ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಕಂಪದ ಗೆಲುವಿಗೆ ಸಮಸ್ಯೆಗಳ ಸರಮಾಲೆ ಸ್ವಾಗತ

ಕನಕಗಿರಿಯಲ್ಲಿ ನೂತನ ಶಾಸಕ ಬಸವರಾಜ ದಡೇಸೂಗೂರಗೆ ಅದ್ಧೂರಿ ಸನ್ಮಾನ ನಾಳೆ
Last Updated 2 ಜೂನ್ 2018, 10:34 IST
ಅಕ್ಷರ ಗಾತ್ರ

ಕನಕಗಿರಿ: ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದ ಶಿವರಾಜ ತಂಗಡಗಿ ಅವರನ್ನು ಈಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸೋಲಿಸಿ ಇದೇ ಪ್ರಥಮ ಸಲ ಜೂನ್‌ 3ರಂದು ಪಟ್ಟಣಕ್ಕೆ ಬರುತ್ತಿರುವ ನೂತನ ಶಾಸಕ ಬಸವರಾಜ ದಡೇಸೂಗುರು ಅವರಿಗೆ ಇಲ್ಲಿನ ಸಮಸ್ಯೆಗಳು ಸ್ವಾಗತಿಸುತ್ತಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದ ಬಹು ವರ್ಷಗಳ ಕನಸಾಗಿದ್ದ ಕನಕಗಿರಿಯನ್ನು ನೂತನ ತಾಲ್ಲೂಕು ಕೇಂದ್ರವಾಗಿ ಘೋಷಿಸಿ ಜನವರಿ ತಿಂಗಳಲ್ಲಿ ಅನುಷ್ಠಾನ ಗೊಳಿಸಿದ್ದು ಮಿನಿ ವಿಧಾನಸೌಧಕ್ಕೆ ಜಾಗ ಗುರುತಿಸಿ ಕಟ್ಟಡ ನಿರ್ಮಾಣದ ಹೊಣೆ ದಡೇಸೂಗೂರ ಹೆಗಲಿಗೆ ಬಿದ್ದಿದೆ. ಹೊಸ ತಾಲ್ಲೂಕಿಗೆ ತಹಶೀಲ್ದಾರ್, ಶಿರಸ್ತೇದಾರ ಸೇರಿ ದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಬೇಕಿದೆ.

ಉಪ ನೋಂದಣಾಧಿಕಾರಿ. ಖಜಾನಾಧಿಕಾರಿ, ಕ್ಷೇತ್ರ ಶಿಕ್ಷಣಾಧಿ ಕಾರಿ, ಕೃಷಿ, ತೋಟಗಾರಿಕೆ, ಲೋಕೋಪಯೋಗಿ, ತಾ.ಪಂ ಕಚೇರಿ, ಜಿ.ಪಂ ಎಂಜಿನಿಯರ್, ಕಾರ್ಯ ನಿರ್ವಹಣಾಧಿಕಾರಿ ಕಾರ್ಯಾಲಯ ಸೇರಿದಂತೆ ಇತರೆ ಇಲಾಖೆಗಳಿಗೂ ಸ್ವಂತ ಕಟ್ಟಡ, ಮೂಲ ಸೌಕರ್ಯಗಳ ಅವಶ್ಯಕತೆ ಇದೆ. ಸದ್ಯ ತಾತ್ಕಾಲಿಕ ಕಚೇರಿಗಳ ಆರಂಭಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.

ರೈತ ಸಂಪರ್ಕ ಕೇಂದ್ರ, ತಹಶೀಲ್ದಾರ್, ಉಪ ತಹಶೀಲ್ದಾರ ಕಚೇರಿಗಳು ಈಗ ಬೇರೆ ಇಲಾಖೆಗಳ ಕಟ್ಟಡದಲ್ಲಿ ನಡೆಯುತ್ತಿದ್ದು, ನೂತನ ತಾಲ್ಲೂಕು ಕೇಂದ್ರಕ್ಕೆ ಶಾಸಕರು ಹೊಸ ಸ್ಪರ್ಶ ಕೊಡಬೇಕಿದೆ.

‘ಕಣ್ಣಿದ್ದವರು ಕನಕಗಿರಿ ನೋಡ ಬೇಕು, ಕಾಲಿದ್ದವರು ಹಂಪಿ ನೋಡಬೇಕು ಎಂಬ’ ಪ್ರತೀತಿ ಇಲ್ಲಿದ್ದು, ಐತಿಹಾಸಿಕ ಸ್ಮಾರಕಗಳಾದ ಪುಷ್ಕರಣಿ, ವೆಂಕಟಚಲಪತಿ ಬಾವಿ, ತ್ರಿವೇಣಿ ಸಂಗಮ ಇತರೆ ಸ್ಮಾರಕಗಳ ಅಭಿವೃದ್ಧಿ ಕಡೆಗೆ ಶಾಸಕರು ಗಮನ ಹರಿಸಬೇಕಿದೆ. ಚುನಾವಣೆಯಲ್ಲಿ ಭರವಸೆ ನೀಡಿದಂತೆ ಕೃಷ್ಣಾ ಬಿ ಸ್ಕೀಂ ಯೋಜನೆಯ ಲಾಭ ಕ್ಷೇತ್ರದ ಜನತೆಗೆ ಒದಗಿಸುವ ಕಡೆಗೆ ಹೆಚ್ಚು ಗಮನ ಹರಿಸಬೇಕಾಗಿದ್ದು ಇದೊಂದು ದೊಡ್ಡ ಸವಾಲು' ಎಂದು ಅವರದೆ ಪಕ್ಷ ಕಾರ್ಯಕರ್ತರೇ ಮಾತ ನಾಡುತ್ತಿದ್ದಾರೆ.

ಕಳೆದ ಎರಡು ವರ್ಷಗಳ ಹಿಂದೆ ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆ ಗೊಂಡಿದ್ದು, ಇಲ್ಲಿಯೂ ಸಹ ಹೊಸ ಕಟ್ಟಡ, ವಿವಿಧ ಅಧಿಕಾರಿ, ಸಿಬ್ಬಂದಿ ಕೊರತೆ ಇದೆ. ಪಟ್ಟಣದ ಸೌಂರ್ದರ್ಯಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನ ತಂದು ಕೊಡಬೇಕಿದೆ. ಕಾಲೇಜು ಶಿಕ್ಷಣ ಪಡೆಯಲು ಸುತ್ತಮುತ್ತಲಿನ ಗ್ರಾಮದ ಬಡ ವಿದ್ಯಾರ್ಥಿಗಳು ಪಟ್ಟಣದಲ್ಲಿ ಅಧ್ಯಯನ ಮಾಡುತ್ತಿದ್ದು ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಮಂಜೂರು ಮಾಡಿಸುವುದರ ಜತೆಗೆ ಈಗಿನ ಬಾಲಕಿಯರ ವಸತಿ ನಿಲಯ ಹಾಗೂ ಐಟಿಐ ಕಾಲೇಜಿಗೆ ಸ್ವಂತ ಕಟ್ಟಡ ಒದಗಿಸಬೇಕಿದೆ.

ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಹಾಗೂ ಉರ್ದು ಬಾಲಕಿಯರ ಹಿರಿಯ ಹಾಗೂ ಪ್ರೌಢಶಾಲೆಗಳ ಆರಂಭಕ್ಕೆ ನೂತನ ಶಾಸಕ ದಡೇಸೂಗುರು ಶ್ರಮಿಸಬೇಕಿದೆ. ಹತ್ತು ವರ್ಷಗಳ ಕಾಲ ಶಾಸಕರಾದರೂ ಶಿವರಾಜ ತಂಗಡಗಿ ಅವರು ಕ್ಷೇತ್ರದ ಪಿಯುಸಿ, ಪ್ರಥಮ ದರ್ಜೆ ಕಾಲೇಜಿಗೆ ಕಾಲೇಜು ಅಭಿವೃದ್ಧಿ ಸಮಿತಿ (ಸಿಡಿಸಿ) ರಚಿಸಲಿಲ್ಲ. ದಡೇಸೂಗುರು ಸಹ ಅವರ ದಾರಿ ತುಳಿಯುತ್ತಾರೆಯೆ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.

ಬಹು ವರ್ಷಗಳ ಬೇಡಿಕೆಯಾಗಿದ್ದ ಕನಕಗಿರಿ ಉತ್ಸವ ಕಳೆದ ಹತ್ತು ವರ್ಷದ ಅವಧಿಯಲ್ಲಿ ಮೂರು ಸಲ ಮಾತ್ರ ಆಚರಣೆಯಾಗಿದ್ದು ಮತ್ತೆ ನೆನಗುದಿಗೆ ಬೀಳಲಿದೆಯೆ ಎಂದು ಜನ ಪ್ರಶ್ನಿಸುತ್ತಾರೆ. ಬಡ ಸಮುದಾಯದವರ ಮದುವೆ ಸಮಾರಂಭಗಳಿಗೆ ಬೃಹತ್ ಸಮುದಾಯ ಭವನದ ಅವಶ್ಯಕತೆ ಈಡೇರಿಸಬೇಕಿದೆ, ಹೀಗೆ ಸಾಲು ಸಾಲು ಸಮಸ್ಯೆಗಳು ನೂತನ ಶಾಸಕ ದಡೇಸೂಗರಿಗೆ ಕೈ ಬೀಸಿ ಕರೆಯುತ್ತಿವೆ.

**
ನೂತನ ಶಾಸಕರು ಬಸ್ ಡಿಪೋ , ಒಳಚರಂಡಿ ವ್ಯವಸ್ಥೆ, ಸಾರ್ವಜನಿಕ ಉದ್ಯಾನ ನಿರ್ಮಾಣಕ್ಕೆ ಆದ್ಯತೆ ನೀಡಲಿ
ದುರ್ಗಾದಾಸ ಯಾದವ,‌ ಕನಕಗಿರಿ ಹೋರಾಟ ಸಮಿತಿ ಕಾರ್ಯದರ್ಶಿ
**

ನೂತನ ಶಾಸಕರಿಗೆ ಓದು, ಬರಹ ಗೊತ್ತಿಲ್ಲ, ಶಿವರಾಜ ತಂಗಡಗಿಯ ವಿರೋಧಿ ಅಲೆ, ಅನುಕಂಪದಿಂದ ಜಯ ಸಾಧಿಸಿದ್ದಾರೆ, ಹಿಂಬಾಲಕರನ್ನು ಸಂತೈಸುವಲ್ಲಿಯೆ ಕಾಲ ಕಳೆಯುತ್ತಾರೆ, ಬದಲಾವಣೆ ಸಾಧ್ಯವಿಲ್ಲ
- ಹೆಸರು ಬಯಸದ ಪ್ರಗತಿ ಪರ ಸಂಘಟನೆಯ ಮುಖಂಡ

**
ನೂತನ ಶಾಸಕರು ಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ ಶ್ರಮಿಸುವ ವಿಶ್ವಾಸ ಇದೆ, ಸಂಬಂಧಿಸಿದ ಇಲಾಖೆಯ ಸಚಿವರ ಮನೆ ಬಾಗಿಲಿಗೆ ತೆರಳಿ ಸೌಲಭ್ಯ ಕಲ್ಪಿಸಲಿದ್ದಾರೆ, ಜನರ ನಿರೀಕ್ಷೆ ಹುಸಿ ಗೊಳ್ಳಿಸುವುದಿಲ್ಲ
ಮಹಾಂತೇಶ ಸಜ್ಜನ್, ಬಿಜೆಪಿ ಮುಖಂಡ ‌

ಮೆಹಬೂಬಹುಸೇನ ಕನಕಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT