7
ವೈದ್ಯರು, ಸಿಬ್ಬಂದಿಗೆ ಶಿಸ್ತು ಕ್ರಮದ ಎಚ್ಚರಿಕೆ

ಆಸ್ಪತ್ರೆ ಅವ್ಯವಸ್ಥೆ: ಶಾಸಕ ಗರಂ

Published:
Updated:

ಭಟ್ಕಳ: ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಶಾಸಕ ಸುನೀಲ್ ನಾಯ್ಕ ಶುಕ್ರವಾರ ದಿಢೀರ್ ಭೇಟಿ ನೀಡಿದರು. ಆಸ್ಪತ್ರೆಯ ಪ್ರತಿಯೊಂದೂ ವಿಭಾಗವನ್ನು ಪರಿಶೀಲಿಸಿ ರೋಗಿಗಳಿಗೆ ಆರೈಕೆ ನೀಡುವಲ್ಲಿ ಆಗುತ್ತಿರುವ ಸಮಸ್ಯೆಗಳ ಮಾಹಿತಿಯನ್ನು ವೈದ್ಯರಿಂದ ಪಡೆದಿದರು.

ನಂತರ ಆಸ್ಪತ್ರೆಯ ವೈದ್ಯಾಧಿಕಾರಿ ದಿನಕರ ಸೇರಿದಂತೆ ವೈದ್ಯರು ಹಾಗೂ ಸಿಬ್ಬಂದಿಯೊಂದಿಗೆ ಕುಂದು–ಕೊರತೆಗಳ ಬಗ್ಗೆ ಚರ್ಚಿಸಿದರು. ‘ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಚಿಕಿತ್ಸಾ ವೆಚ್ಚ ಇರುತ್ತದೆ. ಹೀಗಾಗಿ ಬಡವರು ಸರ್ಕಾರಿ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ ಆದರೆ, ಇಲ್ಲಿನ ವೈದ್ಯರು, ಸಿಬ್ಬಂದಿ ರೋಗಿಗಳ ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಇಲ್ಲಿನ ಅವ್ಯವಸ್ಥೆಯನ್ನು ನೋಡಿದರೆ ಜನರ ಆರೋಪ ಸರಿ ಇದೆ ಎನಿಸುತ್ತದೆ’ ಎಂದು ಶಾಸಕರು ತಿಳಿಸಿದರು.

‘ಇನ್ನು ಮುಂದೆ ದೂರುಗಳು ಬರದಂತೆ ವೈದ್ಯರು ಮತ್ತು ಸಿಬ್ಬಂದಿ ಕೆಲಸ ಮಾಡಬೇಕು. ಸಕಾಲದಲ್ಲಿ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಬೇಕು. ಈ ಅವ್ಯವಸ್ಥೆ ಸರಿಪಡಿಸಿಕೊಳ್ಳಬೇಕು. ವೈದ್ಯರಲ್ಲಿ ಹೊಂದಾಣಿಕೆ ಇರಬೇಕು. ಅಶಿಸ್ತು ಮುಂದುವರಿಸಿದರೆ ಶಿಸ್ತು ಕ್ರಮ ಕೈಗೊಳ್ಳ ಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಸಾಕಷ್ಟಿದೆ. ಕೆಲವೇ ದಿನಗಳಲ್ಲಿ ಅಧಿಕಾರಿಗಳ ಸಭೆ ಕರೆದು ಆಸ್ಪತ್ರೆಯಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸೂಚಿಸುತ್ತೇನೆ. ಇಲ್ಲಿಯೇ ಬಗೆ ಹರಿಸುವ ಸಮಸ್ಯೆ ಇಲ್ಲಿಯೇ ಬಗೆಹರಿಸಿ, ಅಗತ್ಯದ ಸಮಸ್ಯೆಗಳನ್ನು ಸರ್ಕಾರದ ಮಟ್ಟದಲ್ಲಿ ಪರಿಹರಿಸಲು ಎಲ್ಲ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಬಳಿಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ರಾಜೇಶ ನಾಯ್ಕ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry