ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹು ಬೇಡಿಕೆಯ ‘ಬಿ.ಡಿ.ಎಸ್’

ಧಾರವಾಡದ ಸತ್ತೂರಿನ ಶ್ರೀ ಧರ್ಮಸ್ಥಳ ಮಂಜುನಾಥ ದಂತ ವೈದ್ಯಕೀಯ ಕಾಲೇಜಿನಲ್ಲಿ ಅಧ್ಯಯನಾವಕಾಶ
ಅಕ್ಷರ ಗಾತ್ರ

ಮಾನವನ ರೋಗಗಳಿಗೆ ಬಹುತೇಕ ಮೂಲ ‘ಬಾಯಿ’. ಇದಲ್ಲದೆ, ಬಾಯಿಯ ಸ್ವಚ್ಛತೆ, ಪರಿಸ್ಥಿತಿ ಅವಲೋಕಿಸಿ ರೋಗಪತ್ತೆ ಮಾಡಲು ಸಾಧ್ಯ ಎಂಬುದು ವೈದ್ಯಕೀಯ ಕ್ಷೇತ್ರದಲ್ಲಿ ಕೇಳಿಬರುವ ಮಾತು. ಈ ನಿಟ್ಟಿನಲ್ಲಿ ಬಾಯಿ, ವಸಡು ಹಾಗೂ ಹಲ್ಲುಗಳ ಆರೋಗ್ಯ ರಕ್ಷಣೆಗೆಂದೇ ಇರುವ ವಿಶೇಷ ಕ್ಷೇತ್ರ ‘ದಂತ ವೈದ್ಯಕೀಯ’. ಈ ಕೋರ್ಸ್‌ಗೆ ಹಿಂದೆಯೂ ಬೇಡಿಕೆ ಇತ್ತು, ಇಂದಿಗೂ ಇದೆ, ಮುಂದೆಯೂ ಇರುತ್ತದೆ ಎಂಬುದು ತಜ್ಞರ ಅಭಿಮತ.

ಪಿಯು ವಿಜ್ಞಾನ ಓದಿದ ನಂತರ ಎಂ.ಬಿ.ಬಿ.ಎಸ್ ಕೋರ್ಸ್‌ಗೆ ಇರುವಷ್ಟೇ ಬೇಡಿಕೆ ಬಿ.ಡಿ.ಎಸ್‌ (ಬ್ಯಾಚುಲರ್ ಆಫ್ ಡೆಂಟಲ್‌ ಸರ್ಜರಿ) ಕೋರ್ಸ್‌ಗೂ ಇದೆ. ಹುಬ್ಬಳ್ಳಿ–ಧಾರವಾಡ ಅವಳಿ ನಗರಕ್ಕೆ ಸಂಬಂಧಿಸಿ ಧಾರವಾಡದ ಸತ್ತೂರಿನಲ್ಲಿರುವ ಎಸ್‌.ಡಿ.ಎಂ.ಸಿ.ಡಿ.ಎಸ್ (ಶ್ರೀ ಧರ್ಮಸ್ಥಳ ಮಂಜುನಾಥ ದಂತ ವೈದ್ಯಕೀಯ ಕಾಲೇಜು) ಈ ಕ್ಷೇತ್ರದಲ್ಲಿ ಸ್ನಾತಕ, ಸ್ನಾತಕೋತ್ತರ ಹಾಗೂ ಸಂಶೋಧನಾ ಅಧ್ಯಯನಕ್ಕೆ ಅವಕಾಶ ಕಲ್ಪಿಸಿದ್ದು, ವಿಶ್ವದರ್ಜೆಯ, ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿದೆ.

ಕೋರ್ಸ್‌ ಸ್ವರೂಪ

ಬಿ.ಡಿ.ಎಸ್ ಕೋರ್ಸ್ 4 ಶೈಕ್ಷಣಿಕ ವರ್ಷಗಳ ಅಧ್ಯಯನ ಕ್ರಮ ಹಾಗೂ ಒಂದು ವರ್ಷದ ಇಂಟರ್ನ್‌ಶಿಪ್ ಅವಧಿಯನ್ನು ಹೊಂದಿರುತ್ತದೆ. ಪ್ರತಿ ಶೈಕ್ಷಣಿಕ ವರ್ಷದಲ್ಲಿ 240 ಬೋಧನಾ ದಿನಗಳು ಇರುತ್ತವೆ. ಈ 5 ವರ್ಷದ ಅವಧಿಯಲ್ಲಿ ವಿದ್ಯಾರ್ಥಿಗಳು ಪೂರ್ಣಾವಧಿವರೆಗೆ ಸಂಸ‌್ಥೆ ವ್ಯಾಪ್ತಿಯಲ್ಲಿ ಅಧ್ಯಯನ ನಿರತರಾಗಿರಬೇಕು.

2018–19ನೇ ಶೈಕ್ಷಣಿಕ ವರ್ಷಕ್ಕೆ ಸೀಟುಗಳ ಹಂಚಿಕೆ

ಎಸ್‌ಡಿಎಂ ದಂತ ವೈದ್ಯಕೀಯ ಸಂಸ್ಥೆಯಲ್ಲಿ 2018–19ರ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿ 100 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶವಿದೆ. ಸರ್ಕಾರಿ ಕೋಟಾದಲ್ಲಿ 25 ಸೀಟುಗಳು, ಕಾಮೆಡ್‌– ಕೆ ಕೋಟಾದಲ್ಲಿ 55 ಸೀಟುಗಳು (ತುಳು ಭಾಷಾ ಅಲ್ಪಸಂಖ್ಯಾತರಿಗೆ 36 ಸೀಟುಗಳು, ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 19 ಸೀಟುಗಳು), ಎನ್‌.ಆರ್‌.ಐ, ಪಿ.ಐ.ಒ, ಒ.ಸಿ.ಐ ಕೋಟಾದಡಿ 15 ಸೀಟುಗಳು, ಮ್ಯಾನೇಜ್‌ಮೆಂಟ್ ಕೋಟಾದಡಿ 5 ಸೀಟುಗಳನ್ನು ಹಂಚಿಕೆ ಮಾಡಲಾಗಿದೆ.

ಸರ್ಕಾರಿ ಕೋಟಾದಡಿಯಲ್ಲಿ ಪ್ರವೇಶ ಪಡೆಯುವವರನ್ನು ನೀಟ್ (NEET: National Eligibility and Entrance Test) ಫಲಿತಾಂಶದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಅಧ್ಯಯನ ವಿಭಾಗಗಳು

ಬಿ.ಡಿ.ಎಸ್‌ ಕೋರ್ಸ್‌ಗೆ ಸಂಬಂಧಿಸಿ ಎಸ್‌ಡಿಎಂ ದಂತ ವಿಜ್ಞಾನ ಸಂಸ್ಥೆಯಲ್ಲಿ ಹಲವು ವಿಭಾಗಗಳಿವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ– ಕನ್ಸ್‌ರ್ವೇಟಿವ್ ಡೆಂಟಿಸ್ಟ್ರಿ (Conservative Dentistry), ಫಾರೆನ್ಸಿಕ್ ಆಡೆಂಟಾಲಜಿ (Forensic Odontology), ಜನರಲ್ ಮೆಡಿಸಿನ್ (General Medicine), ಜನರಲ್ ಸರ್ಜರಿ (General Surgery), ಜೀರಿಯಾಟ್ರಿಕ್ ಡೆಂಟಿಸ್ಟ್ರಿ (Geriatric Dentistry), ಇಂಪ್ಲ್ಯಾನಾಟಾಲಜಿ (Implantology), ಮಲ್ಟಿ ಸ್ಪೇಷಾಲಿಟಿ ಸೆಂಟರ್ (Multi Specialty Center), ಓರಲ್ ಮೆಡಿಸಿನ್ ಆ್ಯಂಡ್ ರೇಡಿಯಾಲಜಿ (Oral Medicine & Radiology), ಓರಲ್ ಪ್ಯಾಥಾಲಜಿ (Oral Pathology), ಓರಲ್ ಸರ್ಜರಿ (Oral Surgery), ಆರ್ಥಾಡಾಂಟಿಕ್ಸ್ (Orthodontics), ಪೆಡಾಡಾಂಟಿಕ್ಸ್ (Pedodontics), ಪೆರಿಡಾಂಟಿಕ್ಸ್ (Periodontics), ಪ್ರೊಸ್ತೋಡಾಂಟಿಕ್ಸ್ (Prosthodontics), ಪಬ್ಲಿಕ್ ಹೆಲ್ತ್ ಡೆಂಟಿಸ್ಟ್ರಿ (Public Health Dentistry) ಈ ವಿಭಾಗಕ್ಕೆ ಸಂಬಂಧಿಸಿ ಆಯಾ ವರ್ಷಕ್ಕೆ ವಿಶ್ವವಿದ್ಯಾಲಯ ನಿಗದಿಪಡಿಸಿರುವ ಪಠ್ಯಕ್ರಮದಂತೆ ವಿದ್ಯಾರ್ಥಿಗಳು ನಿಗದಿತ ವಿಷಯಗಳನ್ನು ಅಧ್ಯಯನ ಮಾಡಬೇಕಾಗುತ್ತದೆ.

ಎಸ್‌.ಡಿ.ಎಂ.ಸಿ.ಡಿ.ಎಸ್.ನಲ್ಲಿ ಪ್ರವೇಶಾತಿ ಮತ್ತಿತರ ಮಾಹಿತಿಗಾಗಿ ದೂರವಾಣಿ: 0836–2461630, 2467676 ಅಥವಾ 2468142 ಸಂಪರ್ಕಿಸಬಹುದು.

ಪ್ರವೇಶಾತಿಗೆ ವಿದ್ಯಾರ್ಹತೆ ಏನು?

ಕರ್ನಾಟಕ ಪಿಯು ಅಧ್ಯಯನ ಮಂಡಳಿ ಅಥವಾ ಅದಕ್ಕೆ ಸಮಾನವಾದ ಯಾವುದೇ ಮಂಡಳಿಯಿಂದ ಮಾನ್ಯತೆ ಪಡೆದ 12ನೇ ತರಗತಿ (ಪಿಯು ದ್ವಿತೀಯ) ವಿಜ್ಞಾನ ವಿಭಾಗದಲ್ಲಿ ಪಾಸಾದ ವಿದ್ಯಾರ್ಥಿಗಳು ಬಿ.ಡಿ.ಎಸ್‌ ಕೋರ್ಸ್‌ಗೆ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ. ದ್ವಿತೀಯ ಪಿಯು ಅಥವಾ 12ನೇ ತರಗತಿಯಲ್ಲಿ ವಿದ್ಯಾರ್ಥಿಗಳು ಇಂಗ್ಲಿಷ, ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ಓದಿರಬೇಕಾದುದು ಕಡ್ಡಾಯ. ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳಲ್ಲಿ ಕನಿಷ್ಠ ಸರಾಸರಿ ಶೇ 50ರಷ್ಟು ಅಂಕ ಗಳಿಸಿರಬೇಕು ಹಾಗೂ ಇಂಗ್ಲಿಷ್ ವಿಷಯದಲ್ಲಿ ಪಾಸಾಗಿರಬೇಕು. ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿದ್ಯಾರ್ಥಿಗಳಾಗಿದ್ದರೆ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳಲ್ಲಿ ಕನಿಷ್ಠ ಸರಾಸರಿ ಶೇ 40ರಷ್ಟು ಅಂಕ ಗಳಿಸಿ, ಇಂಗ್ಲಿಷ್ ವಿಷಯದಲ್ಲಿ ಪಾಸಾಗಿರುವುದು ಕಡ್ಡಾಯ. ಅಲ್ಲದೆ, ಪ್ರವೇಶಾತಿ ವೇಳೆ ಅಭ್ಯರ್ಥಿ ಕನಿಷ್ಠ 17 ವರ್ಷ ವಯೋಮಿತಿಯನ್ನು ಹೊಂದಿರಬೇಕು.

ಬೋಧನೆ ಮತ್ತಿತರ ಶುಲ್ಕಗಳ ವಿವರ

* ಸರ್ಕಾರಿ ಕೋಟಾದಲ್ಲಿ ಪ್ರವೇಶ ಪಡೆದವರಿಗೆ ಪ್ರತಿ ವರ್ಷ– ₹ 49,500 ಬೋಧನಾ ಶುಲ್ಕ ಹಾಗೂ ವಿಶ್ವವಿದ್ಯಾಲಯ ನಿಗದಿ ಪಡಿಸಿದ ಇತರ ಶುಲ್ಕಗಳು.

* ಕಾಮೆಡ್‌– ಕೆ ಕೋಟಾದಲ್ಲಿ ಪ್ರವೇಶ ಪಡೆದವರಿಗೆ ಪ್ರತಿ ವರ್ಷ– ₹ 4,29,000 ಬೋಧನಾ ಶುಲ್ಕ ಹಾಗೂ ವಿಶ್ವವಿದ್ಯಾಲಯ ನಿಗದಿ ಪಡಿಸಿದ ಇತರ ಶುಲ್ಕಗಳು

* ಎನ್‌.ಆರ್‌.ಐ, ಪಿ.ಐ.ಒ, ಒ.ಸಿ.ಐ ಕೋಟಾದಡಿ ಪ್ರವೇಶ ಪಡೆದವರಿಗೆ ಪ್ರತಿ ವರ್ಷ– $ 12,000 ಹಾಗೂ ವಿಶ್ವವಿದ್ಯಾಲಯ ನಿಗದಿ ಪಡಿಸಿದ ಇತರ ಶುಲ್ಕಗಳು

* ಮ್ಯಾನೇಜ್‌ಮೆಂಟ್ ಕೋಟಾದಡಿ ಪ್ರವೇಶ ಪಡೆದವರಿಗೆ ಪ್ರತಿ ವರ್ಷ– ₹ 6,00,000 ಹಾಗೂ ವಿಶ್ವವಿದ್ಯಾಲಯದ ನಿಯಮಾವಳಿಯಂತೆ ಇತರ ಶುಲ್ಕ ನಿಗದಿಪಡಿಸಲಾಗಿದೆ.

ಎಸ್‌.ಡಿ.ಎಂ.ಸಿ.ಡಿ.ಎಸ್ ವಿಶೇಷತೆ (ಡಾ.ಶ್ರೀನಾಥ ಠಾಕೂರ್ ಅವರ ಮಗ್‌ಶಾಟ್ ಬಳಸಿ)

ಸಂಸ್ಥೆಯ ಅಧ್ಯಕ್ಷ ಪೂಜ್ಯ ವೀರೇಂದ್ರ ಹೆಗ್ಗಡೆ ಅವರ ದೂರ ದೃಷ್ಟಿಯಿಂದ ಈ ಭಾಗದ ಬಡ ರೋಗಿಗಳಿಗೆ ನೆರವಾಗಲೆಂದು ಸ್ಥಾಪನೆಗೊಂಡಿರುವ ಎಸ್‌.ಡಿ.ಎಂ.ಸಿ.ಡಿ.ಎಸ್. 30 ವರ್ಷಗಳಿಂದ ದಂತ ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯುತ್ತಮ ಶಿಕ್ಷಣ, ಚಿಕಿತ್ಸೆಯಿಂದ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಇಲ್ಲಿರುವ ಜನರಲ್ ಡೆಂಟಿಸ್ಟ್ರಿ ವಿಭಾಗ 59 ಡೆಂಟಲ್ ಚೇರ್‌ಗಳನ್ನು ಒಳಗೊಂಡಿರುವ ಭಾರತದ ಪ್ರಥಮ ವಿಭಾಗ ಎಂದು ಹೆಸರಾಗಿದೆ. 60 ವರ್ಷ ಮೇಲ್ಪಟ್ಟವರಿಗೆ ದಂತ ಚಿಕಿತ್ಸೆ ನೀಡುವ ಜೀರಿಯಾಟ್ರಿಕ್ ಡೆಂಟಿಸ್ಟ್ರಿ, ಮಾನಸಿಕ ಅಸ್ವಸ್ಥ ಮಕ್ಕಳಿಗೆ ದಂತ ಚಿಕಿತ್ಸೆ ನೀಡುವ ಸ್ಪೇಶಲ್ ಕೇರ್ ವಿಭಾಗ, ಬೋಧಕರೇ ಚಿಕಿತ್ಸಕರಾಗಿ ಕಾರ್ಯನಿರ್ವಹಿಸುವ ಫ್ಯಾಕಲ್ಟಿ ಕ್ಲಿನಿಕ್, ಅಪರಾಧ ಪ್ರಕರಣಗಳಲ್ಲಿ ನೆರವು ನೀಡುವ ಫೊರೆನ್ಸಿಕ್ ಡೆಂಟಿಸ್ಟ್ರಿ, ಸುಸಜ್ಜಿತವಾದ ಶಸ್ತ್ರಚಿಕಿತ್ಸಾ ಕೊಠಡಿ ಒಳಗೊಂಡಿರುವ ಇಂಪ್ಲೆಟಾಲಜಿ ವಿಭಾಗ ಇಲ್ಲಿರುವ ವಿಶೇಷ ವಿಭಾಗಗಳಾಗಿವೆ ಎಂದು ಎಸ್‌.ಡಿ.ಎಂ.ಸಿ.ಡಿ.ಎಸ್.ನ ಪ್ರಾಂಶುಪಾಲ ಡಾ.ಶ್ರೀನಾಥ ಠಾಕೂರ್ ಅವರು ತಿಳಿಸಿದರು.

ಅತಿ ವಿಶೇಷ ಫೊರೆನ್ಸಿಕ್ ಡೆಂಟಿಸ್ಟ್ರಿ ವಿಭಾಗ (ಡಾ.ಆಶಿತ್ ಆಚಾರ್ಯ ಅವರ ಮಗ್‌ಶಾಟ್ ಬಳಸಿ)

ಎಸ್‌.ಡಿ.ಎಂ.ಸಿ.ಡಿ.ಎಸ್.ನಲ್ಲಿ ಕಾರ್ಯನಿರ್ವಹಿಸುತ್ತಿರುವ ಫೊರೆನ್ಸಿಕ್ ಡೆಂಟಿಸ್ಟ್ರಿ ವಿಭಾಗ ತನ್ನ ವಿಶೇಷತೆಯಿಂದ ಖ್ಯಾತಿ ಪಡೆದಿದೆ. ಅತ್ಯಂತ ಜಟಿಲವಾದ ಅಪರಾಧ ಪ್ರಕರಣಗಳಲ್ಲಿ ದಂತ ವೈದ್ಯಕೀಯ ಸಾಕ್ಷಿ ಮತ್ತು ವಿಶ್ಲೇಷಣೆ ಒದಗಿಸುವ ಈ ವಿಭಾಗ ಇಲ್ಲಿಯವರೆಗೆ ಹಲವು ಪ್ರಕರಣಗಳಲ್ಲಿ ಪೊಲೀಸ್ ಮತ್ತು ನ್ಯಾಯಾಂಗ ಇಲಾಖೆಗಳಿಗೆ ನೆರವಾಗಿದೆ. ದೆಹಲಿಯ ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಾಕ್ಷಿ ಮತ್ತು ವಿಶ್ಲೇಷಣೆ ಒದಗಿಸಿರುವ ಖ್ಯಾತಿ ಈ ವಿಭಾಗಕ್ಕಿದೆ. ಇದಕ್ಕೆಂದೇ ದೆಹಲಿಯ ಪೊಲೀಸ್, ನ್ಯಾಯಾಂಗ ಇಲಾಖೆ ಅಧಿಕಾರಿಗಳು ಹಲವು ಬಾರಿ ಇಲ್ಲಿಗೆ ಭೇಟಿ ನೀಡಿದ್ದಾರೆ ಎಂದು ಎಸ್‌.ಡಿ.ಎಂ.ಸಿ.ಡಿ.ಎಸ್.ನ ಫೊರೆನ್ಸಿಕ್ ಡೆಂಟಿಸ್ಟ್ರಿ ವಿಭಾಗದ ಮುಖ್ಯಸ್ಥ ಡಾ.ಆಶಿತ್ ಆಚಾರ್ಯ ತಿಳಿಸಿದರು.

ಬಿ.ಡಿ.ಎಸ್ ನಂತರ...(ಡಾ.ಪ್ರೀತಾ ಶೆಟ್ಟಿ ಮಗ್‌ಶಾಟ್ ಬಳಸಿರಿ)

ಬಿ.ಡಿ.ಎಸ್‌. ಕೋರ್ಸ್‌ ನಂತರ ಎಂ.ಡಿ.ಎಸ್. ಸ್ನಾತಕೋತ್ತರ ಅಧ್ಯಯನ ಮುಂದುವರಿಸಬಹುದಾಗಿದೆ. ದೇಶ– ವಿದೇಶಗಳಲ್ಲಿ ದಂತ ವೈದ್ಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆ ಇದೆ. ಅಲ್ಲದೆ, ಖಾಸಗಿಯಾಗಿ ದಂತ ಚಿಕಿತ್ಸಾ ಕೇಂದ್ರವನ್ನು ತೆರೆಯಲೂ ಅವಕಾಶವಿದೆ. ಎಂ.ಡಿ.ಎಸ್ ನಂತರ ದಂತ ವ್ಯದ್ಯಕೀಯ ವೃತ್ತಿಯ ಜತೆ ಬೋಧಕ ವೃತ್ತಿಗೂ ಅವಕಾಶವಿದೆ ಎಂದು ಎಸ್‌.ಡಿ.ಎಂ.ಸಿ.ಡಿ.ಎಸ್.ನ ಪಬ್ಲಿಕ್ ಹೆಲ್ತ್ ಡೆಂಟಿಸ್ಟ್ರಿ ವಿಭಾಗದ ಮುಖ್ಯಸ್ಥೆ ಡಾ.ಪ್ರೀತಾ ಶೆಟ್ಟಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT