4
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘ, ಹಸಿರು ಸೇನೆ ಪ್ರತಿಭಟನೆ

ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ

Published:
Updated:
ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ

ಮಾಗಡಿ: ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರೈತರ ಸಮಸ್ಯೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ರೈತ ಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್‌ ಮಾತನಾಡಿ, ಒಂದು ವರ್ಷದಿಂದ ರೈತರ ಕೆಲಸ ಮಾಡಿಕೊಡುವಲ್ಲಿ ಸರ್ವೇ ಇಲಾಖೆ, ದಾಖಲೆ ಕೊಠಡಿಯಲ್ಲಿ ವಿಳಂಬ ಮಾಡುತ್ತಿದ್ದಾರೆ. ಪ್ರತಿ ತಿಂಗಳು ಹೋಬಳಿಗೊಂದು ರೈತರ ಸಭೆ ಕರೆದು ಸಮಸ್ಯೆ ಬಗೆಹರಿಸಬೇಕು. ಆಧಾರ್‌ ಕಾರ್ಡ್‌ ತಿದ್ದುಪಡಿ ಮಾಡಿಕೊಡಲು ತಹಶೀಲ್ದಾರ್‌ ಕಚೇರಿಯಲ್ಲಿ ಪ್ರತ್ಯೇಕ ಕೊಠಡಿ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಕಂದಾಯ ಇಲಾಖೆ ಅಧಿಕಾರಿಗಳು ರೈತನೊಬ್ಬನ ಭೂಮಿ ಬೇರೆ ಒಬ್ಬರಿಗೆ ಖಾತೆ ಮಾಡಿಕೊಟ್ಟಿರುವುದರ ವಿರುದ್ಧ ನೌಕರನ ಮೇಲೆ ಕಠಿಣ ಕ್ರಮ ಕೈಗೊಂಡು ಖಾತೆ ಬದಲಾವಣೆ ಸರಿಪಡಿಸಬೇಕು. ಮಳೆಗಾಳಿಯಿಂದ ಉಂಟಾಗಿರುವ ನಷ್ಟ ರೈತರಿಗೆ ತುಂಬಿಕೊಡಬೇಕು. ತಾಲ್ಲೂಕು ಕಚೇರಿ ಮುಂಭಾಗದಲ್ಲಿನ ಸಾರ್ವಜನಿಕ ಶೌಚಾಲಯ ದುರಸ್ತಿಪಡಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ತಹಶೀಲ್ದಾರ್‌ ಎನ್‌.ಶಿವಕುಮಾರ್‌ ರೈತರ ಸಮಸ್ಯೆ ಶೀಘ್ರವಾಗಿ ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿ, ಪ್ರತಿಭಟನೆ ನಿಲ್ಲಿಸುವಂತೆ ಮನವಿ ಮಾಡಿದರು. ತಹಶೀಲ್ದಾರರ ಮನವಿ ಮೇರೆಗೆ ರೈತರು ಪ್ರತಿಭಟನೆ ಕೈಬಿಟ್ಟುರು.

ರೈತ ಸಂಘದ ತಾಲ್ಲೂಕು ಕಾರ್ಯದರ್ಶಿ ಮಧುಗೌಡ, ಕಾರ್ಯದರ್ಶಿ ಮಂಜುನಾಥ ಆರ್‌., ನಂಜುಂಡಯ್ಯ, ದೊಡ್ಡರಂಗಯ್ಯ, ಬೆಟ್ಟೇಗೌಡ, ರಾಜಣ್ಣ, ಸೀಮೇ ಎಣ್ಣೆ ರಾಜಣ್ಣ, ರಂಗಸ್ವಾಮಿ, ಗಂಗರಾಜು ರೈತರ ಸಮಸ್ಯೆ ಕುರಿತು ಮಾತನಾಡಿದರು.

ರೈತರು ದನಕರುಗಳೊಂದಿಗೆ ಪ್ರತಿಭಟಿಸಿದರು. ಸಬ್‌ ಇನ್‌ಪೆಕ್ಟರ್‌ ಅಶೋಕ್‌ ಸಿಬ್ಬಂದಿ ಸ್ಥಳದಲ್ಲಿದ್ದರು. ಸರ್ವೇ ಇಲಾಖೆ ಅಧಿಕಾರಿ ನಂಜುಂಡಯ್ಯ ರೈತರ ಪ್ರಶ್ನೆಗಳಿಗೆ ಉತ್ತರಿಸಿದರು. ರೈತ ಸಂಘದ ಪದಾಧಿಕಾರಿಗಳು ರೈತರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry