ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಎಸ್‌ಎಲ್‌ಸಿ ಪರೀಕ್ಷೆ: 607 ಮಕ್ಕಳು ಒಂದಂಕಿ ‘ಸಾಧಕರು’!

Last Updated 2 ಜೂನ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೊದಲ ರ್‍ಯಾಂಕ್‌ ಗಳಿಸಿದವರೇ ಎಲ್ಲರ ಗಮನ ಸೆಳೆಯುತ್ತಾರೆ. ಆದರೆ, ಅವರ ಸಂಖ್ಯೆ ಮಾತ್ರ ಬೆರಳೆಣಿಕೆಯಷ್ಟು. ಈ ಬಾರಿಯ ಪರೀಕ್ಷೆಯಲ್ಲಿ 607 ಮಕ್ಕಳು ಆರು ವಿಷಯಗಳಲ್ಲಿ ತಲಾ ಒಂದು ಅಂಕಗಳನ್ನು ಗಳಿಸಿದ್ದಾರೆ.‌

ಇದೇ ಮೊದಲ ಬಾರಿಗೆ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ಅಂಕ ಪಡೆದವರ ದತ್ತಾಂಶವನ್ನು ಸಂಗ್ರಹಿಸಲಾಗಿದೆ. ಇಂತಹ ಮಕ್ಕಳ ಸುಧಾರಣೆಗೆ ಶಿಕ್ಷಣ ಇಲಾಖೆ ಭಿನ್ನ ಯೋಜನೆಗಳನ್ನು ರೂಪಿಸುವ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

‘ಎಸ್‌ಎಸ್‌ಎಲ್‌ಸಿಯಲ್ಲಿ ಒಂದಂಕಿ ಅಂಕಗಳನ್ನು ತೆಗೆದಿರುವುದು ನಮಗೂ ಅಚ್ಚರಿ ಮೂಡಿಸಿದೆ. ಒಂದರಿಂದ ಒಂಬತ್ತನೇ ತರಗತಿಯವರೆಗಿನ ಶಿಕ್ಷಣದಲ್ಲಿ ಈ ಮಕ್ಕಳು ಏನೂ ಕಲಿತಿಲ್ಲವೇ ಎಂದು ಯೋಚಿಸುವಂತೆ ಮಾಡುತ್ತದೆ. ಪರೀಕ್ಷಾ ಫಲಿತಾಂಶ ಸುಧಾರಣೆಗೆ ನೆರವಾಗಲು ಈ ಬಾರಿ ವಿವಿಧ ರೀತಿಯ ದತ್ತಾಂಶಗಳನ್ನು ನೀಡಿದ್ದೇವೆ’ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ವಿ.ಸುಮಂಗಲ ತಿಳಿಸಿದರು.

‘ಮುಂದಿನ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಾಗಲು ಈ ದತ್ತಾಂಶಗಳು ನೆರವಾಗಲಿದೆ. ಕಡಿಮೆ ಅಂಕ ತೆಗೆದವರ ಮಾಹಿತಿಗಳನ್ನು ಆಯಾ ಕ್ಷೇತ್ರದ ಶಿಕ್ಷಣಾಧಿಕಾರಿಗಳಿಗೆ ಕಳುಹಿಸಿದ್ದೇವೆ. ಈ ಮಾಹಿತಿಯನ್ನು ಇಟ್ಟುಕೊಂಡು ಕೆಳ ಹಂತದಿಂದಲೇ ವಿವಿಧ ಯೋಜನೆಗಳನ್ನು ರೂಪಿಸಬಹುದು’ ಎಂದು ಅವರು ಹೇಳಿದರು.

‘ಕೆಲವು ವಿಷಯಗಳಲ್ಲಿ ಸೊನ್ನೆ ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಅನೇಕರಿದ್ದಾರೆ. ಇದರ ಜೊತೆಗೆ ವಿಭಾಗವಾರು, ಅನುದಾನಿತ, ಅನುದಾನ ರಹಿತ, ಕಾರ್ಪೋರೇಷನ್‌, ಶೂನ್ಯ ಹಾಗೂ ಶೇ 100ರಷ್ಟು ಫಲಿತಾಂಶಗಳ ವಿವರಗಳನ್ನು ಪ್ರತ್ಯೇಕಿಸಿ ನೀಡಿದ್ದೇವೆ’ ಎಂದರು.

ಕಡಿಮೆ ಅಂಕಗಳನ್ನು ಪಡೆಯುವ ಮಕ್ಕಳನ್ನು ಗುರುತಿಸಿ ಹೆಚ್ಚಿನ ತರಬೇತಿ ನೀಡುವುದು ಶಿಕ್ಷಕರ ಜವಾಬ್ದಾರಿ. ಅದನ್ನು ಮೊದಲಿನಿಂದಲೂ ಪಾಲಿಸಿಕೊಂಡು ಬಂದರೆ ಫಲಿತಾಂಶ ಉತ್ತಮಗೊಳ್ಳುತ್ತದೆ ಎಂದು ಹೇಳಿದರು.

‘ಹತ್ತನೇ ತರಗತಿಯಲ್ಲಿ ಮಕ್ಕಳು ಒಂದಂಕಿ ಅಂಕಗಳನ್ನು ಪಡೆಯುತ್ತಾರೆ ಎಂದಾದರೆ, ಅಲ್ಲಿಯವರೆಗೆ ನೀಡಿದ ಶಿಕ್ಷಣ ಪರಿಣಾಮಕಾರಿಯಾಗಿಲ್ಲ ಎಂದೇ ಅರ್ಥ. ಅದಕ್ಕಾಗಿ ಶಿಕ್ಷಣ ಇಲಾಖೆ ಉತ್ತಮ ಯೋಜನೆಗಳನ್ನು ರೂಪಿಸಬೇಕು’ ಎಂದು ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟರು.

*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT