7
ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ: ಎಸ್ಪಿ ಆರ್‌. ಚೇತನ್‌

81 ಸಾವಿರ ಪ್ರಕರಣ: ₹ 58 ಲಕ್ಷ ದಂಡ

Published:
Updated:
81 ಸಾವಿರ ಪ್ರಕರಣ: ₹ 58 ಲಕ್ಷ ದಂಡ

ದಾವಣಗೆರೆ: ಜಿಲ್ಲೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ವಾಹನಗಳ ಮಾಲೀಕರ ಹಾಗೂ ಚಾಲಕರ ವಿರುದ್ಧ 2018ರ ಮೇ ವರೆಗೆ 81,728 ಪ್ರಕರಣಗಳನ್ನು ದಾಖಲಿಸಲಾಗಿದ್ದು, ₹ 58.31 ಲಕ್ಷ ದಂಡ ವಿಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌ ತಿಳಿಸಿದರು.

‘ಟ್ರಾಫಿಕ್‌ ಆಟೊಮೇಷನ್‌’ ಯೋಜನೆಯಡಿ ‘ಫೀಲ್ಡ್‌ ಟ್ರಾಫಿಕ್‌ ವಯೊಲೇಷನ್‌ ರಿಪೋರ್ಟ್‌’ (ಎಫ್‌ಟಿಆರ್‌ವಿ) ತಂತ್ರಾಂಶದ ಮೂಲಕ ಸಂಚಾರ ಠಾಣೆಗಳ ಪೊಲೀಸರು 2018ರ ಮೇ ವರೆಗೆ 56,127 ಪ್ರಕರಣಗಳನ್ನು ದಾಖಲಿಸಿ, ₹ 57.11 ಲಕ್ಷ ದಂಡ ವಿಧಿಸಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಪೊಲೀಸರಿಗೆ ಮೊಬೈಲ್‌ ಹಾಗೂ ಸ್ಟಿಲ್‌ ಕ್ಯಾಮೆರಾಗಳನ್ನು ನೀಡಲಾಗಿದೆ. ಸಂಚಾರ ನಿಯಮ ಉಲ್ಲಂಘಿಸುವವರ ಫೋಟೊ ತೆಗೆಯುವ ಪೊಲೀಸ್‌ ಸಿಬ್ಬಂದಿ ಎಫ್‌ಟಿಆರ್‌ವಿ ಮೂಲಕ ಪ್ರಕರಣ ದಾಖಲಿಸುತ್ತಾರೆ. ಪೊಲೀಸರು ನಮ್ಮನ್ನು ನೋಡುತ್ತಿಲ್ಲ ಎಂದು ಸಂಚಾರ ನಿಯಮ ಉಲ್ಲಂಘಿಸಬಾರದು. ಪ್ರಮುಖ ಸ್ಥಳಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳ ಮೂಲಕವೂ ಸಂಚಾರ ಉಲ್ಲಂಘಿಸುವವರ ಮೇಲೆ ಕಣ್ಣಿಡಲಾಗಿದೆ. ನಿಯಮ ಉಲ್ಲಂಘಿಸುವವರ ಮನೆಗೇ ನೋಟಿಸ್‌ ಕಳುಹಿಸಲಾಗುತ್ತಿದೆ. ಸಂಚಾರ ನಿಯಮಗಳು ಇರುವುದೇ ವಾಹನ ಚಾಲಕರ ಸುರಕ್ಷತೆಗಾಗಿ ಎಂಬುದನ್ನು ಅರಿತುಕೊಳ್ಳಬೇಕು’ ಎಂದು ತಿಳಿಸಿದರು.

ನಗರದ ಶಾಮನೂರು ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದ ಕಾರಣ ಗುಂಡಿ ವೃತ್ತ ಹಾಗೂ ವಿದ್ಯಾರ್ಥಿಭವನ ವೃತ್ತದಲ್ಲಿ ಟ್ರಾಫಿಕ್‌ ಸಿಗ್ನಲ್‌ಗಳನ್ನು ಸ್ಥಗಿತಗೊಳಿಸಲಾಗಿತ್ತು. ಮತ್ತೆ ಅವುಗಳ ಕಾರ್ಯನಿರ್ವಹಣೆಗೆ ಚಾಲನೆ ನೀಡಲಾಗುವುದು. ಪ್ರಮುಖ ವೃತ್ತಗಳಲ್ಲಿ ಸಂಚಾರ ಠಾಣೆ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದರು.

ನಗರದ ಎಲ್ಲಾ ಬಡಾವಣೆಗಳನ್ನೂ ಸಂಪರ್ಕಿಸುವಂತಹ ರಿಂಗ್‌ ರಸ್ತೆ ವ್ಯವಸ್ಥೆ ಇಲ್ಲದ ಕಾರಣ ಅನಿವಾರ್ಯವಾಗಿ ಸರಕು ಸಾಗಿಸುವ ಭಾರಿ ವಾಹನಗಳ ಪ್ರವೇಶಕ್ಕೆ ಅವಕಾಶ ನೀಡಬೇಕಾಗಿದೆ. ಆದರೆ, ಶಾಲಾ ಅವಧಿಯಲ್ಲಿ ಈ ವಾಹನಗಳ ಪ್ರವೇಶ ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸುವ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಹೇಳಿದರು.

ಟ್ರಾಫಿಕ್‌ ಠಾಣೆಗಳಿಗೆ ಕಟ್ಟಡ:

ದಾವಣಗೆರೆಯ ದಕ್ಷಿಣ ಸಂಚಾರ ಠಾಣೆಗೆ ಕಟ್ಟಡ ನಿರ್ಮಿಸಲು ಎಪಿಎಂಸಿ ಆವರಣದಲ್ಲಿ ನಿವೇಶನ ಬಾಡಿಗೆ ಪಡೆಯಲು ಪ್ರಯತ್ನ ನಡೆಸಲಾಗುತ್ತಿದೆ. ಹಾಗೆಯೇ ಉತ್ತರ ಸಂಚಾರ ಠಾಣೆಗೂ ಅವಶ್ಯವಿರುವ ಕಟ್ಟಡವನ್ನು ಬಾಡಿಗೆಗೆ ಪಡೆಯಲಾಗುವುದು. ಜನರಿಗೂ ಅನುಕೂಲವಾಗಬೇಕು ಹಾಗೂ ಠಾಣೆಯ ಕಾರ್ಯನಿರ್ವಹಣೆಗೂ ಪೂರಕವಾಗಿರುವಂತಹ ಕಟ್ಟಡ ಹುಡುಕಲಾಗುತ್ತಿದೆ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry