ಹೆದ್ದಾರಿ ಬದಿ ವಾಹನ ನಿಲುಗಡೆಗೆ ತಡೆ

7
ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದ ನಟ ಚಂದನ್‌ ಕಾರು, ಅಪಘಾತದ ನಂತರ ಎಚ್ಚೆತ್ತ ಪೊಲೀಸರು

ಹೆದ್ದಾರಿ ಬದಿ ವಾಹನ ನಿಲುಗಡೆಗೆ ತಡೆ

Published:
Updated:
ಹೆದ್ದಾರಿ ಬದಿ ವಾಹನ ನಿಲುಗಡೆಗೆ ತಡೆ

ದಾವಣಗೆರೆ: ಇಬ್ಬರು ಕಲಾವಿದರನ್ನು ಬಲಿ ತೆಗೆದುಕೊಂಡ ಅಪಘಾತ ಪ್ರಕರಣದಿಂದ ಎಚ್ಚೆತ್ತ ಪೊಲೀಸ್‌ ಇಲಾಖೆ ಹೆದ್ದಾರಿ ಬದಿ ಅಡ್ಡಾದಿಡ್ಡಿ ವಾಹನ ನಿಲುಗಡೆಗೆ ತಡೆಯೊಡ್ಡಲು ಮುಂದಾಗಿದೆ.

ಇದೇ ಮೇ 24ರ ಮುಂಜಾವಿನಲ್ಲಿ ಬೆಂಗಳೂರಿನಿಂದ ಬೆಳಗಾವಿಗೆ ಹೊರಟಿದ್ದ ಕಾರು ಹರಿಹರ ಸಮೀಪ ರಾಷ್ಟ್ರೀಯ ಹೆದ್ದಾರಿ–4ರ ಬದಿಯಲ್ಲಿ ನಿಂತಿದ್ದ ಲಾರಿಗೆ ಅಪ್ಪಳಿಸಿತ್ತು. ಕಾರ್‌ನಲ್ಲಿದ ನಿರೂಪಕ ಚಂದನ್‌, ಗಾಯಕಿ ಸಂತೋಷಿ ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ದಾವಣಗೆರೆ ಪೊಲೀಸರು, ಹೆದ್ದಾರಿ ಪ್ರಯಾಣವನ್ನು ಸುರಕ್ಷಿತಗೊಳಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

‘ನಿಗದಿತ ಸ್ಥಳ ಹೊರತು‍ಪಡಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಲ್ಲಿಯೂ ವಾಹನಗಳನ್ನು ನಿಲ್ಲಿಸಬಾರದು. ರಾತ್ರಿ ವೇಳೆ ಹಾಗೂ ಮಳೆ ಬರುವಾಗ ರಸ್ತೆ ಬದಿ ವಾಹನಗಳು ನಿಂತಿರುವುದು ಗೊತ್ತೇ ಆಗುವುದಿಲ್ಲ. ಇದರಿಂದ ಅಪಘಾತಗಳಾಗುವ ಸಂಭವ ಹೆಚ್ಚು. ಎಲ್ಲೆಂದರಲ್ಲಿ ವಾಹನ ನಿಲ್ಲಿಸುವುದನ್ನು ತಪ್ಪಿಸಿದರೆ ಅಮಾಯಕರು ಸಾಯುವುದನ್ನು ತಪ್ಪಿಸಬಹುದು’ ಎನ್ನುತ್ತಾರೆ ಹೆದ್ದಾರಿ ಗಸ್ತು ಸಿಬ್ಬಂದಿ.

‘ಈಗಾಗಲೇ ಹೆದ್ದಾರಿ ಗಸ್ತು ವಾಹನಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಇನ್ನಷ್ಟು ಸಿಬ್ಬಂದಿಯನ್ನು ನೀಡಿ, ಹೆದ್ದಾರಿ ಗಸ್ತು ಕರ್ತವ್ಯಕ್ಕೆ ನಿಯೋಜಿಸಲಾಗುವುದು. ರಸ್ತೆ ಬದಿ ಅಕ್ರಮವಾಗಿ ವಾಹನ ನಿಲ್ಲಿಸುವುದಕ್ಕೆ ಕಡಿವಾಣ ಹಾಕಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌ ತಿಳಿಸಿದರು.

ನಟ ಚಂದನ್‌ ಕಾರು ಅಪಘಾತ ಪ್ರಕರಣದಲ್ಲಿ ಚಾಲಕ ಲಾರಿಯನ್ನು ರಸ್ತೆಯ ಅಂಚಿಗೆ ಅಂಟಿಕೊಂಡಂತೇ ನಿಲ್ಲಿಸಿದ್ದ. ಎದುರಿನಿಂದ ಬಂದ ವಾಹನದ ಹೈಬೀಮ್‌ ಬೆಳಕಿನಿಂದಾಗಿ ಚಂದನ್‌ ಕಾರು ಚಾಲಕನಿಗೆ ಲಾರಿ ನಿಂತಿರುವುದು ಕಂಡಿರಲಿಲ್ಲ. ಇನ್ನು ಮುಂದೆ ವಾಹನಗಳನ್ನು ಹೆದ್ದಾರಿಯಿಂದ ಸಾಕಷ್ಟು ಬದಿಗೆ ನಿಲ್ಲಿಸದ ಚಾಲಕರ ವಿರುದ್ಧ ‘ಐಪಿಸಿ 283 ಸೆಕ್ಷನ್‌ (ಸಂಚಾರಕ್ಕೆ ಅಡ್ಡಿಯುಂಟು ಮಾಡುವುದು, ಸಾರ್ವಜನಿಕ ರಸ್ತೆ ಅತಿಕ್ರಮಣ, ಅವೈಜ್ಞಾನಿಕ ಪಾರ್ಕಿಂಗ್)’ ಅಡಿ ಪ್ರಕರಣ ದಾಖಲಿಸಲಾಗುವುದು ಎಂದು ಚೇತನ್‌ ಎಚ್ಚರಿಸಿದರು.

ವಾಹನ ನಿಲುಗಡೆ ಡಾಬಾಗಳ ಬಳಿ ಹೆಚ್ಚು:

ರಾಷ್ಟ್ರೀಯ ಹೆದ್ದಾರಿ ಬದಿ ಇರುವ ಡಾಬಾಗಳ ಬಳಿ ವಾಹನಗಳು ಹೆಚ್ಚಾಗಿ ನಿಲುಗಡೆ ಆಗುತ್ತವೆ. ಪಾರ್ಕಿಂಗ್‌ಗೆ ಸಾಕಷ್ಟು ಸ್ಥಳ ಹೊಂದಿಸಿಕೊಳ್ಳುವುದು ಡಾಬಾಗಳ ಜವಾಬ್ದಾರಿ. ಸರ್ಕಾರದ ಕೆಲವು ನಿಯಮಗಳನ್ನೂ ಡಾಬಾಗಳು ಪಾಲನೆ ಮಾಡಬೇಕು. ಹೆದ್ದಾರಿಯಲ್ಲಿ ಎಲ್ಲೆಂದರಲ್ಲಿ ಗ್ರಾಹಕರ ವಾಹನ ನಿಲುಗಡೆ ಮಾಡಿಸದಂತೆ ಡಾಬಾಗಳ ಮಾಲೀಕರಿಗೂ ಎಚ್ಚರಿಕೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಅಕ್ರಮ ಪರಿಶೀಲನೆಗೆ ಸೂಚನೆ:

ಜಿಲ್ಲಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಎಷ್ಟು ಡಾಬಾಗಳಿಗೆ ಪರವಾನಗಿ ಕೊಡಲಾಗಿದೆ ಎಂಬ ಮಾಹಿತಿ ನೀಡಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ, ಜಿಲ್ಲಾ ಪಂಚಾಯಿತಿ ಸಿಇಒ ಮೂಲಕ ಸೂಚನೆ ನೀಡಲಾಗಿದೆ. ಪಿಡಿಒಗಳು ನೀಡುವ ಮಾಹಿತಿ ಆಧರಿಸಿ, ಅನಧಿಕೃತವಾಗಿ ಸ್ಥಾಪಿಸಿರುವ ಡಾಬಾಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಚೇತನ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ವೇಗದ ಚಾಲನೆಗೂ ಹಾಕಿ ಕಡಿವಾಣ’

‘ರಾಷ್ಟ್ರೀಯ ಹೆದ್ದಾರಿ ವಿಶಾಲವಾಗಿದೆ; ನೇರವಾಗಿಯೂ ಇದೆ. ಪ್ರತ್ಯೇಕ ನಾಲ್ಕು ಲೇನ್‌ಗಳೂ ಇವೆ. ಹೀಗಾಗಿ, ವಾಹನಗಳು ತುಸು ವೇಗವಾಗಿ ಚಲಿಸುತ್ತವೆ. ರಸ್ತೆ ಬದಿ ನಿಲುಗಡೆ ಮಾಡಿದ್ದ ವಾಹನಗಳು ಬೇಗನೆ ಚಾಲಕರ ಗಮನಕ್ಕೆ ಬರುವುದಿಲ್ಲ. ವಾಹನ ನಿಂತಿರುವುದು ಅರಿವಿಗೆ ಬರುವಷ್ಟರಲ್ಲಿ ಕಾಲ ಮಿಂಚಿರುತ್ತದೆ. ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸುವವರ ವಿರುದ್ಧ ಕ್ರಮ ಕೈಗೊಳ್ಳವ ಜತೆಗೆ ಮಿತಿ ಮೀರಿದ ವೇಗದ ಚಾಲನೆಗೂ ಕಡಿವಾಣ ಹಾಕಬೇಕು’ ಎಂದು ಒತ್ತಾಯಿಸುತ್ತಾರೆ ಲಾರಿ ಚಾಲಕ ರಾಜಪ್ಪ.

**

ಅಡ್ಡಾದಿಡ್ಡಿಯಾಗಿ ನಿಲ್ಲುವ ವಾಹನಗಳಿಂದಾಗಿ ಈ ಹಿಂದೆಯೂ ಹೆಚ್ಚಿನ ಸಾವು ನೋವು ಸಂಭವಿಸಿವೆ. ಇಂಥ ದುರ್ಘಟನೆಗಳನ್ನು ಮರುಕಳಿಸದಂತೆ ಪೊಲೀಸ್‌ ಇಲಾಖೆ ಮುನ್ನೆಚ್ಚರಿಕೆ ವಹಿಸಲಿ

ಅಶೋಕ್‌, ಕಾರು ಚಾಲಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry