ದಲಿತರಿಗೆ ಬಹಿಷ್ಕಾರ; ಸಿಗದ ಕೂಲಿ ಕೆಲಸ

7
ಹೂಗ್ಯಂ ಗ್ರಾಮದಲ್ಲಿ ಶಾಂತಿ ಸಭೆ ನಡೆಸಿದ ಅಧಿಕಾರಿಗಳು

ದಲಿತರಿಗೆ ಬಹಿಷ್ಕಾರ; ಸಿಗದ ಕೂಲಿ ಕೆಲಸ

Published:
Updated:

ಹನೂರು: ತಾಲ್ಲೂಕಿನ ಹೂಗ್ಯಂ ಗ್ರಾಮದಲ್ಲಿ ಪರಿಶಿಷ್ಟ ಜಾತಿಯವರಿಗೆ ಹೋಟೆಲ್, ಸಲೂನ್‌ಗಳಿಗೆ ನಿಷೇಧ ವಿಧಿಸಲಾಗಿದೆ. ಕೂಲಿ ಕೆಲಸವನ್ನೂ ನೀಡುತ್ತಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಶಾಂತಿ ಸಭೆ ನಡೆಸಿದರು.

ಮೇಲ್ವರ್ಗದ ಜನರು ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಪರಿಶಿಷ್ಟ ಜಾತಿಯ ಮುಖಂಡರು ಜಿಲ್ಲಾಧಿಕಾರಿಗಳಿಗೆ ಇತ್ತೀಚೆಗೆ ದೂರು ನೀಡಿದ್ದರು.

‘ಪರಿಶಿಷ್ಟ ಜಾತಿ ಎನ್ನುವ ಕಾರಣಕ್ಕೆ ನಮಗೆ ಕೂಲಿ ಕೆಲಸ ಕೊಡುತ್ತಿಲ್ಲ. ಬೇರೆ ಗ್ರಾಮಗಳಲ್ಲೂ ಕೆಲಸ ನೀಡದಂತೆ ಅಲ್ಲಿನ ಜಮೀನು ಮಾಲೀಕರಿಗೆ ಇಲ್ಲಿನ ಮೇಲ್ವರ್ಗದವರು ತಾಕೀತು ಮಾಡಿದ್ದಾರೆ. ಹೀಗಾಗಿ, ಕೂಲಿ ಕೆಲಸವಿಲ್ಲದೆ ತೊಂದರೆ ಅನುಭವಿಸುತ್ತಿದ್ದೇವೆ’ ಎಂದು ಗ್ರಾಮದ ಮೈಲಿ ಎಂಬುವರು ಅಳಲು ತೋಡಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ರಾಜು, ‘ಗ್ರಾಮದಲ್ಲಿ ಪರಿಶಿಷ್ಟ ಜಾತಿಯ 150ಕ್ಕೂ ಹೆಚ್ಚು ಕುಟುಂಬಗಳಿವೆ. ಆದರೆ, ಅವರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ (ನರೇಗಾ) ಜಾಬ್‌ ಕಾರ್ಡ್‌ಗಳನ್ನು ಏಕೆ ವಿತರಿಸಿಲ್ಲ’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

‘ಎಲ್ಲಾ ಕುಟುಂಬಗಳಿಗೂ ಜಾಬ್‍ ಕಾರ್ಡ್‌ಗಳನ್ನು ನೀಡಿ ನರೇಗಾ ಯೋಜನೆಯಡಿ ಕೆಲಸ ಕೊಡಬೇಕು’ ಎಂದು ತಾಕೀತು ಮಾಡಿದ ಅವರು, ಜಾಬ್‍ ಕಾರ್ಡ್‌ಗಳ ವಿತರಣೆ ವಿಳಂಬವಾದರೆ ಕೂಡಲೇ ದೂರು ನೀಡುವಂತೆ ಗ್ರಾಮಸ್ಥರಿಗೆ ತಿಳಿಸಿದರು.

ಗ್ರಾಮದ ಮುನಿಯಪ್ಪ ಮಾತನಾಡಿ, ‘ಈ ಹಿಂದೆ ಗ್ರಾಮದಲ್ಲಿ ಇದೇ ಪರಿಸ್ಥಿತಿ ಉಂಟಾದಾಗ ಅಧಿಕಾರಿಗಳು ಶಾಂತಿ ಸಭೆ ನಡೆಸಿದ್ದರು. ಈ ವೇಳೆ ಇನ್ನುಮುಂದೆ ತಾರತಮ್ಯ ಮಾಡುವುದಿಲ್ಲ ಎಂದು ಮೇಲ್ವರ್ಗದ ಮುಖಂಡರು ಭರವಸೆ ನೀಡಿದ್ದರು. ಆದರೆ, ಈಗ ಅದನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಯಾವುದೇ ಹೋಟೆಲ್, ಕಟಿಂಗ್‍ ಶಾಪ್‍ಗಳಿಗೆ ಹೋಗುವಂತಿಲ್ಲ. ಇದನ್ನು ಪ್ರಶ್ನಿಸಿದರೆ ಬೆದರಿಕೆ ಹಾಕುತ್ತಾರೆ’ ಎಂದು ದೂರಿದರು.

ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸತೀಶ್ ಮಾತನಾಡಿ, ‘ಗ್ರಾಮದಲ್ಲಿ ಸಮುದಾಯಗಳ ನಡುವೆ ತಾರತಮ್ಯ ನೀತಿ ಅನುಸರಿಸುವುದು ಕಾನೂನುಬಾಹಿರ. ಎಲ್ಲಾ ಕೋಮಿನ ಮುಖಂಡರು ಪರಸ್ಪರ ಸೌಹಾರ್ದದಿಂದ ವರ್ತಿಸಬೇಕು’ ಎಂದು ಸೂಚಿಸಿದರು.

ಡಿವೈಎಸ್‍ಪಿ ಪುಟ್ಟಮಾದಯ್ಯ, ಕೊಳ್ಳೇಗಾಲ ತಹಶೀಲ್ದಾರ್ ಮೋಹನ್‍ಕುಮಾರ್, ಹನೂರು ವಿಶೇಷ ತಹಶೀಲ್ದಾರ್ ಮಹದೇವಸ್ವಾಮಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳಾ, ಸಿಬ್ಬಂದಿ ಮಂಜುನಾಥ್, ರಾಮಪುರ ಪೊಲೀಸ್ ಠಾಣೆಯ ಸಿಪಿಐ ಪ್ರಭಾಕರ್, ಕಂದಾಯ ನಿರೀಕ್ಷಕ ರಾಜಶೇಖರ್, ಗ್ರಾಮ ಲೆಕ್ಕಿಗ ಶರವಣ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry