ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ‘ಕೈ’ಗೆ ಮೈತ್ರಿ ಲಗಾಮು?

ಮೈತ್ರಿ ಸರ್ಕಾರದ ಸಮನ್ವಯ ಸಮಿತಿ
Last Updated 1 ಜೂನ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರದಲ್ಲಿ ‘ತೆನೆ ಹೊತ್ತ ಮಹಿಳೆ’ಯ ಅತೀ ಉಮೇದು ಹಾಗೂ ವೇಗಕ್ಕೆ ಕಡಿವಾಣ ಹಾಕುವ ಉದ್ದೇಶದಿಂದಲೇ ಸಮನ್ವಯ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನೇಮಕ ಮಾಡಲಾಗಿದೆಯೇ?

ಹೀಗೊಂದು ಚರ್ಚೆ ‘ದೋಸ್ತಿ’ ಪಕ್ಷಗಳ ಪಡಸಾಲೆಯಲ್ಲಿ  ಆರಂಭವಾಗಿದೆ. ಸರಿಸುಮಾರು 20 ವರ್ಷಗಳಿಂದ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ನಡೆ ನುಡಿ, ತಂತ್ರ ಹಾಗೂ ಚಾಣಾಕ್ಷತನಗಳನ್ನು ಸಿದ್ದರಾಮಯ್ಯ ಹತ್ತಿರದಿಂದ ಬಲ್ಲವರು. 12 ವರ್ಷಗಳ ಹಿಂದೆ ‘ಶಿಷ್ಯತ್ವ’ ತ್ಯಜಿಸಿ ಗುರುವಿನಿಂದ ದೂರವಾದ ಬಳಿಕ ಗೌಡರ ಪಟ್ಟುಗಳಿಗೆ ಪ್ರತಿ ಪಟ್ಟು ಹಾಕಿ ಹಲವಾರು ಬಾರಿ ತಿರುಗೇಟುಗಳನ್ನು ನೀಡಿದ್ದುಂಟು. ಬಿಬಿಎಂಪಿಯಲ್ಲಿ ಮೈತ್ರಿ ಮಾಡಿಕೊಳ್ಳುವ ವೇಳೆಯಲ್ಲಿ ಗುರುವಿಗೆ ‘ನಿಷ್ಠೆ’ಯನ್ನೂ ತೋರಿದ್ದಾರೆ. ನೀರಾವರಿ ಬಿಕ್ಕಟ್ಟಿನ ಸಂದರ್ಭದಲ್ಲಿ ದೇವೇಗೌಡರನ್ನು ಮುಂದಿಟ್ಟುಕೊಂಡೇ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಕಾಂಗ್ರೆಸ್‌ ಹೈಕಮಾಂಡ್‌, ಮೈತ್ರಿ ಸರ್ಕಾರದ ಲಗಾಮನ್ನು ಸಿದ್ದರಾಮಯ್ಯ ‘ಕೈ’ಗೆ ಕೊಟ್ಟಿದೆ ಎನ್ನುತ್ತವೆ ಮೂಲಗಳು.

ಮುಖ್ಯಮಂತ್ರಿ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಒಪ್ಪಿದ್ದ ಕಾಂಗ್ರೆಸ್‌, ಖಾತೆ ಹಂಚಿಕೆಯಲ್ಲಿ ತಗಾದೆ ಎತ್ತಿತ್ತು. ಪ್ರಮುಖ ಖಾತೆಗಳಾದ ಕಂದಾಯ ಹಾಗೂ ಲೋಕೋಪಯೋಗಿಯನ್ನಷ್ಟೇ ಮಿತ್ರ ಪಕ್ಷಕ್ಕೆ ನೀಡಲು ಪಕ್ಷ ಒಪ್ಪಿತ್ತು. ಹಣಕಾಸು ಖಾತೆಯನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಸಾಧ್ಯವೇ ಇಲ್ಲ ಎಂದು ಸಿದ್ದರಾಮಯ್ಯ ಹಟ ಹಿಡಿದಿದ್ದರು. ಈ ಖಾತೆ ಆಪ್ತ ಶಾಸಕರೊಬ್ಬರ ಬಳಿಯಲ್ಲಿಯೇ ಇರಬೇಕು ಎಂಬುದು ಅವರ ಹಂಬಲವಾಗಿತ್ತು.

‘ರೈತರ ಸಾಲ ಮನ್ನಾ, ನೀರಾವರಿಗೆ 1.5 ಲಕ್ಷ ಕೋಟಿ ಅನುದಾನ ನೀಡುತ್ತೇನೆ ಎಂದು ಪಕ್ಷದ ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದೇನೆ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿನ ಹಲವು ಅಂಶಗಳನ್ನು ಈಡೇರಿಸಬೇಕಿದೆ. ಹೀಗಾಗಿ, ಹಣಕಾಸು ಖಾತೆ ನನ್ನ ಬಳಿಯೇ ಇರಬೇಕು. ಒಂದು ವೇಳೆ ಅದಕ್ಕೆ ಒಪ್ಪದಿದ್ದರೆ ಮೈತ್ರಿಗೆ ತಿಲಾಂಜಲಿ ಇಡಲೂ ಸಿದ್ಧ’ ಎಂದು ಕುಮಾರಸ್ವಾಮಿ ಪಟ್ಟು ಹಿಡಿದಿದ್ದರು.

ಈ ವಿಷಯದಲ್ಲಿ ‘ದೋಸ್ತಿ’ಗಳ ಕುಸ್ತಿ ವಾರದ ವರೆಗೆ ಮುಂದುವರಿದಿತ್ತು. ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಮಧ್ಯಪ್ರವೇಶದಿಂದ ‘ಹಣಕಾಸು’ ‘ತೆನೆ ಹೊತ್ತ ಮಹಿಳೆ’ಯ ಪಾಲಾಗಿದೆ.

ಜತೆಗೆ, ಲೋಕೋಪಯೋಗಿ ಇಂಧನ, ಸಾರಿಗೆ, ಶಿಕ್ಷಣದಂತಹ ಮಹತ್ವದ ಖಾತೆಗಳನ್ನೂ ಗೆಳೆಯನಿಗೆ ಪಕ್ಷ ಬಿಟ್ಟುಕೊಟ್ಟಿದೆ.ಆದರೆ, ಸಮನ್ವಯ ಸಮಿತಿಯ ಸೂತ್ರಧಾರನ ಸ್ಥಾನದಲ್ಲಿ ಸಿದ್ದರಾಮಯ್ಯ ಇರಲಿದ್ದಾರೆ. ಕುಮಾರಸ್ವಾಮಿ ಅವರು ಪ್ರಮುಖ ಆಡಳಿತಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಸಮನ್ವಯ ಸಮಿತಿಯ ಸಲಹೆ ಪಡೆಯಬೇಕಿದೆ.

ಮಾಧ್ಯಮದವರ ಜತೆ ಮಾತನಾಡಿದ ಸಿದ್ದರಾಮಯ್ಯ, ‘ತಿಂಗಳಿಗೊಮ್ಮೆ ಸಭೆ ನಡೆಯಲಿದೆ. ಅಗತ್ಯವೆನಿಸಿದರೆ ಯಾವಾಗ ಬೇಕಾದರೂ ಸೇರಬಹುದು’ ಎಂದು ಹೇಳಿದ್ದಾರೆ. ಮೈತ್ರಿ ‘ಸೂತ್ರ’ ಮಾಜಿ ಮುಖ್ಯಮಂತ್ರಿಯ ಕೈಯಲ್ಲಿ ಇರಲಿದೆ, ಅವರು ಸೂಚಿಸಿದಂತೆ ನಡೆಯಲಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದೂ ಮೂಲಗಳು ಹೇಳಿವೆ.

ಇದು ಗೊತ್ತಿದ್ದ ಕಾರಣದಿಂದಲೇ, ‘ಸಮಿತಿಗೆ ಸಿದ್ದರಾಮಯ್ಯ ಅವರನ್ನು ಅಧ್ಯಕ್ಷರನ್ನಾಗಿ ಮಾಡುವ ಪ್ರಸ್ತಾವಕ್ಕೆ ಜೆಡಿಎಸ್‌ ನಾಯಕರು ಆರಂಭದಲ್ಲಿ ಪ್ರಬಲ ವಿರೋಧ ವ್ಯಕ್ತಪಡಿಸಿದರು. ಆದರೆ, ಕಾಂಗ್ರೆಸ್‌ ಹೈಕಮಾಂಡ್‌ನ ಒತ್ತಡಕ್ಕೆ ಜೆಡಿಎಸ್‌ ಮಣಿಯಿತು. ಐದು ವರ್ಷ ಆಡಳಿತ ಸುಸೂತ್ರವಾಗಿ ಸಾಗಲು ಸಿದ್ದರಾಮಯ್ಯ ಅವರ ಆಡಳಿತ ಕುಶಾಗ್ರಮತಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದೂ ರಾಹುಲ್‌ ಹೇಳಿದರು’ ಎಂದು ಮೂಲಗಳು ತಿಳಿಸಿವೆ.

ಮುಖ್ಯಾಂಶಗಳು

* ಕಂದಾಯ, ಲೋಕೋಪಯೋಗಿ ಕೊಡಲು ಒಪ್ಪಿದ್ದ ಕಾಂಗ್ರೆಸ್‌

* ಹಣಕಾಸು ಖಾತೆಗಾಗಿ ವಾರದ ಹಗ್ಗಜಗ್ಗಾಟ

* ತಿಂಗಳಿಗೊಮ್ಮೆ ಸಮನ್ವಯ ಸಮಿತಿ ಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT