ಕಾಂಗ್ರೆಸ್‌: ಮಂತ್ರಿಗಿರಿಗೆ ಹಿರಿ–ಕಿರಿಯರ ಪೈಪೋಟಿ

3

ಕಾಂಗ್ರೆಸ್‌: ಮಂತ್ರಿಗಿರಿಗೆ ಹಿರಿ–ಕಿರಿಯರ ಪೈಪೋಟಿ

Published:
Updated:
ಕಾಂಗ್ರೆಸ್‌: ಮಂತ್ರಿಗಿರಿಗೆ ಹಿರಿ–ಕಿರಿಯರ ಪೈಪೋಟಿ

ನವದೆಹಲಿ: ಮಿತ್ರ ಪಕ್ಷದೊಂದಿಗೆ ಖಾತೆ ಹಂಚಿಕೆಯ ಬಿಕ್ಕಟ್ಟು ಪರಿಹರಿಸಿಕೊಂಡಿರುವ ಕಾಂಗ್ರೆಸ್‌, ಸಚಿವ ಸಂಪುಟ ಸೇರ್ಪಡೆಗಾಗಿ ದುಂಬಾಲು ಬಿದ್ದಿರುವ ಶಾಸಕರನ್ನು ತೃಪ್ತಿಪಡಿಸುವುದು ಹೇಗೆ ಎಂಬ ಇಕ್ಕಟ್ಟಿಗೆ ಸಿಲುಕಿದೆ.

ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿ ಇರಿಸಿಕೊಂಡಿರುವುದರ ಜೊತೆಗೆ ಬಿಜೆಪಿಯ ಗಾಳಕ್ಕೆ ಸಿಲುಕಿ ಪಕ್ಷಾಂತರ ಮಾಡಬಹುದಾದ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ತಂತ್ರಗಾರಿಕೆಯೊಂದಿಗೆ ಸಚಿವ ಸ್ಥಾನ ಹಂಚಿಕೆ ಮಾಡುವ ಸವಾಲನ್ನು ಪಕ್ಷ ಎದುರಿಸುತ್ತಿದೆ.

ಉಪ ಮುಖ್ಯಮಂತ್ರಿ ಸ್ಥಾನ ಬಿಟ್ಟು, ಸಂಪುಟದಲ್ಲಿನ 21 ಸ್ಥಾನಗಳನ್ನು ಭರ್ತಿ ಮಾಡಬೇಕಿರುವ ಪಕ್ಷವು ಪ್ರಭಾವ, ಜಾತಿ ಮತ್ತು ಪ್ರಾಂತ್ಯವಾರು ಲೆಕ್ಕಾಚಾರದೊಂದಿಗೆ ಹಿರಿಯರು ಮತ್ತು ಕಿರಿಯರನ್ನು ಒಳಗೊಂಡ ಪಟ್ಟಿಯನ್ನು ಸಿದ್ಧಪಡಿಸಿದೆ.

ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ವಿದೇಶ ಪ್ರವಾಸದಿಂದ ಮರಳಿದ ನಂತರ ಯಾರು ಸಚಿವರಾಗಲಿದ್ದಾರೆ ಎಂಬುದು ನಿರ್ಧಾರವಾಗಲಿದೆ.

ಕಳೆದ ವಾರವೇ ದೆಹಲಿಗೆ ಧಾವಿಸಿ ಹೈಕಮಾಂಡ್‌ ಗಮನ ಸೆಳೆದಿರುವ ಕೆಲವು ಆಕಾಂಕ್ಷಿಗಳು ಭಾನುವಾರ ಮತ್ತೆ ದೆಹಲಿಗೆ ದೌಡಾಯಿಸಲಿದ್ದಾರೆ. ಸೋಮವಾರ ರಾತ್ರಿಯ ವೇಳೆಗೆ ಸಭೆ ನಡೆಸಲಿರುವ ರಾಹುಲ್‌ ಗಾಂಧಿ ಅಂತಿಮ ಪಟ್ಟಿಗೆ ಒಪ್ಪಿಗೆ ಸೂಚಿಸಲಿದ್ದಾರೆ ಎಂದು ತಿಳಿದುಬಂದಿದೆ.

ಕಿರಿಯರತ್ತ ಒಲವು: ಈಗಾಗಲೇ ಅನೇಕ ಬಾರಿ ಸಚಿವ ಸ್ಥಾನ ಅನುಭವಿಸಿರುವ ಹಿರಿಯ ಮುಖಂಡರ ಬದಲಿಗೆ, ಈವರೆಗೆ ಸಚಿವರಾಗದೇ ಇರುವ ಹಾಗೂ ಎರಡಕ್ಕಿಂತ ಹೆಚ್ಚು ಬಾರಿ ಗೆದ್ದವರಿಗೆ ಮಣೆ ಹಾಕಬೇಕು. ಯುವ ಶಾಸಕರಿಗೆ  ಆದ್ಯತೆ ನೀಡುವ ಮೂಲಕ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಿಂದ ಅಧಿಕ ಸ್ಥಾನ ಗಳಿಸಿ ಬಿಜೆಪಿಯನ್ನು ಮಣಿಸಬೇಕು ಎಂಬ ಕಾರ್ಯತಂತ್ರವನ್ನು ಪಕ್ಷದ ವರಿಷ್ಠರು ರೂಪಿಸಿದ್ದಾರೆ. ಇದಕ್ಕೆ ರಾಹುಲ್‌ ಗಾಂಧಿ ಸಹ ಸಮ್ಮತಿಸಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

‘ಅನೇಕ ಬಾರಿ ಸಚಿವರಾದರೂ ತಮ್ಮ ಪ್ರಭಾವ ಉಪಯೋಗಿಸಿ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಕಾರಣರಾಗದೇ ಇರುವವರಿಗೆ ಮಣೆ ಹಾಕದೆ, ಇದುವರೆಗೆ ಸಚಿವರಾಗದವರನ್ನು ಪರಿಗಣಿಸಬೇಕು. ಈ ನಿಟ್ಟಿನಲ್ಲಿ ಹೆಜ್ಜೆ ಇರಿಸಬೇಕಾದಲ್ಲಿ ಎರಡಕ್ಕಿಂತ ಹೆಚ್ಚು ಬಾರಿ ಸಚಿವರಾದವರಿಗೆ ಮತ್ತೆ ಸಚಿವ ಸ್ಥಾನ ನೀಡುವುದು ಬೇಡ’ ಎಂಬ ಸಲಹೆಯನ್ನು ಪಕ್ಷದ ಪದಾಧಿಕಾರಿಗಳು ನೀಡಿದ್ದಾರೆ. ಈ ಬಗ್ಗೆ ವರಿಷ್ಠರ ನಿರ್ಧಾರವೇ ಅಂತಿಮ ಎಂದು ಮುಖಂಡರೊಬ್ಬರು ಹೇಳಿದರು.

ಗೌರಿಬಿದನೂರು ಕ್ಷೇತ್ರದಿಂದ ಆಯ್ಕೆಯಾಗಿರುವ ಶಿವಶಂಕರರೆಡ್ಡಿ ಅವರೂ ಸಚಿವ ಸ್ಥಾನ ಬಯಸಿದವರಲ್ಲಿ ಪ್ರಮುಖರಾಗಿದ್ದಾರೆ. ಇತರ ಪಕ್ಷಗಳಿಂದ ಕಾಂಗ್ರೆಸ್‌ಗೆ ಬಂದು ಚುನಾಯಿತರಾಗಿರುವ ಕೆಲವರಿಗೆ, ಬಿಜೆಪಿಯತ್ತ ಆಕರ್ಷಿತರಾಗದಂತೆ ತಡೆಯುವ ನಿಟ್ಟಿನಲ್ಲಿ ಸಚಿವ ಸ್ಥಾನ ನೀಡುವ ಅನಿವಾರ್ಯತೆಯೂ ಇದೆ ಎಂದು ಅವರು ವಿವರಿಸಿದರು.

ಜೆಡಿಎಸ್‌ ತೊರೆದು ಪಕ್ಷ ಸೇರಿರುವ ಜಮೀರ್‌ ಅಹಮದ್‌ ಖಾನ್‌ ಅವರಿಗೆ ಅಲ್ಪಸಂಖ್ಯಾತ ಕೋಟಾ ಅಡಿ ಸಚಿವ ಸ್ಥಾನ ನೀಡಲು ಪಕ್ಷಕ್ಕೆ ಕರೆತಂದಿರುವ ರಾಜ್ಯ ಮುಖಂಡರು ಉತ್ಸುಕರಾಗಿದ್ದಾರೆ. ಆದರೆ, ರೋಷನ್‌ ಬೇಗ್‌, ಕರಾವಳಿಯಲ್ಲಿ ಪಕ್ಷದಿಂದ ಗೆದ್ದಿರುವ ಏಕೈಕ ಶಾಸಕ ಯು.ಟಿ. ಖಾದರ್‌, ಕಲಬುರ್ಗಿ ಉತ್ತರ ಕ್ಷೇತ್ರದಿಂದ ಜಯಿಸಿರುವ ಮಾಜಿ ಸಚಿವ ದಿವಂಗತ ಖಮರುಲ್‌ ಇಸ್ಲಾಂ ಪತ್ನಿ ಖನಿಜ್‌ ಫಾತಿಮಾ ಅವರನ್ನು ಇದೇ ಸಮುದಾಯದಿಂದ ಸಚಿವ ಸ್ಥಾನಕ್ಕೆ ಪರಿಗಣಿಸಬೇಕು ಎಂಬ ಬೇಡಿಕೆ ಇರುವುದರಿಂದ ಬಿಕ್ಕಟ್ಟುಎದುರಾಗಿದೆ.

ದಲಿತ ಸಮುದಾಯದ ಎಡಗೈ ಬಣದ ಆರ್‌.ಬಿ. ತಿಮ್ಮಾಪುರ ಅವರು ಸಚಿವ ಸ್ಥಾನಕ್ಕೆ ಶತಪ್ರಯತ್ನ ನಡೆಸಿದ್ದರೆ, ಅತ್ತ ಸಂಸದ ಕೆ.ಎಚ್‌. ಮುನಿಯಪ್ಪ ಅವರು ತಮ್ಮ ಪುತ್ರಿ ರೂಪಾ ಶಶಿಧರ್‌ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಸಿದ್ದರಾಮಯ್ಯ ಯಾರ ಪರ ನಿಲ್ಲಲಿದ್ದಾರೆ ಎಂಬುದು ಈ ಇಬ್ಬರಲ್ಲಿ ಒಬ್ಬರ ಸಚಿವ ಸ್ಥಾನವನ್ನು ನಿರ್ಧರಿಸಲಿದೆ.

ಬ್ರಾಹ್ಮಣ ಸಮುದಾಯದಿಂದ ರಮೇಶ್‌ಕುಮಾರ್‌ ಅವರನ್ನು ಈಗಾಗಲೇ ಸ್ಪೀಕರ್‌ ಹುದ್ದೆಗೆ ಆಯ್ಕೆ ಮಾಡಲಾಗಿದೆ. ಹಿರಿಯರಾದ ಆರ್‌.ವಿ. ದೇಶಪಾಂಡೆ ಬದಲಿಗೆ, ದಿನೇಶ್‌ ಗುಂಡೂರಾವ್‌ ಅವರನ್ನು ಪರಿಗಣಿಸಿದಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಲೋಕಸಭೆ ಚುನಾವಣೆಯ ಗೆಲುವಿಗೆ ಸಹಕಾರಿಯಾಗಲಿದೆ ಎಂಬುದು ಪಕ್ಷದ ಲೆಕ್ಕಾಚಾರವಾಗಿದೆ.

ಮುಜುಗರದಿಂದ ಪಾರಾಗುವುದು ಹೇಗೆ?

ಪಕ್ಷದ ಮುಖಂಡ ಡಿ.ಕೆ. ಶಿವಕುಮಾರ್‌ ಅವರ ಕುಟುಂಬ ಸದಸ್ಯರು, ಬೆಂಬಲಿಗರು ಸಿಬಿಐ ದಾಳಿಗೆ ಗುರಿಯಾಗಿದ್ದಾರೆ. ಒಂದೊಮ್ಮೆ ಬಂಧನದಂತಹ ಕ್ರಮ ಎದುರಾದಲ್ಲಿ ಮೈತ್ರಿ ಸರ್ಕಾರಕ್ಕೆ ಎದುರಾಗಬಹುದಾದ ಮುಜುಗರವನ್ನು ಎದುರಿಸುವುದು ಹೇಗೆ ಎಂಬುದು ಕಾಂಗ್ರೆಸ್‌ ವಲಯದಲ್ಲಿ  ಚರ್ಚೆಗೆ ಕಾರಣವಾಗಿದೆ.

* ಸಂಪುಟದಲ್ಲಿ ಹಿರಿಯರು ಹಾಗೂ ಕಿರಿಯರು ಇರಬೇಕು. ಹೊಸಮುಖಗಳಿಗೆ ಮಣೆ ಹಾಕುವಂತೆ ಸಲಹೆಗಳು ಬಂದಿವೆ. ಈ ಬಗ್ಗೆ ಹೈಕಮಾಂಡ್‌ ಜೊತೆ ಚರ್ಚಿಸುವೆ

–ಜಿ.ಪರಮೇಶ್ವರ, ಉಪಮುಖ್ಯಮಂತ್ರಿ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry