ಅತಿರೇಕದ ಸಂಭ್ರಮ ಇಷ್ಟವಿಲ್ಲ: ಚೆಟ್ರಿ

7

ಅತಿರೇಕದ ಸಂಭ್ರಮ ಇಷ್ಟವಿಲ್ಲ: ಚೆಟ್ರಿ

Published:
Updated:
ಅತಿರೇಕದ ಸಂಭ್ರಮ ಇಷ್ಟವಿಲ್ಲ: ಚೆಟ್ರಿ

ಮುಂಬೈ: ‘ಪಂದ್ಯದ ವೇಳೆ ಗೋಲು ಗಳಿಸಿದ ನಂತರ ಕೆಲ ಆಟಗಾರರು ಅತಿರೇಕದಿಂದ ಸಂಭ್ರಮಿಸುತ್ತಾರೆ. ಅಂಗಳದಲ್ಲಿ ಅವರಂತೆ ಸಂಭ್ರಮಿಸಲು ನನ್ನ ಮನಸ್ಸು ಒಪ್ಪುವುದಿಲ್ಲ’ ಎಂದು ಭಾರತ ಫುಟ್‌ಬಾಲ್‌ ತಂಡದ ನಾಯಕ ಸುನಿಲ್ ಚೆಟ್ರಿ ನುಡಿದಿದ್ದಾರೆ.

ಮುಂಬೈ ಫುಟ್‌ಬಾಲ್‌ ಅರೆನಾದಲ್ಲಿ ಶುಕ್ರವಾರ ನಡೆದಿದ್ದ ಚೀನಾ ತೈಪೆ ವಿರುದ್ಧದ ಇಂಟರ್‌ಕಾಂಟಿನೆಂಟಲ್‌ ಕಪ್‌ ಟೂರ್ನಿಯ ಪಂದ್ಯದಲ್ಲಿ ಭಾರತ 5–0 ಗೋಲುಗಳಿಂದ ಗೆದ್ದಿತ್ತು. ಈ ಹೋರಾಟದಲ್ಲಿ ಚೆಟ್ರಿ ಮೂರು ಗೋಲು ದಾಖಲಿಸಿ ಗಮನ ಸೆಳೆದಿದ್ದರು. ಇದರೊಂದಿಗೆ ವೃತ್ತಿಬದುಕಿನಲ್ಲಿ ಮೂರು ಬಾರಿ ‘ಹ್ಯಾಟ್ರಿಕ್‌’ ಸಾಧನೆ ಮಾಡಿದ ಹಿರಿಮೆಯನ್ನು ತಮ್ಮದಾಗಿಸಿಕೊಂಡಿದ್ದರು.

‍ಪಂದ್ಯದ ನಂತರ ಮಾತನಾಡಿದ ಅವರು, ‘ಕ್ಲಬ್‌ ಮತ್ತು ಭಾರತ ತಂಡದ ಪರ ಪಂದ್ಯ ಆಡುವಾಗ ಸಾಧ್ಯವಾದಷ್ಟು ಹೆಚ್ಚು ಗೋಲು ಗಳಿಸುವ ಗುರಿ ಇಟ್ಟುಕೊಂಡಿರುತ್ತೇನೆ. ಆ ಗುರಿ ಸಾಧನೆಗಾಗಿ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ಪಂದ್ಯದ ವೇಳೆ ಗೋಲು ಬಾರಿಸಿದಾಗ ಮನಸ್ಸಿನಲ್ಲೇ ಖುಷಿ ಪಡುತ್ತೇನೆ.

ಸಹ ಆಟಗಾರ ರಾಬಿನ್‌ ಸಿಂಗ್‌ ಹಾಗೂ ಇತರ ಆಟಗಾರರಂತೆ ಅತಿರೇಕದಿಂದ ಸಂಭ್ರಮಿಸುವುದು ನನಗೆ ಇಷ್ಟವಾಗುವುದಿಲ್ಲ’ ಎಂದಿದ್ದಾರೆ.

‘ಜೆಜೆ ಲಾಲ್‌ಪೆಕ್ಲುವಾ ಮತ್ತು ನನ್ನ ನಡುವೆ ಉತ್ತಮ ಹೊಂದಾಣಿಕೆ ಇದೆ. ಈ ಹಿಂದೆ ಹಲವು ಪಂದ್ಯಗಳಲ್ಲಿ ನಾವು ಜೊತೆಯಾಗಿ ಆಡಿದ್ದೇವೆ. ಪೆಕ್ಲುವಾ ಪ್ರತಿಭಾವಂತ ಮತ್ತು ಅನುಭವಿ ಆಟಗಾರ. ಅಭ್ಯಾಸದ ವೇಳೆ ಕಠಿಣ ಪರಿಶ್ರಮ ಪಡುತ್ತಾರೆ. ಅವರನ್ನು ನಾನು ತುಂಬಾ ಗೌರವಿಸುತ್ತೇನೆ. ತೈಪೆ ಎದುರು ಗಳಿಸಿದ ಮೂರು ಗೋಲುಗಳ ಪೈಕಿ ಎರಡು ಗೋಲುಗಳು ಜೆಜೆ ನೀಡಿದ ನೆರವುಗಳಿಂದ (ಅಸಿಸ್ಟ್‌) ದಾಖಲಿಸಲು ಸಾಧ್ಯವಾಯಿತು’ ಎಂದಿದ್ದಾರೆ.

ಎಲ್ಲವೂ ಅಂದುಕೊಂಡಂತೆ ಆಯಿತು: ‘ತೈಪೆ ಎದುರಿನ ಪಂದ್ಯದಲ್ಲಿ ನಮ್ಮ ಆಟಗಾರರು ಯೋಜನೆಗೆ ಅನುಗುಣವಾಗಿ ಆಡಿದರು. ಹೀಗಾಗಿ ದೊಡ್ಡ ಅಂತರದಲ್ಲಿ ಗೆಲ್ಲಲು ಸಾಧ್ಯವಾಯಿತು’ ಎಂದು ಭಾರತ ತಂಡದ ಮುಖ್ಯ ಕೋಚ್‌ ಸ್ಟೀಫನ್‌ ಕಾನ್‌ಸ್ಟೆಂಟೈನ್‌ ತಿಳಿಸಿದ್ದಾರೆ.

‘ತೈಪೆ ವಿರುದ್ಧದ ಗೆಲುವು ಆಟಗಾರರ ಮನೋಬಲ ಹೆಚ್ಚಿಸಿದೆ. ಮುಂದಿನ ಪಂದ್ಯಗಳಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಆಡಲು ಈ ಗೆಲುವು ನೆರವಾಗಲಿದೆ’ ಎಂದರು.

‘ಚೆಟ್ರಿ ಶ್ರೇಷ್ಠ ಆಟಗಾರ. ಏಕಾಂಗಿಯಾಗಿ ಪಂದ್ಯ ಗೆದ್ದುಕೊಡುವ ಸಾಮರ್ಥ್ಯ ಅವರಲ್ಲಿದೆ. ಸಂದಿಗ್ಧ ಪರಿಸ್ಥಿತಿಯಲ್ಲೂ ಛಲದಿಂದ ಆಡಿ ಗೋಲು ದಾಖಲಿಸುವ ಕಲೆ ಅವರಿಗೆ ಕರಗತವಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ನಮ್ಮ ತಂಡದಲ್ಲಿ ಯುವ ಆಟಗಾರರೇ ಹೆಚ್ಚು ಮಂದಿ ಇದ್ದಾರೆ. ಆಟದ ತಂತ್ರಗಳು ಮತ್ತು ಹೊಸ ವಿಷಯಗಳನ್ನು ಕಲಿಯಲು ಇಂಟರ್‌ಕಾಂಟಿನೆಂಟಲ್‌ ಕಪ್‌ ನಮ್ಮವರಿಗೆ ವೇದಿಕೆಯಾಗಿದೆ. ಶುಕ್ರವಾರದ ಪಂದ್ಯದಲ್ಲಿ ಸುನಿಲ್‌ ಚೆಟ್ರಿ ಅಮೋಘ ಆಟ ಆಡಿದರು. ಅವರ ಆಟ ಮುಂದಿನ ಪಂದ್ಯದಲ್ಲಿ ಗುಣಮಟ್ಟದ ಸಾಮರ್ಥ್ಯ ತೋರಲು ನಮ್ಮವರಿಗೆ ಪ್ರೇರಣೆಯಾಗಬಹುದು’ ಎಂದು ತೈಪೆ ತಂಡದ ಕೋಚ್‌ ಗ್ಯಾರಿ ವೈಟ್‌ ನುಡಿದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry