ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿಮಂತ್ರದ ಕ್ಷಿಪಣಿಯಮ್ಮ

Last Updated 2 ಜೂನ್ 2018, 19:30 IST
ಅಕ್ಷರ ಗಾತ್ರ

ದೀಪಧಾರಿ, ಕರುಣಾಮಯಿ, ಮಹಾಮಾಯಿ – ಈ ರೀತಿಯ ವಿಶೇಷಣಗಳನ್ನು ಬಳಸಿ ಹೆಣ್ಣನ್ನು ಬಣ್ಣಿಸುವುದು ರೂಢಿ. ಆದರೆ, ಟೆಸ್ಸಿ ಥಾಮಸ್‌ ಕುರಿತು ಬಳಕೆಯಾಗುತ್ತಿರುವ ವಿಶೇಷಣಗಳು ಬೇರೆ ರೀತಿಯವು. ‘ಕ್ಷಿಪಣಿ ಮಹಿಳೆ’, ‘ಅಗ್ನಿಪುತ್ರಿ’ ಎನ್ನುವ ಬಣ್ಣನೆಗಳೇ ಅವರ ವಿಶೇಷತೆಯನ್ನು ಹೇಳುವಂತಿವೆ.

ಮಿಸೈಲ್, ಬೆಂಕಿ – ಇವೆಲ್ಲ ಹೆಣ್ಣಿನ ಜೊತೆಗೆ ತಳಕು ಹಾಕಿಕೊಂಡಿರುವ ಮಾರ್ದವತೆಗೆ ವಿರುದ್ಧಪದಗಳು. ಆದರೆ, ಟೆಸ್ಸಿ ಅವರದು ಕ್ಷಿಪಣಿಯಲ್ಲಿ ಶಾಂತಿಯನ್ನೂ ಬೆಂಕಿಯಲ್ಲಿ ಬೆಳಕನ್ನೂ ಕಾಣುವ ವ್ಯಕ್ತಿತ್ವ.

‘ಅಗ್ನಿ’ ಸರಣಿಯ ಕ್ಷಿಪಣಿಗಳು ಸಾಮೂಹಿಕ ನಾಶದ ಸಾಮರ್ಥ್ಯ ಹೊಂದಿರುವ ಅಸ್ತ್ರಗಳು. ಆದರೆ, ಟೆಸ್ಸಿ ಅವರ ಕಣ್ಣಿಗೆ ಮಾತ್ರ ಅವು ಶಾಂತಿಯ ವಾಹಕಗಳು. ಆ ಕಾರಣದಿಂದಾಗಿಯೇ, ವಿಧ್ವಂಸಕ ಅಸ್ತ್ರಗಳ ತಯಾರಿಕೆಯಲ್ಲಿ ಹೆಣ್ಣು ತೊಡಗಿಕೊಳ್ಳುವುದು ಒಂದು ವಿರೋಧಾಭಾಸ ಎನ್ನುವಂತಹ ವಾದವನ್ನು ಅವರು ಒಪ್ಪುವುದೇ ಇಲ್ಲ.

ಅಸ್ತ್ರಗಳನ್ನು ಹೊಂದಿರುವ ಬಗ್ಗೆ ಅವರ ತರ್ಕ ಹೀಗಿದೆ: ‘ನಾವು ಬಲಿಷ್ಟರಾಗಿದ್ದಲ್ಲಿ ನಮ್ಮ ತಂಟೆಗೆ ಯಾರೂ ಬರುವುದಿಲ್ಲ’. ಇದರ ಜೊತೆಗೆ ಅವರು ಜಾಣ್ಮೆಯಿಂದ ಸೇರಿಸುವ ಮತ್ತೊಂದು ಮಾತು – ‘ಇದೆಲ್ಲ ದೇಶದ ಅಗತ್ಯವೇ ಹೊರತು, ನಾನು ಬಯಸಿದ್ದಲ್ಲ’.

‘ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ’ (ಡಿಆರ್‌ಡಿಒ) ಮಹಾನಿರ್ದೇಶಕಿಯಾಗಿ ಅಧಿಕಾರ ವಹಿಸಿಕೊಂಡಿರುವ ಕಾರಣದಿಂದಾಗಿ ಪ್ರಸ್ತುತ ಸುದ್ದಿಯಲ್ಲಿರುವ ಟೆಸ್ಸಿ– ಭಾರತೀಯ ಕ್ಷಿಪಣಿ ಕ್ಷೇತ್ರದಲ್ಲಿನ ಪ್ರಮುಖ ಮಹಿಳಾ ಮೈಲುಗಲ್ಲು. ‘ಅಗ್ನಿ’ ಮತ್ತು ‘ಪೃಥ್ವಿ’ ಕ್ಷಿಪಣಿಗಳ ಅಭಿವೃದ್ಧಿ ಮತ್ತು ಉಡಾವಣೆಯಲ್ಲಿ ಅವರದು ಪ್ರಮುಖ ಪಾತ್ರ. ‘ಮಿಸೈಲ್ ಮ್ಯಾನ್’ ಎಂದು ಪ್ರಸಿದ್ಧರಾದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ತಮಿಳುನಾಡಿನವರಾದರೆ, ಟೆಸ್ಸಿ ನೆರೆಯ ಕೇರಳದವರು. ಕೇರಳದ ಆಲಪ್ಪುಳ ಎನ್ನುವ ಸುಂದರ ಪ್ರದೇಶ ಅವರ ತವರು (ಜನನ: 1963). ತ್ರಿಶ್ಶೂರ್‌ನ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಬಿ.ಟೆಕ್. ಪದವಿ ಪಡೆದ ಅವರು, ಪುಣೆಯ ‘ಡಿಫೆನ್ಸ್‌ ಇನ್‌ಸ್ಟಿಟ್ಯೂಟ್ ಆಫ್‌ ಅಡ್ವಾನ್ಸ್ಡ್‌ ಟೆಕ್ನಾಲಜಿ’ಯಲ್ಲಿ ಎಂ.ಟೆಕ್. ಮಾಡಿದರು.

ಸಾರ್ವಜನಿಕವಾಗಿ ಸೀರೆ, ಕುಂಕುಮದೊಂದಿಗೆ ಸಾಂಪ್ರದಾಯಿಕ ಭಾರತೀಯ ನಾರಿಯಾಗಿ ಕಾಣಿಸಿಕೊಳ್ಳುವ ಅವರು, ಅಸಾಂಪ್ರದಾಯಿಕ ಕ್ಷೇತ್ರದಲ್ಲಿ ತಮ್ಮ ಅನನ್ಯತೆಯನ್ನು ಕಂಡುಕೊಂಡಿರುವ ಸಾಹಸಿ. ಭಾರತೀಯ ಹೆಣ್ಣುಮಕ್ಕಳ ಪಾಲಿಗೆ ನಿಜವಾದ ಅರ್ಥದಲ್ಲಿ ಐಕಾನ್‌ ಆಗಬಲ್ಲ ಸಾಧನೆ ಅವರದು. ಸುಮಾರು ಮೂರು ದಶಕಗಳ ಹಿಂದೆ ಅವರು ‘ಡಿಆರ್‌ಡಿಒ’ (1988ರಲ್ಲಿ) ಸೇರಿದಾಗ, ಅಲ್ಲಿನ ಸಿಬ್ಬಂದಿಯಲ್ಲಿ ಮಹಿಳೆಯರ ಪ್ರಮಾಣ ಶೇ 2–3ರಷ್ಟು ಮಾತ್ರವಿತ್ತು. ಈಗ ಆ ಪ್ರಮಾಣ ಶೇ 12ರಿಂದ 15ರಷ್ಟಿದೆ. ರಕ್ಷಣಾ ವಿಜ್ಞಾನ–ತಂತ್ರಜ್ಞಾನ ಕ್ಷೇತ್ರದಲ್ಲಿ ಮಹಿಳೆಯ ಹೆಜ್ಜೆಗುರುತು ಬಲಗೊಳ್ಳುತ್ತಿರುವ ಸೂಚನೆಯಿದು.

ಬಹುತೇಕ ಮಕ್ಕಳಂತೆ ಟೆಸ್ಸಿ ಅವರಿಗೂ ಅವರ ಅಮ್ಮನೇ ಸ್ಫೂರ್ತಿ. ಅಪ್ಪ ಅಕೌಂಟೆಂಟ್‌ ಆಗಿದ್ದವರು, ಅಮ್ಮ ಗೃಹಿಣಿ. ಶಿಕ್ಷಕ ತರಬೇತಿಯನ್ನು ಪೂರೈಸಿದ್ದ ಕುಂಜಮ್ಮ ಥಾಮಸ್‌ ಅವರಿಗೆ ಶಿಕ್ಷಕಿಯಾಗುವ ಅವಕಾಶವಿದ್ದರೂ, ಅವರು ಮನೆಯನ್ನೇ ಶಾಲೆಯೆಂದು ಬಗೆದರು. ತಮ್ಮ ಐವರು ಹೆಣ್ಣುಮಕ್ಕಳು ಹಾಗೂ ಓರ್ವ ಮಗನ ಪಾಲಿಗೆ ಶಿಕ್ಷಕಿಯಾದರು. ಟೆಸ್ಸಿ ಎಂಟನೇ ತರಗತಿಯಲ್ಲಿದ್ದಾಗ ಅವರ ತಂದೆ ಪಾರ್ಶ್ವವಾಯುವಿಗೆ ತುತ್ತಾದರು. ಅಲ್ಲಿಗೆ ಮನೆಯಲ್ಲಿನ ಮಕ್ಕಳ ಸಂಖ್ಯೆ ಏಳಕ್ಕೇರಿತು. ಈ ತುಂಬು ಕುಟುಂಬವನ್ನು ಕಾಳಜಿಯಿಂದ, ನಿಸ್ವಾರ್ಥದಿಂದ ಪೊರೆದ ಅಮ್ಮನ ಬಗ್ಗೆ ಮಕ್ಕಳಿಗೆ ತುಂಬು ಅಭಿಮಾನ.

ಟೆಸ್ಸಿ ಅವರ ತಂದೆ ಥಾಮಸ್‌, ಮಗಳ ಪ್ರತಿ ನಿರ್ಣಯವನ್ನೂ ಬೆಂಬಲಿಸಿದರು. ಮಗಳು ಎಂಜಿನಿಯರಿಂಗ್‌ಗೆ ಹೋಗುವೆ ಎಂದಾಗ ಅದನ್ನು ಬೆಂಬಲಿಸಿದರು. ‘ನನ್ನ ಪ್ರತಿ ನಿರ್ಧಾರದ ಹಿಂದೆಯೂ ಅಪ್ಪನ ಉತ್ತೇಜನವಿತ್ತು’ ಎಂದವರು ಭಾವುಕತೆಯಿಂದ ಹೇಳಿಕೊಂಡಿದ್ದಾರೆ. ಈಗ ಉನ್ನತ ಹುದ್ದೆಯನ್ನು ಅಲಂಕರಿಸಿರುವ ಸಂದರ್ಭದಲ್ಲಿ ಅಪ್ಪನನ್ನು ಮಿಸ್‌ ಮಾಡಿಕೊಳ್ಳುತ್ತಿರುವ ಅಪ್ಪಟ ಭಾರತೀಯ ಮನಸ್ಸು ಅವರದು. ವೃತ್ತಿಜೀವನದ ಏಳಿಗೆಗೆ ಸಂಬಂಧಿಸಿದಂತೆ, ಭಾರತೀಯ ನೌಕಾಪಡೆಯಲ್ಲಿ ಸೇವೆಸಲ್ಲಿಸುತ್ತಿರುವ ತಮ್ಮ ಪತಿ ಸರೋಜ್ ಪಟೇಲ್‌ ಅವರ ಸಹಕಾರ ನೆನಪಿಸಿಕೊಳ್ಳುವುದನ್ನು ಅವರು ಮರೆಯುವುದಿಲ್ಲ.

ಹಳ್ಳಿಯ ಸಾಮಾನ್ಯ ಹೆಣ್ಣುಮಕ್ಕಳಂತೆಯೇ ಟೆಸ್ಸಿ ಅವರ ಬಾಲ್ಯವೂ ಇತ್ತು. ವ್ಯತ್ಯಾಸ ಇದ್ದುದು ಕನಸು ಕಾಣುವಿಕೆಯಲ್ಲಿ. ಎಂಜಿನಿಯರ್ ಆಗಬೇಕು ಎಂದು ಶಾಲಾದಿನಗಳಲ್ಲೇ ಅವರಿಗೆ ಅನ್ನಿಸಿತ್ತು. ‘ಯಾಕೆ ಹಾಗನ್ನಿಸಿತು’ ಎಂದರೆ, ಉತ್ತರ ಅವರಿಗೂ ತಿಳಿದಿಲ್ಲ. ಕಾರಣ ತಿಳಿಯದಿದ್ದರೂ ಬಾಲ್ಯದ ಕನಸನ್ನು ಪಟ್ಟುಬಿಡದೆ ಸಾಧಿಸಿದರು. ಊರಿಗೆ ಸಮೀಪದಲ್ಲೇ ಇದ್ದ ಕ್ಷಿಪಣಿ ಉಡಾವಣಾ ಕ್ಷೇತ್ರ ಅವರ ಪಾಲಿಗೆ ಆಕರ್ಷಣೆಯ ಕೇಂದ್ರವಾಗಿತ್ತು. ಅಲ್ಲಿ ಹಾರಾಡುತ್ತಿದ್ದ ಲೋಹದ ಹಕ್ಕಿಗಳು ಅವರಿಗೆ ತಿಳಿಯದಂತೆಯೇ ಮನಸ್ಸನ್ನು ಆವರಿಸಿಕೊಂಡಿರಬೇಕು.

ವಿಜ್ಞಾನಿಯಾಗಿ ಕ್ಷಿಪಣಿ ಅಭಿವೃದ್ಧಿ– ಉಡಾವಣೆ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವ ಟೆಸ್ಸಿ, ಗೃಹಕೃತ್ಯಗಳಲ್ಲಿ ಪ್ರತಿದಿನವೂ ಕ್ಷಿಪಣಿ ಉಡಾಯಿಸುವ ಸವಾಲು ಎದುರಿಸಿದ್ದಿದೆ. ನಸುಕಿನಲ್ಲೇ ಎದ್ದು ಅಡುಗೆ ಮಾಡುವುದು, ಮಗನನ್ನು ಶಾಲೆಗೆ ಅಣಿಗೊಳಿಸುವುದು, ಸಂಜೆ ಮರಳಿದ ನಂತರ ಮತ್ತೆ ಅಡುಗೆಮನೆ – ಇವೆಲ್ಲವೂ ಮನೆ ಹಾಗೂ ಕಚೇರಿಯ ದ್ವಿಪಾತ್ರ ನಿರ್ವಹಿಸುವ ಹೆಣ್ಣಿನ ಪಾಲಿಗೆ ಅನುದಿನದ ಕ್ಷಿಪಣಿಪರೀಕ್ಷೆಗಳೇ ಹೌದು.

5000 ಕಿ.ಮೀ. ದೂರದ ಗುರಿಯನ್ನು ಮುಟ್ಟಬಲ್ಲ ‘ಅಗ್ನಿ 5’ ಕ್ಷಿಪಣಿ ಉಡಾವಣೆಯ ನೇತೃತ್ವ ವಹಿಸಿದ್ದುದು ಟೆಸ್ಸಿ ವೃತ್ತಿಜೀವನದ ಮಹತ್ವದ ಘಟನೆ. ವಿಶ್ವದ ಗಮನಸೆಳೆದ ಈ ಕ್ಷಿಪಣಿಯ ಉಡಾವಣೆಗಾಗಿ ಸುಮಾರು 2000 ವಿಜ್ಞಾನಿಗಳು ಮೂರು ವರ್ಷಗಳ ಕಾಲ ಅವಿರತವಾಗಿ ಶ್ರಮಿಸಿದ್ದನ್ನು ‘ಒಂದು ಅದ್ಭುತ ಕ್ಷಣ’ ಎಂದವರು ಬಣ್ಣಿಸುತ್ತಾರೆ. ಆದರೆ, ಅವರ ವೃತ್ತಿಬದುಕಿನ ಉದ್ದಕ್ಕೂ ಹೂವಿನ ಹಾದಿಯೇನೂ ಇಲ್ಲ. ಕಿರಿಯ ಮಹಿಳಾ ಸಹೋದ್ಯೋಗಿಯೊಬ್ಬರು ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ದೂರಿದಾಗ, ಹಿರಿಯ ಅಧಿಕಾರಿಯಾಗಿ  ತನಿಖೆಯನ್ನು ಸಮರ್ಪಕವಾಗಿ ನಡೆಸಲಿಲ್ಲ ಎನ್ನುವ ಆರೋಪಕ್ಕೆ ಟೆಸ್ಸಿ ಗುರಿಯಾಗಬೇಕಾಯಿತು.

2006ರಲ್ಲಿ ಕ್ಷಿಪಣಿಯೊಂದು ನಿರೀಕ್ಷಿತ ಮಾನದಂಡಗಳನ್ನು ಮುಟ್ಟಲು ವಿಫಲವಾದಾಗ ಟೀಕೆಗಳನ್ನು ಎದುರಿಸಬೇಕಾಯಿತು. ಈ ಟೀಕೆಗಳಿಗೆ ಪ್ರತಿಕ್ರಿಯಿಸುವಂತೆ, ತಮ್ಮ ಕೆಲಸದಲ್ಲಿ ಮತ್ತಷ್ಟು ಗಾಢವಾಗಿ ತೊಡಗಿಕೊಂಡರು. ಮನೆಯಲ್ಲಿ ಮಗನಿಗೆ ಹುಷಾರಿಲ್ಲದಿದ್ದಾಗಲೂ ಕಚೇರಿ ಕರ್ತವ್ಯವನ್ನು ತಪ್ಪಿಸಲಿಲ್ಲ. ಈ ಕಠಿಣ ಪರಿಶ್ರಮ ಹಾಗೂ ತಪ್ಪುಗಳನ್ನು ತಿದ್ದಿಕೊಳ್ಳುವ ಶ್ರದ್ಧೆಯ ಫಲದಿಂದಾಗಿ ‘ಅಗ್ನಿ 5’ ಕ್ಷಿಪಣಿಯ ಅಭೂತಪೂರ್ವ ಯಶಸ್ಸಿನ ರೂವಾರಿಗಳಲ್ಲೊಬ್ಬರಾಗುವುದು ಸಾಧ್ಯವಾಯಿತು.

‘ವಿಜ್ಞಾನ ಕ್ಷೇತ್ರದಲ್ಲಿ ಲಿಂಗತಾರತಮ್ಯಕ್ಕೆ ಅವಕಾಶವಿಲ್ಲ. ಏಕೆಂದರೆ, ಕೆಲಸ ಮಾಡುತ್ತಿರುವವರು ಯಾರು ಎನ್ನುವುದನ್ನು ವಿಜ್ಞಾನ ಗಮನಿಸುವುದಿಲ್ಲ. ಕೆಲಸ ಮಾಡುವ ಸಂದರ್ಭದಲ್ಲಿ ನಾನೊಬ್ಬ ವಿಜ್ಞಾನಿಯೇ ಹೊರತು, ಹೆಣ್ಣಲ್ಲ’ ಎಂದು ಸಂದರ್ಶನವೊಂದರಲ್ಲಿ ಅವರು ಹೇಳಿದ್ದಾರೆ. ಆದರೂ, ದೇಶದ ಉನ್ನತ ಸಂಸ್ಥೆಗಳಲ್ಲೊಂದಾದ ‘ಡಿಆರ್‌ಡಿಒ’ ಮಹಾನಿರ್ದೇಶಕ ಹುದ್ದೆಗೇರಿರುವ ಎರಡನೇ ಮಹಿಳೆ ಎನ್ನುವ (ಜೆ. ಮಂಜುಳಾ ಮೊದಲನೆಯವರು) ಟೆಸ್ಸಿ ಅವರ ಸಾಧನೆ ಸಣ್ಣದೇನಲ್ಲ. ಪುರುಷರ ಪ್ರಾಬಲ್ಯ ಹೆಚ್ಚಾಗಿರುವ ರಕ್ಷಣಾ ತಂತ್ರಜ್ಞಾನ ಕ್ಷೇತ್ರದಲ್ಲಿ ಅವರು ಮೂಡಿಸಿರುವ ಛಾಪಿಗೆ ವಿಶೇಷ ಮಹತ್ವವಿದೆ. ಪ್ರಸ್ತುತ ‘ಡಿಆರ್‌ಡಿಒ’ ಮಹಾನಿರ್ದೇಶಕಿಯಾಗುವ ಮೂಲಕ ಟೆಸ್ಸಿ ಅವರು ದೇಶದ ರಕ್ಷಣೆಗೆ ಸಂಬಂಧಿಸಿದಂತೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಹಲವು ಸಂಸ್ಥೆಗಳನ್ನು ಮುನ್ನಡೆಸುವ ಅವಕಾಶ ಪಡೆದಿದ್ದಾರೆ.

ಟೆಸ್ಸಿ ಅವರ ಸಾಧನೆಗೆ ಈವರೆಗೆ ಐದು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್‌ ನೀಡಿ ಗೌರವಿಸಿವೆ. ಸಾರ್ವಜನಿಕ ಆಡಳಿತದಲ್ಲಿ ಅತ್ಯುತ್ತಮ ನಿರ್ವಹಣೆಗಾಗಿ ‘ಲಾಲ್‌ ಬಹದ್ದೂರ್‌ ಶಾಸ್ತ್ರಿ ರಾಷ್ಟ್ರೀಯ ಪ್ರಶಸ್ತಿ’ ಸಂದಿದೆ.

ಸ್ವದೇಶಿ ನಿರ್ಮಿತ ಹಗುರ ಯುದ್ಧ ವಿಮಾನ ‘ತೇಜಸ್‌’ನ ಹೆಸರನ್ನೇ ಮಗನಿಗೂ ಇಟ್ಟಿರುವುದು ಅವರ ವೃತ್ತಿ ಹಾಗೂ ವೈಯಕ್ತಿಕ ಬದುಕಿನ ನಡುವಿನ ಗೆರೆ ತೆಳುವಾಗಿರುವುದನ್ನು ಸೂಚಿಸುವಂತಿದೆ. ಯುದ್ಧವಿಮಾನವನ್ನು ಮಗನಂತೆ ಕಾಣಬಲ್ಲ ಟೆಸ್ಸಿ, ಕ್ಷಿಪಣಿಗಳನ್ನು ಶಾಂತಿವಾಹಕಗಳು ಎಂದು ಭಾವಿಸಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಈ ಹಿನ್ನೆಲೆಯಲ್ಲಿ, ‘ಕ್ಷಿಪಣಿ ಮಹಿಳೆ’ ಎನ್ನುವುದಕ್ಕಿಂತಲೂ ‘ಕ್ಷಿಪಣಿಯಮ್ಮ’ ಎನ್ನುವ ವಿಶೇಷಣವೇ ಅವರಿಗೆ ಹೆಚ್ಚು ಹೊಂದುವಂತಹದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT