ಕಾರಿಡಾರ್ ಯೋಜನೆ: ಶನಿ ದೇಗುಲ ತೆರವಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ

7

ಕಾರಿಡಾರ್ ಯೋಜನೆ: ಶನಿ ದೇಗುಲ ತೆರವಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ

Published:
Updated:

ಬೆಂಗಳೂರು: ‘ಮೆಜೆ‌‌ಸ್ಟಿಕ್ ಸಮೀಪದ ರೈಲು ನಿಲ್ದಾಣದ ಬಳಿ ಓಕಳೀಪುರಂ ಜಂಕ್ಷನ್‌ನಲ್ಲಿ ಕೈಗೊಂಡಿರುವ ಕಾರಿಡಾರ್ ಯೋಜನೆಗೆ, ಅಲ್ಲಿರುವ ಶನಿ ಮಹಾತ್ಮ ದೇವಸ್ಥಾನ ಅಡ್ಡಿಯಾಗಿದ್ದು ಅದನ್ನು ತೆರವುಗೊಳಿಸಲು ಬಿಬಿಎಂಪಿಗೆ ನಿರ್ದೇಶಿಸಬೇಕು’ ಎಂದು ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ಈ ಸಂಬಂಧ ಮತ್ತಿಕೆರೆ ನಿವಾಸಿ ಕೆ.ಎಸ್.ಸುಬ್ರಹ್ಮಣ್ಯನ್ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ, ‘ಈ ಕುರಿತಂತೆ ಬಿಬಿಎಂಪಿ ಹಾಗೂ ರೈಲ್ವೆ ಸಚಿವಾಲಯದಿಂದ ಇನ್ನಷ್ಟು ಮಾಹಿತಿ ಸಂಗ್ರಹಿಸಿ ನ್ಯಾಯಾಲಯಕ್ಕೆ ಒದಗಿಸಿ’ ಎಂದು ಅರ್ಜಿದಾರರ ಪರ ವಕೀಲರಿಗೆ ಸೂಚಿಸಿ ವಿಚಾರಣೆ ಮುಂದೂಡಿದೆ.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಎಸ್.ಬಸವರಾಜ್, ‘ಓಕಳೀಪುರಂ ಜಂಕ್ಷನ್‌ ಬಳಿ ವಾಹನ ದಟ್ಟಣೆ ಜಾಸ್ತಿ ಇರುತ್ತದೆ. ಹೀಗಾಗಿ ವಾಹನಗಳ ಸುಗಮ ಸಂಚಾರಕ್ಕಾಗಿ ₹ 200 ಕೋಟಿ ವೆಚ್ಚದಲ್ಲಿ ರೈಲ್ವೆ ಸಚಿವಾಲಯ ಹಾಗೂ ಪಾಲಿಕೆ ಜಂಟಿಯಾಗಿ ಕಾರಿಡಾರ್ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಿವೆ’ ಎಂದರು.

‘ಕಾರಿಡಾರ್ ಕಾಮಗಾರಿಗೆ ಅಡ್ಡಿಯಾಗುತ್ತಿರುವ ದೇವಾಲಯ ತೆರವುಗೊಳಿಸಲು ಕೆಲವು ಕಾಣದ ಕೈಗಳು ಅಡ್ಡಿಪಡಿಸುತ್ತಿವೆ’ ಎಂದು ಆಕ್ಷೇಪಿಸಿದರು.

‘ಕೆಲವು ವರ್ಷಗಳ ಹಿಂದೆ ಯಾರೋ ಇಲ್ಲಿ ಒಂದು ಶನಿ ದೇವರ ಫೋಟೊ ತಂದಿಟ್ಟಿದ್ದರು. ನಂತರ ಈ ಸ್ಥಳದಲ್ಲಿ ಅನಧಿಕೃತವಾಗಿ ದೇವಾಲಯ ನಿರ್ಮಿಸಲಾಗಿದೆ. ಇದರ ತೆರವಿಗೆ ಪಾಲಿಕೆ ಹಾಗೂ ರೈಲ್ವೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದರು.

‘ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗುವ ದೇವಾಲಯಗಳನ್ನು ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್‌ ತೀರ್ಪು ಇದೆ. ಅದರನ್ವಯ ಈ ದೇವಾಲಯವನ್ನೂ ತೆರವುಗೊಳಿಸಲು ಪಾಲಿಕೆ ಹಾಗೂ ರೈಲ್ವೆ ಅಧಿಕಾರಿಗಳಿಗೆ ನಿರ್ದೇಶಿಸಬೇಕು’ ಎಂದು ಬಸವರಾಜ್‌ ಕೋರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry