ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ಜಿಲ್ಲೆಗಳಲ್ಲಿ ಉತ್ತಮ ಮಳೆ

Last Updated 2 ಜೂನ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶುಕ್ರವಾರ ರಾತ್ರಿ ಹಾಗೂ ಶನಿವಾರ ಉತ್ತಮ ಮಳೆಯಾಗಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ರಾತ್ರಿ ಸುರಿದ ಮಳೆಗೆ ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿ ಸಮೀಪದ ರಂಗಾಪುರ ಸರ್ಕಾರಿ ಶಾಲೆಗೆ ನೀರು ನುಗ್ಗಿದೆ. ಶಿಥಿಲಗೊಂಡ ಚಾವಣಿಯಿಂದ ಸೋರಿಕೆಯಾದ ನೀರು ಶಾಲಾ ಕೊಠಡಿಯಲ್ಲಿ ಸಂಗ್ರಹವಾಗಿದೆ. ಶನಿವಾರ ಶಾಲೆಗೆ ಬಂದ ವಿದ್ಯಾರ್ಥಿಗಳು ನೀರನ್ನು ಹೊರಹಾಕಿದರು. ಚಿತ್ರದುರ್ಗ, ಹಿರಿಯೂರು, ಹೊಳಲ್ಕೆರೆ ತಾಲ್ಲೂಕು ವ್ಯಾಪ್ತಿಯ ಹಲವು ಕೆರೆಗಳಿಗೆ ನೀರು ಹರಿದುಬಂದಿದೆ.

ಉತ್ತಮ ಮಳೆಯಾಗಿರುವುದರಿಂದ ಕೃಷಿ ಚಟುವಟಿಕೆ ಗರಿಗೆದರಿದ್ದು, ಬೀಜ–ರಸಗೊಬ್ಬರ ಖರೀದಿಯಲ್ಲಿ ತೊಡಗಿದ್ದಾರೆ.

ಮೈಸೂರು ನಗರದಲ್ಲಿ ಶನಿವಾರ ಸಂಜೆ ಜೋರಾಗಿ ಮಳೆ ಸುರಿಯಿತು. ವಿವಿಧ ಬಡಾವಣೆಗಳಲ್ಲಿ ಬಿದ್ದ ಮರಗಳನ್ನು ಮಹಾನಗರ ಪಾಲಿಕೆಯ ಅಭಯ ತಂಡಗಳು ತೆರವುಗೊಳಿಸಿದವು. ಜಿಲ್ಲೆಯ ಎಚ್‌.ಡಿ.ಕೋಟೆ, ಹುಣಸೂರು, ನಂಜನಗೂಡು ತಾಲ್ಲೂಕಿನ ವಿವಿಧೆಡೆ ಒಂದು ಗಂಟೆಗೂ ಹೆಚ್ಚು ಕಾಲ ಗುಡುಗು ಸಹಿತ ಮಳೆಯಾಯಿತು.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನಲ್ಲಿ ಶುಕ್ರವಾರ ರಾತ್ರಿ ಬಿರುಸಾದ ಮಳೆ ಬಿತ್ತು. ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ, ಶ್ರೀರಂಗಪಟ್ಟಣ, ನಾಗಮಂಗಲ ತಾಲ್ಲೂಕಿನಲ್ಲೂ ಉತ್ತಮ ಮಳೆ ಆಗಿದೆ.

ಪ್ರವಾಹಕ್ಕೆ ಸಿಲುಕಿ ಯುವಕ ಸಾವು: ಬೆಳಗಾವಿ, ಧಾರವಾಡ, ಗದಗ ಹಾಗೂ ವಿಜಯಪುರ ಜಿಲ್ಲೆಯ ಹಲವೆಡೆ ಶನಿವಾರ ಬಿರುಸಿನ ಮಳೆಯಾಗಿದೆ. ಬೆಳಗಾವಿ ಸಮೀಪದ ಭೂತರಾಮನಹಟ್ಟಿ ಬಳಿಯ ಹಳ್ಳದಲ್ಲಿ ಶನಿವಾರ ಸಂಜೆ ಹಠಾತ್ತಾಗಿ ಬಂದ ಪ್ರವಾಹಕ್ಕೆ ಸಿಲುಕಿ, ಹುಕ್ಕೇರಿ ತಾಲ್ಲೂಕಿನ ಕೊಟಬಾಗಿಯ ಇಮ್ರಾನ್‌ ನದಾಫ (25) ಮೃತಪಟ್ಟಿದ್ದಾರೆ.

ನವಲಗುಂದ ತಾಲ್ಲೂಕಿನ ಚಿಲಕವಾಡ ಗ್ರಾಮದಲ್ಲಿ ಸಂಜೆ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ನಾರಾಯಣಪುರ ಗ್ರಾಮದ ಗೌರಮ್ಮ(55) ಶನಿವಾರ  ಸಿಡಿಲು ಬಡಿದು ಮೃತಪಟ್ಟಿದ್ದಾರೆ.

ವಿಜಯಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ಬ್ರಹ್ಮದೇವನಮಡು, ಗೋಲಗೇರಿ, ಹೊನ್ನಳ್ಳಿ ಗ್ರಾಮಗಳಲ್ಲಿ ಧಾರಾಕಾರ ಮಳೆಯಾಗಿದೆ. ಗದಗ ಜಿಲ್ಲೆಯಾದ್ಯಂತ ಹಾಗೂ ಹುಬ್ಬಳ್ಳಿ, ಧಾರವಾಡದಲ್ಲಿಯೂ ಸಂಜೆ ಗುಡುಗಿನ ಅಬ್ಬರದೊಂದಿಗೆ ಮಳೆಯಾಗಿದೆ.

ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲ್ಲೂಕಿನ ಮಾಗುಂಡಿ ಮಹಾಲ್ ಗೋಡು ಸುತ್ತಮುತ್ತ ಶನಿವಾರ ಭಾರಿ ಮಳೆ ಸುರಿದ ಪರಿಣಾಮ ಕಳಸ- ಬಾಳೆಹೊನ್ನೂರು ಮುಖ್ಯರಸ್ತೆ ಮೇಲೆ ನೀರು ತುಂಬಿ ವಾಹನ ಸಂಚಾರಕ್ಕೆ ಕೆಲ ಕಾಲ ಅಡಚಣೆ ಉಂಟಾಯಿತು.

ದಕ್ಷಿಣ ಕನ್ನಡ ಜಿಲ್ಲೆ ಸುಬ್ರಹ್ಮಣ್ಯ ಸುತ್ತ ಮುತ್ತ ಶನಿವಾರ ಭಾರಿ ಮಳೆ ಸುರಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT