ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕ ಹಾಲು ಒಕ್ಕೂಟಕ್ಕೆ ಮತ್ತೆ ಮನವಿ

ಜಿಲ್ಲೆಯಲ್ಲಿ ಹೈನುಗಾರಿಕೆ ಹೆಚ್ಚಳಕ್ಕೆ ಅಗತ್ಯ ಸಿದ್ಧತೆ: ಬಸವರಾಜ ಅರಬಗೊಂಡ
Last Updated 2 ಜೂನ್ 2018, 9:46 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಗೆ ಪ್ರತ್ಯೇಕ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಮಂಜೂರು ಮಾಡುವಂತೆ ಈ ಹಿಂದೆ ರಾಜ್ಯ ಸರ್ಕಾರಕ್ಕೆ ಎರಡು ಬಾರಿ ಮನವಿ ನೀಡಿದ್ದರೂ, ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿರಲಿಲ್ಲ. ಹೀಗಾಗಿ, ಮತ್ತೊಮ್ಮೆ ನೂತನ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಧಾರವಾಡ, ಹಾವೇರಿ, ಗದಗ ಮತ್ತು ಉತ್ತರ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನಿರ್ದೇಶಕ ಬಸವರಾಜ ಅರಬಗೊಂಡ ಹೇಳಿದರು.

ಹಾಲು ಉತ್ಪಾದನೆಯಲ್ಲಿ ದೇಶದಲ್ಲಿ ರಾಜ್ಯವು ಎರಡನೇ ಸ್ಥಾನದಲ್ಲಿದ್ದರೆ, ಜಿಲ್ಲೆಯು ರಾಜ್ಯದಲ್ಲೇ 2ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಧಾರವಾಡ ಹಾಲು ಒಕ್ಕೂಟವು ಮುಂಚೂಣಿಯಲ್ಲಿದೆ. ಜಿಲ್ಲೆಯಲ್ಲಿ ಹೈನುಗಾರಿಕೆಯೂ ಹೆಚ್ಚಾಗುತ್ತಿದ್ದು, ಪ್ರತ್ಯೇಕ ಹಾಲು ಒಕ್ಕೂಟಕ್ಕೆ ಹಲವು ವರ್ಷಗಳಿಂದ ಹೋರಾಟ ಮಾಡಲಾಗುತ್ತಿದೆ ಎಂದು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಈ ಬಗ್ಗೆ ಈಗಿನ ‘ಧಾರವಾಡ’ ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ಸಾಕಷ್ಟು ಬಾರಿ ಚರ್ಚೆ ಮಾಡಿ, ತೀರ್ಮಾನ ಕೈಗೊಂಡು, ಸರ್ಕಾರಕ್ಕೆ ಕಳುಹಿಸಿ ಕೊಡಲಾಗಿದೆ ಎಂದ ಅವರು, ಇದರ ಜೊತೆ ಡಿಸಿಸಿ ಬ್ಯಾಂಕ್ ಸ್ಥಾಪನೆಯೂ ಅವಶ್ಯಕತೆ ಇದೆ ಎಂದರು.

ಜಿಲ್ಲೆಯಲ್ಲಿ 450 ಹಾಲು ಉತ್ಪಾದಕ ಸಹಕಾರಿ ಸಂಘಗಳಿದ್ದು, ಇನ್ನುಳಿದ ಗ್ರಾಮಗಳಲ್ಲಿಯೂ ಸಂಘಗಳನ್ನು ಸ್ಥಾಪಿಸಲಾಗುವುದು. ಪ್ರತ್ಯೇಕ ಹಾಲು ಒಕ್ಕೂಟಕ್ಕೆ ಅವಶ್ಯವಾದ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕಾಗಿದೆ. ಅದಕ್ಕಾಗಿ, ನಗರ ಸಮೀಪದ ಗಾಂಧಿಪುರದಲ್ಲಿ ಸುಮಾರು ₹200 ಕೋಟಿ ವೆಚ್ಚದಲ್ಲಿ ‘ಮಿನಿ ಡೇರಿ’ ನಿರ್ಮಾಣಕ್ಕೆ ಯೋಜನಾ ವರದಿ ತಯಾರಿಸಲು ಎನ್‌.ಡಿ.ಪಿಗೆ (ರಾಷ್ಟ್ರೀಯ ಡೇರಿ ಯೋಜನೆ) ನೀಡಲಾಗಿದೆ ಎಂದರು.

‘ಮಿನಿ ಡೇರಿ’ ನಿರ್ಮಾಣಕ್ಕೆ ಎನ್‌.ಡಿ.ಪಿ. ಸಾಲ ನೀಡಲು ಸಿದ್ಧವಿದೆ. ಆದರೆ, ಸಾಲ ಮರು ಪಾವತಿಯು ಕಷ್ಟಸಾಧ್ಯ ಎಂಬ ಉದ್ದೇಶದಿಂದ, ಸರ್ಕಾರದಿಂದ ಅನುದಾನ ಕೇಳಿದ್ದೇವೆ. ಕೇಂದ್ರ ಸರ್ಕಾರದ ಪಿ.ಪಿ.ಪಿ. (ಸರ್ಕಾರಿ–ಖಾಸಗಿ ಸಹಭಾಗಿತ್ವ) ಮೂಲಕ ಅನುದಾನ ಪಡೆ
ಯುವ ಪ್ರಯತ್ನವೂ ನಡೆದಿದೆ ಎಂದರು. ಪಿಪಿಪಿಗೆ ರಾಜ್ಯ ಸರ್ಕಾರದ ಅನುಮತಿ ಕಡ್ಡಾಯ. ಅದನ್ನು ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ ಎಂದರು.

ಹಾಲು ಪರೀಕ್ಷೆ:  ಜಿಲ್ಲೆಯ ಪ್ರತಿ ಸಂಘಗಳಲ್ಲಿ ನೂತನ ತಂತ್ರಜ್ಞಾನ ಹೊಂದಿದ ಯಂತ್ರಗಳ ಮೂಲಕ ಹಾಲನ್ನು ಪರೀಕ್ಷಿಸಿ, ತೆಗೆದುಕೊಳ್ಳಲಾಗುತ್ತಿದೆ. ಹೀಗಾಗಿ ಹಾಲಿಗೆ ಸಕ್ಕರೆ, ನೀರು ಅಥವಾ ಇತರ ಪದಾರ್ಥಗಳನ್ನು ಸೇರಿಸಿದರೆ ಪತ್ತೆಯಾಗುತ್ತದೆ. ಪ್ರತಿ ಎರಡು ಸೆಕೆಂಡಿಗೆ ಒಂದು ಜಾನುವಾರಿನ ಹಾಲನ್ನು ಪರೀಕ್ಷಿಸಲಾಗುತ್ತಿದೆ ಎಂದರು ಒಕ್ಕೂಟದ ನಿರ್ದೇಶಕ ಹನುಮಂತಗೌಡ ಭರಮಣ್ಣನವರ ಇದ್ದರು.

ಧಾರವಾಡ, ಹಾವೇರಿ, ಗದಗ ಮತ್ತು ಉತ್ತರ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಪ್ರತಿನಿತ್ಯದ ಹಾಲಿನ ವಿವರ

ಪ್ರತಿನಿತ್ಯ ಹಾಲು ಉತ್ಪಾದನೆ– 2.5 ಲಕ್ಷ ಲೀಟರ್
ವ್ಯಾಪ್ತಿಯೊಳಗೆ ಹಾಲು ಮಾರಾಟ– 90 ಸಾವಿರ ಲೀಟರ್
ಉತ್ಪನ್ನಗಳ ತಯಾರಿ– 10 ಸಾವಿರ ಲೀಟರ್
ಕ್ಷೀರಭಾಗ್ಯ ಯೋಜನೆಗೆ ಹಾಲು– 50 ಸಾವಿರ ಲೀಟರ್
ಇತರ ಪ್ರದೇಶ ಮತ್ತು ರಾಜ್ಯಗಳಿಗೆ ಹಾಲು ಪೂರೈಕೆ– 1 ಲಕ್ಷ ಲೀಟರ್

**
ಜಿಲ್ಲೆಯ ಹಾಲು ಉತ್ಪಾದಕರ ಖಾತೆಗೆ 10 ದಿನಗಳಿಗೊಮ್ಮೆ ಹಣ ಜಮಾ ಮಾಡಲಾಗುತ್ತಿದೆ. ರಾಜ್ಯ ಸರ್ಕಾರದ ಪ್ರೋತ್ಸಾಹಧನವು ಮೂರು ತಿಂಗಳಿಗೊಮ್ಮೆ ಜಮಾ ಆಗುತ್ತಿದೆ
ಬಸವರಾಜ ಅರಬಗೊಂಡ, ನಿರ್ದೇಶಕ, ಧಾರವಾಡ, ಹಾವೇರಿ, ಗದಗ ಮತ್ತು ಉತ್ತರ ಕನ್ನಡ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT