ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಲೆಕಾಯಿ, ಚಹಾ ನೀಡಿ ಪ್ರತಿಭಟನೆ!

11ನೇ ದಿನಕ್ಕೆ ಕಾಲಿಟ್ಟ ಗ್ರಾಮೀಣ ಅಂಚೆ ನೌಕರರ ಮುಷ್ಕರ
Last Updated 2 ಜೂನ್ 2018, 9:05 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಮೀಣ ಅಂಚೆ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಶುಕ್ರವಾರ 11ನೇ ದಿನಕ್ಕೆ ಕಾಲಿಟ್ಟಿತು. ಸಾರ್ವಜನಿಕರಿಗೆ ಕಡಲೆಕಾಯಿ, ಚಹಾ ನೀಡಿ ವಿಭಿನ್ನವಾಗಿ ಪ್ರತಿಭಟನೆ ಮಾಡಿದರು.

ಪ್ರತಿಭಟನಾನಿರತರು ಪ್ರಧಾನ ಅಂಚೆ ಕಚೇರಿ ಆವರಣದಿಂದ ಆಜಾದ್‌ ಪಾರ್ಕ್‌ ವೃತ್ತಕ್ಕೆ ತೆರಳಿ ಪ್ರತಿಭಟನೆ ಮಾಡಿದರು. ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘ (ಎಐಜಿಡಿಎಸ್‌ಯು) ಮತ್ತು ರಾಷ್ಟ್ರೀಯ ಗ್ರಾಮೀಣ ಅಂಚೆ ಸೇವಕರ ಸಂಘದ (ಎನ್‌ಯುಜಿಡಿಎಸ್‌) ಚಿಕ್ಕಮಗಳೂರು ವಿಭಾಗದ ಸದಸ್ಯರು ಪಾಲ್ಗೊಂಡಿದ್ದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಎಐಜಿಡಿಎಸ್‌ಯು ಜಿಲ್ಲಾ ಘಟಕದ ಕಾರ್ಯದರ್ಶಿ ಜೋಸೆಫ್‌ ಬಾರೆಟ್ಟೊ ಮಾತನಾಡಿ, ‘ಗ್ರಾಮೀಣ ಅಂಚೆ ನೌಕರರ ಬೇಡಿಕೆಗಳ ಪರಿಶೀಲನೆ ನಿಟ್ಟಿನಲ್ಲಿ ಸರ್ಕಾರವೇ ಕಮಲೇಶ್ ಚಂದ್ರ ನೇತೃತ್ವದ ಸಮಿತಿಯನ್ನು ನೇಮಕ ಮಾಡಿತ್ತು. ಸಮಿತಿಯು ವರದಿ ನೀಡಿ ಒಂದೂವರೆ ವರ್ಷ ಆಗಿದೆ. ಆದರೂ ವರದಿಯನ್ನು ಜಾರಿಗೊಳಿಸಲು ಸರ್ಕಾರ ಸತಾಯಿಸುತ್ತಿದೆ’ ಎಂದು ದೂಷಿಸಿದರು.

ದೇಶದಲ್ಲಿ ಸುಮಾರು 1.36 ಲಕ್ಷ ಅಂಚೆ ಕಚೇರಿಗಳು ಗ್ರಾಮೀಣ ಪ್ರದೇಶದಲ್ಲಿ ಇವೆ. ಗ್ರಾಮೀಣ ಅಂಚೆ ನೌಕರರು ಇಲಾಖೆಯ ನೌಕರರಂತೆಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಸರ್ಕಾರವು ಗ್ರಾಮೀಣ ಅಂಚೆ ನೌಕರರಿಗೆ ಸವಲತ್ತು ನೀಡುತ್ತಿಲ್ಲ ಎಂದು ಆರೋಪಿಸಿದರು.

ಸಮಾನ ಕೆಲಸಕ್ಕೆ ಸಮಾನ ವೇತನ ಸಂವಿಧಾನದ ಆಶಯವಾಗಿದೆ. ಆದರೆ, ಸರ್ಕಾರ ಇದನ್ನು ಪಾಲಿಸುತ್ತಿಲ್ಲ. ಪ್ರಧಾನಿ ಮೋದಿ ಅವರು ಲಕ್ಷಾಂತರ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿದ್ದಾರೆ. ಆದರೆ, ಹಾಲಿ ನೌಕರರಿಗೆ ಸರಿಯಾಗಿ ಸವಲತ್ತು ನೀಡುತ್ತಿಲ್ಲ. ಗ್ರಾಮೀಣ ಅಂಚೆ ನೌಕರರಿಗೆ ಬಿಪಿಎಲ್‌ ಕಾರ್ಡ್‌, ವಸತಿ ಯೋಜನೆ ಮೊದಲಾದ ಸೌಲಭ್ಯಗಳು ಸಿಗುತ್ತಿಲ್ಲ. ಮಹಿಳಾ ನೌಕರರಿಗೆ ಕೇವಲ ಮೂರು ತಿಂಗಳು ಹೆರಿಗೆ ರಜೆ ನೀಡುತ್ತಾರೆ ಎಂದು ಆಪಾದಿಸಿದರು.

ಗ್ರಾಮೀಣ ಅಂಚೆ ನೌಕರರಿಗೆ 3 ರಿಂದ 5 ಗಂಟೆ ಕೆಲಸ ನಿಗದಿ ಮಾಡಿ 8 ರಿಂದ 10 ಗಂಟೆ ದುಡಿಸಿಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿ ಮಾಡಿದ್ದಾರೆ. ಆದರೆ, ಗ್ರಾಮೀಣ ಅಂಚೆ ನೌಕರರ ಬೇಡಿಕೆಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಷ್ಕರದಿಂದಾಗಿ ಕೇರಳದಲ್ಲಿ ಸುಮಾರು 18 ಸಾವಿರ ಪಾಸ್‌ಪೋರ್ಟ್‌ ಪತ್ರಗಳು ವಿಲೇವಾರಿಯಾಗಿಲ್ಲ. ಆಧಾರ್‌ ಕಾರ್ಡ್‌, ಚಾಲನಾ ಪರವಾನಗಿ ಪತ್ರ, ಉದ್ಯೋಗ ನೇಮಕಾತಿ ಪತ್ರಗಳು, ಬಾಂಡ್‌ಗಳು ವಿಲೇವಾರಿಯಾಗಿಲ್ಲ. ಗ್ರಾಮೀಣ ಅಂಚೆ ಸೇವೆ ಇಲ್ಲದೇ ಸಾರ್ವಜನಿಕರಿಗೆ ತೊಂದರೆಯಾಗಿದೆ. ಆದರೆ, ಸರ್ಕಾರವು ಭಂಡತನ ಪ್ರದರ್ಶಿಸುತ್ತಿದೆ. ಬೇಡಿಕೆ ಈಡೇರಿಸುವವರೆಗೆ ಹೋರಾಟ ಕೈಬಿಡಲ್ಲ’ ಎಂದು ಹೇಳಿದರು.

ಸಿಪಿಐ ಮುಖಂಡ ಬಿ.ಅಮ್ಜದ್‌, ರೈತ ಮುಖಂಡ ಗುರುಶಾಂತಪ್ಪ, ದಲಿತ ಸಂಘಟನೆಯ ಅಣ್ಣಯ್ಯ, ಅಂಚೆ ಸೇವಕರ ಸಂಘದ ಪದಾಧಿಕಾರಿಗಳಾದ ಕೆ.ಟಿ.ಶೇಷನ್ಣಗೌಡ, ವಿರೂಪಾಕ್ಷಪ್ಪ, ಕೃಷ್ಣರಾವ್‌, ಮಿಥುನ್‌ಕುಮಾರ್‌, ರವಿಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT