ಬಿತ್ತನೆ ಆರಂಭವಾದರೂ ದೊರೆಯದ ಬೆಳೆ ಸಾಲ!

7
ಡಿಸಿಸಿ ಬ್ಯಾಂಕ್‌ ತಲುಪದ ₹144.04 ಕೋಟಿ ಸಾಲ ಮನ್ನಾದ ಬಾಕಿ l₹ 31.71 ಕೋಟಿ ಮಧ್ಯಮಾವಧಿ ಕೃಷಿ ಸಾಲ

ಬಿತ್ತನೆ ಆರಂಭವಾದರೂ ದೊರೆಯದ ಬೆಳೆ ಸಾಲ!

Published:
Updated:
ಬಿತ್ತನೆ ಆರಂಭವಾದರೂ ದೊರೆಯದ ಬೆಳೆ ಸಾಲ!

ಶಿವಮೊಗ್ಗ: ಮುಂಗಾರು ಆರಂಭದಲ್ಲೇ ಜಿಲ್ಲೆಯ ಎಲ್ಲೆಡೆ ಉತ್ತಮ ಮಳೆಯಾಗಿ, ಕೃಷಿ ಚಟುವಟಿಕೆ ಗರಿಗೆದರಿದರೂ ಸಹಕಾರ ಸಂಘಗಳಲ್ಲಿ ಬೀಜ, ಗೊಬ್ಬರಕ್ಕೆ ಬೆಳೆಸಾಲ ದೊರೆಯದೇ ರೈತರು ಪರಿತಪಿಸುತ್ತಿದ್ದಾರೆ.

ಸಹಕಾರ ಸಂಘಗಳು ಹಾಗೂ ಸಹಕಾರ ಬ್ಯಾಂಕ್‌ನಲ್ಲಿ ರೈತರು ಮಾಡಿದ್ದ ₹ 50 ಸಾವಿರದವರೆಗಿನ ಸಾಲವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣಾ ವರ್ಷದ ಆರಂಭದಲ್ಲಿ ಮನ್ನಾ ಮಾಡಿದ್ದರು. ಜಿಲ್ಲೆಯ 75,192 ರೈತರಿಗೆ ಸಾಲಮನ್ನಾದ ಪ್ರಯೋಜನ ಪಡೆಯುವ ಪಟ್ಟಿಯಲ್ಲಿದ್ದರು. ಈ ರೈತರ ಸಾಲ ಮನ್ನಾ ಬಾಬ್ತು ಒಟ್ಟು ₹ 240 ಕೋಟಿ.

ಜೂನ್ 2017ರಿಂದ ಏಪ್ರಿಲ್ 2018ರವರೆಗೆ 56,964 ರೈತರ ₹ 194.79 ಕೋಟಿ ಅಸಲು, ₹ 19.36 ಕೋಟಿ ಬಡ್ಡಿ ಸೇರಿ ಒಟ್ಟು ₹ 214.15 ಕೋಟಿ ಚುಕ್ತಾ ಆಗಬೇಕಿತ್ತು. ಆದರೆ, ಇದುವರೆಗೂ ₹ 69.69 ಕೋಟಿ ಅಸಲು, ₹ 41 ಲಕ್ಷ ಬಡ್ಡಿ ಸೇರಿ

₹ 70.10 ಕೋಟಿ ಮಾತ್ರ ಜಿಲ್ಲಾ ಸಹಕಾರ ಸಂಘಗಳಿಗೆ ಬಿಡುಗಡೆಯಾಗಿದೆ. ಇನ್ನೂ ಬಿಡುಗಡೆಯಾಗಬೇಕಿರುವ ಮೊತ್ತ

₹144.04 ಕೋಟಿ.

ಸಕಾಲಕ್ಕೆ ಸಾಲ ಮನ್ನಾದ ಮೊತ್ತ ಬಾರದೇ ದಾಖಲೆಗಳಲ್ಲಿ ರೈತರ ಹಳೆಯ ಸಾಲದ ಬಾಕಿ ಹಾಗೆ ಇದೆ. ಈ ಪ್ರಕ್ರಿಯೆ ಮುಕ್ತಾಯವಾಗದ ಕಾರಣ ಸಹಕಾರ ಸಂಘಗಳೂ ಹೊಸ ಸಾಲ ನೀಡಲು ಮುಂದಾಗಿಲ್ಲ. ಇದರಿಂದ ರೈತರು ಬಿತ್ತನೆ ಕಾರ್ಯಕ್ಕೆ ಅನಿವಾರ್ಯವಾಗಿ ಖಾಸಗಿ ವ್ಯಕ್ತಿಗಳ ಬಳಿ ಕೈ ಸಾಲ ಪಡೆಯುವುದು ಅನಿವಾರ್ಯವಾಗಿದೆ.

ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಜಿಲ್ಲೆಯ ಕೃಷಿ ಪ್ರಾಥಮಿಕ ಸಹಕಾರ ಸಂಘಗಳಿಗೆ ರೈತರು ₹ 349.54 ಕೋಟಿ ಸಾಲ ಪಾವತಿಸಬೇಕಿತ್ತು. ಅದರಲ್ಲಿ ಪ್ರತಿಯೊಬ್ಬ ರೈತರಿಗೂ ₹ 50 ಸಾವಿರದಂತೆ ಒಟ್ಟು

₹ 240 ಕೋಟಿ ಮನ್ನಾ ಮಾಡಲಾಗಿತ್ತು.

ಜೂನ್ 2017ರಿಂದ ಏಪ್ರಿಲ್ 2018ರವರೆಗೆ 56,964 ರೈತರ ₹ 194.79 ಕೋಟಿ ಅಸಲು, ₹ 19.36 ಕೋಟಿ ಬಡ್ಡಿ ಸೇರಿ ಒಟ್ಟು ₹ 214.15 ಕೋಟಿ ಚುಕ್ತಾ ಆಗಬೇಕಿತ್ತು. ಆದರೆ, ಇದುವರೆಗೂ ₹ 69.69 ಕೋಟಿ ಅಸಲು, ₹ 41 ಲಕ್ಷ ಬಡ್ಡಿ ಸೇರಿ ₹ 70.10 ಕೋಟಿ ಬಿಡುಗಡೆಯಾಗಿದೆ. ಇನ್ನೂ ₹ 125.09 ಕೋಟಿ ಅಸಲು, ₹ 18.94 ಕೋಟಿ ಬಡ್ಡಿ ಸೇರಿ ಒಟ್ಟು ₹ 144.04 ಕೋಟಿ ಸರ್ಕಾರದಿಂದ ಬಿಡುಗಡೆಯಾಗಬೇಕಿದೆ.

ಇದುವರೆಗೂ ಡಿಸಿಸಿ ಬ್ಯಾಂಕ್‌ಗೆ ರೈತರಿಂದ ₹ 242.93 ಕೋಟಿ ಅಲ್ಪಾವಧಿ ಬೆಳೆ ಸಾಲ, ₹ 31.71 ಕೋಟಿ ಮಧ್ಯಮಾವಧಿ ಕೃಷಿ ಸಾಲ ಬಾಕಿ ಬರಬೇಕಿದೆ.

‘ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರೈತರಿಗೆ ಸಾಲ ವಿತರಿಸಲಾಗುತ್ತದೆ. ಸಾಲ ಮನ್ನಾದ ಮೊತ್ತ ಫಲಾನುಭವಿಗಳ ಖಾತೆಗೆ ಜಮೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಪ್ರಕ್ರಿಯೆ ಪೂರ್ಣಗೊಂಡ ಸಂಘಗಳು ದಾಖಲೆ ನೀಡಿದ ತಕ್ಷಣ ಹೊಸ ಸಾಲ ವಿತರಣೆ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು’ ಎನ್ನುತ್ತಾರೆ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ರಾಜಣ್ಣ ರೆಡ್ಡಿ.

ಹೊಸ ರೈತರಿಗೆ ₹ 62.05 ಕೋಟಿ ಲಾಭ

ಹಲವು ದಶಕಗಳಿಂದ ಸಹಕಾರ ಸಂಘ, ಬ್ಯಾಂಕ್‌ಗಳಲ್ಲಿ ಸಾಲ ಪಡೆದವರೇ ಮತ್ತೆ ಮತ್ತೆ ಸಾಲ ಪಡೆಯುವ ಪರಿಪಾಠ ಇತ್ತು. ಕಳೆದ ಬಾರಿ ಸರ್ಕಾರ ಹೊಸ ರೈತರಿಗೂ ಸಾಲ ನೀಡಲು ನಿರ್ದೇಶನ ನೀಡಿತ್ತು. ಅದರಂತೆ ₹ 62.05 ಕೋಟಿ ಹೊಸ ರೈತರಿಗೆ ಸಾಲ ವಿತರಿಸಲಾಗಿತ್ತು. ಹಾಗಾಗಿ, ಮೊದಲ ಬಾರಿ ಸಹಕಾರ ಸಂಘಗಳಲ್ಲಿ ಸಾಲ ಪಡೆದಿದ್ದ ರೈತರ ಎಲ್ಲ ಸಾಲವೂ ಮನ್ನಾ ಆಗಿದೆ. ಆದರೆ, ಸಾಲ ಮನ್ನಾ ಪ್ರಕ್ರಿಯೆ ಮುಗಿಯದ ಕಾರಣ ಈ ಬಾರಿ ಮತ್ತೆ ಹೊಸ ರೈತರಿಗೆ ಸಾಲ ಸಿಗುವುದು ಅನುಮಾನ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry