ಮಳೆಯಿಂದ ಮೆಸ್ಕಾಂಗೆ ₹ 5.68 ಕೋಟಿ ನಷ್ಟ

7
ನಾಲ್ಕು ಜಿಲ್ಲೆಗಳಲ್ಲಿ ನೆಲಕ್ಕೆ ಉರುಳಿದ ವಿದ್ಯುತ್‌ ಕಂಬ, ಪರಿವರ್ತಕ

ಮಳೆಯಿಂದ ಮೆಸ್ಕಾಂಗೆ ₹ 5.68 ಕೋಟಿ ನಷ್ಟ

Published:
Updated:

ಮಂಗಳೂರು: ಮಳೆಗಾಲ ಆರಂಭಕ್ಕೂ ಮುನ್ನವೇ ಮೆಸ್ಕಾಂಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಮೆಸ್ಕಾಂ ವ್ಯಾಪ್ತಿಯ ನಾಲ್ಕು ಜಿಲ್ಲೆಗಳಲ್ಲಿ ಏಪ್ರಿಲ್‌ 1ರಿಂದ ಮೇ 29ರವರೆಗೆ ಸುರಿದ ಮುಂಗಾರು ಪೂರ್ವ ಮಳೆಯಿಂದಾಗಿ ₹ 5.68 ಕೋಟಿಯಷ್ಟು ಹಾನಿಯಾಗಿದೆ. ವಿದ್ಯುತ್‌ ಕಂಬಗಳು, ಪರಿವರ್ತಕ, ವಿದ್ಯುತ್‌ ಮಾರ್ಗಗಳ ಮರುಜೋಡಣೆಯಲ್ಲಿ ಮೆಸ್ಕಾಂ ಸಿಬ್ಬಂದಿ ಇದೀಗ ಕಾರ್ಯನಿರತರಾಗಿದ್ದಾರೆ.

ಮುಂಗಾರು ಮಳೆ ಇನ್ನೂ ಕರಾವಳಿಯನ್ನು ಪ್ರವೇಶಿಸಿಲ್ಲ. ಅದಕ್ಕೂ ಮೊದಲೇ ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಭರ್ಜರಿ ಮಳೆ ಸುರಿದಿದೆ. ಒಂದೇ ದಿನ 158 ಮಿ.ಮೀ. ಮಳೆಯಾಗಿದ್ದು, ರಸ್ತೆ, ಸೇತುವೆ, ಮನೆಗಳಿಗೆ ಹಾನಿಯಾಗಿದೆ. ಇದರ ಮಧ್ಯೆ ವಿದ್ಯುತ್‌ ಪೂರೈಕೆಯ ಜವಾಬ್ದಾರಿ ವಹಿಸಿರುವ ಮೆಸ್ಕಾಂಗೆ ಹೆಚ್ಚಿನ ನಷ್ಟ ಉಂಟಾಗಿದೆ.

ಮೆಸ್ಕಾಂ ವ್ಯಾಪ್ತಿಯ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 382 ವಿದ್ಯುತ್‌ ಪರಿವರ್ತಕಗಳು ಹಾಳಾಗಿದ್ದು, ಈ ಪೈಕಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿಯೇ 351 ಪರಿವರ್ತಕಗಳು ಕೆಟ್ಟುನಿಂತಿವೆ. ಶಿವಮೊಗ್ಗ ಜಿಲ್ಲೆಯಲ್ಲಿ 24 ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ 7 ಪರಿವರ್ತಗಳು ಹಾಳಾಗಿವೆ. ಈ ಪೈಕಿ ಈಗಾಗಲೇ 376 ಪರಿವರ್ತಕಗಳ ಬದ ಲಾವಣೆ ಮಾಡಲಾಗಿದ್ದು, ಇನ್ನೂ 6 ಪರಿವರ್ತಕಗಳ ಬದಲಾವಣೆ ಬಾಕಿ ಇದೆ.

ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,195, ಶಿವಮೊಗ್ಗ ಜಿಲ್ಲೆಯಲ್ಲಿ 1,109 ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ 1,131 ಕಂಬಗಳು ಹಾನಿಗೀಡಾಗಿವೆ. ಈ ಪೈಕಿ ಒಟ್ಟಾರೆ 4,293 ಕಂಬಗಳನ್ನು ಬದಲಾಯಿಸಿದ್ದು, ಇನ್ನೂ 618 ಕಂಬಗಳ ಬದಲಾವಣೆ ಮಾಡಬೇಕಾಗಿದೆ.

353 ಕಿ.ಮೀ. ಮಾರ್ಗಕ್ಕೆ ಧಕ್ಕೆ: ವಿದ್ಯುತ್‌ ತಂತಿಯನ್ನು ಒಳಗೊಂಡ ಒಟ್ಟು 353.60 ಕಿ.ಮೀ. ವಿದ್ಯುತ್‌ ಮಾರ್ಗಕ್ಕೆ ಧಕ್ಕೆಯಾಗಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಅತ್ಯಧಿಕ 152.17 ಕಿ.ಮೀ. ಮಾರ್ಗಕ್ಕೆ ಹಾನಿಯಾಗಿದೆ.

ಮೆಸ್ಕಾಂ ಸಿಬ್ಬಂದಿ ಹಾಗೂ ಅಧಿಕಾರಿಗಳು ಅವಿರತವಾಗಿ ಶ್ರಮಿಸಿ, ಗ್ರಾಹಕರು ಮತ್ತು ಇತರ ಇಲಾಖೆಗಳ ಸಹಕಾರದಿಂದ ವಿದ್ಯುತ್ ಪೂರೈಕೆಯಲ್ಲಿನ ಅಡಚಣೆಗಳನ್ನು ಸರಿಪಡಿಸಲು ಶ್ರಮಿಸಿದ್ದಾರೆ. ಇನ್ನೂ ಹಲವೆಡೆ ದುರಸ್ತಿ ಎಂದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಕೆ. ರಾಮಕೃಷ್ಣ ತಿಳಿಸಿದ್ದಾರೆ.

ವಿದ್ಯುತ್‌ ದರ ಪರಿಷ್ಕರಣೆ: ಏಪ್ರಿಲ್‌ 1ರಿಂದಲೇ ಪೂರ್ವಾನ್ವಯ

ಮಂಗಳೂರು: ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಮೇ 14ರಂದು ಹೊರಡಿಸಿದ ಆದೇಶದ ಪ್ರಕಾರ ಪರಿಷ್ಕೃತ ವಿದ್ಯುತ್ ದರ ಏಪ್ರಿಲ್‌ 1ರಿಂದಲೇ ಅನ್ವಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.

ಈ ಆದೇಶವು ಮೇ 14ರಂದು ಬಿಡುಗಡೆಯಾಗಿದ್ದು, ಏಪ್ರಿಲ್ ಮತ್ತು ಮೇ 22ರವರೆಗಿನ ವಿದ್ಯುತ್ ಬಳಕೆಗೆ ಹಿಂದಿನ ದರದಲ್ಲಿಯೇ ಬಿಲ್‌ಗಳನ್ನು ಗ್ರಾಹಕರಿಗೆ ನೀಡಲಾಗಿದೆ. ಏಪ್ರಿಲ್ ಮತ್ತು ಮೇ ತಿಂಗಳ ಬಳಕೆಗೆ ಅಂದರೆ, ಮೇ 1ರಿಂದ 22ರವರೆಗೆ ಈಗಾಗಲೇ ಗ್ರಾಹಕರಿಗೆ ನೀಡಿರುವ ವಿದ್ಯುತ್ ಬಿಲ್‌ಗಳನ್ನು ಹೊಸ ದರ ಅನ್ವಯಿಸಿ, ಪರಿಷ್ಕರಿಸಲಾಗುವುದು. ವ್ಯತ್ಯಾಸದ ಮೊತ್ತವನ್ನು ಜೂನ್‌ 1ರಿಂದ ನೀಡಲಾಗುವ ವಿದ್ಯುತ್ ಬಿಲ್‌ಗಳಲ್ಲಿ ಸೇರಿಸಲಾಗುವುದು ಎಂದು ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry