7

ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ...

ಪ್ರಕಾಶ್ ರೈ
Published:
Updated:
ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ...

ಎಷ್ಟೇ ಜಾಗರೂಕತೆಯಿಂದ ಇದ್ದರೂ ನಾವು ಎದುರು ನೋಡದ ಒಂದು ಕ್ಷಣದಲ್ಲಿ ಫಳಾರೆಂದು ಕೆನ್ನೆಗೆ ಬಾರಿಸುತ್ತದೆ ಜೀವನ. ಒಬ್ಬ ಬಲಶಾಲಿ ಹೊಡೆಯುವಾಗ ಮತ್ತೆ ತಿರುಗಿ ಹೊಡೆಯಲಾಗದ ಅಸಹಾಯಕತೆಯಿಂದ ತಲೆತಗ್ಗಿಸಿ ನಿಲ್ಲಬೇಕಾಗುತ್ತದೆ. ವರವೆಂದುಕೊಂಡ ಬದುಕು ಹೇಗೆ ದಿಢೀರೆಂದು ಶಾಪವಾಗುತ್ತದೆ? ದೇವತೆಗಳು ಮುತ್ತಿಟ್ಟಂತಿದ್ದ ದಿನಗಳು ಇದ್ದಕ್ಕಿದ್ದಂತೆ ಬಣ್ಣ ಬದಲಾಯಿಸಿ ರಾಕ್ಷಸರ ಅಟ್ಟಹಾಸವಾಗುವುದು ಯಾಕೆ? ನೂರು ವರ್ಷ ಬದುಕಬೇಕೆಂಬ ಉತ್ಸಾಹ ತುಂಬಿದ ಸಂತೋಷದ ಬದುಕಿನಲ್ಲಿ ಈ ಕ್ಷಣವೇ ಸತ್ತರೆ ಸಾಕೆಂದು ಯೋಚಿಸುವತ್ತ ದೂಡುವ ವಿದ್ಯೆಯನ್ನು ಎಲ್ಲಿ ಅಡಗಿಸಿಟ್ಟಿದೆ ಈ ಜೀವನ? ಹೀಗೆ ಎಷ್ಟು ಬಾರಿ ಕೆನ್ನೆಗೆ ಬಾರಿಸಿದರೂ ನಾಚಿಕೆಯೇ ಇಲ್ಲದೆ ಮತ್ತೆ ಜೀವನವನ್ನು ರಸಿಕಲಾರಂಭಿಸುತ್ತೇವಲ್ಲ, ಹೇಗೆ?

ಯಾವ ಉತ್ತರವೂ ಇಲ್ಲದ, ಹಲವು ಪ್ರಶ್ನೆಗಳ ಬಗ್ಗೆ ಯೋಚಿಸುತ್ತಲೇ ರಸ್ತೆಗಿಳಿದು ನಡೆಯಲಾರಂಭಿಸಿದ ಮುಂಜಾನೆ. ಮತ್ತೆ ಹುಟ್ಟುತ್ತಿದೆ ಬೆಳಗು. ಪ್ರತಿದಿನ ಹೊಸತಾಗಿ ಹುಟ್ಟುತ್ತಿದೆಯಲ್ಲಾ ಎಂದು ಅಸೂಯೆಯಾಗುತ್ತಿದೆ. ಗಟ್ಟಿಯಾಗಿ ತಬ್ಬಿ ಹಿಡಿದು ಮಲಗಿರುವ ರಾತ್ರಿ ಹಗಲು, ಅರೆಗಣ್ಣಲ್ಲಿ ತೇಲುತ್ತಿರುವ ಹೊತ್ತು. ರಾತ್ರಿಯೆಲ್ಲಾ ಬೀದಿ ಬೀದಿಗಳ ಕಸಗುಡಿಸಿ ಊರನ್ನು ಶುದ್ಧಗೊಳಿಸಿ ನಿದ್ದೆ ಬೇಡುವ ಕಂಗಳನ್ನು ಸಂತೈಸಲು ಬೀಡಿ ಹೊತ್ತಿಸಿ ಸುಧಾರಿಸಿಕೊಳ್ಳುತ್ತ ಕುಳಿತಿದ್ದಾನೆ ಕಸ ಗುಡಿಸುವ ಕೆಲಸಗಾರ. ವಾಕಿಂಗ್‌ ಕರೆದುತಂದಿರುವ ಬೆಲೆಬಾಳುವ ನಾಯಿಗಳ ವೇಗಕ್ಕೆ ತಡಬಡಾಯಿಸುತ್ತ ಪಾರ್ಕ್‌ನಲ್ಲಿ ನಡೆಯುತ್ತಿರುವ ಹಿರಿಯರು.

‘ರಂಗೋಲಿ... ಯಮ್ಮೋ ರಂಗೋಲಿ...’ ಎಂದು ತನ್ನ ವಯಸ್ಸಿಗೆ ಮೀರಿದ ಗಟ್ಟಿ ದನಿಯಲ್ಲಿ ಕೂಗುತ್ತ ಮುದುಕಿಯೊಬ್ಬಳು ಆ ಬೆಳಗನ್ನು ಬಡಿದೆಬ್ಬಿಸುತ್ತ ಬಂದಳು. ಕಸದ ಗುಡ್ಡೆಗಳನ್ನು ಕೆದಕುತ್ತ ತನ್ನ ಊಟವನ್ನು ಹೆಕ್ಕುವ ಹುಂಜಗಳಿಲ್ಲದ, ಕಾಂಕ್ರೀಟ್‌ ಕಟ್ಟಡಗಳೇ ಸಾಲಾಗಿ ನಿಂತ ಈ ಊರಿನಲ್ಲಿ ಆ ಮುದುಕಿಯೇ ಊರನ್ನೆಬ್ಬಿಸುವ ಹುಂಜ. ಪಾರ್ಕ್‌ ಮಾಡಲು ಸ್ಥಳವಿಲ್ಲದೆ ಇಕ್ಕಟ್ಟಾದ ಬೀದಿಗಳಲ್ಲಿ ಪೇರಿಸಿಟ್ಟಿರುವ ವಾಹನಗಳ ನಡುವೆ ಯಾರಾದರೂ ರಂಗೋಲಿ ಹಾಕಲು ತನ್ನ ಬಳಿ ರಂಗೋಲಿ ಪುಡಿ ಕೊಳ್ಳಬಹುದೆಂಬ ನಂಬಿಕೆಯಿಂದ ಕೂಗುತ್ತಿರುವ ಆ ಮುದುಕಿಯ ಮೇಲೆ ಗೌರವ ಹುಟ್ಟುತ್ತಿದೆ. ಆ ವಯಸ್ಸಲ್ಲಿ ತಲೆಯ ಮೇಲೆ ಭಾರ ಹೊತ್ತು ಬೀದಿ ಬೀದಿಯಲ್ಲಿ ಪ್ರತಿದಿನ ಅಲೆಯುತ್ತಾಳೆ. ಹಾಗೆಯೇ ಮಾತಿಗೆ ನಿಂತರೆ, ‘ಮಗ ಯಾಕೋ ಗೊತ್ತಿಲ್ಲ ಜೈಲಿಗೆ ಹೋದ. ನನ್ನನ್ನು ನೋಡಿಕೊಳ್ಳಲು ಯಾರೂ ಇಲ್ಲ. ಈ ಜನ್ಮ ಇರುವವರೆಗೆ ದುಡಿಯುತ್ತಿರಬೇಕು’ ಎನ್ನುವಾಗ ನಾಚಿಕೆಯಾಗುತ್ತದೆ.

ಬದುಕು ಆ ಮುದುಕಿಯ ಕೆನ್ನೆಯ ಮೇಲೆ ಹಲವು ಬಾರಿ ಬಾರಿಸಿರುವುದು ಗೊತ್ತಾಗುತ್ತಿದೆ. ಕೈಚಾಚಿ ಭಿಕ್ಷೆ ಬೇಡದೆ ಬದುಕಿನ ಕೆನ್ನೆಗೆ ತಿರುಗಿ ಬಾರಿಸುತ್ತ ಬದುಕುತ್ತಿರುವ ಮುದುಕಿ ಇದ್ದಕ್ಕಿದ್ದಂತೆ ಟೀಚರಾಗಿಬಿಡುತ್ತಾಳೆ. ಅವಳ ದನಿಗೆ ಆ ಬೀದಿಯಲ್ಲಿ ಯಾರು ಎದ್ದರೋ ಗೊತ್ತಿಲ್ಲ. ನನ್ನೊಳಗೆ ನಾನು ಎಚ್ಚರಗೊಂಡೆ. ಉತ್ತರಗಳೇ ಇಲ್ಲವೆಂದು ಗೊಂದಲ್ಲಿದ್ದ ನನ್ನ ಎಲ್ಲ ಪ್ರಶ್ನೆಗಳಿಗೆ ಉತ್ತರವೆಂಬಂತೆ ನಾನಿದ್ದೇನಲ್ಲ ಎಂದು ಅರ್ಥ ಮಾಡಿಸಿದ್ದಳು.

ಬದುಕು ಹೇಗೆಲ್ಲಾ ನಮ್ಮನ್ನು ಗಾಸಿಗೊಳಿಸಿದೆ ಎಂದು ಕೋ‍ಪಗೊಳ್ಳದೆ, ಯಾಕೆ ಏಟು ತಿಂದೆ ಎಂದು ಯೋಚಿಸುವುದು ಆಗ ಶುರುವಾಯಿತು. ಆ ಹಿರಿಯಾಕೆಯನ್ನು ಸಂಧಿಸುವ ಮುನ್ನ ವಯಸ್ಸಾದ ಇನ್ನೊಬ್ಬರನ್ನು ಸಂಧಿಸಿದ್ದೆ. ಅವರಿಂದಾಗಿಯೇ ನನ್ನ ಹಲವು ಪ್ರಶ್ನೆಗಳು ಆರಂಭವಾಗಿದ್ದವು.

ತೂತುಕುಡಿಯಲ್ಲಿ ಚಿತ್ರೀಕರಣ ಮುಗಿಸಿ ಮಧುರೈ ವಿಮಾನ ನಿಲ್ದಾಣಕ್ಕೆ ಬಂದು ಚೆನ್ನೈ ವಿಮಾನವೇರಿದ್ದೆ. ಫ್ಲೈಟ್‌ ಹತ್ತಿದ ಕ್ಷಣದಿಂದ ಆ ಹಿರಿಯರು ನನ್ನನ್ನೇ ನೋಡುತ್ತಿದ್ದರು. ಒಬ್ಬ ನಟನನ್ನು ಬಹಳಷ್ಟು ಜನ ನೋಡುತ್ತಲಿರುವುದು ಸಹಜವೇ ಆದರೂ ಅವರ ನೋಟ ಸ್ವಲ್ಪ ಭಿನ್ನವಾಗಿತ್ತು. ‘ಸರಿ, ನೋಡ್ತಾ ಇರ್ಲಿ’ ಎಂದು ಸುಮ್ಮನಾದೆ. ಚೆನ್ನೈ ಹತ್ತಿರವಾಗುತ್ತಿದ್ದಂತೆ ಅವಸರವಸರವಾಗಿ ನನ್ನ ಬಳಿ ಬಂದು ಪಕ್ಕದ ಸೀಟ್‌ನಲ್ಲಿ ಕುಳಿತರು. ಮಾತನಾಡದೆ ದೂರದಿಂದ ನೋಡುತ್ತಿದ್ದವರು ಹೀಗೆ ಧೈರ್ಯಮಾಡಿ ಪಕ್ಕದಲ್ಲಿ ಬಂದು ಕೂರುವರೆಂದು ನಾನು ನಿರೀಕ್ಷಿಸಿರಲಿಲ್ಲ. ಅವರೇ ಮಾತಾಡಲು ಆರಂಭಿಸಿದರು.

‘ನೋಡಪ್ಪಾ, ನಿನ್ನ ಮಾತುಗಳನ್ನು ಕೇಳಿದ್ದೇನೆ. ನಿನ್ನ ಬರವಣಿಗೆಗಳಲ್ಲಿ ನೀನು ಬಿಚ್ಚಿಡುವ ಸತ್ಯಗಳನ್ನು ಓದಿದ್ದೇನೆ. ಸಿನಿಮಾ ನಟರೆಂದರೆ ನನಗೆ ಅಷ್ಟು ಹಿಡಿಸುವುದಿಲ್ಲ. ಆದರೆ ನಿನ್ನ ನೇರ ನುಡಿಗಳು, ಅಂಜದೆ ಬರೆಯುವ ಸತ್ಯದ ಮೂಲಕ ನಿನ್ನನ್ನು ತಿಳಿದುಕೊಂಡ ಮೇಲೆ ನನ್ನ ಮಗನಂತೆ ನೋಡಲಾರಂಭಿಸಿದ್ದೇನೆ. ನೀನು ಚೆನ್ನಾಗಿರಬೇಕು, ಸುಖವಾಗಿರಬೇಕು ಎಂದು ನೆನೆಯುತ್ತಿರುವಾಗ ‘ಹೆಂಡತಿಯಿಂದ ಬೇರ್ಪಡುತ್ತಿದ್ದೇನೆ’ ಎಂದು ಬರೆದಿದ್ದೀಯಾ. ಆ ಸತ್ಯವನ್ನು ಮಾತ್ರ ಹೇಳಬಾರದಾಗಿತ್ತು. ನಿಮ್ಮಿಬ್ಬರ ಮಧ್ಯೆ ಏನೇ ಸಮಸ್ಯೆ ಇದ್ದರೂ ಮಾತನಾಡಿ ಬಗೆಹರಿಸಿಕೊಳ್ಳಬೇಕಾಗಿತ್ತು. ನಿನಗೆ ಹೇಳುವಷ್ಟರವನಲ್ಲ ನಾನು. ಆದರೂ ಇದನ್ನೆಲ್ಲ ನಿನ್ನೊಂದಿಗೆ ಹೇಳಬಹುದೇ ಬೇಡವೇ ಎಂದು ತುಂಬ ಹೊತ್ತಿನಿಂದ ಯೋಚಿಸಿದೆ. ನನ್ನ ಮಗನಾಗಿದ್ದರೆ ಖಂಡಿತ ಹೇಳುತ್ತಿದ್ದೆ. ನಿನ್ನನ್ನೂ ಮಗನೆಂದೇ ಭಾವಿಸಿ ಹೇಳುತ್ತಿದ್ದೇನೆ’ ಎಂದು ಕೈ ಹಿಡಿದಾಗ ನನ್ನ ಕಣ್ಣುಗಳು ತುಂಬಿ ಬಂದವು.

ಅವರ‍್ಯಾರು ಎಂದು ನನಗೆ ಗೊತ್ತಿಲ್ಲ. ಆದರೂ ನನ್ನ ಮೇಲೆ ಇಷ್ಟೊಂದು ಅಕ್ಕರೆಯಿದೆಯಲ್ಲ ಎಂದೆನಿಸಿತು. ‘ಕೂತು ಮಾತನಾಡಿದೆವು ಅಯ್ಯಾ... ಅದು ಮಾತನಾಡಿ ಬಗೆಹರಿಸಬೇಕಾದ ಸಮಸ್ಯೆ ಅಲ್ಲ. ಬೇರ್ಪಟ್ಟು ನೀಗಿಸಿಕೊಳ್ಳಬೇಕಾದ ವೇದನೆ. ನನ್ನ ಅವಳ ನಡುವೆ ಉಂಟಾದ ಬಿರುಕು ಇನ್ನೊಬ್ಬರ ಬದುಕಿನದ್ದಲ್ಲ. ಅದಕ್ಕೆ ಪರಿಹಾರ ನಾವಿಬ್ಬರೇ ಕಂಡುಕೊಳ್ಳಬೇಕು; ಕಂಡುಕೊಂಡಿದ್ದೇವೆ. ಎಲ್ಲ ಸತ್ಯಗಳನ್ನೂ ಮುಕ್ತವಾಗಿ ಬಿಚ್ಚಿಡುವಂತೆ ಇದನ್ನೂ ಬಿಚ್ಚಿಟ್ಟೆ. ನಾನು ಮಾಡಿದ್ದು ಸರಿಯೋ ತಪ್ಪೋ ಹೇಳಿ. ತಪ್ಪಾಗಿದ್ದರೆ ನಾನು ಅರ್ಥ ಮಾಡಿಕೊಂಡು ಸರಿಪಡಿಸಿಕೊಳ್ಳುತ್ತೇನೆ. ಆದರೆ ‘ಸತ್ಯಗಳನ್ನು ಯಾಕೆ ಹೇಳುತ್ತಿದ್ದೀಯಾ?’ ಎಂದು ಎಲ್ಲರೂ ಪ್ರಶ್ನಿಸುತ್ತಿರುವುದು ನನಗೆ ಅರ್ಥವಾಗುತ್ತಿಲ್ಲ.

ಸತ್ಯಗಳನ್ನು ಹೇಳಿದ್ದಕ್ಕಾಗಿಯೇ ನೀನು ನನಗೆ ಇಷ್ಟವಾದೆ; ನನ್ನ ಮಗನೆಂದು ಭಾವಿಸಿದೆ ಎಂದು ನೀವು ನನಗೆ ಹೇಳುತ್ತಿದ್ದೀರಿ. ಕೊನೆಯಲ್ಲಿ ಹೇಳಿದ ಒಂದು ಸತ್ಯಕ್ಕಾಗಿ ನನ್ನ ಬಗ್ಗೆ ಬೇಸರವಾಯಿತು ಎಂದು ಕೂಡ ನೀವೇ ಹೇಳುತ್ತಿದ್ದೀರಿ. ನೀವು ಇಷ್ಟಪಡಲೆಂದೋ ಬೇಸರಪಡಲೆಂದೋ ನಾನೆಂದೂ ಮಾತನಾಡಲಿಲ್ಲ. ನನ್ನೊಂದಿಗೆ ನಾನು ಮಾತನಾಡಿಕೊಂಡೆ. ಅದನ್ನು ಬರವಣಿಗೆಗಿಳಿಸಿದಾಗ ಸ್ವಲ್ಪ ಗಟ್ಟಿಯಾಗಿ ಮಾತನಾಡಬೇಕಾಗುತ್ತದೆ. ಅದು ನಿಮಗೆ ಕೇಳಿಸಿದೆ. ನೀವು ಇಷ್ಟಪಡುತ್ತೀರಿ, ಬೇಸರಪಟ್ಟುಕೊಳ್ಳುತ್ತೀರಿ. ಇಷ್ಟಪಡುವ ಸತ್ಯ, ಬೇಸರಪಡುವ ಸತ್ಯ ಎಂದು ಯಾವುದೂ ಇಲ್ಲ. ಸತ್ಯವೆನ್ನುವುದು ಸತ್ಯ ಅಷ್ಟೆ. ನನ್ನ ಮೇಲೆ ನೀವಿಟ್ಟಿರುವ ಅಕ್ಕರೆಗೆ ಕೃತಜ್ಞತೆಗಳು. ಅಪ್ಪನಂತೆ ನೀವು ಹೇಳಿದ್ದನ್ನು ಕೇಳಿಸಿಕೊಂಡಿದ್ದೇನೆ. ಮತ್ತೊಮ್ಮೆ ಪ್ರಯತ್ನಿಸುತ್ತೇನೆ’ ಎಂದು ಹೇಳಿ ಹೊರಟುಬಂದೆ.

ಹತ್ತು ವರ್ಷಗಳ ಹಿಂದೆ ನಡೆದ ಘಟನೆ ಇದು. ಮತ್ತೆ ನೆನಪಿಗೆ ಬಂದು ನಿಮ್ಮ ಮುಂದಿಡುತ್ತಿದ್ದೇನೆ. ಅಂದು ವಿಮಾನದಲ್ಲಿ ಆ ಹಿರಿಯರು ಹಾಗೆ ಹೇಳಿದ್ದಕ್ಕೆ ಕಾರಣವಿಷ್ಟೆ. ತಮಿಳಿನ ವಾರಪತ್ರಿಕೆಯೊಂದರಲ್ಲಿ ನಾನು ಆಗ ಅಂಕಣ ಬರೆಯುತ್ತಿದ್ದೆ. ಅಂಥ ಒಂದು ಅಂಕಣದಲ್ಲಿ ನನ್ನ ಮತ್ತು ನನ್ನ ಮಡದಿಯ ನಡುವೆ ನಡೆಯಲಿರುವ ವಿವಾಹ ವಿಚ್ಛೇದನದ ಪ್ರಸ್ತಾಪ ಮಾಡಿದ್ದೆ. ನಾನೀಗಾಗಲೇ ಬದುಕಿ ದಾಟಿ ಬಂದ ಬದುಕಿನ ಸತ್ಯಗಳನ್ನು ಬಿಚ್ಚಿಟ್ಟಾಗ ಇಷ್ಟಪಟ್ಟ ಅವರು, ನನ್ನ ಪ್ರಸ್ತುತ ಬದುಕಿನ ಸತ್ಯವನ್ನು ಬರೆದಾಗ ಯಾಕೋ ಬೇಸರಪಟ್ಟುಕೊಂಡಿದ್ದರು. ಈ ವಿರೋಧಾಭಾಸ ನನಗೆ ಅಚ್ಚರಿಯನ್ನುಂಟುಮಾಡಿತ್ತು.

ಸಂಬಂಧಗಳು ಬೆಸೆದುಕೊಳ್ಳುವ ಹಾಗೆ ಬೇರ್ಪಡುವುದು ಅಷ್ಟು ಸುಲಭವಲ್ಲ. ಸೇರುವಾಗ ಬಹಳ ಜನ ನಮ್ಮೊಂದಿಗಿರುತ್ತಾರೆ. ಬೇರ್ಪಡುವಾಗ ಏಕಾಂಗಿಯಾಗಿ ನಿಲ್ಲಬೇಕಾಗುತ್ತದೆ. ವಡಪಳನಿಯ ಮುರುಗಂ ಗುಡಿಯಲ್ಲಿ ನಮ್ಮ ಮದುವೆಯಾದಾಗ ತರಾತುರಿಯಲ್ಲಿ ಎಲ್ಲವೂ ನಡೆದುಹೋಯಿತು. ಮೂರು ಮಕ್ಕಳ ತಂದೆಯಾಗಿ, ಅದರಲ್ಲಿ ಒಂದು ಮಗುವಿನ ಸಾವಿಗೆ ಸಾಕ್ಷಿಯಾಗಿ ಒಂದಾಗಿ ಬದುಕಿದ ಬದುಕಿನಲ್ಲೂ ಹುಟ್ಟಿತ್ತು ಕಹಿ. 43ನೇ ವಯಸ್ಸಿಗೆ ಮತ್ತೆ ಬ್ಯಾಚುಲರ್ ಆಗಿ ನನ್ನ ಅಡುಗೆ ನಾನೇ ಮಾಡಿಕೊಂಡು ಬದುಕಿದ್ದೇನೆ. ಸರಾಗವಾದ ಪಯಣದ ಮಧ್ಯೆ ಸಿಕ್ಕ ಪುಟ್ಟ ಬ್ರೇಕ್ ಟೈಮ್ ಎನ್ನುವಂತೆ, ಬದುಕು ಕೆನ್ನೆಗೆ ಬಾರಿಸಿದ ಏಟಿನಿಂದ ಚೇತರಿಸಿಕೊಳ್ಳಲು. ಆದರೆ ಮತ್ತೆ ಬದುಕಿನತ್ತ ಮುಖಮಾಡಿ ಇಲ್ಲಿಗೆ ಬಂದು ನಿಂತಿದ್ದೇನೆ.

ಸತ್ಯಗಳ ಎಲ್ಲ ಹೊಡೆತಗಳಿಗೆ ಕ್ಷಣ ತತ್ತರಿಸಿದ್ದರೂ ಮತ್ತೆ ಸತ್ಯಗಳೊಂದಿಗೆ ಸೆಣೆಸಿದ್ದೇನೆ; ಸೆಣೆಸುತ್ತಲೂ ಇದ್ದೇನೆ. ಇಂದಿಗೂ ನೇರವಾಗಿ, ನಿಷ್ಠುರವಾಗಿ ನಾನು ನಂಬುವುದನ್ನು ಬದುಕುತ್ತೇನೆ.

‘ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ

ಹಾಡುವುದು ಅನಿವಾರ್ಯ ಕರ್ಮ ನನಗೆ

ಕೇಳುವವರಿಹರೆಂದು ನಾ ಬಲ್ಲೆ ಅದರಿಂದ

ಹಾಡುವೆನು ಮೈದುಂಬಿ ಎಂದಿನಂತೆ’

–(ಜಿ.ಎಸ್‌. ಶಿವರುದ್ರಪ್ಪ).

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry