ಸಲ್ಮಾನ್‌ ಸೋದರ ಅರ್ಬಾಜ್‌ಗೆ ಬುಕ್ಕಿಗಳ ನಂಟು!

7
ಐಪಿಎಲ್‌ ಬೆಟ್ಟಿಂಗ್‌ ಜಾಲ ಭೇದಿಸಿದ ಪೊಲೀಸರು

ಸಲ್ಮಾನ್‌ ಸೋದರ ಅರ್ಬಾಜ್‌ಗೆ ಬುಕ್ಕಿಗಳ ನಂಟು!

Published:
Updated:
ಸಲ್ಮಾನ್‌ ಸೋದರ ಅರ್ಬಾಜ್‌ಗೆ ಬುಕ್ಕಿಗಳ ನಂಟು!

ಮುಂಬೈ/ಠಾಣೆ: ಐದಾರು ವರ್ಷಗಳಿಂದ ಐಪಿಎಲ್‌ ಬೆಟ್ಟಿಂಗ್‌ನಲ್ಲಿ ತೊಡಗಿದ್ದು, ₹2.80 ಕೋಟಿ ಕಳೆದುಕೊಂಡಿರುವುದಾಗಿ ಬಾಲಿವುಡ್‌ ನಟ ಮತ್ತು ಚಿತ್ರ ನಿರ್ಮಾಪಕ ಅರ್ಬಾಜ್‌ ಖಾನ್‌ ಶನಿವಾರ ಮಹಾರಾಷ್ಟ್ರದ ಠಾಣೆ ಪೊಲೀಸರ ಎದುರು ತಪ್ಪೊಪ್ಪಿಕೊಂಡಿದ್ದಾರೆ.

ಖ್ಯಾತ ಬಾಲಿವುಡ್‌ ನಟ ಸಲ್ಮಾನ್‌ ಖಾನ್ ಸಹೋದರನಾದ 50 ವರ್ಷದ ಅರ್ಬಾಜ್‌ ಶನಿವಾರ ಠಾಣೆಯ ಪೊಲೀಸ್‌ ಕಚೇರಿಗೆ ತೆರಳಿ ಹೇಳಿಕೆ ದಾಖಲಿಸಿದ್ದಾರೆ.

ಐಪಿಎಲ್ ಬೆಟ್ಟಿಂಗ್‌ ಪ್ರಕರಣದ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಶುಕ್ರವಾರ ಸಮನ್ಸ್‌ ನೀಡಲಾಗಿತ್ತು.

ಮೇ 16ರಂದು ಮುಂಬೈ ಕಟ್ಟಡವೊಂದರ ಮೇಲೆ ದಾಳಿ ನಡೆಸಿದ್ದ ಮಹಾರಾಷ್ಟ್ರ ಪೊಲೀಸರು ಕೋಟ್ಯಂತರ ರೂಪಾಯಿ ಹಣಕಾಸು ವ್ಯವಹಾರ ನಡೆಸುತ್ತಿದ್ದ ಐಪಿಎಲ್ ಬೆಟ್ಟಿಂಗ್ ಜಾಲವನ್ನು ಭೇದಿಸಿದ್ದರು.

ಆಗ ಬಂಧಿಸಲಾದ ಸೋನು ಜಲಾನ್‌ ಅಲಿಯಾಸ್ ಸೋನು ಮಲಾಡ್‌ ಎಂಬ ಬುಕ್ಕಿ ವಿಚಾರಣೆ ವೇಳೆ ನೀಡಿದ ಮಾಹಿತಿ ಆಧರಿಸಿ ನಟನಿಗೆ ಸಮನ್ಸ್‌ ನೀಡಲಾಗಿತ್ತು. ಸೋನು ಬಾಟ್ಲಾ ಎಂಬ ಹೆಸರಿನಿಂದಲೂ ಜಲಾನ್‌ ಮುಂಬೈನಲ್ಲಿ ಚಿರಪರಿಚಿತ.

ಇತ್ತೀಚೆಗೆ ಕೊನೆಗೊಂಡ 2018ರ ಐಪಿಎಲ್‌ ಆವೃತ್ತಿಯಲ್ಲಿ ಹಣ ಹೂಡಿರಲಿಲ್ಲ ಎಂದು ಖಾನ್‌ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಅರ್ಬಾಜ್ ಕಳೆದ ಐಪಿಎಲ್‌ ಆವೃತ್ತಿಯಲ್ಲಿ ಬೆಟ್ಟಿಂಗ್‌ನಲ್ಲಿ ಸೋತಿರುವ ₹2.8 ಕೋಟಿ ಹಣವನ್ನು ಇನ್ನೂ ತನಗೆ ನೀಡಿಲ್ಲ ಎಂದು ಬುಕ್ಕಿ  ಜಲಾನ್‌ ಆರೋಪಿಸಿದ್ದಾನೆ. ಹಣ ನೀಡದ ಕಾರಣ ಆತ ಬೆದರಿಕೆಯನ್ನೂ ಒಡ್ಡಿದ್ದ ಎನ್ನಲಾಗಿದೆ.

‘ಐಪಿಎಲ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿರುವ ಬುಕ್ಕಿಗಳೊಂದಿಗೆ  ಸಂಪರ್ಕ ಹೊಂದಿರುವ ಅರ್ಬಾಜ್‌ ಬ್ಯಾಂಕ್ ಖಾತೆ ಮತ್ತು ವ್ಯವಹಾರಗಳನ್ನು ಪರಿಶೀಲಿಸಲಾಗುವುದು’ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಬಾಲಿವುಡ್‌ನ ಮತ್ತೊಬ್ಬ ನಿರ್ಮಾಪಕನ ಹೆಸರು ವಿಚಾರಣೆ ವೇಳೆ ಕೇಳಿ ಬಂದಿದೆ. ಶೀಘ್ರದಲ್ಲಿಯೇ ಅವರನ್ನೂ ವಿಚಾರಣೆಗೆ ಕರೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ದುಬೈನಲ್ಲಿ ಮ್ಯಾಚ್‌ ಫಿಕ್ಸಿಂಗ್‌ ಸಭೆ: ‘ಜಲಾನ್‌ ದುಬೈನಲ್ಲಿ ಮ್ಯಾಚ್‌ ಫಿಕ್ಸಿಂಗ್‌ ಸಭೆ ಆಯೋಜಿಸಿದ್ದ. ಅರ್ಬಾಜ್‌ ಕೂಡ ಆ ಸಭೆಗೆ ಹಾಜರಾಗಿದ್ದ. ಐಪಿಎಲ್‌ನ ಯಾವ ಪಂದ್ಯ ಫಿಕ್ಸ್‌ ಆಗಿತ್ತು ಮತ್ತು ಆ ಸಭೆಯಲ್ಲಿ ಭಾಗಿಯಾದವರು ಯಾರು ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ’ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಪ್ರದೀಪ್‌ ಶರ್ಮಾ ತಿಳಿಸಿದ್ದಾರೆ.

‘ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದಕ್ಕೂ ನಮಗೂ  ಇಲ್ಲ.ಪೊಲೀಸರು ಕೋರಿದರೆ ತನಿಖೆಗೆ ಸಹಕರಿಸುತ್ತೇವೆ’ ಎಂದು ಐಪಿಎಲ್‌ ಆಡಳಿತ ಸಮಿತಿ ಮುಖ್ಯಸ್ಥ ರಾಜೀವ್‌ ಶುಕ್ಲಾ ತಿಳಿಸಿದ್ದಾರೆ.

ಭೇದಿಸಿದ್ದು ಹೇಗೆ?

* ಮೇ 16: ಮುಂಬೈನ ದೊಂಬಿವಿಲಿ ಕಟ್ಟಡವೊಂದರ ಮೇಲೆ ದಾಳಿ ನಡೆಸಿದ ಠಾಣೆಯ ಅಪರಾಧ ತಡೆ ವಿಭಾಗದ ಪೊಲೀಸರಿಂದ ಮೂವರು ಬುಕ್ಕಿಗಳ ಬಂಧನ

* ಮುಂಬೈ ಇಂಡಿಯನ್ಸ್‌ ಮತ್ತು ಕಿಂಗ್ಸ್‌ ಎಲೆವೆನ್‌ ಪಂದ್ಯದ ವೇಳೆ ಆನ್‌ಲೈನ್‌ ಬೆಟ್ಟಿಂಗ್‌ ದಂಧೆಯಲ್ಲಿ ತೊಡಗಿದ್ದ ವೇಳೆ ಸಿಕ್ಕಿ ಬಿದ್ದ ಬುಕ್ಕಿಗಳು

* ಮೇ 17: ಬಂಧಿತರು ನೀಡಿದ ಸುಳಿವಿನ ಮೇರೆಗೆ ಮತ್ತೊಬ್ಬ ಬುಕ್ಕಿ ಸೆರೆ

* ಮೇ 28: ಬುಕ್ಕಿಗಳಿಗೆ ಆನ್‌ಲೈನ್ ಬುಕ್ಕಿಂಗ್‌ ಸಾಫ್ಟ್‌ವೇರ್‌ ಮತ್ತು ಸಾಧನ ಪೂರೈಸಿದ್ದ ವಜೇಶ್‌ ಜೋಷಿ ವಶಕ್ಕೆ

* ಮೇ 29: ದೇಶದ ಅತಿ ದೊಡ್ಡ ಬುಕ್ಕಿ ಸೋನು ಜಲಾನ್‌ ಬಂಧನ. ಐಪಿಎಲ್‌ ಬೆಟ್ಟಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಆರನೇ ಆರೋಪಿ ಬಂಧನ

* ಜೂನ್‌ 1: ವಿಚಾರಣೆಗೆ ಹಾಜರಾಗುವಂತೆ ನಟ ಅರ್ಬಾಜ್‌ಗೆ ಸಮನ್ಸ್‌

ಬುಕ್ಕಿ ಡೈರಿಯಲ್ಲಿ ಬಾಲಿವುಡ್‌ ತಾರೆಯರು!

* ಅರ್ಬಾಜ್‌ ಖಾನ್‌ ಮತ್ತು ಬುಕ್ಕಿ ಸೋನು ಜಲಾನ್‌ ಮಧ್ಯೆ ಆರು ವರ್ಷಗಳ ಸ್ನೇಹ

* ಬೆಟ್ಟಿಂಗ್‌ನಲ್ಲಿ ಸೋತಿದ್ದ ₹2.80 ಕೋಟಿ ನೀಡದ ಕಾರಣ ಅರ್ಬಾಜ್‌ಗೆ ಬೆದರಿಕೆ ಒಡ್ಡಿದ್ದ ಬುಕ್ಕಿ

* ಪೊಲೀಸರು ವಶಪಡಿಸಿಕೊಂಡ ಜಲಾನ್‌ ದಿನಚರಿ ಪುಸ್ತಕದಲ್ಲಿ (ಡೈರಿ) ಬಾಲಿವುಡ್‌ನ ಅನೇಕ ತಾರೆಯರು,ಗಣ್ಯರು, ಬಿಲ್ಡರ್‌, ಗುತ್ತಿಗೆದಾರರು ಮತ್ತು ಪಾಕಿಸ್ತಾನಿ ರಾಜಕಾರಣಿಯ ಹೆಸರು.

* ಡೈರಿಯಲ್ಲಿ ನೂರಕ್ಕೂ ಹೆಚ್ಚು ಬುಕ್ಕಿಗಳ ಹೆಸರು ಮತ್ತು ದೂರವಾಣಿ ಸಂಖ್ಯೆ

ಯಾರು ಈ ಜಲಾನ್‌?

* 41 ವರ್ಷದ ಸೋನು ದೇಶದ ಅತಿ ದೊಡ್ಡ ಬೆಟ್ಟಿಂಗ್‌ ಬುಕ್ಕಿ

* 10ನೇ ತರಗತಿಯಲ್ಲಿ ಅನುತ್ತೀರ್ಣನಾದರೂ ಕೋಟ್ಯಧೀಪತಿ

* ಮುಂಬೈನಲ್ಲಿ ಮೂರು ಫ್ಲ್ಯಾಟ್‌ ಮತ್ತು ದೇಶದಾದ್ಯಂತ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯ ಒಡೆಯ

* ವಿಲಾಸಿ ಜೀವನಶೈಲಿ ಹೊಂದಿರುವ ಈತ ಹಲವು ವಿದೇಶಿ ಕಾರುಗಳ ಒಡೆಯ.

* ಬಾಲಿವುಡ್‌ ನಟರು ಸೇರಿದಂತೆ ಗಣ್ಯರೊಂದಿಗೆ ಸಂಪರ್ಕ

* ಕೊಲ್ಲಿ ರಾಷ್ಟ್ರ, ಪಾಕಿಸ್ತಾನ, ಯುರೋಪ್‌ ಸೇರಿದಂತೆ ದೇಶ, ವಿದೇಶಗಳಲ್ಲಿ

ಬೆಟ್ಟಿಂಗ್‌ ಜಾಲ

* ಬೆಟ್ಟಿಂಗ್‌ ದಂಧೆಯಲ್ಲಿ ಸಾವಿರಾರು ಕೋಟಿ ರೂಪಾಯಿ ಹಣಕಾಸು ವಹಿವಾಟು

‘ಜ್ಯೂನಿಯರ್‌ ಕೋಲ್ಕತ್ತಾ’ ಸಾಂಕೇತಿಕ ಹೆಸರಿನ ಅನಾಮಧೇಯ ವ್ಯಕ್ತಿ ಈ ಕ್ರಿಕೆಟ್‌ ಬೆಟ್ಟಿಂಗ್ ಜಾಲದ ಪ್ರಮುಖ ಸೂತ್ರಧಾರ. ಆತನ ಆದೇಶದಂತೆ ಜಲಾನ್‌ ಕಾರ್ಯಾಚರಣೆ ಮಾಡುತ್ತಿದ್ದಾನೆ. ಆ ವ್ಯಕ್ತಿ ಯಾರು ಎನ್ನುವುದು ಇನ್ನೂ ನಿಗೂಢ. ಕರಾಚಿಯಲ್ಲಿರುವ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಜತೆ ಜಲಾನ್‌ಗೆ ಸಂಪರ್ಕ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry