‘ಹಣಕ್ಕೆ ಸಂಪಾದಕೀಯ ಮಾರಿಕೊಂಡಿಲ್ಲ’

7

‘ಹಣಕ್ಕೆ ಸಂಪಾದಕೀಯ ಮಾರಿಕೊಂಡಿಲ್ಲ’

ಶೇಖರ್‌ ಗುಪ್ತ
Published:
Updated:
‘ಹಣಕ್ಕೆ ಸಂಪಾದಕೀಯ ಮಾರಿಕೊಂಡಿಲ್ಲ’

ಇತ್ತೀಚೆಗೆ ನಮ್ಮನ್ನು (ಪತ್ರಕರ್ತರನ್ನು) ಕೆಟ್ಟದಾಗಿ ನೋಡಲಾಗುತ್ತಿದೆ. ನಾವೆಲ್ಲ ಖರೀದಿಗೆ ಇದ್ದೇವೆ ಎಂದು ಜನರನ್ನು ನಂಬಿಸುವ ಪ್ರಯತ್ನಗಳು ನಡೆಯುತ್ತಿವೆ. ಇದನ್ನೆಲ್ಲ ನೋಡಿ ರಾಜಕಾರಣಿಗಳು ಗಹಗಹಿಸಿ ನಗುತ್ತಿದ್ದಾರೆ. ನಾವೆಲ್ಲ ಮೋಸಗಾರರಷ್ಟೇ ಅಲ್ಲ, ಕುರುಡು ನಂಬಿಕೆಯವರು ಎಂದೂ ಟೀಕಾಕಾರರು ಪುಕಾರು ಹಬ್ಬಿಸುತ್ತಿದ್ದಾರೆ. ನಾವು ಕೂಡ ಅಪರಾಧಿ ಮನೋಭಾವವನ್ನು ಪೋಷಿಸುತ್ತ, ಪತ್ರಿಕೋದ್ಯಮದ ಮೊದಲ ಪಾಠವಾಗಿರುವ ‘ವಾಸ್ತವ ಸಂಗತಿ ಪರಿಶೀಲಿಸಿ’ ಎನ್ನುವ ಸೂತ್ರವನ್ನೇ ಮರೆಯುತ್ತಿದ್ದೇವೆ.

ರಹಸ್ಯ ಕಾರ್ಯಾಚರಣೆಯ ವಿಡಿಯೊಗಳು ಯಾವಾಗಲೂ ದಿಗಿಲುಗೊಳಿಸುತ್ತವೆ. ರಹಸ್ಯ ಕ್ಯಾಮೆರಾದಲ್ಲಿ ಸೆರೆಹಿಡಿದ ಮಾಮೂಲಿ ಸಂಭಾಷಣೆಯೂ ಮಾತುಕತೆ ನಡೆಸಿದವರನ್ನು ಮೂರ್ಖರಂತೆ ಬಿಂಬಿಸುತ್ತದೆ. ಇಲ್ಲಿ, ನಾನೊಂದು ಮಾತು ಹೇಳಲು ಇಷ್ಟಪಡುವೆ. ದೇಶಿ ಮಾಧ್ಯಮ ಲೋಕದಲ್ಲಿ ಇಂತಹ ರಹಸ್ಯ ಕಾರ್ಯಾಚರಣೆ ನಡೆಸುವವರು ಪ್ರಭಾವಿ ಜನರಾಗಿದ್ದಾರೆ. ಆದರೆ, ಅವರೆಲ್ಲ ಪತ್ರಕರ್ತರಲ್ಲ ಎಂದು ನಾನು ಖಚಿತವಾಗಿ ಹೇಳಲು ಬಯಸುತ್ತೇನೆ.

ಮಾಧ್ಯಮಗಳಲ್ಲಿ ಸರ್ಕಾರದ ಪರ ವರದಿಗಾರಿಕೆ ಕುರಿತು ಅಂತರ್ಜಾಲ ತಾಣ ‘ಕೋಬ್ರಾ ಪೋಸ್ಟ್‌ ಡಾಟ್‌ಕಾಮ್‌’ ನಡೆಸಿದ ರಹಸ್ಯ ಕಾರ್ಯಾಚರಣೆಗೆ ಸಂಬಂಧಿಸಿದಂತೆ ನಾನಿಲ್ಲಿ ಮಹತ್ವದ ಸಂಗತಿಯೊಂದನ್ನು ಹೇಳಲು ಬಯಸುತ್ತೇನೆ. ಪತ್ರಕರ್ತರು ದೀರ್ಘ ಸಮಯದವರೆಗೆ ನಾಚಿಕೆಯಿಂದ ಸಂಕಟ ಅನುಭವಿಸುವ ಅಗತ್ಯ ಇಲ್ಲ. ಸಾಮೂಹಿಕವಾಗಿ ಸತಿ ಹೋಗುವಂತಹ ಕೃತ್ಯ ಎಸಗಿದ ಭಾವನೆಯಿಂದ ಸಂಕಟವನ್ನೂ ಅನುಭವಿಸಬೇಕಾಗಿಲ್ಲ. ಸಂಪಾದಕೀಯ ಮತ್ತು ವರಮಾನ ನಡುವಣ ದೊಡ್ಡ ಗೋಡೆ ಭಗ್ನಗೊಂಡಿರುವುದು ನಿಜವಾಗಿದ್ದರೂ ಅದರ ವಿರುದ್ಧ ನಿರಂತರವಾಗಿ ಹೋರಾಟ ನಡೆಯುತ್ತಲೇ ಇದೆ.

ಒಬ್ಬ ದೊಡ್ಡ ಮಾಲೀಕ ಮತ್ತು ಕೆಲ ಸಂಸ್ಥೆಗಳಲ್ಲಿನ ಮಾರಾಟಗಾರರನ್ನು ಹೊರತುಪಡಿಸಿದರೆ ಉಳಿದ ಯಾರೊಬ್ಬರೂ ಹಣಕ್ಕೆ ಸಂಪಾದಕೀಯ ಮಾರಿಕೊಳ್ಳಲು ಮುಂದಾಗಿಲ್ಲ. ಅಥವಾ, ಉನ್ನತ ಮಟ್ಟದ ಉದ್ಯಮಿ ಸ್ನೇಹಿತರ ಮೂಲಕ ಪ್ರಸ್ತಾಪ ಬಂದಿದ್ದರೂ ಹಣಕ್ಕಾಗಿ ಕೋಮು ಭಾವನೆಯ ಪ್ರಚಾರ ಕಾರ್ಯಕ್ರಮ ಪ್ರಸಾರ ಮಾಡುವ ಆಮಿಷಕ್ಕೆ ಗುರಿಯಾಗಿಲ್ಲ. ಕಪ್ಪು ಹಣವನ್ನು ಬಿಳಿಯನ್ನಾಗಿ ಪರಿವರ್ತಿಸಲು ಈ ದೊಡ್ಡ ಮತ್ತು ಮೌಲ್ಯಯುತ ಮಾಧ್ಯಮ ಸಂಸ್ಥೆಗಳನ್ನು ಬಳಸಿಕೊಳ್ಳಲಾಗಿದೆ ಎಂದು ವರದಿಯಾಗಿರುವುದಕ್ಕೆ ಈ ಸಂಸ್ಥೆಗಳು ತೀವ್ರ ಅಸಮಾಧಾನಗೊಂಡಿವೆ. ‘ನೀವೂ ಹೀಗೆ ಮಾಡುವೀರಾ’ ಎಂದು ಯಾರಾದರೂ ‘ಕುಮಾರ್‌’, ಅದಾನಿ ಅಥವಾ ಅಂಬಾನಿ ಅವರನ್ನು ಪ್ರಶ್ನಿಸಬಹುದು.

ಎರಡೂ ಕಡೆಯಿಂದ ನೋಡಿದಾಗ, ಮಾರಾಟ ಪ್ರತಿನಿಧಿಗಳು ಹೇಳುವ ಅಥವಾ ನೀಡುವ ಭರವಸೆಗಳ ಬಗ್ಗೆ ನಾನು ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಮಾಂಸಾಹಾರವನ್ನು ಬಾಯಿ ಚಪ್ಪರಿಸಿ ತಿನ್ನುವವರೂ ಸಹ ಕಟುಕರು ಪ್ರಾಣಿಗಳ ವಧೆ ಮಾಡುವುದನ್ನು ನೋಡಲು ಇಷ್ಟಪಡುವುದಿಲ್ಲ. ಹಾಗೆಯೇ, ಪತ್ರಕರ್ತರು ತಾವು ಕೆಲಸ ಮಾಡುವ ಸ್ಥಳದಲ್ಲಿ ತಮ್ಮ ಮಾರಾಟಗಾರರನ್ನು ನೋಡಲು ಇಷ್ಟಪಡುವುದಿಲ್ಲ.

ಮಾಧ್ಯಮಗಳ ಪ್ರಭಾವ, ಅವುಗಳ ಹಣಕಾಸಿನ ಮಟ್ಟ ಅಥವಾ ಶಕ್ತಿಯನ್ನು ಆಧರಿಸಿರುವುದಿಲ್ಲ. ದೇಶದ ಅತಿದೊಡ್ಡ ಮಾಧ್ಯಮ ಸಂಸ್ಥೆಯ ವಾರ್ಷಿಕ ವಹಿವಾಟು ₹ 6,700 ಕೋಟಿಗಳು ಮಾತ್ರ. ಇತರ ಬಹುತೇಕ ಸಂಸ್ಥೆಗಳ ವಹಿವಾಟು ಕೂಡ ಕೋಟಿಗಳ ಲೆಕ್ಕದಲ್ಲಿ ಕಡಿಮೆ ಪ್ರಮಾಣದಲ್ಲಿಯೇ ಇದೆ. ರಿಲಯನ್ಸ್‌ನ ₹ 4.3 ಲಕ್ಷ ಕೋಟಿ, ಆದಿತ್ಯ ಬಿರ್ಲಾ ಸಮೂಹದ ₹ 2.9 ಲಕ್ಷ ಕೋಟಿ ಮತ್ತು ಡಿಎಲ್‌ಎಫ್‌ನ ₹ 7,663 ಕೋಟಿಗಳ ವಹಿವಾಟಿನ ಮುಂದೆ ಮಾಧ್ಯಮಗಳ ವಹಿವಾಟು ಅತ್ಯಲ್ಪ. ಒಂದು ವೇಳೆ ನಾವು (ಪತ್ರಕರ್ತರ) ಮಾಧ್ಯಮ ಸಂಸ್ಥೆಗಳನ್ನು ಮಾರಾಟ ಮಾಡಲು ಮುಂದಾದರೆ, ಇಂತಹ ಉದ್ಯಮ ದಿಗ್ಗಜರು ಪತ್ರಿಕಾ ಸಂಸ್ಥೆಗಳನ್ನು ತಮ್ಮ ಜೇಬಿನಲ್ಲಿನ ಚಿಲ್ಲರೆ ಹಣದಿಂದಲೇ ಖರೀದಿಸಬಹುದು.

ಯಾವುದೇ ಅಂತರ್ಜಾಲ ತಾಣ ಇಲ್ಲದ, ಪೂರ್ವಾಪರ ಇಲ್ಲದವರು ಕೋಟ್ಯಂತರ ರೂಪಾಯಿಗಳ ವಹಿವಾಟು ಕುದುರಿಸಲು ಮುಂದಾಗುವರೇ? ಯಾರೇ ಆಗಲಿ ಭೇಟಿಯಾಗುವ ಮುನ್ನ ಆಚಾರ್ಯ ಅಟಲ್‌ ಯಾರು ಎಂದು ಅಂತರ್ಜಾಲದಲ್ಲಿ ಮಾಹಿತಿ ಜಾಲಾಡಿರಬಹುದು. ಪುಣ್ಯಕ್ಕೆ ಆ ವ್ಯಕ್ತಿ ತಾಜ್‌ ಮಹಲ್‌ ಮಾರಾಟ ಮಾಡಲು ಬಂದಿರಲಿಲ್ಲ. ಜನರು ಈ ಎಲ್ಲ ಸೂಕ್ಷ್ಮ ಸಂಗತಿಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ದೊಡ್ಡ ಸಂಸ್ಥೆಗಳೇ ಆಮಿಷಕ್ಕೆ ಒಳಗಾಗುತ್ತಿವೆ ಎಂದರೆ, ಪತ್ರಕರ್ತರೆಲ್ಲ ಮಾರಾಟಗೊಂಡಿದ್ದಾರೆ ಎಂದೇ ಅವರು ತೀರ್ಮಾನಕ್ಕೆ ಬರುತ್ತಾರೆ. ಪತ್ರಕರ್ತರಲ್ಲಿನ ಕೆಲವರು ಇಂತಹ ಒತ್ತಡ ಮತ್ತು ಬೆದರಿಕೆಗಳನ್ನು ಸಮರ್ಥವಾಗಿ ಎದುರಿಸುತ್ತಾರೆ. ಜನರು ಪತ್ರಕರ್ತರನ್ನು ಸಿನಿಕತನದಿಂದಲೂ ನೋಡುತ್ತಾರೆ. ಈಗ ನಡೆದಿರುವ ರಹಸ್ಯ ಕಾರ್ಯಾಚರಣೆಯು ಇಂತಹ ಸಂಗತಿಗಳನ್ನು ಇನ್ನಷ್ಟು ಕಲಸುಮೇಲೋಗರ ಮಾಡುತ್ತದೆ. ಈ ಕಾರಣಕ್ಕೆ ಕಪೋಲಕಲ್ಪಿತ ಸಂಗತಿಗಳು, ಸ್ವಯಂ ಪ್ರೇರಿತ ಪ್ರಚಾರಗಳು ಮತ್ತು ಸ್ವಪೀಡನೆಗಿಂತ ವಾಸ್ತವಕ್ಕೆ ಹೆಚ್ಚು ಮಹತ್ವ ನೀಡಬೇಕಾಗುತ್ತದೆ.

ಯಾವುದೇ ಒಂದು ಸಿದ್ಧಾಂತದ ಅಥವಾ ರಾಜಕೀಯ ಪಕ್ಷದ ಬಗ್ಗೆ ಪಕ್ಷಪಾತದಿಂದ ವರ್ತಿಸುವಾಗ ಅದರಲ್ಲೂ ವಿಶೇಷವಾಗಿ ಮಾಲೀಕರೇ ರಾಜಕಾರಣಿಗಳಾಗಿ ಬದಲಾದಾಗ ಕನಿಷ್ಠ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಬಹುತೇಕ ಭಾಷೆಗಳಲ್ಲಿನ ಪ್ರಮುಖ ಮತ್ತು ಮುಖ್ಯ ಪ್ರವಾಹದಲ್ಲಿ ಇರುವ ಮಾಧ್ಯಮ ಸಂಸ್ಥೆಗಳು ವಿವೇಕದಿಂದಲೇ ವರ್ತಿಸುತ್ತಿವೆ ಎಂದು ಹೇಳಲು ನಾನು ಇಲ್ಲಿ ಇಷ್ಟಪಡುವೆ. ನಮ್ಮಷ್ಟಕ್ಕೆ ನಾವೇ ವಿವಿಧ ಬಣ್ಣಗಳಲ್ಲಿ ಮತ್ತು ದುರ್ವಾಸನೆಗಳಲ್ಲಿ ಬಣ್ಣಿಸಿಕೊಳ್ಳುವುದು ಸೂಕ್ತವಲ್ಲ. ಹೀಗೆ ಮಾಡುವವರನ್ನು ಅರುಣ್‌ ಶೌರಿ ಅವರು ‘ಉತ್ತರ ಕೊರಿಯಾದವರು’ ಎಂದು ಬಣ್ಣಿಸುತ್ತಾರೆ. ನಾನು ಅವರನ್ನು ‘ಚಾನೆಲ್‌ಗಳ ವಿದೂಷಕ ಪಾತ್ರಧಾರಿಗಳು’ ಎಂದೇ ಕರೆಯಲು ಇಷ್ಟಪಡುವೆ.

ಈಗ ಬಹಿರಂಗಗೊಂಡಿರುವ ಮಾಹಿತಿಗಳ ಬಗ್ಗೆ ನಾವು (ಪತ್ರಕರ್ತರು) ಸರಿಯಾಗಿ ಪ್ರಶ್ನಿಸಬೇಕಾಗಿದೆ. ಇಡೀ ಪತ್ರಿಕೋದ್ಯಮದ ವಿಶ್ವಾಸಾರ್ಹತೆ ಹಾಳು ಮಾಡಲು ಖಂಡಿತವಾಗಿಯೂ ಅವಕಾಶ ನೀಡಬಾರದು. ಹಲವಾರು ಪತ್ರಿಕಾ ಸಂಸ್ಥೆಗಳು ಮತ್ತು ಸಾವಿರಾರು ಪತ್ರಕರ್ತರಲ್ಲಿನ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳದ ಸೋಜಿಗದ ಪ್ರವೃತ್ತಿಯನ್ನು ಇದು ನಮಗೆ ನೆನಪಿಸುತ್ತದೆ. ಇವರೆಲ್ಲ ನಮಗೆ ಬದುಕು ಮತ್ತು ಸ್ವಾತಂತ್ರ್ಯ ಕೊಟ್ಟಿದ್ದಾರೆ. ಕೆಲ ಸ್ವಘೋಷಿತರು ಕೊಡುವ ಸುತ್ತಿಗೆಯ ಏಟಿನಿಂದ ಪತ್ರಿಕೋದ್ಯಮದ ಸಾಂಸ್ಥಿಕ ಸ್ತಂಭಗಳು ಯಾವತ್ತೂ ಒಡೆದು ಹೋಳಾಗುವುದಿಲ್ಲ.

ದೇಶದ ಮುಖ್ಯ ಪ್ರವಾಹದ ಮಾಧ್ಯಮ ಸಂಸ್ಥೆಗಳ ವಿಶ್ವಾಸಾರ್ಹತೆಗೆ ಧಕ್ಕೆ ಒದಗಿದ್ದು, ಸಾಮಾಜಿಕ ಮಾಧ್ಯಮಗಳೇ ಸರ್ವರೋಗ ನಿವಾರಕಗಳಾಗಿವೆ ಎನ್ನುವ ಆಲೋಚನೆಯು ಈಗ ಹೊಸ ಫ್ಯಾಷನ್‌ ಆಗಿರುವುದು ಅಪಾಯಕಾರಿ ಮತ್ತು ನಗೆಪಾಟಿಲಿನ ಸಂಗತಿಯಾಗಿದೆ.

ಮುಖ್ಯವಾಹಿನಿಯಲ್ಲಿ ಇರುವ ಮಾಧ್ಯಮ ಸಂಸ್ಥೆಗಳೇ, ನರೇಂದ್ರ ಮೋದಿ ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡುವಂತಹ ದೊಡ್ಡ, ದೊಡ್ಡ ಸುದ್ದಿಗಳನ್ನು ಪ್ರಕಟಿಸುವಲ್ಲಿ ಮುಂಚೂಣಿಯಲ್ಲಿ ಇವೆ. ಪ್ರಧಾನಿ ನರೇಂದ್ರ ಮೋದಿ ಹೆಸರನ್ನು ಚಿನ್ನದ ಬಣ್ಣದಲ್ಲಿ ಪಟ್ಟಿಯಂತೆ ಹೆಣೆಯಲಾಗಿದ್ದ ಗಿನ್ನೆಸ್‌ ದಾಖಲೆ ಮಾಡಿದ್ದ ದುಬಾರಿ ಸೂಟ್‌ನ ವರದಿಯೂ ಇದರಲ್ಲಿ ಸೇರಿದೆ. ಮಾಧ್ಯಮ ಸಂಸ್ಥೆಗೆ ಸೇರಿದ್ದ ದಿನಪತ್ರಿಕೆಯೇ ಮೊದಲು ಈ ಸುದ್ದಿ ಪ್ರಕಟಿಸಿತ್ತು. ಇನ್ನೊಂದೆಡೆ ಸಾಮಾಜಿಕ ಮಾಧ್ಯಮಗಳಲ್ಲಿ ಶೇ 99ರಷ್ಟು ಸುಳ್ಳು ಸುದ್ದಿಗಳು ಪ್ರಕಟಗೊಳ್ಳುತ್ತಿವೆ.

‘ಜಾಹೀರಾತು ಆಧರಿಸಿದ ವರಮಾನ ಗಳಿಕೆಯ ಮಾದರಿಗೂ ತಿಲಾಂಜಲಿ ನೀಡಲಾಗಿದೆ’ ಎಂದು ರಹಸ್ಯ ಕಾರ್ಯಾಚರಣೆಯಲ್ಲಿ ವಿವರಿಸಿರುವುದು ಅಪಾಯಕಾರಿ ಕುತರ್ಕವಾಗಿದೆ. ಇದಕ್ಕೆ ಪರ್ಯಾಯವಾಗಿ ಹೊಸ ಆಲೋಚನೆಯನ್ನು ಕಾರ್ಯಗತಗೊಳಿಸಬೇಕಾಗಿದೆ. ಪತ್ರಿಕಾ ಸಂಸ್ಥೆಗಳು ತಮ್ಮ ಹಣಕಾಸು ಅಗತ್ಯಗಳನ್ನು ಹೊಸ ಮೂಲಗಳಿಂದ ಪಡೆಯಲು ಮುಂದಾದರೆ ಅದೊಂದು ನಿಜಕ್ಕೂ ಅದ್ಭುತ ಸಂಗತಿಯಾಗಿರಲಿದೆ. ಅದರಿಂದ ಸ್ಪರ್ಧೆ ಹೆಚ್ಚಲಿದೆ. ಚರ್ಚೆಗೆ ಹೊಸ ದಿಕ್ಕು ದೊರೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಪತ್ರಕರ್ತರನ್ನು ನೇಮಿಸಿಕೊಂಡು ಅವರಿಗೆ ತರಬೇತಿ ನೀಡಬೇಕಾಗುತ್ತದೆ. ಇದರಿಂದ ಮಾರುಕಟ್ಟೆ ಆಧರಿತ ಆಲಸಿ ಪತ್ರಿಕೋದ್ಯಮದ ಸ್ವರೂಪ ಬದಲಾಗಲಿದೆ ಎಂದು ನಂಬಬೇಕಾಗುತ್ತದೆ. ಫೌಂಡೇಷನ್‌ನಿಂದ ನೆರವು ಪಡೆಯುವ ಪತ್ರಿಕೋದ್ಯಮವು ಯಾವತ್ತೂ ಪಕ್ಷಪಾತಿಯಾಗಿರಲಾರದು. ‘ದಿ ಗಾರ್ಡಿಯನ್‌’ ಪತ್ರಿಕೆಯು ದಾನಶೀಲತೆಯಿಂದಲೇ ಯಶಸ್ವಿಯಾಗಿದೆ.

ಡಿಜಿಟಲೀಕರಣವು ಹಣ ಹೂಡಿಕೆಯ ಅಡೆತಡೆಗಳನ್ನು ತಗ್ಗಿಸಿರುವುದರಿಂದ ದಾನಧರ್ಮ ಸ್ವರೂಪದ ನೆರವು ಹೊಸ ಸೇರ್ಪಡೆಯಾಗಲಿದೆ. ವೇದಿಕೆಯೊಂದು ಅಥವಾ ಗುಂಪೊಂದು ತಾನೇ ಶ್ರೇಷ್ಠ ಎಂದು ಸ್ವಪ್ರತಿಷ್ಠೆಯಿಂದ ಹೇಳಿಕೊಳ್ಳುತ್ತಿದೆ.

ಪತ್ರಿಕೋದ್ಯಮದಲ್ಲಿನ ಈ ಹೊಸ ಬೆಳವಣಿಗೆಗಳಿಂದ ರಾಜಕಾರಣಿಗಳು ಹೆಚ್ಚು ಖುಷಿಯಾಗಿದ್ದಾರೆ. ಸಮಾಜವಾದಿ ಪಕ್ಷದ ಘನಶ್ಯಾಂ ತಿವಾರಿ ಅವರು, ಪ್ರತಾಪ್‌ ಭಾನು ಮೆಹ್ತಾ ಅವರ ದುರದೃಷ್ಟಕರ ಸಾಲುಗಳಾದ ‘ಸುದ್ದಿ ಮಾಧ್ಯಮಗಳು ಪ್ರಜಾಪ್ರಭುತ್ವಕ್ಕೆ ಬೆದರಿಕೆ ಒಡ್ಡಿವೆ’ ಎನ್ನುವುದನ್ನು ಟ್ವಿಟರ್‌ನಲ್ಲಿ ತುಂಬ ಖುಷಿಯಿಂದ ಅನುಮೋದಿಸಿದ್ದಾರೆ. ಬಿಜೆಪಿ– ಆರೆಸ್ಸೆಸ್‌ ಪರಿವಾರವೂ ಇಂತಹ ಅನಿಸಿಕೆಯನ್ನು ಬೆಂಬಲಿಸುತ್ತದೆ ಎನ್ನುವುದರ ಬಗ್ಗೆ ನನಗೆ ದೃಢ ವಿಶ್ವಾಸ ಇದೆ. ಪತ್ರಕರ್ತರನ್ನು ಅಣಕಿಸುವ ರಾಹುಲ್‌ ಗಾಂಧಿ ಅವರ ವಿಡಿಯೊಗಳನ್ನು ವೀಕ್ಷಿಸಿದರೆ ಕಾಂಗ್ರೆಸ್ ಧೋರಣೆ ಏನು ಎನ್ನುವುದೂ ಗೊತ್ತಾಗುತ್ತದೆ. ನಮ್ಮ ಸ್ವಾತಂತ್ರ್ಯವನ್ನು ರಾಜಕೀಯ ಪಕ್ಷಗಳಿಗೆ ಹೊರಗುತ್ತಿಗೆ ಕೊಡುವುದು ನಮ್ಮ ಬಯಕೆಯಾಗಿದೆಯೇ ಎನ್ನುವ ಪ್ರಶ್ನೆಯೂ ಇಲ್ಲಿ ಕಾಡುತ್ತದೆ.

ಯಾವುದೇ ಪಾರದರ್ಶಕತೆ ಇಲ್ಲದ, ಸಾಂಸ್ಥಿಕ ಸಂಬಂಧ ಹೊಂದಿರದ ಅಥವಾ ವಿಶ್ವಾಸಾರ್ಹತೆ ಹೊಂದಿಲ್ಲದವರು ನಡೆಸುವ ಇಂತಹ ರಹಸ್ಯ ಕಾರ್ಯಾಚರಣೆಗಳಿಗೆ ‘ತನಿಖಾ ಪತ್ರಿಕೋದ್ಯಮ’ ಎನ್ನಬಹುದೇ? ವಿದೇಶಗಳಲ್ಲಿನ ಇಂತಹ ಕಾರ್ಯಾಚರಣೆಗಳು ಭಿನ್ನವಾಗಿವೆ. ವಿಕಿಲೀಕ್ಸ್‌ ಮತ್ತು ಕೇಂಬ್ರಿಜ್‌ ಅನಲಿಟಿಕಾ ಪ್ರಕರಣಗಳಲ್ಲಿ, ಈ ಮೊದಲೇ ನಡೆದಿದ್ದ ಕಾನೂನುಬಾಹಿರ ಚಟುವಟಿಕೆಗಳನ್ನೂ ಬೆಳಕಿಗೆ ತರಲಾಗಿದೆ.

ಅಂತರ್ಜಾಲ ಸಂಸ್ಥೆಯ ಪತ್ರಕರ್ತನು, ಶಸ್ತ್ರಾಸ್ತ್ರ ಖರೀದಿ ಏಜೆಂಟ್‌ ಅಥವಾ ಒಪ್ಪಂದ ಏರ್ಪಡಿಸುವ ಮಧ್ಯವರ್ತಿಯಂತೆ ನಟಿಸಿ ಇನ್ನೊಬ್ಬರಿಗೆ ಪ್ರಲೋಭನೆ ಒಡ್ಡಿ ಖೆಡ್ಡಾಗೆ ಬೀಳಿಸುವುದು ಪತ್ರಿಕೋದ್ಯಮವೇ ಎನ್ನುವ ಚರ್ಚೆಗೆ ‘ಕೋಬ್ರಾ ಪೋಸ್ಟ್‌’ ವರದಿಗಳು ಆಸ್ಪದ ಮಾಡಿಕೊಟ್ಟಿವೆ. ಇನ್ನೊಂದು ಗುಂಪಿನ ಅಭಿಪ್ರಾಯ ಪಡೆಯದೇ ಅಥವಾ ಅದಕ್ಕೆ ಅವಕಾಶ ನೀಡದೇ ಏಕಪಕ್ಷೀಯವಾಗಿ ಸುದ್ದಿಗಳನ್ನು ಪ್ರಕಟಿಸುವುದು ಎಷ್ಟರಮಟ್ಟಿಗೆ ಸರಿ ಎನ್ನುವ ಪ್ರಶ್ನೆಯೂ ಇಲ್ಲಿ ಉದ್ಭವಿಸುತ್ತದೆ.

ನಾನು ಎರಡು ದೊಡ್ಡ ಪತ್ರಿಕಾ ಸಂಸ್ಥೆಗಳಲ್ಲಿ 37 ವರ್ಷಗಳ ಕಾಲ (1977 ರಿಂದ 2014) ಕೆಲಸ ಮಾಡಿರುವೆ. ಅವರಲ್ಲೊಬ್ಬ ಮಾಲೀಕರು ನನ್ನ ಪತ್ರಿಕೋದ್ಯಮದ ಆರಂಭದ ದಿನಗಳಲ್ಲಿ ಒಂದು ಮೂಲ ಮಂತ್ರವನ್ನು ಕಲಿಸಿಕೊಟ್ಟಿದ್ದರು. ‘ಸುಲಭವಾಗಿ ಸಿಗುವ ಹಣದ ಬಗ್ಗೆ ತುಂಬ ಜಾಗರೂಕನಾಗಿರು’ ಎಂದು ಅವರು ಬುದ್ಧಿಮಾತು ಹೇಳಿದ್ದರು. ಅವರದ್ದು ಈಗಲೂ ಅದೇ ಧೋರಣೆಯಾಗಿದೆ ಎಂದೇ ನಾನು ಆಶಿಸುವೆ.

ಭಾರತದ ಪತ್ರಿಕೋದ್ಯಮದ ಅವಸಾನದ ಬಗ್ಗೆ ಈ ಸಂದರ್ಭದಲ್ಲಿ ಬರೆಯುವುದು ಅಪಕ್ವದ ನಿಲುವಾಗಿದೆ. ಪತ್ರಕರ್ತರ ಕಥೆ ಮುಗಿದಿದೆ ಎಂದು ಪ್ರತಾಪ್‌ ಭಾನು ಮೆಹ್ತಾ ಅವರಂಥವರು ನಂಬಿದ್ದರೆ ಖಂಡಿತವಾಗಿಯೂ ಅದೊಂದು ಸುಳ್ಳು ಸುದ್ದಿಯಾಗಿದೆ. ನಾವು ದೇಶದ ಪ್ರಜಾಪ್ರಭುತ್ವಕ್ಕೆ ಬೆದರಿಕೆ ಒಡ್ಡಿದ್ದೇವೆ ಎನ್ನುವುದೂ ಸರಿಯಲ್ಲ. ಆ ನಿಲುವಿಗೆ ಬಂದವರು ಬಹುಶಃ ತಪ್ಪು ಚಾನೆಲ್‌ ವೀಕ್ಷಿಸುತ್ತಿರಬಹುದು.

ಲೇಖಕ: ‘ದಿ ಪ್ರಿಂಟ್‌’ನ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry