ದಂಧೆಕೋರರಿಂದ ಕಲ್ಲುತೂರಾಟ

7

ದಂಧೆಕೋರರಿಂದ ಕಲ್ಲುತೂರಾಟ

Published:
Updated:

ಚಡಚಣ: ತಾಲ್ಲೂಕಿನ ದಸೂರ ಗ್ರಾಮದ ಭೀಮಾ ತೀರದಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸುತ್ತಿದ್ದ ದಂಧೆಕೋರರು, ಶುಕ್ರವಾರ ನಸುಕಿನಲ್ಲಿ ಗ್ರಾಮಸ್ಥರು ಹಾಗೂ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ, ಸ್ಥಳದಿಂದ ಪರಾರಿಯಾಗಿದ್ದಾರೆ.

‘ಗಡಿ ಭಾಗವಾದ ದಸೂರ–ಗೋವಿಂದಪುರ ನಡುವೆ, ಮಹಾರಾಷ್ಟ್ರದ ಗಡಿ ಭಾಗದ ಹಳ್ಳಿಗಳ ಮರಳು ದಂಧೆಕೋರರು ತಡರಾತ್ರಿಯಲ್ಲಿ ನದಿಯಿಂದ ಅಕ್ರಮವಾಗಿ ಮರಳು ತೆಗೆಯುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯರು ನಮಗೆ ಮಾಹಿತಿ ನೀಡಿದರು. ನಸುಕಿನ ಮೂರು ಗಂಟೆ ವೇಳೆಗೆ ನಾವು ಸ್ಥಳಕ್ಕೆ ತೆರಳುವ ಮುನ್ನವೇ ಗ್ರಾಮಸ್ಥರು ಮರಳು ದಂಧೆಕೋರರನ್ನು ಓಡಿಸಲು ಮುಂದಾಗಿದ್ದಾರೆ. ಆದರೆ, ಇದಕ್ಕೆ ಸೊಪ್ಪುಹಾಕದ ದಂಧೆಕೋರರು, ಗ್ರಾಮಸ್ಥರ ಮೇಲೆ ಕಲ್ಲು ತೂರಿದ್ದಾರೆ. ನಾವು ಸ್ಥಳಕ್ಕೆ ತೆರಳಿದಾಗಲೂ ಆರಂಭದಲ್ಲಿ ಕಲ್ಲು ತೂರಾಟ ನಡೆಸಿದರು. ನಮ್ಮ ಬಲ ಹೆಚ್ಚುತ್ತಿದ್ದಂತೆಯೇ ಸ್ಥಳದಿಂದ ಕಾಲ್ಕಿತ್ತರು. ಯಾವುದೇ ಅನಾಹುತವಾಗಿಲ್ಲ’ ಎಂದು ಚಡಚಣ ಪೊಲೀಸ್‌ ಠಾಣೆಯ ಪಿಎಸ್‌ಐ ಗೋಪಾಲ ಹಳ್ಳೂರ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry