ಭಾರತ–ಚೀನಾ ಒಂದಾದರೆ ಭವಿಷ್ಯ ಉಜ್ವಲ

7
ಮೋದಿ–ಸಿಂಗಪುರ ಪ್ರಧಾನಿ ಲೀ ಮಾತುಕತೆ

ಭಾರತ–ಚೀನಾ ಒಂದಾದರೆ ಭವಿಷ್ಯ ಉಜ್ವಲ

Published:
Updated:
ಭಾರತ–ಚೀನಾ ಒಂದಾದರೆ ಭವಿಷ್ಯ ಉಜ್ವಲ

ಸಿಂಗಪುರ: ಭಾರತ ಮತ್ತು ಚೀನಾ ಪರಸ್ಪರ ನಂಬುಗೆ ಮತ್ತು ವಿಶ್ವಾಸದಿಂದ ಒಗ್ಗೂಡಿ ಕೆಲಸ ಮಾಡಿದರೆ ಏಷ್ಯಾ ಮತ್ತು ಇಡೀ ವಿಶ್ವಕ್ಕೆ ಉಜ್ವಲ ಭವಿಷ್ಯ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಗಡಿ ಸಮಸ್ಯೆ ಸೇರಿದಂತೆ ಇನ್ನುಳಿದ ಸವಾಲುಗಳನ್ನು ನಿಭಾಯಿಸುವಲ್ಲಿ ಎರಡೂ ರಾಷ್ಟ್ರಗಳು ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಬುದ್ಧತೆ ತೋರುತ್ತಿವೆ ಎಂದು ಅವರು ಶ್ಲಾಘಿಸಿದ್ದಾರೆ.

ಶುಕ್ರವಾರ ಜರುಗಿದ ಶಾಂಗ್ರಿಲಾ ಶೃಂಗಸಭೆಯಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ‘ನಮ್ಮ ದ್ವಿಪಕ್ಷೀಯ ಸಂಬಂಧ ಎಲ್ಲ ಕ್ಷೇತ್ರಗಳಿಗೂ ವಿಸ್ತರಿಸುತ್ತಿದೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

‘ಭಾರತ–ಚೀನಾ ದ್ವಿಪಕ್ಷೀಯ ಮತ್ತು ವಾಣಿಜ್ಯ ಸಂಬಂಧ ಉತ್ತಮಗೊಳ್ಳುತ್ತಿದೆ. ಚೀನಾದೊಂದಿಗೆ ಭಾರತಕ್ಕಿರುವ ಗಾಢ ಸಂಬಂಧ ಬೇರೆ ಯಾವ ರಾಷ್ಟ್ರದ ಜತೆಗೂ ಇಲ್ಲ’ ಎಂದರು.

ಒಂದು ಕಾಲಕ್ಕೆ ಪರಸ್ಪರ ಬದ್ಧ ವೈರಿಗಳಾಗಿದ್ದ ಏಷ್ಯಾದ ರಾಷ್ಟ್ರಗಳು ಸಹಕಾರ ಮಂತ್ರ ಪಠಿಸುತ್ತಿವೆ. ವೈರತ್ವದ ನೆರಳಲ್ಲಿ ನಲುಗಿದ್ದ ಏಷ್ಯಾ ಈಗ ಸಹಕಾರದ ಏಷ್ಯಾ ಆಗಿ ರೂಪುಗೊಳ್ಳುತ್ತಿದೆ. 21ನೇ ಶತಮಾನ ಏಷ್ಯಾದ ಶತಮಾನವಾಗಿದೆ ಎಂದು ಹೇಳಿದ್ದಾರೆ.

ಕೇವಲ 300 ವರ್ಷಗಳಿಂದ ಈಚೆಗೆ ಪಾಶ್ಚಾತ್ಯ ರಾಷ್ಟ್ರಗಳು ಪ್ರಾಬಲ್ಯ ಸಾಧಿಸಿವೆ. ಇತಿಹಾಸದ ಪುಟ ತಿರುವಿದರೆ ಏಷ್ಯಾದ ಎರಡು ಪ್ರಬಲ ರಾಷ್ಟ್ರಗಳಾದ ಭಾರತ ಮತ್ತು ಚೀನಾ ಹೆಸರು ಮಾತ್ರ ಜಾಗತಿಕ ವಾಣಿಜ್ಯ ವಹಿವಾಟಿನಲ್ಲಿ ಮುಂಚೂಣಿಯಲ್ಲಿರುವುದನ್ನು ಕಾಣಬಹುದು ಎಂದರು.

ಎಂಟು ಒಪ್ಪಂದಗಳಿಗೆ ಸಹಿ: ಇದಕ್ಕೂ ಮೊದಲು ಭಾರತ ಮತ್ತು ಸಿಂಗಪುರ, ಆರ್ಥಿಕ ಸಂಬಂಧ ಸುಧಾರಣೆ ಮತ್ತು ಸೇನಾ ಸಹಕಾರ ಬಲವರ್ಧನೆ ಸೇರಿ

ದಂತೆ ಎಂಟು ಒಪ್ಪಂದಗಳಿಗೆ ಸಹಿ ಹಾಕಿವೆ.

ಎರಡೂ ರಾಷ್ಟ್ರಗಳ ಹಿತಾಸಕ್ತಿಗೆ ಸಂಬಂಧಿಸಿದ ಪ್ರಾದೇಶಿಕ ಮತ್ತು ಜಾಗತಿಕ ವಿದ್ಯಮಾನಗಳ ಬಗ್ಗೆ ಮೋದಿ ಮತ್ತು ಸಿಂಗಪುರ ಪ್ರಧಾನಿ ಲೀ ಸಿಯೆನ್‌ ಲೂಂಗ್‌ ಚರ್ಚಿಸಿದರು.

ಪ್ರಾದೇಶಿಕ ಸಾಗರಗಡಿ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದ ಮೋದಿ, ಇಂಡೋ–ಪೆಸಿಫಿಕ್‌ ಪ್ರದೇಶ ಮುಕ್ತ, ಸ್ವತಂತ್ರವಾಗಿರಬೇಕು ಎಂದು ಭಾರತ ಬಯಸುತ್ತದೆ ಎಂದು ಮೋದಿ ತಿಳಿಸಿದರು.

ನೌಕಾದಳಗಳ ಸರಕು ಸಾಗಣೆ ಮತ್ತು ಇಂಡೊ–ಪೆಸಿಫಿಕ್‌ ಪ್ರದೇಶದಲ್ಲಿ ಮುಕ್ತ ಮತ್ತು ಸ್ನೇಹಪರ ವಾಣಿಜ್ಯ ಮತ್ತು ಸಾಗರನೀತಿ ಅಳವಡಿಕೆಗೆ ಇಬ್ಬರೂ ಒಪ್ಪಿಗೆ ಸೂಚಿಸಿದರು.

ಎರಡೂ ರಾಷ್ಟ್ರಗಳ ನಿಯೋಗಗಳು ಪಾಲ್ಗೊಂಡಿದ್ದ ಸಮಗ್ರ ಆರ್ಥಿಕ ಸಹಕಾರ ಒಪ್ಪಂದದ (ಸಿಇಸಿಎ) ಎರಡನೇ ಪರಿಶೀಲನೆ ಸಭೆಯಲ್ಲಿ ವಾಣಿಜ್ಯ ವಹಿವಾಟು ಮತ್ತು ಹೂಡಿಕೆಗೆ ಸಂಬಂಧಿಸಿದಂತೆ ಹಲವು ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು.

‘ತಂತ್ರಜ್ಞಾನದಲ್ಲಿದೆ ಪರಿಹಾರ’

ಮಾನವೀಯ ಮೌಲ್ಯ ಹೊಂದಿದ ಸಂಶೋಧನೆ ಮತ್ತು ತಂತ್ರಜ್ಞಾನದ ನೆರವಿನಿಂದ 21ನೇ ಶತಮಾನದ ಜಾಗತಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಮೋದಿ ಆಶಯ ವ್ಯಕ್ತಪಡಿಸಿದ್ದಾರೆ.

ಸಿಂಗಪುರದ ಪ್ರತಿಷ್ಠಿತ ನಾನ್‌ಯಾಂಗ್‌ ತಾಂತ್ರಿಕ ವಿಶ್ವವಿದ್ಯಾಲಯದ (ಎನ್‌ಟಿಯು) ವಿದ್ಯಾರ್ಥಿಗಳ ಜತೆ ಸಂವಾದದಲ್ಲಿ ಅವರು ಮಾತನಾಡಿದರು.

ತಂತ್ರಜ್ಞಾನ ವಿಶ್ವದ ಲಕ್ಷಾಂತರ ಜನರಿಗೆ ಇಂದು ಧ್ವನಿ ಒದಗಿಸಿದೆ. ಸಾಕಷ್ಟು ಸಾಮಾಜಿಕ ಅಡ್ಡಗೋಡೆಗಳನ್ನು ಕೆಡವಿದೆ ಎಂದರು.

* ಮುಂಬರುವ ದಿನಗಳಲ್ಲಿ ಸೈಬರ್‌ ದಾಳಿ, ಭಯೋತ್ಪಾದನೆ, ಮೂಲಭೂತವಾದದ ವಿರುದ್ಧ ಹೋರಾಟದಲ್ಲಿ ಭಾರತ ಮತ್ತು ಸಿಂಗಪುರ ಕೈಜೋಡಿಸಲಿವೆ

-ನರೇಂದ್ರ ಮೋದಿ, ಪ್ರಧಾನಿ

ಮುಖ್ಯಾಂಶಗಳು

* ಮೂರು ದಿನಗಳ ಪ್ರವಾಸಕ್ಕಾಗಿ ಇಂಡೊನೇಷ್ಯಾ, ಮಲೇಷ್ಯಾದಿಂದ ಗುರುವಾರ ಸಿಂಗಪುರಕ್ಕೆ ಬಂದಿಳಿದ ಪ್ರಧಾನಿ

* ಸಿಂಗಪುರ ಅಧ್ಯಕ್ಷರ ಭವನ ಇಸ್ತಾನಾದಲ್ಲಿ ಭವ್ಯ ಸ್ವಾಗತ

* ಅಧ್ಯಕ್ಷೆ ಹಲೀಮಾ ಯಾಕೂಬ್‌ ಜತೆ ಮೋದಿ ಚರ್ಚೆ

* ಸಿಂಗಪುರ ಪ್ರಧಾನಿ ಲೀ ಸಿಯೆನ್‌ ಲೂಂಗ್‌ ಅವರಿಗೆ ಆರನೇ ಶತಮಾನದ ಬುದ್ಧಗುಪ್ತ ಕಲ್ಲಿನ ಮೂರ್ತಿಯ ಪ್ರತಿಕೃತಿಯನ್ನು ಕಾಣಿಕೆ ಕೊಟ್ಟ ಮೋದಿ

* ಸಿಂಗಪುರದ ಮಾಜಿ ರಾಜತಾಂತ್ರಿಕ ಅಧಿಕಾರಿ 80 ವರ್ಷದ ಪ್ರೊ. ಟಾಮಿ ಕೊ ಅವರಿಗೆ ’ಪದ್ಮಶ್ರೀ’ ಪ್ರದಾನ

* ಸಿಂಗಪುರದ ಪ್ರತಿಷ್ಠಿತ ನಾನ್‌ಯಾಂಗ್‌ ತಾಂತ್ರಿಕ ವಿಶ್ವವಿದ್ಯಾಲಯದ (ಎನ್‌ಟಿಯು) ವಿದ್ಯಾರ್ಥಿಗಳ ಜತೆ ಸಂವಾದ

* ಶೈಕ್ಷಣಿಕ ಸಹಭಾಗಿತ್ವ, ಸಂಶೋಧನೆ ಮತ್ತು ಶೈಕ್ಷಣಿಕ ವಿನಿಮಯ ಕಾರ್ಯಕ್ರಮಕ್ಕೆ ಸಿಂಗಪುರದ ಎನ್‌ಟಿಯು ಮತ್ತು ಭಾರತದ ಮುಂಚೂಣಿ ವಿಶ್ವವಿದ್ಯಾಲಯ, ಶಿಕ್ಷಣ ಸಂಸ್ಥೆಗಳ ಮಧ್ಯೆ ಆರು ಒಪ್ಪಂದ

* ಎನ್‌ಟಿಯುಐನಲ್ಲಿ ಸಂಶೋಧನೆಗಳಿಗೆ ಪ್ರೋತ್ಸಾಹಿಸಲು ₹20 ಕೋಟಿ ದತ್ತಿನಿಧಿ ಸ್ಥಾಪಿಸಿದ ಐ.ಟಿ ಉದ್ಯಮಿ ಕ್ರಿಸ್‌ ಗೋಪಾಲಕೃಷ್ಣನ್‌

* ಎನ್‌ಟಿಯುನಲ್ಲಿ ಸಂಶೋಧನೆ ಕೈಗೊಳ್ಳುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಒದಗಿಸಲು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಮತ್ತು ಮದ್ರಾಸ್‌ ಐಐಟಿ ಸಂಸ್ಥೆಗೆ ತಲಾ ₹5 ಕೋಟಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry