ಕಿಸಾನ್ ಕಲ್ಯಾಣದಿಂದ ಕೃಷಿ ಆದಾಯ ದ್ವಿಗುಣ

7
ಜಿಲ್ಲೆಯ 25 ಗ್ರಾಮಗಳಲ್ಲಿ ಕಿಸಾನ್‌ ಕಲ್ಯಾಣ ಅಭಿಯಾನ ಅನುಷ್ಠಾನ

ಕಿಸಾನ್ ಕಲ್ಯಾಣದಿಂದ ಕೃಷಿ ಆದಾಯ ದ್ವಿಗುಣ

Published:
Updated:

ಯಾದಗಿರಿ: ಜಿಲ್ಲೆಯ 25 ಗ್ರಾಮಗಳಲ್ಲಿ ಕೃಷಿ ಆದಾಯ ದ್ವಿಗುಣಗೊಳಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಕಿಸಾನ್ ಕಲ್ಯಾಣ ಅಭಿಯಾನವನ್ನು ಕವಡಿಮಟ್ಟಿಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಪ್ರಾರಂಭಿಸಲಾಯಿತು. ಶಹಾಪುರ ತಾಲ್ಲೂಕಿನ ಜೆ. ಬೆನಕನಾಳ ಗ್ರಾಮದಲ್ಲಿ ಶುಕ್ರವಾರ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಮಲ್ಲಿಕಾರ್ಜುನ ಕೆಂಗನಾಳ ಮಾತನಾಡಿ, ‘ಕೇಂದ್ರ ಸರ್ಕಾರದ ಕೃಷಿ ಇಲಾಖೆಯು ಕೃಷಿ ಆದಾಯವನ್ನು 2022 ರವರೆಗೆ ದ್ವಿಗುಣಗೊಳಿಸುವ ಉದ್ದೇಶದಿಂದ ವಿವಿಧ ರಾಜ್ಯಗಳಲ್ಲಿ ಹಲವು ಕೃಷಿಪೂರಕ ಯೋಜನೆಗಳನ್ನು ಹಮ್ಮಿಕೊಂಡಿದೆ. ಕೃಷಿ ಹಾಗೂ ಕೃಷಿಯೇತರ ಗ್ರಾಮೀಣ ಆಧಾರಿತ ಉಪ ಕಸುಬುಗಳಿಗೆ ಆದ್ಯತೆ ನೀಡುವುದರೊಂದಿಗೆ ವಿವಿಧ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ಒಟ್ಟು ಕೃಷಿ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಪ್ರಾಥಮಿಕ ಹಂತದಲ್ಲಿ ದೇಶದ 115 ಹಿಂದುಳಿದ ಜಿಲ್ಲೆಗಳನ್ನು ಮಹತ್ವಾಕಾಂಕ್ಷೆ ಜಿಲ್ಲೆಗಳನ್ನಾಗಿ ಆಯ್ಕೆ ಮಾಡಿ ಕಿಸಾನ್‌ ಕಲ್ಯಾಣ ಯೋಜನೆಯನ್ನು ಆರಂಭಿಸಲಾಗಿದೆ. ರಾಜ್ಯದ ಯಾದಗಿರಿ, ರಾಯಚೂರು ಜಿಲ್ಲೆಗಳು ಈ ಯೋಜನೆಗೆ ಆಯ್ಕೆಗೊಂಡಿವೆ. ಜೂನ್ 1ರಿಂದ ಜುಲೈ 31 ರ ವರೆಗೆ ವಿವಿಧ ಕೃಷಿ ಅಭಿವೃದ್ಧಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದರು.

‘ಜಿಲ್ಲಾಡಳಿತದ ಸಹಕಾರದೊಂದಿಗೆ 25 ಗ್ರಾಮಗಳಲ್ಲಿ ಕೃಷಿ, ತೋಟಗಾರಿಕೆ, ಅರಣ್ಯ, ಪಶುಸಂಗೋಪನೆ, ಮೀನುಗಾರಿಕೆ, ರೇಷ್ಮೆ, ಬೀಜ ನಿಗಮ ಹಾಗೂ ಇತರೆ ಕೃಷಿ ಆಧಾರಿತ ಇಲಾಖೆಗಳ ಸಹಯೋಗದಲ್ಲಿ ವಿವಿಧ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ. ಕೃಷಿ ವಿಜ್ಞಾನ ಕೇಂದ್ರವು ಈ ಕಾರ್ಯಕ್ರಮದಲ್ಲಿ ತಾಂತ್ರಿಕ ಮಾಹಿತಿಗಳ ವರ್ಗಾವಣೆ ಹಾಗೂ 25 ಗ್ರಾಮಗಳಲ್ಲಿ ತರಬೇತಿ ಕೈಗೊಳ್ಳಲು ಕಾರ್ಯಯೋಜನೆಯನ್ನು ರೂಪಿಸಿದೆ. ಪ್ರಮುಖವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಆದಾಯ ಹೆಚ್ಚಿಸುವ ಉಪ ಕಸುಬುಗಳಾದ ಜೇನು ಸಾಕಣೆ, ಎರೆಹುಳ ಗೊಬ್ಬರ ತಯಾರಿಕೆ, ಅಣಬೆ ಬೇಸಾಯ, ಕೈತೋಟ, ಕುರಿ, ಆಡು, ಮೀನು ಸಾಕಣೆ, ಆಹಾರ ಸಂಸ್ಕರಣೆ ಮುಂತಾದವುಗಳ ಬಗ್ಗೆ ತರಬೇತಿ ಮತ್ತು ಮಾಹಿತಿ ನೀಡಲಾಗುವುದು’ ಎಂದು ವಿವರಿಸಿದರು.

ಪಶುತಜ್ಞರಾದ ಡಾ.ಮಹೇಶ, ಸಹಾಯಕ ಕೃಷಿ ನಿರ್ದೇಶಕ ದಾನಪ್ಪ ಕತ್ನಳ್ಳಿ, ಕೃಷಿ ಅಧಿಕಾರಿಗಳು, ವಿವಿಧ ಗ್ರಾಮದ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

‘ಬಿತ್ತನೆ ಪೂರ್ವ ಮಣ್ಣು ಪರೀಕ್ಷೆ ಮಾಡಿಸಿ’

ಜಿಲ್ಲೆಯ ಹಲವಡೆ ಮುಂಗಾರು ಮುಂಚಿತ ಮಳೆ ಆರಂಭವಾಗುತ್ತಿದೆ. ಮಣ್ಣು ಹದವಾಗಿದ್ದಲ್ಲಿ ಬಿತ್ತನೆ ಪೂರ್ವದ ಉಳುಮೆ ಸಹ ಚುರುಕುಗೊಂಡಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಭತ್ತ, ಹತ್ತಿ, ತೊಗರಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುವ ರೈತರು ತಮ್ಮ ಕೃಷಿ ಭೂಮಿಯ ಮಣ್ಣು ಪರೀಕ್ಷೆ ಮಾಡಿಸಿರಿ’ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಮಲ್ಲಿಕಾರ್ಜುನ ಕೆಂಗನಾಳ ರೈತರಿಗೆ ಮನವಿ ಮಾಡಿದರು.

ಮಣ್ಣಿನ ಪರೀಕ್ಷೆ ಆಧರಿಸಿ ಮುಂಗಾರು ಬೆಳೆಗಳಿಗೆ ಗೊಬ್ಬರ ಮತ್ತು ಪೋಷಕಾಂಶಗಳನ್ನು ಒದಗಿಸುವುದರಿಂದ ಹೆಚ್ಚಿನ ಇಳುವರಿ ಪಡೆಯಬಹುದು. ಇದರಿಂದ ರಸಗೊಬ್ಬರ ಮತ್ತು ಬೇಸಾಯದ ಖರ್ಚನ್ನೂ ಕಡಿಮೆ ಮಾಡಬಹುದು. ವೈಜ್ಞಾನಿಕವಾಗಿ ಮಣ್ಣು ಪರೀಕ್ಷೆ ಮಾಡಿಸಿ ಗೊಬ್ಬರಗಳನ್ನು ಹಾಕುವುದರಿಂದ ಬೆಳೆಗಳಲ್ಲಿ ಕೀಟ ಮತ್ತು ರೋಗದ ಬಾಧೆ ಕಡಿಮೆಯಾಗುತ್ತದೆ. ಅದರಲ್ಲಿ ಪ್ರಮುಖವಾಗಿ ಲಘು ಪೋಷಕಾಂಶಗಳ ಸೂಕ್ತ ಬಳಕೆಯಿಂದ ಬೆಳೆಗಳಲ್ಲಿ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು ಎಂದು ಸಲಹೆ ನೀಡಿದರು.

ಕವಡಿಮಟ್ಟಿಯ ಕೃಷಿ ವಿಜ್ಞಾನ ಕೇಂದ್ರ, ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯ, ಕೃಷ್ಣಾಪೂರ ಮಣ್ಣು ಪ್ರಯೋಗಾಲಯಗಳಲ್ಲಿ ರೈತರು ತಮ್ಮ ಹೊಲಗಳ ಮಣ್ಣು ಪರೀಕ್ಷೆ ಮಾಡಿಸಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರ ಮೊಬೈಲ್‌: 98453 64708, 94806 96349 ಕರೆ ಮಾಡಬಹುದು.

**

ಕೃಷಿ ಎಂದರೆ ಲಾಭ ಇಲ್ಲದ ವ್ಯರ್ಥ ಕೆಲಸ ಎಂಬುದೇ ಹೆಚ್ಚಿನ ಅಭಿಪ್ರಾಯವಾಗಿದೆ. ಅದನ್ನು ಸುಳ್ಳಾಗಿಸಲು ಕಿಸಾನ್‌ ಕಲ್ಯಾಣ ಅಭಿಯಾನ ಆರಂಭಿಸಲಾಗಿದೆ

ಡಾ.ಮಲ್ಲಿಕಾರ್ಜುನ ಕೆಂಗನಾಳ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry