ಬಜೆಟ್‌ ಮಂಡನೆಗೆ ಕುಮಾರಸ್ವಾಮಿ ಸಿದ್ಧತೆ

7
ಎರಡೂ ಪಕ್ಷಗಳ ಪ್ರಣಾಳಿಕೆ ಆಧರಿಸಿ ಸಾಮಾನ್ಯ ಕಾರ್ಯಕ್ರಮ

ಬಜೆಟ್‌ ಮಂಡನೆಗೆ ಕುಮಾರಸ್ವಾಮಿ ಸಿದ್ಧತೆ

Published:
Updated:
ಬಜೆಟ್‌ ಮಂಡನೆಗೆ ಕುಮಾರಸ್ವಾಮಿ ಸಿದ್ಧತೆ

ಬೆಂಗಳೂರು: ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪ್ರಣಾಳಿಕೆಗಳ ಪ್ರಮುಖ ಅಂಶಗಳನ್ನು ಸೇರಿಸಿ ಮೈತ್ರಿ ಸರ್ಕಾರದ ಚೊಚ್ಚಲ ಬಜೆಟ್‌ ಮಂಡಿಸುವ ಮಹತ್ತರ ಜವಾಬ್ದಾರಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೆಗಲಿಗೆ ಬಿದ್ದಿದೆ.

ಸಚಿವ ಸಂಪುಟ ವಿಸ್ತರಣೆಯ ಬಳಿಕ ವಿಧಾನಮಂಡಲದ ಉಭಯ ಸದನಗಳ ಜಂಟಿ ಅಧಿವೇಶನ, ಆ ಬಳಿಕ ಬಜೆಟ್‌ ಅಧಿವೇಶನ ನಡೆಸಲು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಈಗಾಗಲೇ ಸಿದ್ಧತೆ ಆರಂಭಿಸಿದ್ದಾರೆ.

ಅಭ್ಯರ್ಥಿ ನಿಧನದಿಂದ ಮುಂದೂಡಲಾಗಿರುವ ಜಯನಗರ ವಿಧಾನಸಭಾ ಕ್ಷೇತ್ರದ ಮತದಾನ ಇದೇ 11ರಂದು ನಡೆಯಲಿದ್ದು, 13ರಂದು ಮತ ಎಣಿಕೆ ನಡೆಯಲಿದೆ. ಅದಾದ ಬಳಿಕವೇ ಜಂಟಿ ಅಧಿವೇಶನದ ಮುಹೂರ್ತ ನಿಗದಿಯಾಗಲಿದೆ.

ಶನಿವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಕುಮಾರಸ್ವಾಮಿ, ಇನ್ನು ಮೂರು– ನಾಲ್ಕು ದಿನಗಳಲ್ಲಿ ಅಧಿಕಾರಿಗಳ ಜತೆ ಬಜೆಟ್‌ ಪೂರ್ವಸಿದ್ಧತಾ ಸಭೆ ನಡೆಸುವುದಾಗಿ ಹೇಳಿದರು.

‘ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿರುವುದರಿಂದ ಹೊಸ ಬಜೆಟ್‌ ಮಂಡಿಸಬೇಕಾಗಿದೆ. ಇದಕ್ಕಾಗಿ ಸದ್ಯವೇ ಜಂಟಿ ಅಧಿವೇಶನ ಕರೆಯಲಾಗುವುದು. ಹಿಂದಿನ ಸರ್ಕಾರದ ಜನಪರ ಯೋಜನೆಗಳನ್ನು ಮುಂದುವರಿಸಲಾಗುವುದು. ಸಾರ್ವಜನಿಕರಿಗೆ ಅನುಕೂಲವಾಗುವ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ಕುಮಾರಸ್ವಾಮಿ ಕಸರತ್ತು: ಕುಮಾರಸ್ವಾಮಿ ಹಣಕಾಸು ಖಾತೆಯನ್ನು ಪಡೆಯುವುದರಿಂದ ತಮ್ಮ ಕನಸಿನ ಬಜೆಟ್‌ ಮಂಡಿಸಬಹುದು. ಆದರೆ, ಎರಡೂ ಪಕ್ಷಗಳ ಪ್ರಣಾಳಿಕೆಗಳನ್ನು ಸೇರಿಸಿ ಸರ್ವ ಸಮ್ಮತ ಸಾಮಾನ್ಯ ಕಾರ್ಯಸೂಚಿ ರೂಪಿಸುವುದು ಅಷ್ಟು ಸುಲಭವಲ್ಲ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಇದಕ್ಕೆ ಮುಖ್ಯಕಾರಣ ಜೆಡಿಎಸ್‌ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿರುವ ಹಲವು ಭರವಸೆಗಳನ್ನು ಈಡೇರಿಸಲು ಹೊರಟರೆ ಬೊಕ್ಕಸ ಬರಿದಾಗಬಹುದು. ಉದ್ದೇಶಿತ ಕಾರ್ಯಕ್ರಮಗಳನ್ನು ಜಾರಿಗೆ ತರಲು ಸಂಪನ್ಮೂಲವನ್ನು ಎಲ್ಲಿಂದ ಹೊಂದಿಸುವುದು ಎಂದೂ ಮೂಲಗಳು ಪ್ರಶ್ನಿಸಿವೆ.

ರೈತರ ₹ 53 ಸಾವಿರ ಕೋಟಿ ಸಾಲ ಮನ್ನಾ, ನೀರಾವರಿ ಯೋಜನೆಗಳಿಗೆ ₹1.5 ಲಕ್ಷ ಕೋಟಿ, ಗ್ರಾಮೀಣ ಪ್ರದೇಶದ ನಿರುದ್ಯೋಗ ನಿವಾರಣೆಗಾಗಿ ಪ್ರತಿ ಯುವಕರಿಗೆ ತಿಂಗಳಿಗೆ ₹ 7,000 ದಿಂದ ₹8,000 ವೇತನ, ಬಡ ಮಹಿಳೆಯರಿಗೆ ತಿಂಗಳಿಗೆ ₹2,000 ಕುಟುಂಬ ನಿರ್ವಹಣಾ ವೆಚ್ಚ, 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ತಿಂಗಳಿಗೆ ₹6,000, 80 ವರ್ಷ ಮೇಲ್ಪಟ್ಟವರಿಗೆ ತಿಂಗಳಿಗೆ ₹8,000 ಪಿಂಚಣಿ, ಗರ್ಭಿಣಿಯರಿಗೆ ಮೂರು ತಿಂಗಳು ಮತ್ತು ಹೆರಿಗೆ ನಂತರ, ಬಾಣಂತಿ ಅವಧಿಯಲ್ಲಿ ಮೂರು ತಿಂಗಳು ತಲಾ ₹6,000 ಸಹಾಯ ಧನ ನೀಡುವಾಗಿ ಜೆಡಿಎಸ್‌ ವಾಗ್ದಾನ ಮಾಡಿದೆ.

ಇನ್ನೊಂದೆಡೆ ಕಾಂಗ್ರೆಸ್‌ ಐದು ವರ್ಷಗಳ ಅವಧಿಯಲ್ಲಿ ನೀರಾವರಿ ಯೋಜನೆಗಳಿಗೆ ₹ 1.25 ಲಕ್ಷ ಕೋಟಿ ವೆಚ್ಚ, ಬಡ ಕುಟುಂಬದ ಯುವತಿಯರ ವಿವಾಹಕ್ಕೆ ಮೂರು ಗ್ರಾಂ ಚಿನ್ನದ ತಾಳಿ, ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌, ಆಯ್ದ ಉದ್ಯೋಗಸ್ಥ ಮಹಿಳೆಯರಿಗೆ ದ್ವಿಚಕ್ರ ವಾಹನ ಖರೀದಿಸಲು ₹30,000 ಸಹಾಯಧನ, ಹವಾಮಾನ ಆಧರಿತ ಕೃಷಿ ಕಾರಿಡಾರ್‌ಗಳ ನಿರ್ಮಾಣ, ಸ್ಮಾರ್ಟ್‌ ಗ್ರಾಮಗಳ ಅಭಿವೃದ್ಧಿ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಪ್ರವೇಶ ಶುಲ್ಕದಲ್ಲಿ ಶೇ 75 ರಷ್ಟು ರಿಯಾಯ್ತಿ, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ವಾರ್ಷಿಕ ಆದಾಯ ಮಿತಿ ₹ 2 ಲಕ್ಷಕ್ಕೆ ಏರಿಕೆ, ರಾಜ್ಯದ ಎಲ್ಲ ಗ್ರಾಮಗಳಲ್ಲಿ ದಿನಕ್ಕೆ 20 ಗಂಟೆಗಳ ಕಾಲ ತ್ರಿ ಫೇಸ್‌ ವಿದ್ಯುತ್‌ ಪೂರೈಕೆಯಂತಹ ಭರವಸೆಗಳನ್ನು ನೀಡಿದೆ.

ಸಮ್ಮಿಶ್ರ ಸರ್ಕಾರ ಕಾರ್ಯಸಾಧುವೆನಿಸುವ ಯೋಜನೆಗಳನ್ನು ಕೈಗೆತ್ತಿಕೊಂಡರೆ ಮಾತ್ರ ಸರ್ಕಾರ ಸುಗಮವಾಗಿ ಮುಂದುವರಿಯಲು ಸಾಧ್ಯ. ಭಾರಿ ಹಣ ಬೇಡುವ ಜನಪ್ರಿಯ ಯೋಜನೆಗಳಿಗೆ ಕಾಂಗ್ರೆಸ್ ಕೊಕ್ಕೆ ಹಾಕಿದರೂ ಅಚ್ಚರಿ ಇಲ್ಲ. ಏಕೆಂದರೆ, ಇದರ ಸಂಪೂರ್ಣ ಶ್ರೇಯಸ್ಸು ಜೆಡಿಎಸ್‌ಗೆ ಸಲ್ಲುತ್ತದೆ. ಇದರಿಂದ ರಾಜ್ಯದಲ್ಲಿ ಜೆಡಿಎಸ್‌ ಗಟ್ಟಿಯಾಗಿ ಬೇರು ಬಿಡಬಹುದು ಎಂಬ ಆತಂಕ ಕಾಂಗ್ರೆಸ್‌ಗಿದೆ ಎಂದು ಮೂಲಗಳು ಹೇಳಿವೆ.

ಪುತ್ರನಿಗೆ  ಐದು ವರ್ಷ ಸಿಎಂ ಪಟ್ಟ: ಕಾಂಗ್ರೆಸ್‌ ವಾಗ್ದಾನ ಪಡೆಯುವಲ್ಲಿ ಯಶಸ್ವಿಯಾದ ದೇವೇಗೌಡ

ಮುಖ್ಯಮಂತ್ರಿಯಾಗಿ ಎಚ್‌.ಡಿ.ಕುಮಾರಸ್ವಾಮಿ ಐದು ವರ್ಷಗಳ ಅವಧಿ ಪೂರ್ಣಗೊಳಿಸುವ ಸಂಬಂಧ ಕಾಂಗ್ರೆಸ್‌ನಿಂದ ಸ್ಪಷ್ಟ ವಾಗ್ದಾನ ಪಡೆಯುವಲ್ಲಿ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡರು ಯಶಸ್ವಿಯಾಗಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಪಕ್ಷದ ವತಿಯಿಂದ ಈ ಭರವಸೆ ನೀಡುವಾಗ ಪಕ್ಷದ ಹಿರಿಯ ನಾಯಕರಾದ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ವೀರಪ್ಪಮೊಯಿಲಿ, ಜಿ.ಪರಮೇಶ್ವರ ಹಾಜರಿದ್ದರು.

ಈ ಭರವಸೆಯಿಂದ ಜೆಡಿಎಸ್‌ನಲ್ಲಿ ಸದ್ಯಕ್ಕೆ ನೆಮ್ಮದಿ ಮೂಡಿದೆ. ಜೆಡಿಎಸ್‌ಗೆ ಮುಖ್ಯಮಂತ್ರಿ ಸ್ಥಾನ ನೀಡಿ ಸರ್ಕಾರ ರಚಿಸಲು ಆಹ್ವಾನ ನೀಡಿದ ಬಳಿಕ 30– 30 ತಿಂಗಳುಗಳ ಹಂಚಿಕೆ ಆಧಾರದ ಮೇಲೆ ಸರ್ಕಾರ ನಡೆಯಬೇಕು ಎಂಬ ಕೂಗು ಕಾಂಗ್ರೆಸ್‌ನಲ್ಲಿ ಕೇಳಿ ಬಂದಿತ್ತು.

ಕುಮಾರಸ್ವಾಮಿ ಅವರನ್ನು ಐದು ವರ್ಷಗಳ ಅವಧಿಗೆ ಮುಖ್ಯಮಂತ್ರಿ ಆಗಿ ಮುಂದುವರಿಸುವ ಭರವಸೆ ಸಿಗುವವರೆಗೂ ದೇವೇಗೌಡರು ಕಾಂಗ್ರೆಸ್‌ ಹೈಕಮಾಂಡ್‌ ಮೇಲೆ ಒತ್ತಡ ಹೇರಿದ್ದರು. ರಾಷ್ಟ್ರಮಟ್ಟದಲ್ಲಿ ಶಕ್ತಿ ಕಳೆದುಕೊಂಡಿರುವ ಕಾಂಗ್ರೆಸ್‌ಗೆ ರಾಜ್ಯದಲ್ಲಿ ಅಧಿಕಾರದಲ್ಲಿ ಮುಂದುವರಿಯುವುದು ಅನಿವಾರ್ಯ ಆಗಿತ್ತು. ಆದ್ದರಿಂದ ದೇವೇಗೌಡರ ಎಲ್ಲ ಷರತ್ತುಗಳನ್ನು ಒಪ್ಪಿಕೊಂಡಿತು ಎಂದು ಮೂಲಗಳು ಹೇಳಿವೆ.

ರಾಹುಲ್‌ ಮತ್ತು ಸೋನಿಯಾಗಾಂಧಿ ದೇವೇಗೌಡರ ಎಲ್ಲ ಷರತ್ತುಗಳನ್ನೂ ಮರು ಮಾತಿಲ್ಲದೆ ಒಪ್ಪಿಕೊಳ್ಳುತ್ತಿದ್ದಾರೆ. ಪಕ್ಷದ ರಾಜ್ಯ ಘಟಕದಲ್ಲಿ ಅಪಸ್ವರ ಎತ್ತದಂತೆ ಎಚ್ಚರಿಕೆಯನ್ನೂ ಹೈಕಮಾಂಡ್‌ ನೀಡಿದೆ ಎಂದು ಕಾಂಗ್ರೆಸ್‌ ಮುಖಂಡರೊಬ್ಬರು ತಿಳಿಸಿದ್ದಾರೆ.

2019ರ ಲೋಕಸಭೆ ಚುನಾವಣೆ ಮುಗಿಯುವವರೆಗೆ ಮೈತ್ರಿ ಉಳಿಯಬಹುದು. ಆ ಬಳಿಕ ಕಾಂಗ್ರೆಸ್‌ ಬೆಂಬಲ ಹಿಂದಕ್ಕೆ ಪಡೆಯುವ ಸಾಧ್ಯತೆ ಇರುವುದರಿಂದ ದೇವೇಗೌಡರು ಎಚ್ಚರಿಕೆಯ ಹೆಜ್ಜೆ ಇಡಲು ನಿರ್ಧರಿಸಿದ್ದರು. ಒಂದು ವೇಳೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅಧಿಕಾರ ಹಿಡಿಯುವ ಅವಕಾಶ ಬಂದರೆ ಜೆಡಿಎಸ್‌ ಅನ್ನು ಮೂಲೆ ಗುಂಪು ಮಾಡುವ ಆತಂಕವೂ ದೇವೇಗೌಡರಲ್ಲಿತ್ತು. ಈ ಆತಂಕವನ್ನು ಕಾಂಗ್ರೆಸ್‌ ದೂರ ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಡಿಕೆಶಿ ಖಾತೆ ತಪ್ಪಿಸಲು ಪ್ಲಾನ್‌ ಮಾಡಿಲ್ಲ: ಎಚ್‌ಡಿಕೆ

‘ಕಾಂಗ್ರೆಸ್‌ ನಾಯಕ ಡಿ.ಕೆ.ಶಿವಕುಮಾರ್‌ ಅವರಿಗೆ ಇಂಧನ ಖಾತೆ ತಪ್ಪಿಸಲು ದೇವೇಗೌಡರು ಮಾಸ್ಟರ್‌ ಪ್ಲಾನ್‌ ಮಾಡಿಲ್ಲ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಶನಿವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಇಂಧನ ಖಾತೆಗಾಗಿ ಜಟಾಪಟಿ ನಡೆದಿಲ್ಲ. ಖಾತೆ ಹಂಚಿಕೆ ವಿಚಾರದಲ್ಲಿ ದೇವೇಗೌಡರು ಹಸ್ತಕ್ಷೇಪ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಇಂಧನ ಖಾತೆ ಬೇಕೆಂದು ರೇವಣ್ಣ ಮತ್ತು ಶಿವಕುಮಾರ್‌ ಕೇಳಿರುವುದು ನಿಜ. ಸಮ್ಮಿಶ್ರ ಸರ್ಕಾರದಲ್ಲಿ ಕೊಡು–ಕೊಳ್ಳುವಿಕೆಯ ಆಧಾರದಲ್ಲಿ ಖಾತೆಗಳ ಹಂಚಿಕೆ ಆಗಿದೆ. ಯಾರಿಗೆ ಯಾವ ಖಾತೆಗಳನ್ನು ನೀಡಬೇಕು ಎಂಬುದು ಇನ್ನೂ ನಿರ್ಧಾರ ಆಗಿಲ್ಲ. ಈ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದೂ  ಹೇಳಿದರು.

‘ಡಿ.ಕೆ.ಶಿವಕುಮಾರ್‌ಗೆ ಯಾವ ಖಾತೆ ಬೇಕು ಎಂಬುದನ್ನು ಅವರೇ ನಿರ್ಧರಿಸುತ್ತಾರೆ. ಈ ವಿಷಯದಲ್ಲಿ ನಮ್ಮ ಹಸ್ತಕ್ಷೇಪ ಇಲ್ಲ’ ಎಂದು ಕುಮಾರಸ್ವಾಮಿ ತಿಳಿಸಿದರು.

ಕಾವೇರಿ ಪ್ರಾಧಿಕಾರ ಚರ್ಚೆಗೆ ಸಭೆ

ಕಾವೇರಿ ನದಿ ಪ್ರಾಧಿಕಾರ ರಚನೆಯ ಸಾಧಕ- ಬಾಧಕಗಳ ಬಗ್ಗೆ ಚರ್ಚೆ ನಡೆಸಲು ಕಾನೂನು ತಜ್ಞರು ಮತ್ತು ಅಧಿಕಾರಿಗಳ ಸಭೆ ಕರೆದಿರುವುದಾಗಿ ಕುಮಾರಸ್ವಾಮಿ ತಿಳಿಸಿದರು.

ಪ್ರಾಧಿಕಾರ ರಚನೆಯ ಸಂಬಂಧ ಕೇಂದ್ರ ಸರ್ಕಾರ ಈಗಾಗಲೇ ಅಧಿಸೂಚನೆ ಹೊರಡಿಸಿದೆ. ಕೂಲಂಕಷ ಚರ್ಚೆಯ ಬಳಿಕವೇ ರಾಜ್ಯ ಸರ್ಕಾರ ತನ್ನ ನಿಲುವು ಪ್ರಕಟಿಸಲಿದೆ ಎಂದು ತಿಳಿಸಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry