ನಾಯಿ ಸಾಕಲು ಲೈಸೆನ್ಸ್‌ ಕಡ್ಡಾಯ!

7
ನಿಯಮ ರೂಪಿಸಿರುವ ಬಿಬಿಎಂಪಿ: ಸರ್ಕಾರದ ಅಸ್ತು

ನಾಯಿ ಸಾಕಲು ಲೈಸೆನ್ಸ್‌ ಕಡ್ಡಾಯ!

Published:
Updated:

ಬೆಂಗಳೂರು: ನಾಯಿ ಮಾಲೀಕರೇ ಎಚ್ಚರ! ಇನ್ನು ಮುಂದೆ ನಾಯಿ ಸಾಕಲು ವಾರ್ಷಿಕ ₹110 ಪರವಾನಗಿ ಶುಲ್ಕ ಪಾವತಿ ಕಡ್ಡಾಯ. ಅಲ್ಲದೆ, ತಪ್ಪದೆ ಸಂತಾನ ಶಕ್ತಿಹರಣ ಚಿಕಿತ್ಸೆ ಮಾಡಿಸಬೇಕು. ಈ ನಿಯಮ ಉಲ್ಲಂಘಿಸಿದರೆ ₹ 1 ಸಾವಿರ ದಂಡ ಕಟ್ಟಬೇಕು. ಅಷ್ಟೇ ಅಲ್ಲ, ನಿಮ್ಮ ಮುದ್ದಿನ ನಾಯಿಯನ್ನು ಕಳೆದು ಕೊಳ್ಳಬೇಕಾಗುತ್ತದೆ!

ಹೀಗೊಂದು ನಿಯಮವನ್ನು ಬಿಬಿಎಂಪಿ ಹೊರಡಿಸಿದೆ. ಅದಕ್ಕೆ ರಾಜ್ಯ ಸರ್ಕಾರ ಅಸ್ತು ಎಂದಿದೆ. ಆಯುಕ್ತರ ಸಹಿಯೊಂದೇ ಬಾಕಿ ಇದೆ. ಒಂದೆರಡು ದಿನಗಳಲ್ಲಿ ಈ ನಿಯಮ ಜಾರಿಗೆ ಬರಲಿದೆ.

ನಿಯಮಗಳೇನು: ಫ್ಲ್ಯಾಟ್‌ಗಳಲ್ಲಿರುವವರು ಒಂದು ನಾಯಿ, ಮನೆಗಳಲ್ಲಿರುವವರು ಗರಿಷ್ಠ ಮೂರು ನಾಯಿ ಸಾಕಲು ಅವಕಾಶವಿದೆ. ಹೆಚ್ಚು ನಾಯಿ ಸಾಕಿದರೆ, ಬಿಬಿಎಂಪಿ ನೋಟಿಸ್‌ ಕೊಡಲಿದೆ. ನಿಗದಿತ ಅವಧಿಯೊಳಗೆ ನೋಟಿಸ್‌ಗೆ ಉತ್ತರಿಸಬೇಕು. ನಿಯಮ ಉಲ್ಲಂಘಿಸುವವರ ನಾಯಿಯನ್ನು

ವಶಕ್ಕೆ ಪಡೆದು ಬಿಬಿಎಂಪಿಯ ಶ್ವಾನ ಸಂತಾನ ನಿಯಂತ್ರಣ ಕೇಂದ್ರದಲ್ಲಿಟ್ಟು, ಮುಂದೆ  ಹರಾಜು ಹಾಕಲಾಗುತ್ತದೆ ಅಥವಾ ಸಾಕುವವರಿಗೆ ಉಚಿತವಾಗಿ ಕೊಡಲಾಗುತ್ತದೆ.

ನಾಯಿಗಳ ಕುತ್ತಿಗೆಗೆ ಪಟ್ಟಿ ಕಟ್ಟಿ ಕಾಲರ್‌ ಐಡಿ ಹಾಕಬೇಕು. ಇದರಲ್ಲಿ ನಾಯಿಯ ಆರೋಗ್ಯ, ಲಸಿಕೆ ಕೊಡಿಸಿದ್ದು, ಮಾಲೀಕರ ವಿವರ, ಪರವಾನಗಿ ಸಂಖ್ಯೆ ಮೊದಲಾದ ಮಾಹಿತಿ ಇರಬೇಕು. ಬೀದಿ ನಾಯಿಗಳನ್ನು ಹಿಡಿದು ಸಂತಾನ ಶಕ್ತಿಹರಣ ಚಿಕಿತ್ಸೆ ಮಾಡಿ ಮೂಲಸ್ಥಳದಲ್ಲೇ ವಾಪಸ್‌ ಬಿಡಲಾಗುತ್ತದೆ ಎಂದು ಬಿಬಿಎಂಪಿ ಪಶುಪಾಲನಾ ವಿಭಾಗದ ಜಂಟಿ ನಿರ್ದೇಶಕ ಡಾ. ಜಿ.ಆನಂದ್‌ ತಿಳಿಸಿದರು.

2017ರಲ್ಲಿ 405 ನಾಯಿ ಮಾಲೀಕರು ಪರವಾನಗಿ ಪಡೆದಿದ್ದಾರೆ. 100 ಮಂದಿ ಪರವಾನಗಿ ನವೀಕರಣ ಮಾಡಿಸಿಕೊಂಡಿದ್ದಾರೆ. ನಗರದಲ್ಲಿನ ನಾಯಿ ಸಾಕಣೆ ಪ್ರಮಾಣಕ್ಕೆ ಹೋಲಿಸಿದರೆ ಇದು ತೀರಾ ಕಡಿಮೆ. ಪರವಾನಗಿಯನ್ನು ಆನ್‌ಲೈನ್‌ನಲ್ಲಿ ಪಡೆಯಲೂ ಅವಕಾಶವಿದೆ.

ನಾಯಿಗಳಿಂದ ತೊಂದರೆ ಆಗಿದ್ದಲ್ಲಿ ಬಿಬಿಎಂಪಿಗೆ ದೂರು ನೀಡಬಹುದು. ಅದನ್ನು ಆಧರಿಸಿ ಕ್ರಮ ಕೈಗೊಳ್ಳಲಾ ಗುವುದು ಎಂದು ಆನಂದ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry