ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗ್ಗಾಟಕ್ಕೆ ತೆರೆ: ಸಚಿವಗಿರಿಗೆ ಲಾಬಿ

Last Updated 1 ಜೂನ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಸರ್ಕಾರದ ಖಾತೆಗಳಿಗಾಗಿ ನಡೆದಿದ್ದ ಹಗ್ಗಜಗ್ಗಾಟಕ್ಕೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮಧ್ಯಪ್ರವೇಶದಿಂದ ತೆರೆಬಿದ್ದ ಬೆನ್ನಲ್ಲೇ, ‘ಮಂತ್ರಿ ಪಟ್ಟ’ ಕ್ಕಾಗಿ ಲಾಬಿ ಆರಂಭವಾಗಿದೆ.

ಐದು ವರ್ಷ ಸುಗಮವಾಗಿ ಆಡಳಿತ ನಡೆಸಲು ಅನುಸರಿಸಬೇಕಾದ ಸೂತ್ರವೇನು ಎಂಬುದನ್ನು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರು ಮಾಧ್ಯಮಗೋಷ್ಠಿಯಲ್ಲಿ ಶುಕ್ರವಾರ ವಿವರಿಸಿದರು. ಗೋಷ್ಠಿಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಜಿ. ಪರಮೇಶ್ವರ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯಿಲಿ ಇದ್ದರು.

ಕಾಂಗ್ರೆಸ್‌ಗೆ 22 ಮತ್ತು ಜೆಡಿಎಸ್‌ಗೆ 12 ಖಾತೆಗಳ ಹಂಚಿಕೆಯಾಗಿವೆ. ಒಟ್ಟು ನಿಗಮ– ಮಂಡಳಿಗಳಲ್ಲಿ ಮೂರನೇ ಎರಡರಷ್ಟು ಕಾಂಗ್ರೆಸ್‌ಗೆ, ಮೂರನೇ ಒಂದರಷ್ಟು ಜೆಡಿಎಸ್‌ಗೆ ಎಂದು ತೀರ್ಮಾನವಾಗಿದೆ. ಎರಡೂ ಪಕ್ಷಗಳ ಮುಖಂಡರ ಪರಸ್ಪರ ಸಮ್ಮತಿಯ ಮೇರೆಗೆ ಯಾರಿಗೆ ಯಾವ ಯಾವ ಖಾತೆ ಎಂಬುದನ್ನು ನಿರ್ಣಯ ಮಾಡಲಾಗಿದೆ ಎಂದು ವಿವರಿಸಿದರು.

ಶಕ್ತಿ ಕೇಂದ್ರಗಳಿಗೆ ಮೊರೆ: ತಮ್ಮ ಪಾಲಿಗೆ ಸಿಕ್ಕಿರುವ ಅಲ್ಪ ಖಾತೆಗಳನ್ನು ಕಿತ್ತುಕೊಳ್ಳಲು ಆಯಾ ಪಕ್ಷಗಳ ಶಾಸಕರು ಶಕ್ತಿ ಕೇಂದ್ರಗಳ ಮೊರೆ ಹೋಗಿದ್ದಾರೆ. ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲು ಐದು ದಿನ ಬಾಕಿಯಿದ್ದು, ಜೆಡಿಎಸ್‌ನ ಶಕ್ತಿ ಕೇಂದ್ರ ಪದ್ಮನಾಭ ನಗರ(ಪಕ್ಷದ ವರಿಷ್ಠ ದೇವೇಗೌಡರ ಮನೆ) ಹಾಗೂ ಕಾಂಗ್ರೆಸ್‌ನ ಶಕ್ತಿ ಕೇಂದ್ರವಾದ ‘ಕಾವೇರಿ’(ಸಿದ್ದರಾಮಯ್ಯ ಮನೆ) ಮತ್ತು ದೆಹಲಿಯ ರಾಹುಲ್ ಗಾಂಧಿ ನಿವಾಸದತ್ತ ದಾಂಗುಡಿ ಇಡಲಿದ್ದಾರೆ.

‌ಉಪಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದ ಡಿ.ಕೆ.ಶಿವಕುಮಾರ್ ಪ್ರಮುಖ ಖಾತೆಗೆ ಪಟ್ಟು ಹಿಡಿಯುವ ಸಾಧ್ಯತೆ ಇದೆ. ಹಿರಿಯ ನಾಯಕರಾದ ಆರ್‌.ವಿ.ದೇಶಪಾಂಡೆ, ರಾಮಲಿಂಗಾ ರೆಡ್ಡಿ, ಶಾಮನೂರು ಶಿವಶಂಕರಪ್ಪ, ಎಚ್‌.ಕೆ.ಪಾಟೀಲ, ಎಂ.ಬಿ.ಪಾಟೀಲ, ಕೆ.ಜೆ.ಜಾರ್ಜ್‌, ರೋಷನ್‌ಬೇಗ್‌, ತನ್ವೀರ್‌ ಸೇಠ್‌, ಎಂ.ಕೃಷ್ಣಪ್ಪ, ಸತೀಶ್‌ ಜಾರಕಿಹೊಳಿ, ದಿನೇಶ್ ಗುಂಡೂರಾವ್‌, ಕೃಷ್ಣ ಬೈರೇಗೌಡ ದೆಹಲಿಯಲ್ಲಿರುವ ತಮ್ಮ ಆಪ್ತರ ಮೂಲಕ ಪ್ರಭಾವ ಬೀರುವ ಕೆಲಸ ಆರಂಭಿದ್ದಾರೆ. ಹಿರಿಯ ನಾಯಕರಾದ ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಂತುಷ್ಟಗೊಳಿಸಲು ಡಾ.ಯತೀಂದ್ರ ಸಿದ್ದರಾಮಯ್ಯ ಮತ್ತು ಪ್ರಿಯಾಂಕ್‌ ಖರ್ಗೆ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡುವ ಸಾಧ್ಯತೆ ಇದೆ.

ಕಾಂಗ್ರೆಸ್‌ನ ಹಿರಿಯ ಶಾಸಕರು ಪ್ರಮುಖ ಖಾತೆಗಳ ಮೇಲೆ ಕಣ್ಣಿಟ್ಟಿರುವುದರಿಂದ ಯಾರಿಗೆ ಯಾವ ಖಾತೆ ನೀಡಬೇಕು ಎಂಬ ಇಕ್ಕಟ್ಟಿಗೆ ಪಕ್ಷ ಸಿಲುಕುವ ಸಾಧ್ಯತೆ ಇದೆ. ಬಿಜೆಪಿಯ ಗಾಳಕ್ಕೆ ಬೀಳಬಹುದಾದ ಶಾಸಕರು ಮತ್ತು ಇಬ್ಬರು ಪಕ್ಷೇತರರಿಗೆ ಮಣೆ ಹಾಕಲೇಬೇಕಾಗಿದೆ. ಮಂತ್ರಿ ಸ್ಥಾನ ಸಿಗದೇ ಇದ್ದರೆ 8 ರಿಂದ 10 ಶಾಸಕರು ಬಿಜೆಪಿಗೆ ಸೇರಲು ಸಿದ್ಧರಾಗಿದ್ದಾರೆ ಎಂಬ ವದಂತಿ ರಾಜಕೀಯ ವಲಯದಲ್ಲಿ ದಟ್ಟವಾಗಿದೆ. ಹೀಗಾಗಿ ಕಾಂಗ್ರೆಸ್‌ ಕಸರತ್ತು ಕತ್ತಿಯ ಅಲಗಿನ ಮೇಲಿನ ನಡಿಗೆಯಾಗಿದೆ ಎಂದು ಹೇಳಲಾಗುತ್ತಿದೆ.

ಜೆಡಿಎಸ್‌ನಲ್ಲಿರುವ ಹಿರಿಯ ನಾಯಕರಾದ ಎಚ್‌.ಡಿ.ರೇವಣ್ಣ, ಜಿ.ಟಿ.ದೇವೇಗೌಡ, ಎಚ್‌.ವಿಶ್ವನಾಥ್‌, ಬಂಡೆಪ್ಪ ಕಾಶೆಂಪೂರ, ವೆಂಕಟರಾವ್ ನಾಡಗೌಡ, ಬಿ.ಎಂ.ಫಾರೂಕ್‌ ನಿರಾಯಾಸವಾಗಿ ಸಂಪುಟ ಸೇರುವ ಸಾಧ್ಯತೆ ಇದೆ.

ಉಳಿದಂತೆ ದೇವೇಗೌಡ ಮತ್ತು ಕುಮಾರಸ್ವಾಮಿ ಚರ್ಚೆ ನಡೆಸಿ ಸಚಿವ ಸ್ಥಾನ ಪಡೆಯುವವರ ಪಟ್ಟಿಅಂತಿಮಗೊಳಿಸಲಿದ್ದಾರೆ. ಸಚಿವ ಸ್ಥಾನ ಸಿಗದೇ ಇದ್ದರೆ ಜೆಡಿಎಸ್‌ನಲ್ಲೂ ಒಂದಿಬ್ಬರು ಶಾಸಕರು ಬಿಜೆಪಿಗೆ ಜಿಗಿಯುವ ಸಾಧ್ಯತೆ ಇದೆ. ಇವರಿಗೆ ಆದ್ಯತೆ ನೀಡುವ ಸಾಧ್ಯತೆ ಇದೆ. ಬಿಎಸ್‌ಪಿ ಶಾಸಕನಿಗೆ ಜೆಡಿಎಸ್‌ ಕೋಟಾದಿಂದಲೇ ಮಂತ್ರಿ ಸ್ಥಾನ ನೀಡಬೇಕಾಗಿದೆ.

ಸಿದ್ದರಾಮಯ್ಯ ಸಮನ್ವಯ ಸಮಿತಿ ಅಧ್ಯಕ್ಷ:ಮೈತ್ರಿ ಸರ್ಕಾರ ಸುಗಮವಾಗಿ ನಡೆಸಲು ಸಮನ್ವಯ ಮತ್ತು ಉಸ್ತುವಾರಿ ಸಮಿತಿಯನ್ನು ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ರಚಿಸಲಾಗಿದೆ. ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಅಲಿ ಸಮಿತಿ ಸಂಚಾಲಕ. ಪ್ರತಿ ತಿಂಗಳಿಗೊಮ್ಮೆ ಸಮಿತಿ ಸಭೆ ಸೇರಲಿದೆ. ಸಮಿತಿ ಸದಸ್ಯರು: ಎಚ್‌.ಡಿ.ಕುಮಾರಸ್ವಾಮಿ, ಜಿ.ಪರಮೇಶ್ವರ, ಕೆ.ಸಿ.ವೇಣುಗೋಪಾಲ್‌.

ಸುಗಮ ಆಡಳಿತಕ್ಕೆ ಸಮನ್ವಯ ಸೂತ್ರ

* ಎರಡೂ ಪಕ್ಷಗಳ ಪ್ರಣಾಳಿಕೆಗಳನ್ನು ಸೇರಿಸಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಲಾಗುತ್ತದೆ. ಆದಷ್ಟು ಬೇಗ ಜನರ ಮುಂದಿಡಲಾಗುವುದು.

* ಕಾಂಗ್ರೆಸ್‌– ಜೆಡಿಎಸ್‌ನಿಂದ ಇಬ್ಬರು ವಕ್ತಾರರು ಇರುತ್ತಾರೆ. ಜಂಟಿಯಾಗಿ ಮಾಧ್ಯಮಗಳ ಮುಂದೆ ಮಾತನಾಡುತ್ತಾರೆ.

* ನಿಗಮ ಮತ್ತು ಮಂಡಳಿಗಳಿಗೆ ಸಮನ್ವಯ ಸಮಿತಿಯ ಒಪ್ಪಿಗೆ ಮೇರೆಗೆ ನೇಮಕಗಳು ನಡೆಯುತ್ತವೆ. ಒಟ್ಟು ಹುದ್ದೆಗಳಲ್ಲಿ ಮೂರನೇ ಎರಡರಷ್ಟು ಕಾಂಗ್ರೆಸ್‌ ಪಕ್ಷಕ್ಕೆ ಮತ್ತು ಮೂರನೇ ಒಂದರಷ್ಟು ಜೆಡಿಎಸ್‌ಗೆ ಹಂಚಿಕೆ.

* 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಜಂಟಿಯಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು.

ಸಿದ್ದರಾಮಯ್ಯ ಸಮನ್ವಯ ಸಮಿತಿ ಅಧ್ಯಕ್ಷ

ಮೈತ್ರಿ ಸರ್ಕಾರ ಸುಗಮವಾಗಿ ನಡೆಸಲು ಸಮನ್ವಯ ಮತ್ತು ಉಸ್ತುವಾರಿ ಸಮಿತಿಯನ್ನು ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ರಚಿಸಲಾಗಿದೆ. ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಅಲಿ ಸಮಿತಿ ಸಂಚಾಲಕ. ಪ್ರತಿ ತಿಂಗಳಿಗೊಮ್ಮೆ ಸಮಿತಿ ಸಭೆ ಸೇರಲಿದೆ. ಸಮಿತಿ ಸದಸ್ಯರು: ಎಚ್‌.ಡಿ.ಕುಮಾರಸ್ವಾಮಿ, ಜಿ.ಪರಮೇಶ್ವರ, ಕೆ.ಸಿ.ವೇಣುಗೋಪಾಲ್‌.

* ಖಾತೆ ಹಂಚಿಕೆಯಲ್ಲಿ ಜೆಡಿಎಸ್ ಮೇಲುಗೈ ಸಾಧಿಸಿದೆ ಎಂಬುದು ಸರಿಯಲ್ಲ

–ಸಿದ್ದರಾಮಯ್ಯ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ

* ಪರಸ್ಪರ ಸೌಹಾರ್ದದಿಂದ ಖಾತೆ ಹಂಚಿಕೆ ಮಾಡಿಕೊಂಡಿದ್ದೇವೆ

–ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ 

* ರಾಷ್ಟ್ರದ ಜನರ ಹಿತಕ್ಕಾಗಿ ಕಾಂಗ್ರೆಸ್‌– ಜೆಡಿಎಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ

–ಕೆ.ಸಿ.ವೇಣುಗೋಪಾಲ್‌, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ

ಮುಖ್ಯಾಂಶಗಳು

* ಸಮ್ಮಿಶ್ರ ಸರ್ಕಾರಕ್ಕೆ 4 ಅಂಶಗಳ ಸೂತ್ರದ ಒಪ್ಪಂದ

* ರಾಹುಲ್‌ ಅಣತಿಗೆ ಮಣಿದ ಕಾಂಗ್ರೆಸ್‌ ನಾಯಕರು

* ಹಣಕಾಸು ಖಾತೆ ಕೊನೆಗೂ ಬಿಟ್ಟುಕೊಟ್ಟ ಸಿದ್ದರಾಮಯ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT