ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಲ್‌ ಬಾಕಿ: ಕತ್ತಲಲ್ಲೇ ಬೀದಿಗಳು

ಬೆಸ್ಕಾಂ, ಬೀದಿದೀಪ ನಿರ್ವಾಹಕರಿಗೆ ಹಣ ಪಾವತಿಸದ ಬಿಬಿಎಂಪಿ
Last Updated 1 ಜೂನ್ 2018, 19:53 IST
ಅಕ್ಷರ ಗಾತ್ರ

ಬೆಂಗಳೂರು: ಬೀದಿ ದೀಪಗಳ ವಿದ್ಯುತ್‌ ಬಿಲ್‌ ಹಾಗೂ ನಿರ್ವಾಹಕರ ಹಣ ಪಾವತಿಸದಿರುವುದರಿಂದ ನಗರದ ಮುಖ್ಯ ರಸ್ತೆಗಳು, ಬಡಾವಣೆಗಳು ಕತ್ತಲಲ್ಲೇ ಉಳಿಯುವಂತಾಗಿದೆ.

‘ಬಿಬಿಎಂಪಿಯು ಬೀದಿ ದೀಪ ಹಾಗೂ ನೀರು ಪೂರೈಕೆಗೆ ಸಂಬಂಧಿಸಿ ₹ 208 ಕೋಟಿ ಬಿಲ್‌ ಮೊತ್ತವನ್ನು ಬೆಸ್ಕಾಂಗೆ ಪಾವತಿಸಬೇಕಿದೆ. ಇದರಲ್ಲಿ  ₹ 167 ಕೋಟಿಯಷ್ಟು ಮೊತ್ತ ಬೀದಿ ದೀಪಗಳ ವಿದ್ಯುತ್‌ ಬಳಕೆಯದ್ದೇ ಆಗಿದೆ. ಈ ಬಗ್ಗೆ ನೋಟಿಸ್‌ ನೀಡಲು ನಿರ್ಧರಿಸಿದ್ದೇವೆ’ ಎಂದು ಬೆಸ್ಕಾಂ ಗ್ರಾಹಕ ಸಂಪರ್ಕ ವಿಭಾಗಗಳ ಮಹಾಪ್ರಬಂಧಕಿ ಎನ್‌.ಜಯಂತಿ ಹೇಳಿದರು.

‘ಬೀದಿ ದೀಪ ನಿರ್ವಹಿಸುವ ಗುತ್ತಿಗೆದಾರರಿಗೆ ಬಿಬಿಎಂಪಿ ಕಳೆದ ಡಿಸೆಂಬರ್‌ನಿಂದ ಹಣ ಪಾವತಿಸಿಲ್ಲ. ₹ 30 ಕೋಟಿ ಹಣ ಬಾಕಿ ಉಳಿಸಿಕೊಂಡಿದೆ. ಈ ಕೆಲಸ ಮಾಡುವ 40ರಿಂದ 50 ಗುತ್ತಿಗೆದಾರರಿಗೆ ನಾವು ಹಣ ಪಾವತಿಸಬೇಕಿದೆ. ಎಲ್ಲವನ್ನೂ ಆನ್‌ಲೈನ್‌ ಮೂಲಕ ಪಾವತಿಸಬೇಕಿರುವುದರಿಂದ ಇದಕ್ಕೆ ಕೆಲಕಾಲ ಬೇಕಾಗುತ್ತದೆ. ಎಲ್ಲ ಬಿಲ್‌ ಸಂಬಂಧಿತ ಪ್ರಕ್ರಿಯೆ ಮುಗಿದಿದೆ. ಆಯುಕ್ತರ ಒಪ್ಪಿಗೆ ಬೇಕಾಗಿದೆ’ ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಬೀದಿ ದೀಪಗಳಿಗಾಗಿ ಪ್ರತಿ ತಿಂಗಳು ಬಿಬಿಎಂಪಿ ₹ 12– 13 ಕೋಟಿ ವೆಚ್ಚ ಮಾಡುತ್ತಿದೆ. ಬಾಕಿ ಉಳಿದ ಮೊತ್ತವನ್ನು ಸಾಧ್ಯವಾದಷ್ಟು ಬೇಗ ಪಾವತಿಸುತ್ತೇವೆ’ ಎಂದು ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದರು.

ಮಳೆ ಬಂದಾಗ ವಿದ್ಯುತ್‌ ಕಂಬಗಳು ಉರುಳಿ ಬೀಳುವುದು, ಬಿದ್ದ ಕಂಬಗಳನ್ನು ಮರುಸ್ಥಾಪನೆ ಮಾಡದಿರುವುದೂ ಈ ಸಮಸ್ಯೆಗೆ ಕಾರಣ ಎಂದು ಸ್ಥಳೀಯರು ಹೇಳಿದ್ದಾರೆ. ಬಸವೇಶ್ವರ ನಗರ, ಥಣಿಸಂದ್ರ, ಯಮಲೂರು ಜಂಕ್ಷನ್‌, ಹಳೇ ವಿಮಾನ ನಿಲ್ದಾಣ ರಸ್ತೆಗಳ ಅಕ್ಕಪಕ್ಕ ಬೀದಿ ದೀಪಗಳಿಲ್ಲ. ಅಂಗಡಿಗಳ ದೀಪಗಳಿಂದ ಹೊರ ಹೊಮ್ಮುವ ಬೆಳಕೇ ಇಲ್ಲಿನ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ನಿಭಾಯಿಸಿದೆ. 

ನಗರದ ಮುಖ್ಯ ರಸ್ತೆಗಳು, ಹೊರವರ್ತುಲ ರಿಂಗ್‌ ರಸ್ತೆಯ ಉಪ ಮಾರ್ಗಗಳ ಪ್ರದೇಶಗಳಲ್ಲಿ ಸಮಸ್ಯೆ ಉಲ್ಬಣಿಸಿದೆ. ವಿಶೇಷವಾಗಿ ಇಬ್ಬಲೂರು ಜಂಕ್ಷನ್‌ನಿಂದ ಕಾಡುಬೀಸನಹಳ್ಳಿ, ಸರ್ಜಾಪುರ ರಸ್ತೆಗಳು ರಾತ್ರಿ ವೇಳೆ ಕತ್ತಲಲ್ಲೇ ಉಳಿದಿವೆ. ಹೀಗಾಗಿ ಈ ರಸ್ತೆಗಳಲ್ಲಿ ಸಂಚರಿಸುವುದು ಕಷ್ಟ.

ಥಣಿಸಂದ್ರದ ನಿವಾಸಿ ಎ.ರವೀನಾ ಅವರು ಹೇಳುವಂತೆ, ‘ಈ ಪ್ರದೇಶದಲ್ಲಿರುವ 10 ಬೀದಿ ದೀಪಗಳ ಪೈಕಿ ಒಂದು ಮಾತ್ರ ಉರಿಯುತ್ತಿದೆ. ರಾತ್ರಿ ವೇಳೆ ಮಹಿಳೆಯರು ಈ ಮಾರ್ಗದಲ್ಲಿ ಸಂಚರಿಸುವುದು ಕಷ್ಟ. ಪುಂಡರು, ಕುಡುಕರ ಹಾವಳಿ ವಿಪರೀತವಾಗಿದೆ. ಈ ಬಗ್ಗೆ ಪಾಲಿಕೆಗೆ ದೂರು ನೀಡಿದರೂ ಪ್ರಯೋಜನ ಆಗಿಲ್ಲ’.

ಬಸವೇಶ್ವರ ನಗರದಲ್ಲಿಯೂ ಬೀದಿ ದೀಪಗಳ ಸಮಸ್ಯೆ ಇದೆ. ಇಲ್ಲೇ ಸಮೀಪ ಎಟಿಎಂ ಇದೆ. ಆದರೆ, ಯಾವುದೇ ಭದ್ರತೆ ಇಲ್ಲ ಎಂದು ವಿಜಯ ಕುಮಾರ್ ಆತಂಕ ವ್ಯಕ್ತಪಡಿಸಿದರು.

ಬೀದಿ ದೀಪಗಳ ಕೆಟ್ಟ ಪರಿಸ್ಥಿತಿಯ ಬಗ್ಗೆ ಕೈಕೊಂಡ್ರಹಳ್ಳಿಯ ನಿವಾಸಿ ಆನಿಂದಿತಾ ನಾಯಕ್‌ ಅವರು ಅಧ್ಯಯನಕ್ಕೆ ಮುಂದಾದರು. ಗೋ ಮ್ಯಾಪ್‌ ಆ್ಯಪ್‌ ಮೂಲಕ ಅವರು, ಉರಿಯುತ್ತಿರುವ ಮತ್ತು ಕೆಟ್ಟುಹೋದ ಬೀದಿ ದೀಪಗಳನ್ನು ಗುರುತಿಸಿ ಆನ್‌ಲೈನ್‌ನಲ್ಲಿ ಪ್ರಕಟಿಸಿ ಗಮನ ಸೆಳೆಯು ತ್ತಿದ್ದರು. ಈ ವೇಳೆ, ಹೊರವರ್ತುಲ ರಸ್ತೆಯಲ್ಲಿರುವ 660 ಬೀದಿ ದೀಪಗಳ ಪೈಕಿ ಶೇ 38ರಷ್ಟು ಮಾತ್ರ ಸರಿಯಾಗಿದ್ದವು. ಆದರೆ, ಈ ಪರಿಶ್ರಮಕ್ಕೆ ಬಿಬಿಎಂಪಿಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಎಂದು ಆನಿಂದಿತಾ ಬೇಸರಿಸಿದರು.

ಬಿಬಿಎಂಪಿಯು ಫಿಕ್ಸ್‌ಮೈ ಸ್ಟ್ರೀಟ್‌ ಆ್ಯಪ್‌ ಮೂಲಕ ನಾಗರಿಕರ ಸಮಸ್ಯೆಗಳ ಬಗ್ಗೆ ದೂರು ದಾಖಲಿಸಲು ಆನ್‌ಲೈನ್‌ ವ್ಯವಸ್ಥೆ ರೂಪಿಸಿತ್ತು. ಮಾರ್ಚ್‌ 2018ರವರೆಗೆ ವಿದ್ಯುತ್‌ ಸಂಬಂಧಿತ 3,201 ದೂರುಗಳು ಬಂದಿದ್ದವು. ಅವುಗಳ ಪೈಕಿ 2,411 ಸಮಸ್ಯೆಗಳನ್ನು ನಿವಾರಿಸಲಾಗಿದೆ. 790 ಸಮಸ್ಯೆಗಳನ್ನು ಇನ್ನಷ್ಟೇ ಬಗೆಹರಿಸಬೇಕಿದೆ ಎಂದು ಬಿಬಿಎಂಪಿ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT