಮನೆಯಲ್ಲಿಡಬೇಡಿ ಎಂದು ಎಂದು ಬೈದಿದ್ದೆ. ಅದಕ್ಕೆ, ‘ಇದು ನಕಲಿ ಪಿಸ್ತೂಲ್. ಮನೆಯಲ್ಲಿ ಇಟ್ಟುಕೊಂಡರೆ, ಏನೂ ಕುತ್ತು ಬರಲ್ಲ’ ಎಂದು ಲಾಕರ್‌ನಲ್ಲಿ ಇಟ್ಟಿದ್ದರು. ಆಯುಧ ಪೂಜೆ ದಿನ, ಆ ಪಿಸ್ತೂಲ್‌ಗೆ ಪೂಜೆ ಮಾಡಿದ್ದರು. ಸೂಜಿಯಿಂದ ಬೆರಳು ಚುಚ್ಚಿಕೊಂಡು, ಒಂದು ಹನಿ ರಕ್ತವನ್ನು ಅರ್ಪಣೆ ಮಾಡಿದ್ದರು. ನಂತರ ‘ಜೈ ಭಾರತ್ ಮಾತೆ’ ಎಂದೂ ಹೇಳಿದ್ದರು.’ ಎಂದು ರೂಪಾ ಹೇಳಿಕೆ ಕೊಟ್ಟಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.