ತುಮಕೂರು– ತಿಪಟೂರು ನಡುವೆ ಚತುಷ್ಪಥ

5
ರಾಷ್ಟ್ರೀಯ ಹೆದ್ದಾರಿ 206: ಎರಡು ಪ್ಯಾಕೇಜ್‌ಗಳಲ್ಲಿ 110 ಕಿ.ಮೀ ರಸ್ತೆ ತ್ವರಿತ ನಿರ್ಮಾಣಕ್ಕೆ ಯೋಜನೆ

ತುಮಕೂರು– ತಿಪಟೂರು ನಡುವೆ ಚತುಷ್ಪಥ

Published:
Updated:
ತುಮಕೂರು– ತಿಪಟೂರು ನಡುವೆ ಚತುಷ್ಪಥ

ತುಮಕೂರು: ತುಮಕೂರು– ಹೊನ್ನಾವರ ನಡುವಿನ ರಾಷ್ಟ್ರೀಯ ಹೆದ್ದಾರಿ 206ರನ್ನು ನಾಲ್ಕು ಪಥ ರಸ್ತೆಯಾಗಿ ಪರಿವರ್ತಿಸುವ ಯೋಜನೆಯ ಮೊದಲ ಮತ್ತು ಎರಡನೇ ಹಂತದ ಯೋಜನೆಗಳ ಭೂ ಸ್ವಾಧೀನ ಪ್ರಕ್ರಿಯೆ ಕುರಿತಂತೆ ಶುಕ್ರವಾರ ಜಿಲ್ಲಾ ಪಂಚಾಯಿತಿ ಸಂಭಾಂಗಣದಲ್ಲಿ ಅಧಿಕಾರಿಗಳು ಮತ್ತು ರೈತರ ಸಭೆ ನಡೆಯಿತು.

ಚತುಷ್ಪಥ ನಿರ್ಮಾಣ ಯೋಜನಾ ವಿಭಾಗದ ನಿರ್ದೇಶಕ ಶಿರೀಶ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ 206ರನ್ನು ಚತುಷ್ಪಥ ರಸ್ತೆಯನ್ನಾಗಿ ವಿಸ್ತರಣೆ ಕಾರ್ಯಕ್ಕೆ ಕೇಂದ್ರ ಸರ್ಕಾರವೇ ಹೂಡಿಕೆ ಮಾಡುತ್ತಿದೆ. ತುಮಕೂರಿನಿಂದ ಶಿವಮೊಗ್ಗದವರೆಗಿನ 205 ಕಿ.ಮೀ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವುದಕ್ಕಾಗಿ ನಾಲ್ಕು ಪ್ಯಾಕೇಜ್‌ಗಳಲ್ಲಿ ಟೆಂಡರ್ ಕರೆಯಲಾಗಿದೆ ಎಂದರು.

‘ಮೊದಲ ಹಂತದ ಹೆದ್ದಾರಿ ಚತುಷ್ಪಥ ಕಾಮಗಾರಿ ತುಮಕೂರು ತಾಲ್ಲೂಕಿನ ಮಲ್ಲಸಂದ್ರದಿಂದ ಪ್ರಾರಂಭವಾಗಿ ತಿಪಟೂರು ತಾಲ್ಲೂಕಿನ ಕರಡಿವರೆಗೆ ನಡೆಯಲಿದ್ದು, ಒಟ್ಟು 52.89 ಕಿ.ಮೀ ನಿರ್ಮಾಣ ಮಾಡಲಾಗುತ್ತಿದೆ’ ಎಂದು ವಿವರಣೆ ನೀಡಿದರು.

‘ಹೆದ್ದಾರಿಯ ಎರಡೂ ಬದಿ ಸರ್ವಿಸ್ ರಸ್ತೆ, ಗುಬ್ಬಿ ಪಟ್ಟಣದಲ್ಲಿ 7.742 ಕಿ.ಮೀ ಬೈಪಾಸ್ ರಸ್ತೆ, 21 ಸಣ್ಣ ಸೇತುವೆ, 97 ಕಲ್ವರ್ಟ್, 12 ಬಸ್ ನಿಲುಗಡೆ ತಾಣಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಒಟ್ಟು ₹ 824.93 ಕೋಟಿ ವೆಚ್ಚದಲ್ಲಿ ಈ ಕಾಮಗಾರಿ ನಡೆಯಲಿದೆ’ ಎಂದು ವಿವರಿಸಿದರು.

‘ಅದೇ ರೀತಿ ತಿಪಟೂರು ಹೊರವಲಯದಿಂದ ಬಾಣಾವರದವರೆಗೆ ಇರುವ 2ನೇ ಪ್ಯಾಕೇಜ್‌ನಲ್ಲಿ 56.705 ಕಿ.ಮೀ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ತಿಪಟೂರು ನಗರದಲ್ಲಿ 25.995 ಕಿ.ಮೀ ಬೈಪಾಸ್ ರಸ್ತೆ, 21 ಸಣ್ಣ ಸೇತುವೆ, 158 ಕಲ್ವರ್ಟ್ ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ತಿಪಟೂರು ನಗರದಲ್ಲಿ ಎರಡು ಕಡೆ ಮತ್ತು ಅರಸೀಕೆರೆ ಪಟ್ಟಣದ ಸಮೀಪ 1 ರೈಲ್ವೆ ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತಿದ್ದು, ಒಟ್ಟು 1020. 85 ಕೋಟಿ ಮೊತ್ತದಲ್ಲಿ ಕಾಮಗಾರಿ ನಡೆಯಲಿದೆ’ ಎಂದು ವಿವರಣೆ ನೀಡಿದರು.

ಭೂಸ್ವಾಧೀನ ಪ್ರಕ್ರಿಯೆ: ‘ಮೊದಲ ಹಂತ ಮತ್ತು 2ನೇ ಹಂತ ಈ ಎರಡೂ ಯೋಜನೆಗಳಿಗೆ ಭೂ ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಮೊದಲ ಹಂತದಲ್ಲಿ 160 ಹೆಕ್ಟೇರ್ ಮತ್ತು 2ನೇ ಪ್ಯಾಕೇಜ್‌ನಲ್ಲಿ 246 ಹೆಕ್ಟೇರ್‌ ಭೂಮಿಯನ್ನು ರೈತರಿಂದ ಪಡೆಯಲಾಗುತ್ತಿದೆ. ಈಗಾಗಲೇ ರೈತರಿಗೆ ನೋಟಿಸ್ ಜಾರಿ ಮಾಡಲಾಗಿದೆ. ರೈತರು ಭೂಮಿಯನ್ನು ಬೇಗ ನೀಡಿದರೆ 2018ರ ಡಿಸೆಂಬರ್ ತಿಂಗಳ ಹೊತ್ತಿಗೆ ಕಾಮಗಾರಿ ಪ್ರಾರಂಭಗೊಳ್ಳಲಿದೆ’ ಎಂದು ಹೇಳಿದರು.

ಮಾತುಕತೆಯಿಂದ ಇತ್ಯರ್ಥ: ‘ಭೂ ಸ್ವಾಧೀನ ಪ್ರಕ್ರಿಯೆ ಸುಸೂತ್ರವಾಗಿ ನಡೆಯಬೇಕು ಎಂಬ ಉದ್ದೇಶದಿಂದಲೇ ಈ ದಿನದ ಸಭೆಗೆ ರೈತರನ್ನು ಆಹ್ವಾನಿಸಲಾಗಿದೆ. ಯೋಜನೆಯ ಉದ್ದೇಶ ಸಂಚಾರ ವ್ಯವಸ್ಥೆ ಸುಧಾರಣೆಗೆ ಚತುಷ್ಪಥ ರಸ್ತೆ ನಿರ್ಮಾಣ ಮಾಡುವುದೊಂದೇ ಆಗಿದ್ದು, ರೈತರು, ಸಾರ್ವಜನಿಕರಿಗೆ ತೊಂದರೆ ಕೊಡುವುದು ಅಲ್ಲ. ಸಾರ್ವಜನಿಕರ ಮನೆ ಬೀಳಿಸಿ, ರೈತರ ಭೂಮಿ ಕಿತ್ತುಕೊಂಡು ರಸ್ತೆ ಮಾಡುವ ಉದ್ದೇಶವಿಲ್ಲ’ ಎಂದು ಸ್ಪಷ್ಟಪಡಿಸಿದರು.

ಖಂಡಿತ ಹೆಚ್ಚಿನ ಪರಿಹಾರ

‘ಯೋಜನೆಗೆ ಸ್ವಾಧೀನಪಡಿಸಿಕೊಳ್ಳುವ ಭೂಮಿ ಅಗತ್ಯಕ್ಕೆ ತಕ್ಕಷ್ಟೇ ಪಡೆಯಲಾಗುವುದು. ಭೂಸ್ವಾಧೀನ ಮತ್ತು ಪರಿಹಾರ ನಿಗದಿ ಕುರಿತಂತೆ 1964ರಲ್ಲಿ ಕಾಯ್ದೆ ಬದಲಾಗಿದ್ದು, 2014ರ ನೂತನ ಕಾಯ್ದೆ ಪ್ರಕಾರ ರೈತರಿಗೆ ಮಾರುಕಟ್ಟೆ ಬೆಲೆಯ ನಾಲ್ಕು ಪಟ್ಟು ಹೆಚ್ಚಿನ ಪರಿಹಾರ ಲಭಿಸಲಿದೆ. ಆತಂಕ ಪಡುವುದು ಬೇಡ’ ಎಂದು ಹೇಳಿದರು.

‘ಈ ಹೆದ್ದಾರಿ ವಿಸ್ತರಣೆಯು 10 ವರ್ಷಗಳ ಹಿಂದೆಯೇ ಪೂರ್ಣಗೊಳ್ಳಬೇಕಿತ್ತು. ರಾಜ್ಯದಲ್ಲಿನ ಬೇರೆ ಕಡೆ ಹೆದ್ದಾರಿ ವಿಸ್ತರಣೆ ಕಾಮಗಾರಿ ಪೂರ್ಣಗೊಂಡಿವೆ. ಇದೊಂದು ಮಾತ್ರ ಬಾಕಿ ಇದೆ. ರೈತರು ಸಹಕಾರ ನೀಡಿದರೆ ನಿರ್ಮಾಣ ಕಾರ್ಯ ತ್ವರಿತವಾಗಿ ಪೂರ್ಣವಾಗಲಿದೆ’ ಎಂದು ಹೇಳಿದರು.

‘ಸ್ವಾಧೀನ ಪ್ರಕ್ರಿಯೆ ಹಂತದಲ್ಲಿ ಅನುಮಾನಗಳಿದ್ದಲ್ಲಿ ತಮ್ಮ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹರಿಸಲಾಗುವುದು. ಮೇ 5ರಂದು ಮಂಗಳವಾರ ಮಲ್ಲಸಂದ್ರ ಗ್ರಾಮಕ್ಕೆ ಭೇಟಿ ಸ್ಥಳದಲ್ಲಿಯೇ ಮನವರಿಕೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.

ಕಳ್ಳಿಪಾಳ್ಯ ಗ್ರಾಮದ ಪ್ರೇಮ, ಗಂಗಾಧರ್ ಮತ್ತು ಪ್ರಕಾಶ್ ಎಂಬುವರು ಮಾತನಾಡಿ, ‘ಗ್ರಾಮದ ರಸ್ತೆ ಬಲ ಬದಿಯನ್ನು ಬಿಟ್ಟು ಎಡ ಬದಿಯಲ್ಲಿ ಮಾತ್ರ ಹೆಚ್ಚಿನ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಒಂದೆರಡು ಗುಂಟೆಯಲ್ಲಿ ಮನೆ ನಿರ್ಮಿಸಿಕೊಂಡ ದಲಿತರ ಮನೆಗಳೂ ಸೇರಿದಂತೆ 30ಕ್ಕೂ ಹೆಚ್ಚು ಕುಟುಂಬಗಳು ಬೀದಿ ಪಾಲಾಗಲಿವೆ. ಹೀಗಾಗಿ ಬಲ ಬದಿಯಲ್ಲಿ ರಸ್ತೆ ನಿರ್ಮಾಣ ಮಾಡಬೇಕು’ ಎಂದು ಒತ್ತಾಯ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ, ನಿಮ್ಮ ಆತಂಕ, ಕಳವಳ ಅರ್ಥವಾಗುತ್ತದೆ. ಬಲ ಬದಿಯಲ್ಲಿ ಬೃಹತ್ ಕೆರೆ ಇದೆ. ಕೆರೆಗೆ ಹೊಂದಿಕೊಂಡು ಚತುಷ್ಪಥ ರಸ್ತೆ ನಿರ್ಮಾಣಕ್ಕೆ ನಿಯಮಾವಳಿ ಪ್ರಕಾರ ಅವಕಾಶವಿಲ್ಲ. ಈ ರೀತಿ ಮಾಡಿದರೆ ಅಪಾಯಗಳೂ ಹೆಚ್ಚು. ಹೀಗಾಗಿ, ಅನಿವಾರ್ಯವಾಗಿ ಸಹಕರಿಸಲೇಬೇಕು. ಆದಾಗ್ಯೂ ಸ್ಥಳ ಪರಿಶೀಲನೆ ನಡೆಸುತ್ತೇನೆ. ಮುಂದಿನ ತೀರ್ಮಾನ ಬಳಿಕ ಮಾಡೋಣ ಎಂದರು.

ಸಭೆ ಅಧ್ಯಕ್ಷತೆ ವಹಿಸಿದ್ದ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ‘ಇದು ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಯೋಜನೆ. ನಮ್ಮ ಆಡಳಿತ ಅವಧಿಯಲ್ಲಿ ಯೋಜನೆ ಪೂರ್ಣಗೊಂಡು ಸಾರ್ವಜನಿಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ತ್ವರಿತ ಚಾಲನೆಗೆ ಪ್ರಯತ್ನಿಸಿದ್ದು, ರೈತರು ಸಹಕರಿಸಬೇಕು. ಹೆದ್ದಾರಿ ಪ್ರಾಧಿಕಾರದ ಯೋಜನಾಧಿಕಾರಿಗಳು ಯೋಜನೆಗೆ ಭೂಮಿ ಕಳೆದುಕೊಳ್ಳುವ ರೈತರಿಗೆ ಹೆಚ್ಚಿನ ಪರಿಹಾರ ಕೊಟ್ಟು ಧಾರಾತನ ಪ್ರದರ್ಶಿಸಬೇಕು’ ಎಂದು ಮನವಿ ಮಾಡಿದರು.

ಮುತ್ತಾತನ ಕಾಲದಿಂದ ಜಮೀನು ಉಳುಮೆ ಮಾಡಿಕೊಂಡು ಬಂದಿರುತ್ತಾರೆ. ಬದುಕೇ ಆಧಾರವಾದ ಭೂಮಿಯನ್ನು ಬಿಟ್ಟು ಕೊಡುವಾಗ ಎಂತಹವರಿಗಾದರೂ ಕಷ್ಟವಾಗುತ್ತದೆ. ಈ ಭಾವನಾತ್ಮಕ ವಿಚಾರವನ್ನು ಗಮನದಲ್ಲಿಟ್ಟುಕೊಂಡು ರೈತರ ಕೋರಿಕೆಗೆ ಕಿವಿಗೊಡಬೇಕು ಎಂದು ಕೋರಿದರು.

‘ರೈತರೂ ಕೂಡಾ ಯೋಜನೆ ಅನುಷ್ಠಾನಕ್ಕೆ ಸಹಕರಿಸಬೇಕು. ರೈತರ ಕಣ್ಣು ಕಟ್ಟಿ ಹಟಕ್ಕೆ ಬಿದ್ದು ಯೋಜನೆ ಕಾಮಗಾರಿ ಕೈಗೆತ್ತಿಕೊಳ್ಳುವುದಿಲ್ಲ. ಭೂ ಸ್ವಾಧೀನ ಪ್ರಕ್ರಿಯೆ ಹಿನ್ನಡೆಯಾದರೆ ಯಾರಿಗೂ ಪ್ರಯೋಜನವಾಗುವುದಿಲ್ಲ. ಇದಕ್ಕೆ ಉದಾಹರಣೆ ತುಮಕೂರು ರಾಯದುರ್ಗ ರೈಲ್ವೆ ಯೋಜನೆಯೇ ಇದಕ್ಕೆ ಸಾಕ್ಷಿ. ಯೋಜನೆಯಡಿ ಈಗಾಗಲೇ ಆಂಧ್ರಪ್ರದೇಶದಲ್ಲಿ ರೈಲುಗಳು ಓಡಾಡುತ್ತಿವೆ. ನಮ್ಮಲ್ಲಿ ಮಾತ್ರ ಒಂದೇ ಒಂದು ಕಿ.ಮೀ ಹಳಿ ಹಾಕಲು ಸಾಧ್ಯವಾಗಿಲ್ಲ. ಇದೇ ಪರಿಸ್ಥಿತಿ ಈ ರಸ್ತೆಗೂ ಬರಬಾರದು’ ಎಂದು ಹೇಳಿದರು.

ಭೂ ಸ್ವಾಧೀನ ಮತ್ತು ಪರಿಹಾರ ಕುರಿತಂತೆ ಒಬ್ಬೊಬ್ಬ ರೈತರದ್ದು ಒಂದೊಂದು ರೀತಿ ಪ್ರಶ್ನೆಗಳಿದ್ದುದರಿಂದ ಅಧಿಕಾರಿಗಳು ಆಯಾ ಸ್ಥಳಗಳಿಗೆ ಭೇಟಿ ನೀಡಿ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವ ವಿಶ್ವಾಸ ವ್ಯಕ್ತಪಡಿಸಿದರು. ಹೀಗಾಗಿ ಯಾವುದೇ ನಿರ್ಣಯಗಳಿಲ್ಲದೇ ಸಭೆ ಮುಕ್ತಾಯಗೊಂಡಿತು.

ಅಂಕಿ ಅಂಶಗಳು

7,500 ಕೋಟಿ

ಯೋಜನೆ ಕಾಮಗಾರಿಗೆ ನಿಗದಿಪಡಿಸಿದ ಮೊತ್ತ (ಪರಿಹಾರ ಹೊರತುಪಡಿಸಿ)

205 ಕಿ.ಮೀ

ತುಮಕೂರಿನಿಂದ ಶಿವಮೊಗ್ಗದವರೆಗೆ ಚತುಷ್ಪಥ ರಸ್ತೆಯ ಉದ್ದ

140 ಅಡಿಗಳು

ಚತುಷ್ಪಥ ರಸ್ತೆಯ ಅಗಲ

160 ಹೆಕ್ಟೇರ್ಮೊ

ದಲ ಹಂತದ ಕಾಮಗಾರಿಗೆ ಭೂಸ್ವಾಧೀನ

246 ಹೆಕ್ಟೇರ್

2ನೇ ಹಂತದ ಕಾಮಗಾರಿಗೆ ಭೂ ಸ್ವಾಧೀನ

ಚತುಷ್ಪಥ ರಸ್ತೆಯಿಂದ ಪ್ರಯೋಜನಗಳೇನು?

ಚತುಷ್ಪಥ ರಸ್ತೆಯಾಗಿ ಮಾಡುವುದರಿಂದ ತುಮಕೂರಿನಿಂದ ತಿಪಟೂರಿಗೆ ಕೇವಲ 40 ನಿಮಿಷದಲ್ಲಿ (ಈಗ ಒಂದುವರೆ ಗಂಟೆ ಆಗುತ್ತಿದೆ) ಪ್ರಯಾಣಿಸಬಹುದು. ಶಿವಮೊಗ್ಗಕ್ಕೆ ಹೋಗಲು ಬೇರೆ ಮಾರ್ಗಗಳೇ ಇಲ್ಲ. ಈ ಮಾರ್ಗದಿಂದ ಸಮಯ ಮತ್ತು ಹಣ ಉಳಿತಾಯ ಆಗಲಿದೆ ಎಂದು ಯೋಜನಾಧಿಕಾರಿಗಳು ಹೇಳಿದರು.

ಅಹವಾಲು ಹೇಳಿಕೊಂಡ ರೈತರು

ರಸ್ತೆ ಹಾದು ಹೋಗುವ ತುಮಕೂರು, ಗುಬ್ಬಿ, ತಿಪಟೂರು, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ನೂರಾರು ರೈತರು, ತಹಶೀಲ್ದಾರರು, ತುಮಕೂರು ಮತ್ತು ತಿಪಟೂರು ಉಪವಿಭಾಗಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ತುಮಕೂರು ತಾಲ್ಲೂಕು ಮಲ್ಲಸಂದ್ರ, ಕಳ್ಳಿಪಾಳ್ಯ ಹಾಗೂ ತಿಪಟೂರು ಬೈಪಾಸ್‌ ರಸ್ತೆಗೆ ಭೂಮಿ ಕಳೆದುಕೊಳ್ಳುವ ರೈತರು ಅಳಲು ತೋಡಿಕೊಂಡರು. ಪೂರ್ವಜರಿಂದ ಬಂದ ಭೂಮಿಯನ್ನು ಬಿಟ್ಟರೆ ತಮಗೆ ಜೀವನಕ್ಕೆ ಬೇರೆ ಗತಿಯಿಲ್ಲ ಎಂದು ಕಳ್ಳಿಪಾಳ್ಯದ ವೀರಭದ್ರಯ್ಯ, ಹನುಮಂತರಾಯಪ್ಪ ಹಾಗೂ ತಿಪಟೂರಿನ ಎಸ್.ಎನ್. ಸ್ವಾಮಿ ಹಾಗೂ ರೈತ ಮಹಿಳೆಯರಾದ ಆನಂದಮ್ಮ, ದೇವಿರಮ್ಮ ಅವರು ಸಮಸ್ಯೆ ವಿವರಿಸಿದರು.

ಇಂತಹ ಭೂಮಿಯನ್ನು ಬಿಟ್ಟು ಕೊಡುವುದು ಹೇಗೆ? ಸ್ವಾಧೀನ ಪ್ರಕ್ರಿಯೆ ರೂಪು ರೇಶೆ ಸಿದ್ಧಪಡಿಸುವಾಗ  ಸಂಬಂಧಪಟ್ಟ ನಮ್ಮಂತಹ ರೈತರೊಂದಿಗೆ ಸಭೆ ನಡೆಸಿ ಚರ್ಚಿಸಿಲ್ಲ. ಏಕಾಏಕಿ ನೋಟಿಸ್ ನೀಡಲಾಗಿದೆ. ಎಷ್ಟು ಪರಿಹಾರ ಲಭಿಸುತ್ತದೆ? ಯಾರ ಜಮೀನು ಎಷ್ಟು ಹೋಗುತ್ತದೆ? ನ್ಯಾಯಯುತ ಬೆಲೆ ಸಿಗುತ್ತದೆಯೇ? ಭೂಮಿ ಕಳೆದುಕೊಳ್ಳುವ ರೈತರಿಗೆ ಪರ್ಯಾಯ ಭೂಮಿ ಕೊಡಲಾಗುತ್ತದೆಯೇ? ನೀವು ಕೊಡುವ ಪರಿಹಾರ ತೃಪ್ತಿಕರವಾಗಿದೆಯೇ? ಇಂತಹ ಅನೇಕ ಪ್ರಶ್ನೆಗಳಿವೆ. ಇದ್ಯಾವುದಕ್ಕೂ ಸ್ಪಂದಿಸುವ ಕೆಲಸ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry