ಧಾರಾಕಾರ ಮಳೆ: ನೆಲಕಚ್ಚಿದ ಟೊಮೆಟೊ ಬೆಳೆ

7
23 ಎಕರೆ ಟೊಮೆಟೊ, ಕ್ಯಾರೆಟ್‌, ಕೊತ್ತಂಬರಿ ಬೆಳೆ ನಾಶ: ಸಂಕಷ್ಟದಲ್ಲಿ ರೈತರು

ಧಾರಾಕಾರ ಮಳೆ: ನೆಲಕಚ್ಚಿದ ಟೊಮೆಟೊ ಬೆಳೆ

Published:
Updated:
ಧಾರಾಕಾರ ಮಳೆ: ನೆಲಕಚ್ಚಿದ ಟೊಮೆಟೊ ಬೆಳೆ

ಮುಳಬಾಗಿಲು: ತಾಲ್ಲೂಕಿನ ಮಂಚಿಗಾನಹಳ್ಳಿ ಮತ್ತು ಎಮ್ಮೆನತ್ತ ಗ್ರಾಮಗಳಲ್ಲಿ ಗುರುವಾರ ರಾತ್ರಿ ಬೀಸಿದ ಬಾರಿ ಗಾಳಿ ಹಾಗೂ ಧಾರಾಕಾರ ಮಳೆಗೆ 23 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಟೊಮೆಟೊ ಬೆಳೆ ನಾಶಗೊಂಡಿದೆ.

ಕೊತ್ತಂಬರಿ ಸೊಪ್ಪಿನ ತೋಟ ಮತ್ತು ಕ್ಯಾರೇಟ್ ತೋಟಗಳ ಮೇಲೆ ಮರಗಳು ಉರುಳಿ ಬಿದ್ದಿದ್ದರಿಂದ ಬೆಳೆಗಳು ನಾಶವಾಗಿವೆ. ಮಂಚಿಗಾನಹಳ್ಳಿಯ ರೈತ ಎಂ.ಸಿ.ಶ್ರೀನಿವಾಸಪ್ಪ ಎಂಬುವರು 1.5 ಎಕರೆ ಪ್ರದೇಶದಲ್ಲಿ ಸುಮಾರು 10,000 ಟೊಮೆಟೊ ಗಿಡಗಳನ್ನು ₹ 2.5 ಲಕ್ಷ ಖರ್ಚು ಮಾಡಿ ಬೆಳೆಯಲಾಗಿತ್ತು. ಈ ಬಾರಿ ಬೆಳೆಯೂ ಚೆನ್ನಾಗಿ ಬಂದಿತ್ತು. ಅಲ್ಲದೇ ಒಂದು ಬಾಕ್ಸ್‌ ಟೊಮೆಟೊ ಬೆಲೆ ₹ 150 ಇದ್ದುದ್ದರಿಂದ ಲಾಭದ ನಿರೀಕ್ಷೆಯಲ್ಲಿ ಇದ್ದರು. ಆದರೆ ದಿಢೀರನೆ ಬಂದ ಮಳೆ ಗಾಳಿಗೆ ಬೆಳೆ ನೆಲಕಚ್ಚಿ ನಾಶವಾಗಿರುವುದು ಚಿಂತೆಗೀಡು ಮಾಡಿದೆ ಎಂದು ಅಳಲು ತೋಡಿಕೊಂಡರು.

‘₹ 2.5 ಲಕ್ಷ ಸಾಲ ಮಾಡಿ ಬೆಳೆಯನ್ನು ಇಟ್ಟಿದ್ದೆ. ತೋಟ ಮಾಡಲು 30 ಕೆ.ಜಿ ಗೊಬ್ಬರದ ಮೂಟೆಗಳು, ಕುರಿ, ಕೋಳಿ ಗೊಬ್ಬರ ಮತ್ತು ತಿಪ್ಪೆ ಗೊಬ್ಬರದ ನಾಲ್ಕು ಲಾರಿ ಲೊಡುಗಳಷ್ಟು ಗೊಬ್ಬರವನ್ನು ಭೂಮಿ ಹದ ಮಾಡುವಾಗ ಚೆಲ್ಲಿದ್ದೆ. ಬೆಳೆ  ಚೆನ್ನಾಗಿ ಬಂದಿತ್ತು. ಕೇವಲ ಸ್ಯಾಂಪಲ್ ಎಂದು 250 ಬಾಕ್ಸ್‌ಗಳನ್ನು ಕಿತ್ತು ಮಾರುಕಟ್ಟೆಗೆ ಹಾಕಿದ್ದರಿಂದ ₹ 150 ಬೆಲೆಯಲ್ಲಿ ಒಳ್ಳೆಯ ಹಣ ಬಂದಿತ್ತು. ಇನ್ನೂ 30,000 ಬಾಕ್ಸ್‌ ಟೊಮೆಟೊ ಕೊಯ್ದು ಮಾರಾಟ ಮಾಡಿದರೆ ಒಳ್ಳೆಯ ಹಣ ಬರಬಹುದು ಎಂದು ನಂಬಿದ್ದೆ. ಆದರೆ ಬೆಳೆ ನೆಲಕಚ್ಚಿರುವುದನ್ನು ಕಂಡು ದಿಕ್ಕು ತೋಚದಂತಾಗಿದೆ’ ಎಂದು ರೈತ ಎಂ.ಸಿ.ಶ್ರೀನಿವಾಸಪ್ಪ ತಲೆಮೇಲೆ ಕೈಹೊತ್ತು ಕುಳಿತರು.

ಇದೇ ಗ್ರಾಮದ ಆಂಜಪ್ಪ ಅವರು ಒಂದು ಎಕರೆಯಲ್ಲಿ ಬೆಳೆದಿದ್ದ ಕ್ಯಾರೇಟ್ ತೋಟದಲ್ಲಿ ಎರಡು ಬದಿಗಳಲ್ಲಿ ಎರಡು ಭಾರಿ ಮರಗಳು ಬಿದ್ದಿದ್ದರಿಂದ ಸ್ವಲ್ಪ ಮಟ್ಟಿಗೆ ನಷ್ಟವಾಗಿದೆ. ಮತ್ತು ಅರ್ಧ ಎಕರೆ ಭೂಮಿಯಲ್ಲಿ ಬೆಳೆದಿದ್ದ ಕೊತ್ತಂಬರಿ ಸೊಪ್ಪಿನ ತೋಟದ ಮೇಲೆಯೂ ಎರಡು ಮರಗಳು ಉರುಳಿ ಬಿದ್ದಿರುವುದರಿಂದ ಕಾಲು ಭಾಗದಷ್ಟು ತೋಟ ಹಾನಿಯಾಗಿದೆ. ಮಂಚಿಗಾನಹಳ್ಳಿ ಅಬ್ಬನ್ನ, ಇಸ್ಕೋಲಪ್ಪ ಎಂಬುವರ ಟೊಮೆಟೊ ಬೆಳೆ ನೆಲಕಚ್ಚಿದ್ದು, ಅಪಾರ ನಷ್ಷವಾಗಿದೆ.

ಎಮ್ಮೇನತ್ತ ಗ್ರಾಮದ ಪ್ರಸಾದ್ ರೆಡ್ಡಿ ಎಂಬುವರಿಗೆ ಸೇರಿದ 2 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಟೊಮೆಟೊ ಬೆಳೆ ನೆಲಕಚ್ಚಿದ್ದು, ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.

ತೋಟಗಾರಿಕಾ ಇಲಾಖೆಯ ಕೃಷ್ಣ ಕುಮಾರಿ ಮತ್ತು ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿ, ನಷ್ಟಕ್ಕೊಳಗಾದ ರೈತರಿಗೆ ಬೆಳೆ ಪರಿಹಾರ ನೀಡುವುದಾಗಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry