ಬುಧವಾರ, ಮಾರ್ಚ್ 3, 2021
29 °C
ಗೌರಿ ಹತ್ಯೆ ಪ್ರಕರಣ: ಕಲಾಸಿಪಾಳ್ಯದ ಶಬ್ಬೀರ್‌ ಎಂಬಾತನಿಂದ ಅಕ್ರಮವಾಗಿ ಪಡೆದಿದ್ದ ನವೀನ್

ಏಳೆಂಟು ವರ್ಷಗಳ ಹಿಂದೆಯೇ ಗುಂಡು ಖರೀದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಏಳೆಂಟು ವರ್ಷಗಳ ಹಿಂದೆಯೇ ಗುಂಡು ಖರೀದಿ

ಬೆಂಗಳೂರು: ಅಕ್ರಮವಾಗಿ ಮದ್ದುಗುಂಡುಗಳನ್ನು ಮಾರಾಟ ಮಾಡುವ ದಂಧೆಯಲ್ಲಿ ತೊಡಗಿದ್ದ ಕೆ.ಟಿ.ನವೀನ್‌ ಕುಮಾರ್ ಅಲಿಯಾಸ್ ಹೊಟ್ಟೆ ಮಂಜ, ಕಲಾಸಿಪಾಳ್ಯದಲ್ಲಿರುವ ‘ಸಿಟಿ ಗನ್‌ ಹೌಸ್‌’ ಅಂಗಡಿಯ ನೌಕರ ಸೈಯ್ಯದ್ ಶಬ್ಬೀರ್ ಎಂಬಾತನಿಂದ ಏಳೆಂಟು ವರ್ಷಗಳ ಹಿಂದೆಯೇ 18 ಗುಂಡುಗಳನ್ನು ಖರೀದಿಸಿ ಇಟ್ಟುಕೊಂಡಿದ್ದ!

ಎಸ್‌ಐಟಿ ಅಧಿಕಾರಿಗಳು ಶಬ್ಬೀರ್‌ನನ್ನು ವಿಚಾರಣೆಗೆ ಒಳಪಡಿಸಿದಾಗ ಈ ಸಂಗತಿ ಗೊತ್ತಾಗಿದೆ. ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಕೊಲ್ಲಲು ಬಂದಿದ್ದ ಶೂಟರ್‌ಗಳಿಗೆ, ನವೀನ್ ಅವೇ ಗುಂಡುಗಳನ್ನು ಕೊಟ್ಟಿದ್ದ ಎಂದು ಪೊಲೀಸರು ಹೇಳಿದ್ದಾರೆ.

‘ಏಳೆಂಟು ವರ್ಷಗಳ ಹಿಂದೆ ನವೀನ್ ನಮ್ಮ ಅಂಗಡಿಗೆ ಬಂದು ₹ 3,500 ಮೌಲ್ಯದ ಎರಡು ಏರ್‌ಗನ್‌ಗಳನ್ನು ಖರೀದಿಸಿದ್ದ. ಅದಾದ ವಾರದ ಬಳಿಕ ಪುನಃ ಬಂದು, ಪಿಸ್ತೂಲ್ ಬೇಕೆಂದಿದ್ದ. ಲೈಸೆನ್ಸ್ ಕೇಳಿದ್ದಕ್ಕೆ, ‘ನನ್ನ ಬಳಿ ಲೈಸೆನ್ಸ್ ಇಲ್ಲ. ಹಂಗೇ ಕೊಡಿ’ ಎಂದಿದ್ದ. ನಾನು ಒಪ್ಪದಿದ್ದಾಗ, ‘ಕನಿಷ್ಠ ಜೀವಂತ ಗುಂಡುಗಳನ್ನಾದರೂ ಕೊಡಿ’ ಎಂದು ದುಂಬಾಲು ಬಿದ್ದಿದ್ದ. ಆ ಸಮಯದಲ್ಲಿ ದುಡ್ಡಿನ ಅವಶ್ಯಕತೆ ಇದ್ದುದರಿಂದ ಬೇರೆಯವರ ಕಡೆಯಿಂದ ಗುಂಡುಗಳನ್ನು ಕೊಡಿಸಲು ಒಪ್ಪಿಕೊಂಡಿದ್ದೆ’ ಎಂದು ಶಬ್ಬೀರ್ ಹೇಳಿಕೆ ನೀಡಿದ್ದಾನೆ.

‘ನಂತರ ಎನ್‌.ಆರ್. ರಸ್ತೆಯ ಸ್ನೇಹಿತ ಅಮ್ಜದ್‌ಗೆ ಗುಂಡುಗಳನ್ನು ಕೊಡಿಸುವಂತೆ ಕೇಳಿದ್ದೆ. ಆತ, 0.32ಎಂಎಂನ 18 ಗುಂಡುಗಳನ್ನು ಯಾರಿಂದಲೋ ತರಿಸಿಕೊಟ್ಟಿದ್ದ. ಅವುಗಳನ್ನು ಅಂಗಡಿಯ ಕೆಇಬಿ ಮೀಟರ್‌ ಬಳಿಯೇ ಇಟ್ಟಿದ್ದೆ. ಒಂದು ದಿನ ಸಂಜೆ ಅಂಗಡಿ ಬಳಿ ಬಂದ ನವೀನ್, ₹ 3,000 ಕೊಟ್ಟು ಆ ಗುಂಡುಗಳನ್ನು ತೆಗೆದುಕೊಂಡು ಹೋಗಿದ್ದ. ಅದರಲ್ಲಿ ₹ 2,000ವನ್ನು ಅಮ್ಜದ್‌ಗೆ ಕೊಟ್ಟು, ಉಳಿದ ಹಣವನ್ನು ನಾನು ಇಟ್ಟುಕೊಂಡಿದ್ದೆ. ಈ ವಿಚಾರ ನನ್ನ ಅಂಗಡಿಯ ಮಾಲೀಕರಿಗೆ ಗೊತ್ತಿರಲಿಲ್ಲ’ ಎಂದು ಶಬ್ಬೀರ್ ಹೇಳಿದ್ದಾನೆ.

‘ಸಭೆ ಬಳಿಕ ಸಂಚು’: ‘2017ನೇ ಆಗಸ್ಟ್ 19 ಮತ್ತು 20ರಂದು ವಿಜಯನಗರದ ಆದಿಚುಂಚನಗಿರಿ ಮಠದಲ್ಲಿ ಹಿಂದೂ ಸಂಘಟನೆಗಳ ಧರ್ಮ ಶಿಕ್ಷಣ ಸಭೆ ಇತ್ತು. ಆ ಕಾರ್ಯಕ್ರಮ ಮುಗಿದ ಬಳಿಕ ನಾನು ಹಾಗೂ ಪ್ರವೀಣ್ ಭೇಟಿಯಾದೆವು. ಗೌರಿ ಲಂಕೇಶ್ ಅವರನ್ನು ಮುಗಿಸುವ ಬಗ್ಗೆ ಚರ್ಚೆ ನಡೆಸಿದ್ದೆವು’ ಎಂದು ನವೀನ್ ಹೇಳಿಕೆ ಕೊಟ್ಟಿರುವುದಾಗಿ ಪೊಲೀಸರು ಹೇಳಿದ್ದಾರೆ.

‘ಗೌರಿ ಹತ್ಯೆ ಪ್ರಕರಣದ 2ನೇ ಆರೋಪಿ ಪ್ರವೀಣ್ ತಲೆಮರೆಸಿಕೊಂಡಿದ್ದಾನೆ’ ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ. ಆದರೆ, ಸಾಹಿತಿ ಭಗವಾನ್ ಅವರ ಹತ್ಯೆಗೆ ಸಂಚು ರೂಪಿಸಿದ್ದ ಪ್ರಕರಣದಲ್ಲಿ ಪೊಲೀಸರು ಈಗಾಗಲೇ ಆತನನ್ನು ಬಂಧಿಸಿದ್ದಾರೆ.

ಕಾಳೆಯೇ ಸೂತ್ರಧಾರ...

‘2017ರ ಜೂನ್‌ನಲ್ಲಿ ಬೆಳಗಾವಿಗೆ ಬಂದಿದ್ದ ಮಹಾರಾಷ್ಟ್ರದ ಅಮೋಲ್ ಕಾಳೆ ಅಲಿಯಾಸ್ ಬಾಯ್‌ಸಾಬ್ ಹಾಗೂ ನಿಹಾಲ್ ಅಲಿಯಾಸ್ ದಾದಾ, ‘ಸ್ವೀಕಾರ್’ ಹೋಟೆಲ್‌ನಲ್ಲಿ ತಂಗಿದ್ದರು. ವಿಜಯಪುರದ ಮನೋಹರ್ ಯಡವೆ ಅಲಿಯಾಸ್ ಮನೋಜ್‌ನನ್ನು (ಪೊಲೀಸ್ ವಶದಲ್ಲಿದ್ದಾನೆ) ಹೋಟೆಲ್‌ಗೆ ಕರೆಸಿಕೊಂಡಿದ್ದ ಆರೋಪಿಗಳು, ಗೌರಿ ಲಂಕೇಶ್ ಅವರ ಚಲನವಲನಗಳ ಮೇಲೆ ನಿಗಾ ಇಡುವಂತೆ ಸೂಚಿಸಿದ್ದರು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರನಾದ ಕಾಳೆ, ತನ್ನ 18ನೇ ವಯಸ್ಸಿನಿಂದಲೂ ಹಿಂದೂಪರ ಹೋರಾಟಗಳಲ್ಲಿ ಸಕ್ರಿಯನಾಗಿದ್ದ. ವೃತ್ತಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು, ಸಮಾನ ಮನಸ್ಕರನ್ನು ಸೇರಿಸಿ ಮಹಾರಾಷ್ಟ್ರದಲ್ಲೇ ಸಂಘಟನೆ ಕಟ್ಟಿದ್ದ. ಆತನೇ ಗೌರಿ ಹತ್ಯೆಯ ಸೂತ್ರಧಾರ ಎಂಬುದು ಈವರೆಗಿನ ತನಿಖೆಯಿಂದ ಗೊತ್ತಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.