ಡಿಸೆಂಬರ್‌ಗೆ ಪೂರ್ಣಗೊಳಿಸಲು ಸೂಚನೆ

7
ಟೆಂಡರ್‌ ಶ್ಯೂರ್‌ ರಸ್ತೆ ಕಾಮಗಾರಿ ಪರಿಶೀಲಿಸಿದ ಜಗದೀಶ ಶೆಟ್ಟರ್‌, ಅರವಿಂದ ಬೆಲ್ಲದ, ಪ್ರಹ್ಲಾದ ಜೋಶಿ

ಡಿಸೆಂಬರ್‌ಗೆ ಪೂರ್ಣಗೊಳಿಸಲು ಸೂಚನೆ

Published:
Updated:

ಹುಬ್ಬಳ್ಳಿ: ವಿದ್ಯಾನಗರದ ಕಾಡಸಿದ್ಧೇಶ್ವರ ಕಾಲೇಜು ಮುಂಭಾಗದಿಂದ ಶಿರೂರು ಪಾರ್ಕ್‌ನ ತೋಳನಕೆರೆವರೆಗೆ ₹ 34 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಟೆಂಡರ್‌ ಶ್ಯೂರ್‌ ರಸ್ತೆ ಕಾಮಗಾರಿಯನ್ನು ಡಿಸೆಂಬರ್‌ ಒಳಗೆ ಪೂರ್ಣಗೊಳಿಸುವಂತೆ ಶಾಸಕ ಜಗದೀಶ ಶೆಟ್ಟರ್‌ ಸೂಚನೆ ನೀಡಿದರು.

ಟೆಂಡರ್‌ ಶ್ಯೂರ್‌ ರಸ್ತೆ ನಿರ್ಮಾಣ ಕಾಮಗಾರಿಯನ್ನು ಶುಕ್ರವಾರ ವೀಕ್ಷಿಸಿದ ಬಳಿಕ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ರಸ್ತೆ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಹಾಗೂ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು.ವೇಗವನ್ನು ಕಾಯ್ದುಕೊಳ್ಳಬೇಕು ಎಂದು ಗುತ್ತಿಗೆದಾರ ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಸ್ತೆ ನಿರ್ಮಾಣಕ್ಕೆ ಅಡಚಣೆಯಾಗಿರುವ 50 ಮರಗಳನ್ನು ಶೀಘ್ರದಲ್ಲೇ ತೆರವುಗೊಳಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಈ ರಸ್ತೆಯಲ್ಲಿ ₹ 1.5 ಕೋಟಿ ಮೊತ್ತದ ಕೇಬಲ್‌ ಅನ್ನು ಈಗಾಗಲೇ ಅಳವಡಿಸಲಾಗಿದ್ದು, ಅದನ್ನು ಈಗ ತೆರವುಗೊಳಿಸಿದರೆ, ಅನಗತ್ಯ ನಷ್ಟವಾಗುತ್ತದೆ. ಹೀಗಾಗಿ, ಅದನ್ನು ತೆರವುಗೊಳಿಸುವ ಬದಲು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಲು ತೀರ್ಮಾನಿಸಲಾಯಿತು.

ಒಂದು ವರ್ಷದಲ್ಲಿ ಪೂರ್ಣ: ಕಮರಿಪೇಟೆಯಿಂದ ಉಣಕಲ್‌ ಕ್ರಾಸ್‌ವರೆಗೆ, ಇಂಡಿಪಂಪ್‌ನಿಂದ ಉಣಕಲ್‌ ಕ್ರಾಸ್‌ವರೆಗೆ ಹಾಗೂ ದೇಸಾಯಿ ಸರ್ಕಲ್‌ನಿಂದ ವಿದ್ಯಾನಗರದ ವರೆಗೆ ₹ 120 ಕೋಟಿ ಕೇಂದ್ರ ರಸ್ತೆ ನಿಧಿಯಲ್ಲಿ(ಸಿಆರ್‌ಎಫ್‌) ನಿರ್ಮಾಣವಾಗುತ್ತಿರುವ ಮೂರೂ ರಸ್ತೆಗಳ ಕಾಮಗಾರಿಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸುವಂತೆ ಸಂಸದ ಪ್ರಹ್ಲಾದ ಜೋಶಿ ಮತ್ತು ಶೆಟ್ಟರ್‌ ಸೂಚಿಸಿದರು.

ಕಿಮ್ಸ್‌ ಹಿಂಭಾಗ ನಿರ್ಮಾಣವಾಗುತ್ತಿರುವ ರಸ್ತೆ ಕೆಲವು ಕಡೆ ಕಿರಿದಾಗಿದೆ. ಒತ್ತುವರಿಯನ್ನೂ ತೆರವುಗೊಳಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ತಕ್ಷಣ ಒತ್ತುವರಿ ತೆರವುಗೊಳಿಸಿ ರಸ್ತೆ ಮತ್ತು ಗಟಾರವನ್ನು ನೇರವಾಗಿ ನಿರ್ಮಿಸಬೇಕು ಎಂದರು.

ಗಟಾರ ಅನ್ನು ಎತ್ತರದಲ್ಲಿ ನಿರ್ಮಿಸುತ್ತಿರುವುದರಿಂದ ಅಲ್ಲಿನ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಪಾದಚಾರಿಗಳ ಸಂಚಾರಕ್ಕೂ ಅಡಚಣೆಯಾಗುತ್ತಿದೆ. ಗಟಾರದ ಎತ್ತರ ತಗ್ಗಿಸಿ ಅನುಕೂಲ ಮಾಡಿಕೊಡಬೇಕು ಎಂದು ಶಾಸಕ ಅರವಿಂದ ಬೆಲ್ಲದ, ಗುತ್ತಿಗೆದಾರರಿಗೆ ಹೇಳಿದರು. ಮಹಾನಗರ ಪಾಲಿಕೆ ಸದಸ್ಯ ಮಹೇಶ ಬುರ್ಲಿ, ಹೆಸ್ಕಾಂ ಪ್ರಧಾನ ವ್ಯವಸ್ಥಾಪಕ(ತಾಂತ್ರಿಕ) ಜಗದೀಶ ಬೆಳಗಲಿ, ಹೆಸ್ಕಾಂ ಹುಬ್ಬಳ್ಳಿ ವಲಯದ ಮುಖ್ಯ ಎಂಜಿನಿಯರ್‌ ಮನೋಹರ ಬೇವಿನಮರದ, ಹೆಸ್ಕಾಂ ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ಟಿ.ಪಿ.ಶೆಟ್ಟಿ, ಹೆಸ್ಕಾಂ ಹುಬ್ಬಳ್ಳಿ ನಗರದ ಕಾರ್ಯನಿರ್ವಾಹಕ ಎಂಜಿನಿಯರ್‌ ಟಿ.ಪಿ.ಶೆಟ್ಟಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಯಮಕನಮರಡಿ, ನಿತ್ಯಾ ರಮೇಶ್‌ ಇದ್ದರು.

ಸರ್ಕಾರ ಇದ್ದೂ ಇಲ್ಲದಂತಿದೆ: ಶೆಟ್ಟರ್‌

ಹುಬ್ಬಳ್ಳಿ: ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದುಹೋಗಿದೆ. ಸಮ್ಮಿಶ್ರ ಸರ್ಕಾರ ಇದ್ದೂ ಇಲ್ಲದಂತಾಗಿದೆ ಎಂದು ಶಾಸಕ ಜಗದೀಶ ಶೆಟ್ಟರ್‌ ಆರೋಪಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ಸರ್ಕಾರಕ್ಕೆ ಜನರ ಬಗ್ಗೆ ಯಾವುದೇ ಕಾಳಜಿ ಇಲ್ಲ. ಕಾಂಗ್ರೆಸ್‌, ಜೆಡಿಎಸ್‌ ಮುಖಂಡರು ಸಚಿವ ಸಂಪುಟ ವಿಸ್ತರಣೆಯ ಗೊಂದಲದಲ್ಲಿ ಮುಳುಗಿದ್ದಾರೆ ಎಂದರು.

ದಿಕ್ಸೂಚಿಯಲ್ಲ: ದೇಶದ ವಿವಿಧ ರಾಜ್ಯಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಉಪಚುನಾವಣೆ ಫಲಿತಾಂಶ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿಯಲ್ಲ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry