ಸೌಕರ್ಯ ಕಾಣದ ಜಲಾಶಯ

7
ನಿರ್ವಹಣೆ ಕೊರತೆ, ದುರಸ್ತಿಯಾಗದ ರಂಗಯ್ಯನದುರ್ಗ ಜಲಾಶಯ ರಸ್ತೆ

ಸೌಕರ್ಯ ಕಾಣದ ಜಲಾಶಯ

Published:
Updated:
ಸೌಕರ್ಯ ಕಾಣದ ಜಲಾಶಯ

ಮೊಳಕಾಲ್ಮುರು: ತಾಲ್ಲೂಕಿನ ರಂಗಯ್ಯನದುರ್ಗ ಜಲಾಶಯ ಮೂಲ ಸೌಕರ್ಯ ಇಲ್ಲದೆ ಇದ್ದೂ ಇಲ್ಲದಂತಾಗಿದೆ. 1975ರಲ್ಲಿ ಶಂಕುಸ್ಥಾಪನೆಯಾಗಿರುವ ಈ ಜಲಾಶಯದ ಕಾಮಗಾರಿ ಮುಗಿದು 43 ವರ್ಷದರೂ ಇನ್ನೂ ಅಪೂರ್ಣವಾಗಿದೆ. ಜಲಾಶಯ ಪೂರ್ಣವಾಗಿಲ್ಲ ಎಂಬ ಕಾರಣ ಜಲಾಶಯ ನಿರ್ವಹಣೆಗೆ ಅನುದಾನ ನೀಡದ ಕಾರಣ ದುರಸ್ತಿ, ನಿರ್ವಹಣೆ ಸೇರಿದಂತೆ ಹಲವು ತಾಂತ್ರಿಕ ಸಮಸ್ಯೆಗಳು ಕಾಡುತ್ತಿವೆ ಎಂದು ಸ್ಥಳೀಯರು ದೂರುತ್ತಾರೆ.

‘ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದ್ದು, ಒಟ್ಟು ಸಾಮರ್ಥ್ಯ 540 ಎಂಎಫ್‌ಎಸ್‌ (ಅಂದಾಜು 0.5 ಟಿಎಂಸಿ ). 900 ಮೀಟರ್ ಉದ್ದವಿದ್ದು, 38 ಅಡಿ ಎತ್ತರವಿದೆ. 6,350 ಎಕರೆ ಅಚ್ಚುಕಟ್ಟಿಗೆ ನೀರುಣಿಸುವ ಸಾಮರ್ಥ್ಯ ಹೊಂದಿದೆ. ಜಲಾಶಯ ತುಂಬಲು ಜಗಳೂರು, ಕೂಡ್ಲಿಗಿ ತಾಲ್ಲೂಕಿನಲ್ಲಿ ಅರಣ್ಯ ಪ್ರದೇಶದ ಮಳೆ ನೀರು ಮೂಲವಾಗಿದೆ. ಜಲಾಶಯದಲ್ಲಿ ಹೂಳು ತುಂಬಿಕೊಂಡಿದೆ. ಅನುದಾನದ ಕೊರತೆಯಿಂದ ಹೂಳೆತ್ತಿರುವ ಕಾರ್ಯ ನಡೆದಿಲ್ಲ’ ಎಂದು ಜನಸಂಸ್ಥಾನ ಸಂಸ್ಥೆಯ ಕಾರ್ಯದರ್ಶಿ ವಿರೂಪಾಕ್ಷಪ್ಪ, ಸಿಪಿಐನ ಜಾಫರ್‌ ಷರೀಫ್‌ ದೂರುತ್ತಾರೆ.

‘ಜಲಾಶಯ ಕಾಮಗಾರಿ ಹಣ ಪಾವತಿಗೆ ಸಂಬಂಧಪಟ್ಟಂತೆ ಪ್ರಕರಣ ನ್ಯಾಯಾಲಯದಲ್ಲಿದೆ. ಪ್ರಕರಣ ದಾಖಸಿರುವ ಮೂಲ ಗುತ್ತಿಗೆದಾರರು ನಿಧನ ಹೊಂದಿದ್ದಾರೆ. ಪ್ರಸ್ತುತ 20 ಕಿಮೀ ಎಡದಂಡೆ ನಾಲೆ ಪೈಕಿ 13 ಕಿಮೀ, 14 ಕಿಮೀ ಬಲದಂಡೆ ನಾಲೆ ಪೈಕಿ 13 ಕಿಮೀನಷ್ಟು ಮಾಡಲಾಗಿದೆ’ ಎಂದು ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್‌ ರಮೇಶ್‌ ಮಾಹಿತಿ ನೀಡಿದರು.

‘ಜಲಾಶಯಕ್ಕೆ ಸಮರ್ಪಕ ವಿದ್ಯುತ್‌ ಸಂಪರ್ಕ ಕಲ್ಪಿಸಿಲ್ಲ. ಗೇಟ್‌ಗಳನ್ನು ಎತ್ತಿ ಇಳಿಸಲು ವಿದ್ಯುತ್‌ ಜನರೇಟರ್‌ ಬಳಸಲಾಗುತ್ತಿದೆ. ಗೇಟ್‌ಗಳ ನಿರ್ವಹಣೆಗೂ ಹಣ ಬಿಡುಗಡೆ ಮಾಡುತ್ತಿಲ್ಲ. ರಾತ್ರಿ ಕಾವಲುಗಾರ ಸೌಲಭ್ಯ ಕಲ್ಪಿಸದ ಕಾರಣ ಅನೇಕ ಬಾರಿ ರಾತ್ರಿ ವೇಳೆ ನೀರು ಹರಿದಿದೆ. ಜಲಾಶಯ ಸಂಪರ್ಕ ರಸ್ತೆ ಪೂರ್ಣ ಹದಗೆಟ್ಟಿದ್ದು ವಾಹನ ಸಂಚಾರ ದುಸ್ತರವಾಗಿದೆ. ಹಲವು ವರ್ಷಗಳಿಂದ ರಸ್ತೆ ದುರಸ್ತಿ ಮನವಿಗೆ ಯಾವ ಇಲಾಖೆಯೂ ಸ್ಪಂದಿಸುತ್ತಿಲ್ಲ’ ಎಂಬುದು ಸ್ಥಳೀಯರ ಆರೋಪ.

**

ಈಚೆಗೆ ಶಾಸಕ ಬಿ. ಶ್ರೀರಾಮುಲು ಜಲಾಶಯಕ್ಕೆ ಭೇಟಿ ನೀಡಿದ್ದಾರೆ. ಸೌಕರ್ಯ ಕಲ್ಪಿಸುವ ಭರವಸೆ ನೀಡಿದ್ದಾರೆ. ಇದು ಶೀಘ್ರ ಕಾರ್ಯರೂಪಕ್ಕೆ ಬರಲಿ

– ಜಿ.ಸಿ. ನಾಗರಾಜ್‌, ಶಿಕ್ಷಕ 

**

ಶಾಶ್ವತ ಬರಪೀಡಿತವಾಗಿರುವ ಈ ತಾಲ್ಲೂಕಿನ ನೆರವಿಗೆ ರಂಗಯ್ಯನದುರ್ಗ ಜಲಾಶಯಕ್ಕೆ ಯಾವುದಾದರೂ ಮೂಲದಿಂದ ನೀರು ಹರಿಸಲಿ

ಶಿವಮೂರ್ತಿ, ರೈತ ಮುಖಂಡ 

–ಕೊಂಡ್ಲಹಳ್ಳಿ ಜಯಪ್ರಕಾಶ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry